More

    ಅನ್ನಭಾಗ್ಯ ಯೋಜನೆಯಡಿ ಅಕ್ಕಿ ವಿತರಿಸಲು ರಾಜ್ಯ ಸರ್ಕಾರ ವಿಫಲ: ಕಾರ್ಡ್‌ದಾರರಿಗೆ ಬಿಡಿಗಾಸು ಗತಿ

    ಬೆಂಗಳೂರು: ರಾಜ್ಯದಲ್ಲಿ ಅಧಿಕಾರಕ್ಕೆ ಬಂದು 9 ತಿಂಗಳು ಕಳೆಯುತ್ತಿದ್ದರೂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ಅನ್ನಭಾಗ್ಯ ಯೋಜನೆಯಡಿ ಕಾರ್ಡ್‌ದಾರರಿಗೆ ಅಕ್ಕಿ ವಿತರಿಸಲು ವಿಫಲವಾಗಿದೆ.

    ಕಳೆದ ವರ್ಷ ತೀವ್ರ ಮಳೆ ಕೊರತೆಯಿಂದಾಗಿ ರಾಜ್ಯದಲ್ಲಿ ಆಹಾರ ಉತ್ಪಾದನೆ ಕುಂಠಿತವಾಗಿದೆ. ಇದರಿಂದಾಗಿ ಈಗಾಗಲೇ ಅಕ್ಕಿ ದರವೂ ಹೆಚ್ಚಳವಾಗಿದೆ. ಮುಂದೆಯೂ ಅಕ್ಕಿ ದರದಲ್ಲಿ ಇನ್ನಷ್ಟು ಹೆಚ್ಚಳವಾಗುವ ಆತಂಕ ಶುರುವಾಗಿದೆ. ಇದರ ನಡುವೆಯೂ ಯೋಜನೆಯಡಿ ಕಾರ್ಡ್‌ದಾರರಿಗೆ ಅಕ್ಕಿ ಸಿಗುವ ಲಕ್ಷಣ ಸದ್ಯಕ್ಕೆ ಗೋಚರಿಸುತ್ತಿಲ್ಲ.ವಿಧಾನಸಭಾ ಚುನಾವಣೆ ಮುನ್ನ ಐದು ಗ್ಯಾರಂಟಿ ಯೋಜನೆಗಳಲ್ಲೊಂದದ ಅನ್ನಭಾಗ್ಯ ಯೋಜನೆಯಡಿ ಉಚಿತವಾಗಿ 5 ಕೆಜಿ ಅಕ್ಕಿ ವಿತರಿಸುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು. ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ ಅಧಿಕಾರಕ್ಕೆ ಬಂತು. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಬಳಿಕ ಅನ್ನಭಾಗ್ಯ ಸೇರಿ ಐದು ಗ್ಯಾರಂಟಿಗಳನ್ನು ಅನುಷ್ಠಾನ ತಂದರು. ಇದಾದ ಬಳಿಕ ಮತದಾರರಿಗೆ ಕೊಟ್ಟಿರುವ ಭರವಸೆಯನ್ನು ಈಡೇರಿಸುವ ನಿಟ್ಟಿನಲ್ಲಿ ಅಕ್ಕಿ ನೀಡುವಂತೆ ಕೇಂದ್ರ ಬಳಿ ಅಂಗಲಾಚಿತ್ತು. ವಿವಿಧ ರಾಜ್ಯಗಳ ಸಿಎಂಗೆ ಮನವಿಯನ್ನೂ ಸಲ್ಲಿಸಲಾಗಿತ್ತು. ಸಾಕಷ್ಟು ಪ್ರಯತ್ನಪಟ್ಟರೂ ಕಾಂಗ್ರೆಸ್ ಸರ್ಕಾರಕ್ಕೆ ಅಕ್ಕಿ ಸಿಗಲಿಲ್ಲ. ಇದಕ್ಕಾಗಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಅಕ್ಕಿಗಾಗಿ ಜಟಾಪಟಿ ನಡೆಯಿತು. ಕೊನೆಗೆ ಬಿಪಿಎಲ್, ಅಂತ್ಯೋದಯ ಕಾರ್ಡ್‌ದಾರರಿಗೆ ಅಕ್ಕಿ ಬದಲು ಹಣ ವರ್ಗಾವಣೆ ವ್ಯವಸ್ಥೆಯನ್ನು ಜು.10ರಿಂದ ಜಾರಿಗೆ ಬಂತು. ಬಿಪಿಎಲ್ ಕಾರ್ಡ್‌ನಲ್ಲಿರುವ ಪ್ರತಿ ಸದಸ್ಯನಿಗೆ ಕೆಜಿಗೆ 34 ರೂ.ನಂತೆ 5 ಕೆಜಿ ಅಕ್ಕಿಗೆ 170 ರೂ.ನಗದು ಹಣವನ್ನು ಕುಟುಂಬದ ಮುಖ್ಯಸ್ಥರ ಖಾತೆಗೆ ಹಾಕಲಾಗತ್ತಿದೆ. ಅದೇರೀತಿ, ಅಂತ್ಯೋದಯ ಕಾರ್ಡ್‌ನಲ್ಲಿರುವ ನಾಲ್ಕು ಸದಸ್ಯರಿದ್ದರೆ ಕುಟುಂಬಕ್ಕೆ 170 ರೂ, ಐದು ಸದಸ್ಯರಿದ್ದರೆ 510 ರೂ, ಆರು ಸದಸ್ಯರಿದ್ದರೆ 850 ರೂ.ಹಣ ಹಾಕಲಾಗುತ್ತಿದೆ. ಪ್ರಾರಂಭದಲ್ಲಿ 2023ರ ನವೆಂಬರ್ ಅಥವಾ ಡಿಸೆಂಬರ್ ವೇಳೆ ಹಣ ಬದಲು ಅಕ್ಕಿ ವಿತರಿಸುವುದಾಗಿ ರಾಜ್ಯ ಸರ್ಕಾರ ಪದೇಪದೆ ಹೇಳುತ್ತಿದ್ದರೂ ಇದು ಹುಸಿಯಾಗಿದೆ.

    ಹಣ ಬದಲು ಅಕ್ಕಿ ಕೊಡಿ:
    ಆಹಾರ ಇಲಾಖೆ ರಾಜ್ಯಾದ್ಯಂತ ನಡೆಸಿದ್ದ ಸಮೀಕ್ಷೆಯಲ್ಲಿ ಶೇ.80 ಕಾರ್ಡ್‌ದಾರರು ನಗದು ಬದಲು ಅಕ್ಕಿ ನೀಡುವಂತೆ ಹೇಳಿದ್ದರು. ಕಾರ್ಡ್‌ದಾರರಿಗೆ ಅಕ್ಕಿ ಬೇಕಾ ಅಥವಾ ಹಣ ನೀಡಬೇಕಾ ಎಂಬುದರ ಬಗ್ಗೆ ಆಹಾರ ಇಲಾಖೆ ಅಧಿಕಾರಿಗಳು ಮನೆ ಮನೆಗೆ ತೆರಳಿ ಕಾರ್ಡ್‌ದಾರರ ಅಭಿಪ್ರಾಯವನ್ನು ಸಂಗ್ರಹಿಸಿದ್ದರು. ಇದರಲ್ಲಿ ನಗದು ಬದಲು ಅಕ್ಕಿಗೆ ಆದ್ಯತೆ ನೀಡಿರುವುದು ತಿಳಿದುಬಂದಿತ್ತು. ಹೆಚ್ಚುವರಿ 5 ಕೆಜಿ ಒದಗಿಸಿದರೆ ಮನೆಯ ಮಾಸಿಕ ಆಹಾರ ಅಗತ್ಯಗಳಿಗೆ ಸಾಕಾಗುತ್ತದೆ ಕಾರ್ಡ್‌ದಾರರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ, ವಿವಿಧ ಕಾರಣಗಳಿಂದ ಇಲಾಖೆ ಅಧಿಕಾರಿಗಳಿ ಸರ್ಕಾರಕ್ಕೆ ಸಮೀಕ್ಷೆ ವರದಿಯನ್ನು ಸಲ್ಲಿಸಲಿಲ್ಲ ಎನ್ನಲಾಗಿದೆ.

    ಸಜ್ಜೆಪಾಳ್ಯ ಜಮೀನು ಒತ್ತುವರಿ ಬಗ್ಗೆ ಸದನದಲ್ಲಿ ಧ್ವನಿಯೆತ್ತಿ: ಮಾಜಿ ಸಿಎಂ ಬೊಮ್ಮಾಯಿಗೆ ಮನವಿ

    ಕೇಂದ್ರದಿಂದ ಮಾತ್ರ 5 ಕೆಜಿ ವಿತರಣೆ:
    ಕಳೆದ ವರ್ಷದಿಂದ ಕೇಂದ್ರ ಸರ್ಕಾರ, ಆಹಾರ ಭದ್ರತಾ ಕಾಯ್ದೆಯಡಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ (ಪಿಎಂಜಿಕೆಎವೈ) ದೇಶಾದ್ಯಂತ ಪಡಿತರ ವಿತರಣೆಗೆ ಜವಾಬ್ದಾರಿ ತೆಗೆದುಕೊಂಡಿದೆ. ಯೋಜನೆಯಡಿ ದೇಶದ 80 ಕೋಟಿ ಲಾನುಭವಿಗಳಿಗೆ ಉಚಿತವಾಗಿ ಆಹಾರ ಪದಾರ್ಥವನ್ನು ಕೇಂದ್ರವೇ ವಿತರಿಸುತ್ತಿದೆ. ಕರ್ನಾಟಕದಲ್ಲಿ 1,16,68,282 ಬಿಪಿಎಲ್, 24,18,816 ಎಪಿಎಲ್, 10,84,765 ಅಂತ್ಯೋದಯ ಸೇರಿ ಒಟ್ಟು 1,51,71,863 ರೇಷನ್ ಕಾರ್ಡ್‌ಗಳಿವೆ. ಕೇಂದ್ರ ಸರ್ಕಾರ, ರಾಜ್ಯದ ಆಹಾರ ಇಲಾಖೆ ಮೂಲಕ ಪ್ರತಿ ತಿಂಗಳು ಬಿಪಿಎಲ್ ಕಾರ್ಡ್‌ನಲ್ಲಿರುವ ಪ್ರತಿ ಸದಸ್ಯನಿಗೆ ಉಚಿತವಾಗಿ 5 ಕೆಜಿ ಅಕ್ಕಿ ನೀಡುತ್ತಿದೆ. ಆದರೆ, ರಾಜ್ಯ ಸರ್ಕಾರವು ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಬದಲು ಹಣ ನೀಡುತ್ತಿದೆ.

    8.72 ಲಕ್ಷ ಕಾರ್ಡ್‌ಗಿಲ್ಲ ಹಣ:
    ರಾಜ್ಯದಲ್ಲಿರುವ ಒಟ್ಟು 1.28 ಕೋಟಿ ಬಿಪಿಎಲ್ ಕಾರ್ಡ್‌ಗಳ ಪೈಕಿ 1.19 ಕೋಟಿ ಕಾರ್ಡ್‌ಗಳಿಗೆ ಧನಭಾಗ್ಯ ಯೋಜನೆಯಡಿ ಬರಲಿದೆ. ಆದರೆ, ಇದುವರೆಗೆ 1.03 ಕೋಟಿ ಕಾರ್ಡ್‌ಗಳಿಗೆ ಹಣ ಹಾಕಲಾಗುತ್ತಿದೆ. ಅಲ್ಲದೆ, ಅಕ್ಕಿ ಬದಲು ನಗದು ವರ್ಗಾವಣೆ ಸೌಲಭ್ಯ ಪಡೆದುಕೊಳ್ಳುವುದಕ್ಕಾಗಿ ರಾಜ್ಯ ಸರ್ಕಾರ ಹೊರಡಿಸಿದ್ದ ಕೆಲ ನಿಬಂಧನೆಗಳಿಂದ ಒಟ್ಟು 8.72 ಲಕ್ಷ ಕಾರ್ಡ್‌ಗಳಿಗೆ ಹಣ ಸಿಗುತ್ತಿಲ್ಲ. ಮೂರು ತಿಂಗಳಿಂದ ರೇಷನ್ ತೆಗೆದುಕೊಳ್ಳದ ಕಾರ್ಡ್‌ದಾರರು ನಗದು ವರ್ಗಾವಣೆ ಸೌಲಭ್ಯದಿಂದ ಅನರ್ಹರು ಎಂದು ಈಗಾಗಲೇ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ. ಈ ಹಿನ್ನೆಲೆಯಲ್ಲಿ 5.32 ಲಕ್ಷ ಬಿಪಿಎಲ್ ಕಾರ್ಡ್‌ಗಳು ಯೋಜನೆಯಿಂದ ಹೊರಗುಳಿದಿವೆ. ಅದೇರೀತಿ, ಮೂರು ಅಥವಾ ಮೂರಕ್ಕಿಂತ ಕಡಿಮೆ ಸದಸ್ಯರು ಹೊಂದಿರುವ 3.40 ಲಕ್ಷ ಅಂತ್ಯೋದಯ ಕಾರ್ಡ್‌ಗಳಿಗೂ ಹಣ ಸೌಲಭ್ಯದಿಂದ ವಂಚಿತವಾಗಿವೆ. ಹೀಗಾಗಿ, ರಾಜ್ಯಾದ್ಯಂತ ಒಟ್ಟು 8.72 ಲಕ್ಷ ಕಾರ್ಡ್‌ಗಳಿಗೆ ಶಾಶ್ವತವಾಗಿ ಧನಭಾಗ್ಯ ಸಿಗುತ್ತಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts