More

    ನಾಮಪತ್ರ ಸಲ್ಲಿಕೆಗೆ ಧನುರ್ವಸ ಅಡ್ಡಿ: ಅಮಾವಾಸ್ಯೆ ದಿನವೇ ಉಮೇದುವಾರಿಕೆ ಸಲ್ಲಿಸಲು ಮುಂದಾದ ಅಭ್ಯರ್ಥಿಗಳು

    ರಾಮನಗರ: ವಿಜ್ಞಾನ ಎಷ್ಟೇ ವೇಗವಾಗಿ ಬೆಳೆಯುತ್ತಿದ್ದರೂ ಜೋತಿಷಿಗಳು ನೀಡುವ ಸಮಯ ಕಾಯ್ದು ಮುಂದುವರಿಯುವ ಕಾಲ ಗ್ರಾಮ ಪಂಚಾಯಿತಿ ಚುನಾವಣೆಗೂ ತಟ್ಟಿದೆ. ಧನುರ್ವಸ ಪ್ರಾರಂಭವಾಗುವುದರಿಂದ ಒಳ್ಳೆಯ ದಿನಗಳು ಇಲ್ಲ ಎನ್ನುವ ಆತಂಕ ಅಭ್ಯರ್ಥಿಗಳನ್ನು ಚಿಂತೆಗೀಡು ಮಾಡಿದೆ.

    ರಾಮನಗರ ಮತ್ತು ಕನಕಪುರ ತಾಲೂಕುಗಳ ಗ್ರಾಪಂಗಳಿಗೆ ನಾಮಪತ್ರ ಸಲ್ಲಿಕೆ ಮತ್ತು ಪರೀಶಿಲನೆ ಕಾರ್ಯ ಮುಗಿದಿದೆ. ಮೊದಲ ಹಂತದಲ್ಲಿಯೂ ಶುಕ್ರವಾರ ಎನ್ನುವ ಕಾರಣಕ್ಕೆ ಹೆಚ್ಚಿನ ಅಭ್ಯರ್ಥಿಗಳು ಆ ದಿನ ಉಮೇದುವಾರಿಕೆ ಸಲ್ಲಿಸಿದ್ದರು.

    ಎರಡನೇ ಹಂತದ ಮತದಾನ ನಡೆಯುವ ಮಾಗಡಿ ಮತ್ತು ರಾಮನಗರದಲ್ಲಿ ನಾಮಪತ್ರ ಸಲ್ಲಿಕೆಗೆ ಡಿ.16ರವರೆಗೂ ಕಾಲಾವಕಾಶ ಇದೆ. ಆದರೆ ಕೆಲವರಿಗೆ ಇನ್ನೂ ಟಿಕೆಟ್ ಖಾತ್ರಿ ಆಗದ ಕಾರಣ ನಾಮಪತ್ರ ಸಲ್ಲಿಕೆಗೆ ಧನುರ್ವಸ ಅಡ್ಡಿಯಾಗಿದೆ.

    ಸೋಮವಾರ ಅಮಾವಾಸ್ಯೆ ಆಗಿದ್ದು, ಮಂಗಳವಾರದಿಂದ ಧನುರ್ವಸ ಆರಂಭವಾಗುತ್ತದೆ. ಸೋಮವಾರ ಅಮಾವಾಸ್ಯೆ ಇರುವುದರಿಂದ ಈ ದಿನ ಒಳ್ಳೆಯದಲ್ಲ ಎಂದು ಜೋತಿಷಿಗಳು ಹೇಳಿದ್ದು, ಕೆಲವರು ಶನಿವಾರವೇ ಸಲ್ಲಿಸಿದ್ದಾರೆ. ಇನ್ನೂ ಕೆಲವರಿಗೆ ಅಮಾವಾಸ್ಯೆ ನಂತರ ನಾಮಪತ್ರ ಸಲ್ಲಿಸಿದರೆ ಸೋಲು ಗ್ಯಾರಂಟಿ ಎನ್ನುವ ಭವಿಷ್ಯ ನುಡಿದಿರುವ ಕಾರಣ, ಅಮಾವಾಸ್ಯೆ ದಿನವೇ ನಾಮಪತ್ರ ಸಲ್ಲಿಸಲು ಮುಂದಾಗಿದ್ದಾರೆ.

    ಮನವೊಲಿಕೆ ಕಸರತ್ತು

    ನಾಮಪತ್ರ ಸಲ್ಲಿಕೆಗೆ ಭವಿಷ್ಯ ಕೇಳಿಕೊಂಡು ಕುಳಿತಿರುವ ಅಭ್ಯರ್ಥಿಗಳು ಒಂದೆಡೆಯಾದರೆ ಮತ್ತೊಂದೆಡೆ ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿಗಳಲ್ಲಿ ಈಗ ಮನವೊಲಿಕೆ ರಾಜಕಾರಣ ಆರಂಭವಾಗಿದೆ. ಕನಕಪುರ ತಾಲೂಕಿನ 36 ಗ್ರಾಪಂಗಳ 612 ಸ್ಥಾನಗಳಿಗೆ ಒಟ್ಟು 2216 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಆದರೆ ಇವುಗಳಲ್ಲಿ 51 ನಾಮಪತ್ರ ತಿರಸ್ಕೃತಗೊಂಡು 2165 ನಾಮಪತ್ರಗಳು ಕ್ರಮಬದ್ಧಗೊಂಡಿದ್ದವು. ಇನ್ನು ರಾಮನಗರ ತಾಲೂಕಿನ 20 ಗ್ರಾಪಂಗಳ 359 ಸ್ಥಾನಗಳಿಗೆ ಸಲ್ಲಿಕೆಯಾಗಿರುವ ನಾಮಪತ್ರಗಳಲ್ಲಿ 1240 ಕ್ರಮಬದ್ಧಗೊಂಡಿವೆ. ಈ ಹಿನ್ನೆಲೆಯಲ್ಲಿ ಯಾವುದೇ ಪಕ್ಷಗಳ ಬೆಂಬಲವಿಲ್ಲದೆ ಹಾಗೂ ಪಕ್ಷ ಸೂಚಿಸಿರುವ ಅಭ್ಯರ್ಥಿಗೆ ಬಂಡಾಯವಾಗಿ ನಿಂತಿರುವ ಉಮೇದುವಾರರನ್ನು ಕಣದಿಂದ ಹಿಂದೆ ಸರಿಯುವಂತೆ ಮಾಡುವ ನಿಟ್ಟಿನಲ್ಲಿ ಮನವೊಲಿಕೆ ಕಸರತ್ತು ನಡೆಯುತ್ತಿದೆ. ನಾಮಪತ್ರ ಹಿಂಪಡೆಯಲು ಇಂದು (ಡಿ.14) ಕೊನೆಯ ದಿನವಾಗಿದೆ. ಈ ಹಿನ್ನೆಲೆಯಲ್ಲಿ ನಾನಾ ರೀತಿಯ ಅಮಿಷಗಳನ್ನು ಒಡ್ಡುವ ಪ್ರಯತ್ನಗಳು ಸಾಗಿದೆ.

    ಕೆಲವರು ನಾಟ್ ರೀಚಬಲ್

    ಚುನಾವಣೆಯಲ್ಲಿ ಸ್ಪರ್ಧಿಸಿಯೇ ತೀರಬೇಕು ಎನ್ನುವ ಹಠಕ್ಕೆ ಬಿದ್ದು ನಾಮಪತ್ರ ಸಲ್ಲಿಕೆ ಮಾಡಿರುವ ಕೆಲ ಅಭ್ಯರ್ಥಿಗಳು ಮನವೊಲಿಕೆ ಮಾಡುವ ಮಂದಿಯ ಕೈಗೆ ಸಿಗದೇ ಆಟ ಆಡಿಸುತ್ತಿದ್ದಾರೆ. ಕೆಲವರು ಮೊಬೈಲ್​ಗಳನ್ನು ಸ್ವಿಚ್ಡ್ ಆಫ್ ಮಾಡಿಕೊಂಡಿದ್ದರೆ ಮತ್ತೆ ಕೆಲವರು ಧರ್ಮಸ್ಥಳ, ತಿರುಪತಿ ಪ್ರವಾಸ ಕೈಗೊಂಡು ಯಾರ ಕೈಗೂ ಸಿಗುತ್ತಿಲ್ಲ. ಇದು ಪಕ್ಷ ಬೆಂಬಲಿತ ಅಭ್ಯರ್ಥಿಗಳ ಎದೆ ಬಡಿತ ಹೆಚ್ಚಿಸಿದೆ.

    ಕೋಟಿ ಲೆಕ್ಕದಲ್ಲಿ ವಾರ್ಷಿಕ ಆದಾಯ

    ಜಿಲ್ಲೆಯ ಶ್ರೀಮಂತ ಗ್ರಾಪಂ ಆಗಿರುವ ಮಂಚನಾಯಕನಹಳ್ಳಿಯ ಒಟ್ಟು 34 ಸ್ಥಾನಗಳಿಗೆ 133 ನಾಮಪತ್ರ ಸಲ್ಲಿಕೆಯಾಗಿವೆ. ಬಿಡದಿ ಕೈಗಾರಿಕಾ ಪ್ರದೇಶದ ಹಲವು ಭಾಗದ ಜತೆಗೆ, ರಿಯಲ್ ಎಸ್ಟೇಟ್ ಸೇರಿ ಹೆಚ್ಚು ಚಟುವಟಿಕೆ ನಡೆಯುವ ಈ ಗ್ರಾಪಂ ಆದಾಯ ವಾರ್ಷಿಕವಾಗಿ ಕೋಟಿ ಲೆಕ್ಕದಲ್ಲಿಯೇ ಇದೆ. ಇದರ ಗದ್ದುಗೆ ಹಿಡಿಯಬೇಕು ಎನ್ನುವ ಕಾರಣಕ್ಕೆ ಪ್ರತಿಬಾರಿಯೂ ಇಲ್ಲಿ ಉಮೇದುವಾರಿಕೆ ಸಲ್ಲಿಸುವವರ ಸಂಖ್ಯೆ ಹೆಚ್ಚಿರುತ್ತದೆ. ಈ ಬಾರಿಯೂ ಇದು ಮತ್ತೊಮ್ಮೆ ಸಾಬೀತಾಗಿದೆ.

    ಗಂಗಾಧರ್ ಬೈರಾಪಟ್ಟಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts