More

    ಗ್ರಾಪಂ ಗದ್ದುಗೆ ‘ಬಣ’ ರಾಜಕೀಯ

    ಬೆಳಗಾವಿ: ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ತಾಲೂಕುವಾರು ಮೀಸಲಾತಿ ಅನುಪಾತ ನಿಗದಿಪಡಿಸಿ ಸರ್ಕಾರ ರಾಜ್ಯಪತ್ರ ಪ್ರಕಟಿಸಿದ್ದು, ಆಯ್ಕೆಗೊಂಡ ನೂತನ ಸದಸ್ಯರ ‘ರಾಜಕೀಯ ಬಣ’ಗಳ ಕಾರ್ಯಚಟುವಟಿಕೆ ಗ್ರಾಮಗಳಲ್ಲಿ ಬಿರುಸುಗೊಂಡಿದೆ. ಮೀಸಲಾತಿ ಮಂತ್ರಕ್ಕೆ ಪ್ರತಿ ತಂತ್ರ ಹೆಣೆದು, ಅಧಿಕಾರಕ್ಕೇರಲು ಇನ್ನಿಲ್ಲದ ಲಾಬಿ ಶುರುವಾಗಿದೆ.

    ಈ ಬಾರಿ ಚುನಾವಣೆಯಲ್ಲಿ ಅರ್ಧದಷ್ಟು ಮಹಿಳೆಯರು ಸೇರಿ ಯುವಕರು, ಪದವೀಧರರು ಹಾಗೂ ರಾಜಕೀಯ ಪಕ್ಷಗಳ ಕಾರ್ಯಕರ್ತರು ಗೆಲುವು ಸಾಧಿಸಿದ್ದಾರೆ. ಈಗ ಅಧ್ಯಕ್ಷ ಸ್ಥಾನ ಒಲಿಸಿಕೊಳ್ಳಲು ಇತರ ಸದಸ್ಯರನ್ನು ಸೆಳೆಯಲು ಕಸರತ್ತು ಆರಂಭಿಸಿದ್ದಾರೆ. ರಾಜಕೀಯ ಪಕ್ಷಗಳ ತಾಲೂಕು ಘಟಕಗಳ ಅಧ್ಯಕ್ಷರು ಹಾಗೂ ಶಾಸಕರೂ ಸಹ ಗ್ರಾಪಂಗಳತ್ತ ದೃಷ್ಟಿ ಹರಿಸಿದ್ದಾರೆ.

    ಪಕ್ಷಗಳಿಂದ ಸನ್ಮಾನ: ಚುನಾವಣೆ ಮುಗಿಯುವವರೆಗೂ ತೆರೆಮರೆಯಲ್ಲಿದ್ದ ಪಕ್ಷಗಳು, ಇದೀಗ ಸದಸ್ಯರನ್ನು ತಮ್ಮ ಪಕ್ಷಗಳತ್ತ ಸೆಳೆದುಕೊಳ್ಳಲು ಬಹಿರಂಗವಾಗಿಯೇ ಸನ್ಮಾನ, ಅಭಿನಂದನಾ ಸಮಾರಂಭ ಏರ್ಪಡಿಸುತ್ತಿದ್ದಾರೆ. ಗೆದ್ದವರೆಲ್ಲ ತಮ್ಮ ಪಕ್ಷದಿಂದ ಬೆಂಬಲಿತರಾದವರು ಎಂದು ಹೇಳಿಕೊಳ್ಳತೊಡಗಿದ್ದಾರೆ.

    ಚುನಾಯಿತ ಸದಸ್ಯರೂ ಸಹ ತಾಲೂಕುವಾರು ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪಟ್ಟಿ ಹಿಡಿದು ತಾವೇ ಅಧಿಕಾರಕ್ಕೇರಲು ‘ಬಣ’ ಮಾಡಿಕೊಂಡು ಪ್ರಮುಖ ನಾಯಕರ ಮನೆ-ಕಚೇರಿ ಕದ ತಟ್ಟುತ್ತಿದ್ದಾರೆ. ತಮ್ಮ ಗ್ರಾಪಂಗೆ ತಮ್ಮದೇ ಜಾತಿ ಹಾಗೂ ಪಂಗಡಕ್ಕೆ ಮೀಸಲು ಒದಗಿಸಿ ಎಂದು ಮುಖಂಡರ ದುಂಬಾಲು ಬಿದ್ದಿದ್ದಾರೆ. ಅಧ್ಯಕ್ಷ ಗದ್ದುಗೆ ಏರುವ ಆಕಾಂಕ್ಷಿತರು ಇತರ ಸದಸ್ಯರನ್ನು ಹಿಡಿದಿಟ್ಟುಕೊಳ್ಳಲು ಅವರನ್ನು ಪ್ರವಾಸಕ್ಕೆ ಕರೆದೊಯ್ಯಲು ಯೋಜಿಸಿದ್ದಾರೆ.

    ಬಿಜೆಪಿ ಮುಂಚೂಣಿ: ರಾಜ್ಯಾದ್ಯಂತ ರಾಜಕೀಯ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ವಿಜಯಿಗಳಾಗಿದ್ದಾರೆ. ಹೀಗಾಗಿ ಪ್ರತಿ ಗ್ರಾಮಗಳಲ್ಲೂ ತಮ್ಮ ಪಕ್ಷ ಬಲಪಡಿಸುವ ಭಾಗವಾಗಿ ಆಯಾ ಪಂಚಾಯಿತಿಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಬಿಜೆಪಿ ಮುಂಚೂಣಿಯಲ್ಲಿದೆ. ನಂತರದ ಸ್ಥಾನದಲ್ಲಿರುವ ಕೈ ಪಡೆಯು, ಗ್ರಾಮಗಳಲ್ಲಿ ಮುಖಂಡರ ಬಣಗಳಾಗಿ ಹೋಳಾಗುತ್ತಿರುವ ಚುನಾಯಿತ ಸದಸ್ಯರನ್ನು ಕೈವಶ ಮಾಡಿಕೊಳ್ಳಲು ತಂತ್ರ ರೂಪಿಸುತ್ತಿದ್ದಾರೆ.

    ಲಾಟರಿ ಪ್ರಹಸನದ ಕರಾಮತ್ತು: ಗ್ರಾಪಂ ಚುನಾವಣೆ ಪಕ್ಷಾತೀತವಾಗಿ ನಡೆದಿದೆಯಾದರೂ ತಾವು ಇಂತಹ ಪಕ್ಷದ ಬೆಂಬಲಿತರು ಎಂದು ಅಭ್ಯರ್ಥಿಗಳು ಬಹಿರಂಗವಾಗಿಯೇ ಪ್ರಚಾರ ನಡೆಸಿ ಆಯ್ಕೆಯಾಗಿದ್ದಾರೆ. ಆದರೆ, ಇದೀಗ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆ ಸಿಗದಿದ್ದಲ್ಲಿ ಸದಸ್ಯರು ತಮ್ಮ ಪಕ್ಷ ನಿಷ್ಠೆ ಬದಲಿಸುವ ಸಾಧ್ಯತೆ ಇದೆ. ಕೆಲವು ಯುವ ಉತ್ಸಾಹಿ ಸದಸ್ಯರು ತಮ್ಮ ಅನುಭವ ಹಾಗೂ ಅಭಿವೃದ್ಧಿ ಉದ್ದೇಶದ ಆಧಾರದ ಮೇಲೆ ಅಧ್ಯಕ್ಷ ಹುದ್ದೆ ಕೇಳುತ್ತಿದ್ದರೆ, ಇನ್ನೂ ಕೆಲವರು ಹಣಬಲ ಹಾಗೂ ರಾಜಕೀಯ ಬಲದಿಂದ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ. ತಮ್ಮ ಗೆಲುವಿಗೆ ಸಹಕರಿಸಿದ ಮುಖಂಡರನ್ನು ಅಭಿನಂದಿಸುವ ನೆಪದಲ್ಲಿ ಅಧಿಕಾರ ಗದ್ದುಗೆ ಕೊಡಿಸಲು ಅರ್ಜಿಯನ್ನೂ ಹಾಕುತ್ತಿದ್ದಾರೆ. ಹೀಗಾಗಿ ಪಕ್ಷಗಳ ಪ್ರಮುಖ ಮುಖಂಡರು ಲಾಬಿ ನಡೆಸುತ್ತಿರುವ ಸದಸ್ಯರನ್ನು ಸಮಾಧಾನ ಪಡಿಸಲು ಮೀಸಲಾತಿಗೆ ಲಾಟರಿ ಎತ್ತುವ ಪ್ರಹಸನದ ಕರಾಮತ್ತಿನ ವಿವರಣೆ ನೀಡುತ್ತಿದ್ದಾರೆ.

    ಪ್ರಸಕ್ತ ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರೇ ರಾಜ್ಯಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿದ್ದಾರೆ. ಆದರೂ ಕಾಂಗ್ರೆಸ್ ನಾಯಕರು ಗೆದ್ದವರೆಲ್ಲ ನಮ್ಮ ಪಕ್ಷದ ಬೆಂಬಲಿತರು ಎನ್ನುತ್ತಿದ್ದಾರೆ. ಬೆಳಗಾವಿಯಲ್ಲಿ ವಾರದೊಳಗೆ ಸಭೆ ನಡೆಸಿ, ಬಿಜೆಪಿಯಿಂದ ಬೆಂಬಲ ಪಡೆದು ಗೆಲುವು ಸಾಧಿಸಿದವರನ್ನು ಹಾಜರುಪಡಿಸುತ್ತೇನೆ.
    | ರಮೇಶ ಜಾರಕಿಹೊಳಿ, ಜಲಸಂಪನ್ಮೂಲ ಸಚಿವ

    ಚುನಾವಣೆಯಲ್ಲಿ ಬೆಂಬಲ ಕೇಳದೆ ಆಯ್ಕೆಯಾದವರೂ ನಮ್ಮ ಪದಾಧಿಕಾರಿ ಹಾಗೂ ನಾಯಕರನ್ನು ಭೇಟಿಯಾಗಿ ಬೆಂಬಲ ನೀಡಿ, ಸಹಕಾರ ನೀಡುವಂತೆ ಕೋರುತ್ತಿದ್ದಾರೆ. ಸರ್ಕಾರದ ಆದೇಶದಂತೆ ಮೀಸಲಾತಿ ಅನುಪಾತದಂತೆ ಹೆಚ್ಚಿನ ಬಿಜೆಪಿ ಬೆಂಬಲಿತ ಸದಸ್ಯರನ್ನು ಅಧ್ಯಕ್ಷ, ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಪ್ರಯತ್ನಿಸಲಾಗುತ್ತಿದೆ.
    | ಸಂಜಯ ಪಾಟೀಲ, ಬಿಜೆಪಿ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts