More

    ಬಿಜೆಪಿಯಿಂದ ಗ್ರಾಮ ಸ್ವರಾಜ್ ಸಮಾವೇಶ

    ಹುಬ್ಬಳ್ಳಿ: ಗ್ರಾಮ ಪಂಚಾಯಿತಿ ಚುನಾವಣೆಯತ್ತ ವಿಶೇಷ ಗಮನ ಹರಿಸಿರುವ ಬಿಜೆಪಿ, ನ. 27ರಿಂದ ಡಿ. 3ರವರೆಗೆ ರಾಜ್ಯಾದ್ಯಂತ ಗ್ರಾಮಸ್ವರಾಜ್ ಸಮಾವೇಶ ಆಯೋಜಿಸಿದೆ.

    ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ರಾಜ್ಯದ 5,808 ಗ್ರಾಪಂಗಳಲ್ಲಿ ಸುಮಾರು 96 ಸಾವಿರ ಸದಸ್ಯರ ಸಂಖ್ಯೆ ಇದೆ. ಈ ಬಾರಿ ಬಿಜೆಪಿ ಬೆಂಬಲಿತ ಕಾರ್ಯಕರ್ತರು ಶೇ. 80ಕ್ಕೂ ಹೆಚ್ಚು ಸ್ಥಾನ ಗೆಲ್ಲಲು ಸಹಾಯವಾಗುವುದಕ್ಕಾಗಿ ಅಗತ್ಯ ಯೋಜನೆ ರೂಪಿಸಲಾಗಿದೆ ಎಂದರು.

    ವಿಜಯಕ್ಕಾಗಿ ಪಂಚಸೂತ್ರ ರಚಿಸಲಾಗಿದೆ. ಜಿಲ್ಲೆಯಿಂದ ಬೂತ್​ವರೆಗಿನ ಸಂಪರ್ಕಕ್ಕಾಗಿ ವಾರ್​ರೂಮ್ ರಚನೆ, ಶಕ್ತಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವುದಕ್ಕಾಗಿ ಕಾಲ್​ಸೆಂಟರ್​ಗಳ ಕಾರ್ಯಾರಂಭ, ಬೂತ್​ಗಳ ಉಸ್ತುವಾರಿ ನಿರ್ವಹಣೆಗಾಗಿ ಐವರು ಕಾರ್ಯಕರ್ತರ ಪಂಚರತ್ನ ತಂಡದ ರಚನೆ, ಪೇಜ್​ಪ್ರಮುಖರ ನಿಯುಕ್ತಿ ಹಾಗೂ ಬಿಜೆಪಿ ಪರ ವಾತಾವರಣ ನಿರ್ವಿುಸಲು ಕುಟುಂಬ ಮಿಲನ ಕಾರ್ಯಕ್ರಮಗಳನ್ನು ಇದರಲ್ಲಿ ಅಳವಡಿಸಲಾಗಿದೆ ಎಂದು ಹೇಳಿದರು.

    2 ತಿಂಗಳಿಂದ ಗ್ರಾಪಂ ಚುನಾವಣೆಯತ್ತ ಬಿಜೆಪಿ ಗಮನ ಹರಿಸಿದೆ. ಕೆಳ ಹಂತದಿಂದ ಪಕ್ಷ ಸಂಘಟಿಸಲು ಈ ಚುನಾವಣೆ ಮಹತ್ವದ್ದಾಗಿದೆ. ಗ್ರಾಪಂನಿಂದ ಲೋಕಸಭೆವರೆಗಿನ ಎಲ್ಲ ಚುನಾವಣೆಗಳನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದೆ ಎಂದರು.

    ಶಾಸಕ ಅರವಿಂದ ಬೆಲ್ಲದ, ಪ್ರಮುಖರಾದ ಲಿಂಗರಾಜ ಪಾಟೀಲ, ವೀರೇಶ ಸಂಗಳದ, ಈರಣ್ಣ ಜಡಿ, ನಾರಾಯಣ ಜರತಾರಘರ, ತಿಪ್ಪಣ್ಣ ಮಜ್ಜಗಿ, ರವಿ ನಾಯ್ಕ, ಬಸವರಾಜ ಕುಂದಗೋಳಮಠ, ದತ್ತಮೂರ್ತಿ ಕುಲಕರ್ಣಿ ಇದ್ದರು.

    6 ತಂಡ ರಚನೆ

    ಗ್ರಾಮ ಸ್ವರಾಜ್ ಸಮಾವೇಶದ ಪ್ರವಾಸಕ್ಕಾಗಿ ಬಿಜೆಪಿ 6 ತಂಡಗಳನ್ನು ರಚಿಸಿದೆ. ರಾಜ್ಯಾಧ್ಯಕ್ಷ ನಳೀನ್​ಕುಮಾರ್ ಕಟೀಲ್ ನೇತೃತ್ವದ ತಂಡ ನ. 27 ರಿಂದ ಡಿ. 7ರವರೆಗೆ ಉಡುಪಿ, ದಕ್ಷಿಣ ಕನ್ನಡ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಜಿಲ್ಲೆಗಳಲ್ಲಿ; ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ನೇತೃತ್ವದ ತಂಡ ನ. 29ರಿಂದ ಡಿ. 3ರವರೆಗೆ ಬಾಗಲಕೋಟೆ, ವಿಜಯಪುರ, ಬೀದರ, ಕಲಬುರಗಿ ಗ್ರಾಮಾಂತರ, ಯಾದಗಿರಿ ಜಿಲ್ಲೆಗಳಲ್ಲಿ; ಸಚಿವರಾದ ಕೆ.ಎಸ್. ಈಶ್ವರಪ್ಪ ನೇತೃತ್ವದ ತಂಡ ಡಿ. 1ರಿಂದ 4ರವರೆಗೆ ಚಿಕ್ಕಮಗಳೂರು, ಶಿವಮೊಗ್ಗ, ತುಮಕೂರು, ದಾವಣಗೆರೆ ಜಿಲ್ಲೆಗಳಲ್ಲಿ; ಜಗದೀಶ ಶೆಟ್ಟರ್ ನೇತೃತ್ವದ ತಂಡ ನ. 29 ರಿಂದ ಡಿ. 3ರವರೆಗೆ ಧಾರವಾಡ ಗ್ರಾಮಾಂತರ, ಹಾವೇರಿ, ಬೆಳಗಾವಿ ಗ್ರಾಮಾಂತರ, ಚಿಕ್ಕೋಡಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ, ಆರ್. ಅಶೋಕ ನೇತೃತ್ವದ ತಂಡ ನ. 28ರಿಂದ ಡಿ. 2ರವರೆಗೆ ಹಾಸನ, ಕೊಡಗು, ಮೈಸೂರು ಗ್ರಾಮಾಂತರ, ಚಾಮರಾಜನಗರ, ಮಂಡ್ಯ ಜಿಲ್ಲೆಗಳಲ್ಲಿ ಮತ್ತು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ನೇತೃತ್ವದ ತಂಡ ನ. 28ರಿಂದ ಡಿ. 1ರವರೆಗೆ ಚಿತ್ರದುರ್ಗ, ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದೆ ಎಂದು ಮಹೇಶ ಟೆಂಗಿನಕಾಯಿ ತಿಳಿಸಿದರು.

    ಡಿ. 5ರಂದು ಬೆಳಗಾವಿಯಲ್ಲಿ ಬಿಜೆಪಿ ವಿಶೇಷ ಕಾರ್ಯಕಾರಿಣಿ ಆಯೋಜಿಸಲಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್ ಸೇರಿದಂತೆ ಪ್ರಮುಖರು ಪಾಲ್ಗೊಳ್ಳಲಿದ್ದಾರೆ.
    / ಮಹೇಶ ಟೆಂಗಿನಕಾಯಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts