More

    ಗ್ರಾಪಂ ಚುನಾವಣೆಗೆ ಮತ್ತೆ ಪ್ರಯತ್ನ, ಇಂದು ಜಿಲ್ಲಾಧಿಕಾರಿಗಳ ಜತೆ ಆಯುಕ್ತರ ಸಂವಾದ

    – ಪ್ರಕಾಶ್ ಮಂಜೇಶ್ವರ ಮಂಗಳೂರು
    ಕೋವಿಡ್ – 19 ನಿಯಂತ್ರಣದ ಸವಾಲಿನ ದಿನಗಳಲ್ಲೇ ರಾಜ್ಯದ ಗ್ರಾಮ ಪಂಚಾಯಿತಿಗಳಿಗೆ ಸಾರ್ವತ್ರಿಕ ಚುನಾವಣೆ ನಡೆಸಲು ಚುನಾವಣಾ ಆಯೋಗ ಮತ್ತೆ ಸಿದ್ಧತೆ ಆರಂಭಿಸಿದೆ.

    ಚುನಾವಣೆ ಪೂರ್ವಸಿದ್ಧತೆ ಕುರಿತು ಆಯೋಗದ ಆಯುಕ್ತರು ಬುಧವಾರ ಸಾಯಂಕಾಲ 5.30ಕ್ಕೆ ಎಲ್ಲ ಜಿಲ್ಲಾಧಿಕಾರಿಗಳ ಜತೆ ವಿಡಿಯೋ ಸಂವಾದ ನಡೆಸಲಿದ್ದಾರೆ.
    ಗ್ರಾಮ ಪಂಚಾಯಿತಿ ಚುನಾವಣೆ ಮುಂದೂಡಿರುವ ನಿರ್ಧಾರವನ್ನು ಪುನರ್‌ಪರಿಶೀಲಿಸುವಂತೆ ಹೈಕೋರ್ಟ್ ಮಧ್ಯಂತರ ಆದೇಶದಲ್ಲಿ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಹೊಸ ಬೆಳವಣಿಗೆ ಮಹತ್ವ ಪಡೆದಿದೆ.

    ಕೋವಿಡ್ ಹಿನ್ನೆಲೆ ಸಾಮಾಜಿಕ ಅಂತರ ಮತ್ತು ಮತದಾರರ ಸುರಕ್ಷತೆ ಕಾಯ್ದುಕೊಂಡು ಮತದಾನ ನಡೆಸಲು ಹೆಚ್ಚಿನ ಮತಗಟ್ಟೆಗಳನ್ನು ಸ್ಥಾಪನೆ, ಕ್ವಾರಂಟೈನ್ ಪ್ರದೇಶಗಳ ಶಾಲೆಗಳಲ್ಲಿ ಮತ ಚಲಾಯಿಸಲು ವ್ಯವಸ್ಥೆ, ಹೆಚ್ಚಿನ ಮತಗಟ್ಟೆ ಸ್ಥಾಪಿಸಲು ಹೆಚ್ಚುವರಿ ಮತಗಟ್ಟೆಗಳ ಸಿಬ್ಬಂದಿ ಮತ್ತು ಅಧಿಕಾರಿಗಳ ನೇಮಕ, ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತರು ಹಾಗೂ ಸಿಬ್ಬಂದಿ ಸಹಕಾರ ಪಡೆಯುವುದು, ಪ್ರಸ್ತುತ ಪರಿಸ್ಥಿತಿಯಲ್ಲಿ ಚುನಾವಣೆ ನಡೆಸುವ ಸಂಬಂಧ ತಗಲುವ ಅಂದಾಜು ಅನುದಾನದ ಬೇಡಿಕೆ ಮುಂತಾದುವು ಆಯುಕ್ತರು ಜಿಲ್ಲಾಧಿಕಾರಿಗಳ ಜತೆ ನಡೆಸಲಿರುವ ಸಂವಾದದ ಮುಖ್ಯ ವಿಷಯ.

    ಲಾಕ್‌ಡೌನ್‌ನಿಂದ ಪ್ರಕ್ರಿಯೆ ಸ್ಥಗಿತ: ರಾಜ್ಯದ 6025 ಗ್ರಾಪಂಗಳ ಅಧಿಕಾರ ಅವಧಿ 2020ರ ಜೂನ್‌ನಿಂದ ವಿವಿಧ ದಿನಾಂಕಗಳಲ್ಲಿ ಮುಕ್ತಾಯಗೊಳ್ಳಲಿದೆ. ಈ ಅಧಿಕಾರ ಅವಧಿ ಮುಕ್ತಾಯ ಪೂರ್ವದಲ್ಲೇ ಚುನಾವಣೆ ನಡೆಸಲು ಆಯೋಗ ಸಿದ್ಧತೆ ನಡೆಸಿದ್ದು, ವೇಳಾಪಟ್ಟಿಯೂ ನಿಗದಿಯಾಗಿತ್ತು. ಪಂಚಾಯತಿ ವ್ಯಾಪ್ತಿಯ ಮತದಾರರನ್ನು ಗುರುತಿಸುವ ಪ್ರಕ್ರಿಯೆಗೆ ಮಾರ್ಚ್ 9ರಂದು ಚಾಲನೆ ನೀಡಲಾಗಿತ್ತು. ಪೂರ್ವ ನಿಗದಿಯಂತೆ ಕಳೆದ ಏ.20ರಂದು ಮತದಾರರ ಅಂತಿಮ ಪಟ್ಟಿ ಹೊರಬೀಳಬೇಕಿತ್ತು. ಈ ಹಂತದಲ್ಲೇ ಕೋವಿಡ್ ಲಾಕ್‌ಡೌನ್ ಆರಂಭಗೊಂಡ ಕಾರಣ ಚುನಾವಣೆ ಪ್ರಕ್ರಿಯೆ ಸ್ಥಗಿತಗೊಂಡಿತು. ಸರ್ಕಾರದ ಆಡಳಿತ ಯಂತ್ರ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣಗೊಂಡಿತು. ಪ್ರಸಕ್ತ ಅವಧಿ ಪೂರ್ಣಗೊಳ್ಳುವ ಪಂಚಾಯಿತಿಗಳಿಗೆ ಆಡಳಿತಾಧಿಕಾರಿ ನೇಮಿಸಲು ಸರ್ಕಾರ ಆದೇಶ ಹೊರಡಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts