More

    ನಾಟಿ ಸಂಭ್ರಮ ಕುಗ್ಗಿಸಿದ ಅನುದಾನ

    ರಾಜೇಂದ್ರ ಶಿಂಗನಮನೆ ಶಿರಸಿ

    ಸಸಿ ಬೆಳೆಸಲು ಸರ್ಕಾರ ನೀಡುತ್ತಿದ್ದ ಅನುದಾನ ಹಾಗೂ ಗುರಿಯಲ್ಲಿ ಕಡಿತ ಮಾಡಿದ ಪರಿಣಾಮ ಈ ಬಾರಿ ಅರಣ್ಯ ಜಿಲ್ಲೆಯಲ್ಲಿ ಗಿಡಗಳ ನಾಟಿಯ ಸಂಭ್ರಮ ಕುಗ್ಗಿದೆ. ಇದು ಉದ್ದೇಶಿತ ಹಸಿರೀಕರಣಕ್ಕೆ ತೊಡಕಾಗಿ ಮಾರ್ಪಟ್ಟಿದೆ.

    ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಅರಣ್ಯ ಇಲಾಖೆ ವತಿಯಿಂದ ಸಸಿ ಬೆಳೆಸುವ ಕಾರ್ಯಕ್ಕೆ ಅನುದಾನ ಕೊರತೆ ಉಂಟಾಗಿದೆ. ಪ್ರತೀ ವರ್ಷ ಮಾನ್ಸೂನ್​ನಲ್ಲಿ ಅರಣ್ಯ ಭೂಮಿ, ರಸ್ತೆ ಬದಿ, ಸರ್ಕಾರಿ ಹಾಗೂ ಖಾಸಗಿ ಜಾಗಗಳಲ್ಲಿ ನೆಡುತೋಪು ನಿರ್ವಿುಸಲು ಸಸಿಗಳ ತಯಾರಿಯನ್ನು ಅರಣ್ಯ ಇಲಾಖೆ ಖುದ್ದಾಗಿ ಮಾಡುತ್ತದೆ. ಆದರೆ, ಸರ್ಕಾರ ಪ್ರಸಕ್ತ ಅವಧಿಯಲ್ಲಿ ಹಸಿರೀಕರಣಕ್ಕೆ ಅತ್ಯಂತ ಕಡಿಮೆ ಅನುದಾನದ ಹಂಚಿಕೆ ಮಾಡಿದೆ. ಜತೆಗೆ ವಿಸ್ತೀರ್ಣದ ಗುರಿಯನ್ನೂ ಕುಗ್ಗಿಸಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಶೇ. 70ರಷ್ಟು ಅನುದಾನ ಹಾಗೂ ಗುರಿ ಕಡಿತವಾಗಿದೆ.

    ಸಸಿ ಬೆಳೆಸಲು ತೊಡಕು: ಅರಣ್ಯ ಇಲಾಖೆ ಜೂನ್-ಜುಲೈನಲ್ಲಿ ಸಸಿಗಳ ನಾಟಿ, ವಿತರಣೆ ಮಾಡುತ್ತದೆ. ಆದರೆ, ಗಿಡಗಳ ತಯಾರಿ ಜನವರಿ ಫೆಬ್ರವರಿ, ಮಾರ್ಚ್ ವೇಳೆಗಾಗಲೇ ಆರಂಭವಾಗುತ್ತದೆ. ಇಲಾಖೆಯ ಸಸ್ಯ ಕ್ಷೇತ್ರಗಳಲ್ಲಿ ವಿವಿಧ ಜಾತಿಯ ಮರಗಳ ಬೀಜಗಳನ್ನು ಆರಿಸಿ, ಸಸಿಗಳನ್ನು ತಯಾರಿಸಲಾಗುತ್ತದೆ. ಈ ಕಾರಣಕ್ಕಾಗಿ ಅರಣ್ಯ ಇಲಾಖೆ ನೆಡುತೋಪು ಚಟುವಟಿಕೆಗಾಗಿ ಪ್ರತ್ಯೇಕ ಅನುದಾನ ವಿನಿಯೋಗಿಸುತ್ತಿತ್ತು. ಆದರೆ, ಈ ವರ್ಷ ಅನುದಾನ ಕಡಿತ ಮಾಡಿರುವುದು ಸಸಿ ಬೆಳೆಸಲು ತೊಡಕಾಗಿ ಮಾರ್ಪಟ್ಟಿದೆ.

    ಪ್ರಮಾಣ ಗಣನೀಯ ಇಳಿಕೆ: ಕೆನರಾ ಅರಣ್ಯ ವೃತ್ತದಲ್ಲಿ 6ಕ್ಕೂ ಹೆಚ್ಚು ದೊಡ್ಡ ನರ್ಸರಿಗಳಿವೆ. ಈ ಸಸ್ಯ ಕ್ಷೇತ್ರಗಳಲ್ಲಿ ಸಸಿಗಳನ್ನು ಬೆಳೆಸಲಾಗುತ್ತದೆ. ಕಳೆದ ಬಾರಿ ಇಡೀ ವಿಭಾಗದಲ್ಲಿ ಅಂದಾಜು 15 ಲಕ್ಷ ಸಸಿಗಳನ್ನು ಬೆಳೆಸಿದರೆ ಈ ಬಾರಿ ಆ ಗುರಿ 3 ಲಕ್ಷಕ್ಕೆ ಇಳಿದಿದೆ. ಇವುಗಳಲ್ಲಿ ಕಳೆದ ಸಾಲಿನಲ್ಲಿ 2 ಲಕ್ಷಕ್ಕೂ ಹೆಚ್ಚು ಸಸಿಗಳು ಸಾರ್ವಜನಿಕರಿಗೆ ಲಭ್ಯವಾಗಿದ್ದವು. ಈ ವರ್ಷ ಸಾರ್ವಜನಿಕರಿಗೆ ಸಿಗುವುದು ಕೇವಲ 60 ಸಾವಿರ ಸಸಿಗಳು ಮಾತ್ರ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಕಳೆದ ವರ್ಷಗಳಲ್ಲಿ: ಅಂದಾಜು 15 ಲಕ್ಷ ಸಸಿಗಳನ್ನು ಬೆಳೆಸಲು 1.5 ಕೋಟಿ ರೂಪಾಯಿಗಳ ಅನುದಾನ ನೀಡಲಾಗಿತ್ತು. ಶಿರಸಿ ವಿಭಾಗವೊಂದರಲ್ಲೇ ಒಟ್ಟು 3 ಲಕ್ಷ 57 ಸಾವಿರ ಸಸಿಗಳನ್ನು ನೀಡಲಾಗಿತ್ತು. ಅದಕ್ಕಾಗಿ 26 ಲಕ್ಷ 65 ಸಾವಿರ ರೂಪಾಯಿ ವೆಚ್ಚ ಮಾಡಲಾಗಿತ್ತು. ಆದರೆ, ಈ ಬಾರಿ ಶಿರಸಿ ವಿಭಾಗದಲ್ಲಿ ಕೇವಲ 25 ಸಾವಿರ ಸಸಿಗಳನ್ನು ಮಾತ್ರ ವಿತರಿಸಲು ಅವಕಾಶವಾಗಲಿದೆ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.

    ಹಸಿರೀಕರಣಕ್ಕೆ ಅನುದಾನದ ಕೊರತೆಯ ಪರಿಣಾಮ ಹೊಸ ಪ್ಲಾ್ಯಂಟೇಶನ್ ಕಡಿಮೆಯಾಗುವುದು ಒಂದೆಡೆಯಾದರೆ, ಅವಧಿ ಪೂರ್ಣಗೊಂಡಿರುವ ನೆಡುತೋಪುಗಳಲ್ಲಿ ಮರಗಳ ಕಟಾವು ನಡೆಯುವುದರಿಂದ ಅರಣ್ಯದ ಪ್ರಮಾಣ ಗಣನೀಯವಾಗಿ ಏರುಪೇರಾಗುವ ಆತಂಕವೂ ಇದೆ. ಇಲಾಖೆಯಿಂದ ಸಸಿಗಳ ನಾಟಿ ಮಾತ್ರವಲ್ಲದೆ ಸಾರ್ವಜನಿಕರಿಗೆ ವಿತರಣೆಗೂ ಸಸಿಗಳು ಕಡಿಮೆಯಾಗುತ್ತವೆ.

    | ವಾಸುದೇವ ಗೌಡ ಕೊಪ್ಪ, ಪರಿಸರ ಪ್ರೇಮಿ

    ಕೋವಿಡ್ ಕಾರಣದಿಂದ ಅನುದಾನದ ಕೊರತೆಯಾಗಿದೆ. ಈ ಕಾರಣ ಸಸಿಗಳನ್ನು ಬೆಳೆಸುವ ಗುರಿಯೂ ಇಳಿಕೆಯಾಗಿದೆ. ಈ ಹಿಂದಿನ ವರ್ಷಗಳಲ್ಲಿ ನಿಗದಿಗೊಳಿಸಿದ್ದ ಮೂರನೇ ಒಂದು ಭಾಗದಷ್ಟು ಈ ವರ್ಷ ಗುರಿ ನೀಡಲಾಗಿದೆ. ಕನಿಷ್ಠ 2 ಲಕ್ಷ ಸಸಿಗಳನ್ನು ಬೆಳೆಸಿ ಸಾರ್ವಜನಿಕರಿಗೆ ನೀಡಲು ಅನುಕೂಲವಾಗುವಂತೆ ಅನುದಾನ ಬಿಡುಗಡೆ ಮಾಡಲು ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ.

    | ಎಸ್.ಜಿ. ಹೆಗಡೆ, ಡಿಎಫ್​ಒ ಶಿರಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts