More

    ಅಮೃತ ಮಹೋತ್ಸವ ರಥಯಾತ್ರೆಗೆ ಭವ್ಯ ಸ್ವಾಗತ

    ಶಿಗ್ಗಾಂವಿ: ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸವಿನೆನಪಿಗಾಗಿ ಕರ್ನಾಟಕ ರಾಜ್ಯ ಸ್ವಾತಂತ್ರ್ಯ ಹೋರಾಟಗಾರರ ಹಾಗೂ ಉತ್ತರಾಧಿಕಾರಿಗಳ ಸಂಘ ಹಮ್ಮಿಕೊಂಡಿರುವ ಅಮೃತ ಮಹೋತ್ಸವದ ರಥಯಾತ್ರೆಯನ್ನು ಶಿಗ್ಗಾಂವಿ ಪಟ್ಟಣದ ಕಿತ್ತೂರು ಚನ್ನಮ್ಮ ವೃತ್ತದ ಬಳಿ ಶನಿವಾರ ಸಂಜೆ ಭವ್ಯವಾಗಿ ಸ್ವಾಗತಿಸಲಾಯಿತು.

    ಕಿತ್ತೂರು ರಾಣಿ ಚನ್ನಮ್ಮ ಮೂರ್ತಿಗೆ ಮಾಲಾರ್ಪಣೆ ಮಾಡಿ, ಬಳಿಕ ಸ್ವಾತಂತ್ರ್ಯ ಹೋರಾಟಗಾರರ ಮಕ್ಕಳನ್ನು ಸನ್ಮಾನಿಸಿ ಮಾತನಾಡಿದ ವಿಧಾನ ಪರಿಷತ್ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ, ದೇಶಕ್ಕಾಗಿ ಜಿಲ್ಲೆಯ ಹುತಾತ್ಮ ಸ್ವಾತಂತ್ರ್ಯ ಯೋಧರಾದ ಮೈಲಾರ ಮಹಾದೇವಪ್ಪ, ವೀರಯ್ಯ ಹಿರೇಮಠ, ತಿರಕಪ್ಪ ಮಡಿವಾಳರ ಬ್ರಿಟಿಷರ ಖಜಾನೆ ಲೂಟಿ ಮಾಡಿ, ಹೊಸರಿತ್ತಿಯಲ್ಲಿ ಸಾರ್ವಜನಿಕರ ಸಮ್ಮುಖದಲ್ಲಿ ಬ್ರಿಟಿಷರ ಗುಂಡಿಗೆ ತಮ್ಮ 25ನೇ ವಯಸ್ಸಿನಲ್ಲಿ ಹುತಾತ್ಮರಾಗಿದ್ದಾರೆ ಎಂದರು.

    ಹುತಾತ್ಮ ಸ್ವಾತಂತ್ರ್ಯ ಯೋಧರ ತ್ಯಾಗ, ಬಲಿದಾನ ಭಾರತೀಯ ಇತಿಹಾಸ ಪುಟಗಳಲ್ಲಿ ಬರೆಯಲಾಗಿದೆ. ಇಂದು ನಾವೆಲ್ಲ ಅಂತಹ ಮಹನೀಯರ ತ್ಯಾಗ, ಬಲಿದಾನದ ಸ್ಮರಣೆ ಮಾಡಬೇಕಿದೆ. ಹಾವೇರಿ ಜಿಲ್ಲೆ ಸ್ವಾತಂತ್ರ್ಯ ಹೋರಾಟ ಅಂದಿನ ದಿನಗಳಲ್ಲಿ ಮೈಲಾರ ಮಹದೇವಪ್ಪನವರ ಮುಖಂಡತ್ವದಲ್ಲಿ ಮುಂಚೂಣಿಯಲ್ಲಿತ್ತು. ಸ್ವಾತಂತ್ರ್ಯ ಯೋಧರ ಪರಿವಾರಗಳಿಗೆ ಸರ್ಕಾರ ಸೌಲಭ್ಯ ಕಲ್ಪಿಸಬೇಕಿದೆ ಎಂದರು.

    ಶಿಗ್ಗಾಂವಿ ಪಟ್ಟಣದಿಂದ ಹುಲಗೂರು, ಬನ್ನೂರು, ಕೆಂಗಾಪುರ ಗ್ರಾಮಗಳಲ್ಲಿ ರಥಯಾತ್ರೆ ಸಂಚರಿಸಿ, ಸಾರ್ವಜನಿಕರಿಗೆ ಹುತಾತ್ಮ ಯೋಧರ ಯಶೋಗಾಥೆ ಪರಿಚಯಿಸಿತು. ಗ್ರಾಮಗಳಲ್ಲಿ ನಾಗರಿಕರು ಹರ್ಷದಿಂದ ಸ್ವಾಗತಿಸಿ, ಬೀಳ್ಕೊಟ್ಟರು. ಇದೇ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳನ್ನು ಶಿಗ್ಗಾಂವಿ ಸೇರಿದಂತೆ ಎಲ್ಲ ಗ್ರಾಮಗಳಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.

    ತಹಸೀಲ್ದಾರ್ ಶಿವಾನಂದ ರಾಣೆ, ಪುರಸಭೆ ಅಧ್ಯಕ್ಷೆ ರೂಪಾ ಬನ್ನಿಕೊಪ್ಪ, ಸದಸ್ಯರಾದ ಸುಭಾಸ ಚವ್ಹಾಣ, ಜಗದೀಶ ಮಹಾರಾಜಪೇಟೆ, ಶಿವಯೋಗಯ್ಯ ಲೋಕನಗೌಡ್ರ, ಟಾಕನಗೌಡ್ರ. ಪಾಟೀಲ, ಗಾಂಧಿ ಹೆಸರೂರ, ಶಂಕರ ಅರ್ಕಸಾಲಿ, ಶಾಂತಪ್ಪ ಮಡಿವಾಳರ, ಗಣೇಶ ಬಡಿಗೇರ, ಮಂಜುಳಾ ಅರ್ಕಸಾಲಿ, ಪುರಸಭೆ ಸದಸ್ಯರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts