More

    ನೂತನ ಗ್ರಾಪಂ ಸದಸ್ಯರಿಗೆ ರಾಜಾತಿಥ್ಯ: ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಮೇಲೈತೆ ಕಣ್ಣು

    ತುಮಕೂರು: ಜಿಲ್ಲೆಯಲ್ಲಿ ಗ್ರಾಪಂ ಚುನಾವಣೆ ಫಲಿತಾಂಶ ಸಂಪೂರ್ಣ ಹೊರಬಿದ್ದಿದ್ದು, ಗ್ರಾಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಮೀಸಲಾತಿ, ಸಂಖ್ಯಾಬಲ, ಕುದುರೆ ವ್ಯಾಪಾರದ ಬಗ್ಗೆ ಚರ್ಚೆ ಆರಂಭವಾಗಿದೆ. ಇದೇ ವರ್ಷಾಂತ್ಯಕ್ಕೆ ನಡೆಯುವ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿಯೂ ಗ್ರಾಪಂ ಫಲಿತಾಂಶ ಪ್ರಾಮುಖ್ಯತೆ ಪಡೆದಿದೆ.

    ಜಿಲ್ಲೆಯಲ್ಲಿ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆಸಲು ಆಯಾ ತಾಲೂಕಿನ ತಹಸೀಲ್ದಾರರ ಡೆಸಿಗ್ನೇಟೆಡ್(ಗೊತ್ತುಪಡಿಸಿದ) ಅಧಿಕಾರಿಯನ್ನಾಗಿ ನೇಮಿಸಲಾಗುತ್ತಿದ್ದು, ಶೀಘ್ರದಲ್ಲಿಯೇ ಚುನಾವಣೆಗೆ ದಿನಾಂಕ ಕೂಡ ನಿರ್ಧಾರವಾಗಲಿರುವ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಪರಸ್ಪರ ಬಡಿದಾಡಿದವರೆಲ್ಲ ಒಗ್ಗಟ್ಟಿನ ಮಂತ್ರ ಜಪಿಸಲಾರಂಭಿಸಿದ್ದಾರೆ.

    ಗ್ರಾಪಂ ಚುನಾವಣೆ ಮುಗಿದ ಬೆನ್ನಲ್ಲೇ ಜಿಲ್ಲೆಯೆಲ್ಲೆಡೆ ರಾಜಕೀಯ ಪಕ್ಷಗಳು ಲಾಭ, ನಷ್ಟದ ಲೆಕ್ಕಾಚಾರದಲ್ಲಿ ಮುಳುಗಿವೆ, ಗೆದ್ದ ಸದಸ್ಯರೆಲ್ಲರೂ ನಮ್ಮವರೇ ಎಂದು ಸ್ವಪ್ರಿಯ ಅಂಕಿ, ಅಂಶಗಳನ್ನು ಪುಂಖಾನುಪುಂಖವಾಗಿ ಹೇಳಲಾರಂಭಿಸಿದ್ದಾರೆ.
    ಜಿಲ್ಲೆಯ 327 ಗ್ರಾಮ ಪಂಚಾಯಿತಿಗಳ 5260 ಸ್ಥಾನಗಳಿಗೆ ಪಕ್ಷಾತೀತವಾಗಿ ಚುನಾವಣೆ ನಡೆದು ಅಭ್ಯರ್ಥಿಗಳ ಆಯ್ಕೆಯಾಗಿದ್ದರೂ ಗೆದ್ದವರೆಲ್ಲಾ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡಿರುವುದು ಗುಟ್ಟಾಗಿ ಉಳಿದಿಲ್ಲ. ಒಟ್ಟು ಸ್ಥಾನಗಳ ಪೈಕಿ ಅಂದಾಜು ಬಿಜೆಪಿ ಬೆಂಬಲಿತ 1670, ಕಾಂಗ್ರೆಸ್ 1248, ಜೆಡಿಎಸ್ 1560 ಸದಸ್ಯ ಸ್ಥಾನಗಳನ್ನು ಗೆದ್ದಿದೆ ಎಂದಾದರೂ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಸಂದರ್ಭದಲ್ಲಿ ಸದಸ್ಯರ ನಿಜಬಣ್ಣ ಬಯಲಾಗಲಿದೆ.

    ಪಕ್ಷಾತೀತವಾಗಿ ಚುನಾವಣೆಯಾಗಿದ್ದರೂ ಗ್ರಾಪಂನಲ್ಲಿ ಗೆದ್ದ ಅಭ್ಯರ್ಥಿಗಳನ್ನು ತಮ್ಮವರೆಂದು ಬಿಂಬಿಸಿಕೊಳ್ಳಲು ಈಗ ಮೂರು ಪ್ರಮುಖ ರಾಜಕೀಯ ಪಕ್ಷಗಳು ಹೊರಟಿವೆ. ಮುಂಬರುವ ಜಿಪಂ, ತಾಪಂ ಚುನಾವಣೆ ಮೇಲೆ ಗ್ರಾಪಂ ಚುನಾವಣೆ ಫಲಿತಾಂಶ ಪ್ರಭಾವ ಬೀರಲಿದ್ದು, ಗ್ರಾಪಂ ಅಧಿಕಾರ ಹಿಡಿದು ಪಕ್ಷಗಳು ಬಲ ಹೆಚ್ಚಿಸಿಕೊಳ್ಳಲು ಲೆಕ್ಕಾಚಾರಕ್ಕಿಳಿದಿವೆ. ಹಾಗಾಗಿ, ಚುನಾವಣೆ ರಂಗು ಮುಂದುವರಿಯಲಿದೆ.

    ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ 460 ಪುರುಷ, 632 ಮಹಿಳಾ ಅಭ್ಯರ್ಥಿಗಳು ಚುನಾಯಿತರಾಗಿದ್ದಾರೆ. ಎಸ್‌ಟಿ ಮೀಸಲು 154 ಪುರುಷ, 348 ಮಹಿಳೆಯರು, ಬಿಸಿಎಂಎ 264 ಪುರುಷ, 48 ಮಹಿಳೆಯರು, ಬಿಸಿಎಂಬಿ ಮೀಸಲು ಕ್ಷೇತ್ರದಿಂದ 130 ಪುರುಷ, 75 ಮಹಿಳಾ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಆಯ್ಕೆಗೆ ಮೀಸಲಾತಿ ಪ್ರಕಟಿಸಲಾಗಿದ್ದು ಅಧ್ಯಕ್ಷ, ಉಪಾಧ್ಯಕ್ಷರಾಗುವ ಆಸೆಯಿಂದ ಸದಸ್ಯರ ಖರೀದಿಯೂ ನಡೆಯಲಿದೆ, ಕೆಲವೆಡೆ ಸದಸ್ಯರಿಗೆ ಪ್ರವಾಸಭಾಗ್ಯ ಕಲ್ಪಿಸಿರುವ ಆಕಾಂಕ್ಷಿಗಳು,ರಾಜಾತಿಥ್ಯ ಆರಂಭಿಸಲಿದ್ದಾರೆ. ಅವಿಶ್ವಾಸ ನಿರ್ಣಯಕ್ಕೆ ಕನಿಷ್ಟ 15 ತಿಂಗಳಾಗಬೇಕು.

    ಮೂರು ಪಕ್ಷದ ಸಮಬಲದ ಹೋರಾಟ: ರಾಜಕೀಯ ಪಕ್ಷಗಳು ತಮಗೆ ತೋಚಿದಂತೆ ಅಂಕಿ, ಅಂಶಗಳನ್ನು ಹೇಳುತ್ತಿದ್ದಾರೆಯಾದರೂ ವಾಸ್ತವದಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಮೂರು ಪಕ್ಷಗಳು ಸಮಬಲದ ಸಾಧನೆಯನ್ನೇ ಮಾಡಿರುವ ಸಾಧ್ಯತೆಯಿದೆ. ಗ್ರಾಪಂ ಚುನಾವಣೆಯಲ್ಲಿ ಹಿಂದಿನಿಂದಲೂ ಕಾಂಗ್ರೆಸ್ ಪ್ರಾಬಲ್ಯವಿದೆ, ಜೆಡಿಎಸ್ ಜಿಲ್ಲೆಯಲ್ಲಿ ಶಕ್ತಿಶಾಲಿಯಾಗಿಯೇ ಉಳಿದಿದೆ, ಇನ್ನೂ ನಗರ ಪ್ರದೇಶದ ಪಕ್ಷವೆಂಬ ಹಣೆಪಟ್ಟಿಯಲ್ಲಿ ಬಿಜೆಪಿ ಕಳಚಿಕೊಂಡು ತುಂಬದಿನವಾಗಿದೆ. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆ ನಡೆದ ನಂತರವಷ್ಟೇ ರಾಜಕೀಯ ಪಕ್ಷಗಳ ವಾಸ್ತವ ಶಕ್ತಿ ಬಯಲಾಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts