More

    ಗ್ರಾಪಂ ಎದುರು ಮೌನ ಪ್ರತಿಭಟನೆ

    ಕೊಕಟನೂರ: ಆರ್ಥಿಕ ಹಾಗೂ ಸಾಮಾಜಿಕ ಭದ್ರತೆ ಇಲ್ಲದೆ ದಿನದ 24 ಗಂಟೆ ಕೆಲಸ ನಿರ್ವಹಿಸುತ್ತಿರುವ ಆಶಾ, ಅಂಗನವಾಡಿ ಹಾಗೂ ಬಿಸಿಯೂಟ ಕಾರ್ಯಕರ್ತೆಯರು ಮತ್ತು ಗ್ರಾಪಂ ಸಿಬ್ಬಂದಿ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಅಥಣಿ ತಾಲೂಕಿನ ಅಡಹಳ್ಳಿ ಗ್ರಾಮ ಪಂಚಾಯಿತಿ ಕಾರ್ಯಾಲಯದ ಎದುರು ಶುಕ್ರವಾರ ಭಿತ್ತಿಪತ್ರ ಪ್ರದರ್ಶಿಸಿ ಮೌನ ಪ್ರತಿಭಟನೆ ನಡೆಸಿದರು.

    ಗ್ರಾಪಂ ಕಾರ್ಯದರ್ಶಿ ದಿಲೀಪ್ ಸೂರ್ಯವಂಶಿ ಮಾತನಾಡಿ, ಪ್ರತಿ ವರ್ಷ ಆಚರಿಸಲ್ಪಡುವ ಕಾರ್ಮಿಕ ದಿನಾಚರಣೆಗೆ ನಿಜವಾದ ಅರ್ಥ ಬರಬೇಕಾದರೆ ಪಂಚಾಯಿತಿ ನೌಕರರ ವಾರ್ಷಿಕ ವೇತನಕ್ಕೆ 382 ಕೋಟಿ ರೂ. ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

    ಅಂಗನವಾಡಿ ಕಾರ್ಯಕರ್ತೆ ರತ್ನವ್ವ ದೇವರಮನಿ ಮಾತನಾಡಿ, ಅಂಗನವಾಡಿ ಕೇಂದ್ರದಲ್ಲಿಯೇ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳು ಪ್ರಾರಂಭವಾಗಬೇಕು. ದಿನದಲ್ಲಿ ಕೇವಲ 8 ಗಂಟೆ ಮಾತ್ರ ಕಾರ್ಯ ನಿರ್ವಹಣೆ ಅವಧಿ ನಿಗದಿಗೊಳಿಸಿ ಅನುಕೂಲ ಮಾಡಬೇಕು ಎಂದು ಆಗ್ರಹಿಸಿದರು. ಆಶಾ ಕಾರ್ಯಕರ್ತೆ ಸುಜಾತಾ ಹಾಲಳ್ಳಿ ಮಾತನಾಡಿ, ನಮಗೆ ಮಾಸಿಕ 12 ಸಾವಿರ ಗೌರವಧನ ಸಿಗಬೇಕು. ಹಾಗಾದಾಗ ನಮ್ಮ ಕೆಲಸಕ್ಕೆ ಫಲ ಸಿಕ್ಕಂತಾಗುತ್ತದೆ ಎಂದರು. ಬಿಸಿಯೂಟ ಕಾರ್ಯಕರ್ತೆ ಶಾಂತವ್ವ ಐಹೊಳೆ ಮಾತನಾಡಿದರು. ಪಿ.ಡಿ.ಬಡಿಗೇರ, ಶೋಭಾ ಗೋಂದಳಿ, ಬಸವರಾಜ ಧೂಳಶೆಟ್ಟಿ, ಶಾಂತಕಲಾ ಸೂರ್ಯವಂಶಿ, ಜಯಶ್ರೀ ಕೋಳಿ, ಇಂದ್ರವ್ವ ಕಾಂಬಳೆ, ಜಯಶ್ರೀ ನಾಯಿಕ, ಜಗದೀಶ ಸೂರ್ಯವಂಶಿ, ಗೀತಾ ತೇಲಿ, ಶೋಭಾ ಸನದಿ, ಕವಿತಾ ಸೂರ್ಯವಂಶಿ, ರಾಜಶ್ರೀ ಕಾಂಬಳೆ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts