More

    ಉರಿಯದ ಗ್ರಾಮಜ್ಯೋತಿ: ಯೋಜನೆಗೆ ಆಯ್ಕೆಯಾದ 1338ರ ಪೈಕಿ 430 ಮನೆಗಿಲ್ಲ ಬೆಳಕು

    ಶ್ರವಣ್‌ಕುಮಾರ್ ನಾಳ ಪುತ್ತೂರು
    ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಇಲ್ಲದ ಮನೆಗಳಿಗೆ ಸಂಪರ್ಕ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರದ ದೀನ್ ದಯಾಳ್ ಗ್ರಾಮಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಸಂಪರ್ಕ ನೀಡುವ ಯೋಜನೆ ರಾಜ್ಯಾದ್ಯಂತ ಸಾಕಾರಗೊಂಡಿದ್ದು, ಪುತ್ತೂರಿನ ಆಯ್ಕೆಯಾದ 1338 ಮನೆಗಳಲ್ಲಿ 430 ಮನೆಗೆ ಸಮರ್ಪಕ ಸಂಪರ್ಕವೇ ಆಗಿಲ್ಲ..

    ದೇಶಾದ್ಯಂತ ಇರುವ ಬಿಪಿಎಲ್ ಕುಟುಂಬಕ್ಕೆ ಉಚಿತ ವಿದ್ಯುತ್ ಸಂಪರ್ಕ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ 2015ರಲ್ಲಿ ದೀನ್ ದಯಾಳ್ ಗ್ರಾಮಜ್ಯೋತಿ ಯೋಜನೆಯ ಅಂಗವಾಗಿ ಪುತ್ತೂರು ತಾಲೂಕಿನ ಪ್ರತಿ ಗ್ರಾಮಾಂತರ ಪ್ರದೇಶದಲ್ಲಿ ಸಮೀಕ್ಷೆ ಕಾರ್ಯ ಪೂರ್ಣಗೊಂಡಿತ್ತು. ನಂತರ 2018ರಲ್ಲಿ ಕಾಮಗಾರಿಗೆ ಚಾಲನೆ ದೊರಕಿತ್ತು. ವಿದ್ಯುತ್ ಸಂಪರ್ಕ ಇಲ್ಲದ ಪುತ್ತೂರಿನ 1338 ಬಡವರ ಮನೆಗೆ ಬೆಳಕು ಭಾಗ್ಯ ನೀಡುವ ಯೋಜನೆಯಾಗಿದ್ದು, ಕೆಲವು ತಾಂತ್ರಿಕ ಕಾರಣದಿಂದ 430 ಮನೆಗೆ ಇನ್ನೂ ಸಮರ್ಪಕವಾಗಿ ಗ್ರಾಮಜ್ಯೋತಿ ಯೋಜನೆ ತಲುಪಿಲ್ಲ.

    ಪುತ್ತೂರು ಹಾಗೂ ಕಡಬದಲ್ಲಿ ಗುರುತಿಸಲಾದ ಮನೆಗಳಿಗೆ ಈ ವಿದ್ಯುತ್ ಸಂಪರ್ಕ ಕಾಮಗಾರಿಯು ಬಹುತೇಕ ಕಡೆ ವ್ಯವಸ್ಥಿತವಾಗಿ ನಡೆದಿದೆ. ಗುರುತಿಸಲಾದ ಮನೆಗಳಿಗೆ ಕೇಂದ್ರ ಸರ್ಕಾರದ ಯೋಜನೆಯಡಿ ಮೆಸ್ಕಾಂ ಮುಖಾಂತರ ಸಂಪರ್ಕ ಕಲ್ಪಿಸುವ ಯೋಜನೆ ಇದಾಗಿದ್ದು, ತಲಾ ಒಂದು ಮನಗೆ ಸಂಪರ್ಕ ಕಲ್ಪಿಸಲು ಕನಿಷ್ಠ 50 ಸಾವಿರ ರೂ. ವೆಚ್ಚ ತಗುಲಲಿದ್ದು, ಒಟ್ಟು ಅಂದಾಜು 6.50 ಕೋಟಿ ರೂ. ಪುತ್ತೂರಿಗೆ ಮೀಸಲಾಗಿರಿಸಲಾಗಿತ್ತು.
     
    ಬಿಪಿಎಲ್ ಕುಟುಂಬ ಯೋಜನೆಗೆ ಆಯ್ಕೆ: ಈ ಯೋಜನೆಯಡಿ ಉಚಿತ ವಿದ್ಯುತ್ ಸಂಪರ್ಕ ಪಡೆಯುವ ಕುಟುಂಬ ಕಡ್ಡಾಯವಾಗಿ ಬಿಪಿಎಲ್ ಕಾರ್ಡ್ ಹೊಂದಿರಬೇಕು. ಈಗಾಗಲೇ ವಿದ್ಯುತ್ ಸಂಪರ್ಕ ಹೊಂದಿರದೆ, ಬಿಪಿಎಲ್ ಕಾರ್ಡ್ ಇರುವ ಕುಟುಂಬವನ್ನು ಖಚಿತಪಡಿಸಲು ಆಯಾ ಗ್ರಾಮ ಪಂಚಾಯಿತಿ ಮೂಲಕ ದೃಢೀಕರಣ ಕಾರ್ಯ ಮಾಡಲಾಗಿದ್ದು, ಅಂತಹ ಕುಟುಂಬದವರನ್ನು ಈ ಯೋಜನೆಗೆ ಆಯ್ಕೆ ಮಾಡಲಾಗಿದೆ. ಕೇಂದ್ರ ಸರ್ಕಾರದ ದೀನ್ ದಯಾಳ್ ಯೋಜನೆಯಡಿ ಉಚಿತ ವಿದ್ಯುತ್ ಸಂಪರ್ಕ ಪಡೆಯುವ ಮನೆಗಳಿಗೆ ಮೊದಲಿಗೆ ಕೇವಲ ಒಂದು ಬಲ್ಬ್ ಮಾತ್ರ ಅಳವಡಿಸಲಾಗುತ್ತದೆ. ಇದು ಯೋಜನೆಯ ನಿಯಮ. ಬಹುತೇಕ ಕಡೆ ತಮಗೆ 1 ಬಲ್ಬ್ ಮಾತ್ರವಾದರೆ ಸಂಪರ್ಕವೇ ಬೇಡ ಎಂದು ತಿರಸ್ಕರಿಸಿದ್ದರಿಂದ, ವಿದ್ಯುತ್ ಕಂಬ ಅಳವಡಿಕೆ ಸಮಸ್ಯೆ, ತಾಂತ್ರಿಕ ತೊಂದರೆಗಳಿಂದ ಕೆಲವು ಮನೆಗೆ ಸಂಪರ್ಕ ಸಾಧ್ಯವಾಗಿಲ್ಲ.
     
    ಸಮೀಕ್ಷೆ ಸಂದರ್ಭ ಕೆಲವು ಕುಟಂಬಗಳಲ್ಲಿ ಬಿಪಿಎಲ್ ಕಾರ್ಡ್ ಹೊಂದಿದ್ದು, ಯೋಜನೆ ಅನುಷ್ಠಾನಗೊಳ್ಳುವ ವೇಳೆ ಎಪಿಎಲ್ ಕುಟುಂಬ ಆಗಿ ಪರಿವರ್ತನೆಗೊಂಡಿರುತ್ತದೆ. ಜತೆಗೆ ಕೆಲವು ತಾಂತ್ರಿಕ ಕಾರಣಗಳಿಂದ ಈ ಹಿಂದೆ ಕೆಲವು ಮನೆಗೆ ಸಂಪರ್ಕ ಸಾಧ್ಯವಾಗದೇ ಇರಬಹುದು. ಆದ್ಯತೆ ಮೇರೆಗೆ ಬಹುತೇಕ ಮನೆಗಳಿಗೆ ಈ ಯೋಜನೆ ತಲುಪಿಸಲಾಗಿದೆ.
    -ನರಸಿಂಹ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮೆಸ್ಕಾಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts