More

    ಗ್ರಾಪಂ ತರಬೇತಿ ಸಮಯ, ತಾಲೂಕು ಕೇಂದ್ರಗಳಲ್ಲಿ ಇಂದಿನಿಂದ ಆರಂಭ

    ಪ್ರಕಾಶ್ ಮಂಜೇಶ್ವರ ಮಂಗಳೂರು

    ಗ್ರಾಮ ಪಂಚಾಯಿತಿ ಹೊಸ ಸದಸ್ಯರು ತರಗತಿಗಳಿಗೆ ಹೊರಡುವ ಸಮಯ ಸನ್ನಿಹಿತವಾಗಿದೆ.

    ಇತ್ತೀಚಿನ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರಿಗೆ ಅಬ್ದುಲ್ ನಝೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತ್‌ರಾಜ್ ಸಂಸ್ಥೆ ವತಿಯಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಫೆ.16ರಿಂದ ತರಬೇತಿ ನಡೆಯಲಿದೆ.

    ಗ್ರಾಮ ಪಂಚಾಯಿತಿ ಆಡಳಿತ, ಗ್ರಾಮಸಭೆ, ಹಣಕಾಸು ನಿರ್ವಹಣೆ, ಹಣ ಹಂಚಿಕೆ, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ, ಆಡಳಿತ ನಿರ್ವಹಣೆ ಸವಾಲುಗಳನ್ನು ಎದುರಿಸುವ ಕುರಿತು ಸಂಪನ್ಮೂಲ ವ್ಯಕ್ತಿಗಳು ಸದಸ್ಯರಿಗೆ ತರಬೇತಿ ನೀಡಲಿದ್ದಾರೆ.
    ಅಂಕಿ ಅಂಶಗಳ ಪ್ರಕಾರ, ಕಳೆದ ವರ್ಷ ರಾಜ್ಯದಲ್ಲಿ ಶೇ.87ಸದಸ್ಯರು ತರಬೇತಿಯಲ್ಲಿ ಪಾಲ್ಗೊಂಡಿದ್ದರು. ಆದರೆ ಗಮನಾರ್ಹ ಸಂಖ್ಯೆಯ ಸದಸ್ಯರು ತರಬೇತಿಯಲ್ಲಿ ಸಕ್ರಿಯವಾಗಿ ಭಾಗವಹಿಸುವುದೇ ಇಲ್ಲ. ಭಾಗವಹಿಸಿದರೂ ಒಂದರ್ಧ ಗಂಟೆ ಇದ್ದು ಸಹಿ ಹಾಕಿ ಹೋಗುತ್ತಾರೆ ಎಂದು ಓರ್ವ ಹಿರಿಯ ಅಧಿಕಾರಿ ಬೇಸರ ವ್ಯಕ್ತಪಡಿಸಿದ್ದಾರೆ.

    ಸದಸ್ಯರಿಗೆ ಸಕಲ ಸೌಕರ್ಯ: ಈ ತರಬೇತಿಗಾಗಿಯೇ ಪ್ರತೀ ತಾಲೂಕು ಕೇಂದ್ರಗಳಲ್ಲಿ ಸರ್ಕಾರ ಲಕ್ಷಾಂತರ ರೂ.ವ್ಯಯಿಸುತ್ತದೆ. ಟಿವಿ, ಪ್ರಾಜೆಕ್ಟರ್, ಮಧ್ಯಾಹ್ನ ಊಟ, ದಿನಂಪ್ರತಿ ಎರಡು ಹೊತ್ತು ಚಹಾ, ತರಬೇತಿ ವಿಷಯಕ್ಕೆ ಸಂಬಂಧಿಸಿದ ಕಿಟ್, ಬ್ಯಾಗ್ ಸಹಿತ ಪ್ರತಿಯೊಬ್ಬರಿಗೂ ಸರ್ಕಾರ ಪ್ರಯಾಣ ವೆಚ್ಚವನ್ನೂ ನೀಡುತ್ತದೆ. ಈ ವರ್ಷ ತರಬೇತಿ ಅವಧಿಯಲ್ಲಿ ಸದಸ್ಯರನ್ನು ಗ್ರಾಮ ಕೇಂದ್ರಗಳಿಂದ ತಾಲೂಕು ಕೇಂದ್ರಗಳಿಗೆ ಕರೆದೊಯ್ಯಲು ವ್ಯವಸ್ಥೆ ಮಾಡುವ ಜವಾಬ್ದಾರಿಯನ್ನು ಕೂಡ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ವಹಿಸಿಕೊಡಲಾಗಿದೆ.

    ಹಾಜರಾತಿ ಕಡ್ಡಾಯವಲ್ಲ: ಸದಸ್ಯರ ಹಾಜರಾತಿ ಕಡ್ಡಾಯಗೊಳಿಸಲು ಅವಕಾಶವಿಲ್ಲ. ಆದ್ದರಿಂದ ಅನೇಕ ಸದಸ್ಯರು ತರಬೇತಿಯನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಜವಾಬ್ದಾರಿಯುತ ಅಧಿಕಾರಿಗಳು ಒಂದು ಸಹಿ ಹಾಕಿಯಾದರೂ ಹೋಗಿ ಎಂದು ಸದಸ್ಯರ ಹಿಂದೆ ಬೀಳುವ ಪರಿಸ್ಥಿತಿಯೂ ಕೆಲವೊಮ್ಮೆ ನಿರ್ಮಾಣವಾಗುತ್ತದೆ. ತರಬೇತಿಯಲ್ಲಿ ಸಕ್ರಿಯರ ಸಂಖ್ಯೆ ಕಡಿಮೆ. ಅದರ ಪರಿಣಾಮ ಮುಂದಿನ ಅಧಿಕಾರ ಅವಧಿಯಲ್ಲಿ ಗೊತ್ತಾಗುತ್ತದೆ ಎನ್ನುತ್ತಾರೆ ಜಿಲ್ಲಾಮಟ್ಟದ ಓರ್ವ ಹಿರಿಯ ಅಧಿಕಾರಿ. ಮನೆಯಲ್ಲಿ ಚಿಕ್ಕ ಮಯಸ್ಸಿನ ಮಕ್ಕಳು ಇರುವವರು, ದೈನಂದಿನ ಕೃಷಿ, ಹೈನುಗಾರಿಕೆ ಚಟುವಟಿಕೆ ಜವಾಬ್ದಾರಿ ಇರುವವರು ನಿರಂತರ ತರಬೇತಿಯಲ್ಲಿ ಭಾಗವಹಿಸುವುದು ಕಷ್ಟ.

    ರಾಜ್ಯಮಟ್ಟದ ತಜ್ಞರಿಂದ ಮಾಹಿತಿ: ಗ್ರಾಪಂ ಸದಸ್ಯರಿಗೆ ನೀಡುವ ತರಬೇತಿ ಅತ್ಯಂತ ಉಪಯುಕ್ತ ಮಾಹಿತಿಯನ್ನು ಒಳಗೊಂಡಿರುತ್ತದೆ. ಪಂಚಾಯಿತಿಗೆ ಬರುವ ಅನುದಾನ, ಅಭಿವೃದ್ಧಿಯ ಅವಕಾಶಗಳು ಕರಿತು ಮಾಹಿತಿ ಸಿಗುತ್ತದೆ ಎಂದು ಉಡುಪಿ ಜಿಪಂ ಉಪ ಕಾರ್ಯದರ್ಶಿ ಕಿರಣ್ ಪಡ್ನೇ ಕರ್ ವಿಜಯವಾಣಿಗೆ ತಿಳಿಸಿದ್ದಾರೆ. ಸರ್ಕಾರದ ವಿವಿಧ ಯೋಜನೆಗಳು, ಸಾಮಾನ್ಯ ಜ್ಞಾನ ನೀಡುವ ವಿಷಯಗಳ ತರಬೇತಿ ಪಡೆಯುವ ಬಗ್ಗೆ ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳು ನಿಖರ ಮಾಹಿತಿ ನೀಡಲಿದ್ದಾರೆ. ಎಲ್ಲ ಸದಸ್ಯರು ಇದರ ಪ್ರಯೋಜನ ಪಡೆದುಕೊಳ್ಳಬೇಕು. ತರಬೇತಿಯು ಏಕಕಾಲದಲ್ಲಿ ಪೂರ್ಣಗೊಳ್ಳದೆ 4- 5ಹಂತಗಳಲ್ಲಿ ನಡೆಯಲಿದೆ ಎಂದವರು ಮಾಹಿತಿ ನೀಡಿದ್ದಾರೆ.

    ಹೊಸ ಗ್ರಾಮ ಪಂಚಾಯಿತಿ ಸದಸ್ಯರ ತರಬೇತಿ ಕಾರ್ಯಕ್ರಮ ಫೆ.16ರಿಂದ ನಡೆಯಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊಸದಾಗಿ ರಚನೆಯಾದ ಮೂಡುಬಿದರೆ ತಾಲೂಕಿನ ತರಬೇತಿ ಮಂಗಳೂರಿನಲ್ಲಿ ಹಾಗೂ ಕಡಬದ ತರಬೇತಿ ಪುತ್ತೂರಿನಲ್ಲಿ, ಬೆಳ್ತಂಗಡಿ, ಬಂಟ್ವಾಳ, ಸುಳ್ಯ ತಾಲೂಕುಗಳ ತರಬೇತಿ ಆಯಾ ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧಗಳಲ್ಲಿ ನಡೆಯಲಿವೆ.

    ಕೆ. ಆನಂದ್ ಕುಮಾರ್
    ಉಪ ಕಾರ್ಯದರ್ಶಿ, ಜಿಪಂ, ದ.ಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts