More

    ಕರಾವಳಿಯಲ್ಲಿ ಗ್ರಾಪಂ ಸಮರ ಶುರು

    ಮಂಗಳೂರು: ಗ್ರಾಮ ಪಂಚಾಯಿತಿ ಚುನಾವಣೆ ಘೋಷಣೆಯಾಗಿದೆ. ಮೊದಲ ಹಂತದಲ್ಲಿ ಡಿ.22ರಂದು ದ.ಕ. ಜಿಲ್ಲೆಯ 109 ಹಾಗೂ ಉಡುಪಿ ಜಿಲ್ಲೆಯ 67 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ. ಎರಡನೇ ಹಂತದಲ್ಲಿ ಡಿ.27ರಂದು ದ.ಕ. ಜಿಲ್ಲೆಯ 114 ಹಾಗೂ ಉಡುಪಿಯ 87 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಿಗದಿಯಾಗಿದೆ.

    ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಚಿಹ್ನೆ ಇಲ್ಲದಿದ್ದರೂ, ರಾಜಕೀಯ ಪಕ್ಷಗಳಿಗೆ ಇದು ಜಿದ್ದಾಜಿದ್ದಿನ ಕಣ. ಕರೊನಾ ಹಾವಳಿಯಿಂದ ಕಳೆದ 8 ತಿಂಗಳಿಂದ ಕರಾವಳಿಯಲ್ಲಿ ರಾಜಕೀಯ ಚಟುವಟಿಕೆ ಸ್ಥಗಿತವಾಗಿತ್ತು. ಈಗ ಕರೊನಾ ಭೀತಿ ಕಡಿಮೆಯಾಗಿದ್ದು, ಪಂಚಾಯಿತಿ ಸಮರಕ್ಕೆ ರಾಜಕೀಯ ಪಕ್ಷಗಳು ಸಜ್ಜಾಗಬೇಕಾಗಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವ ಕಾರಣ ಆಳುವ ಪಕ್ಷಕ್ಕೆ ಗ್ರಾಮ ಪಂಚಾಯಿತಿ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಲಿದೆ. ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಭಾರಿ ಸೋಲು ಅನುಭವಿಸಿದ ಕಾಂಗ್ರೆಸ್‌ಗೆ ಗ್ರಾಪಂ ಚುನಾವಣೆ ಸವಾಲಾಗಿ ಪರಿಣಮಿಸಲಿದೆ.

    2015ರ ಚುನಾವಣೆ: 2013ರ ವಿಧಾನಸಭೆ ಚುನಾವಣೆಯಲ್ಲಿ ಭಾರಿ ಸೋಲು ಕಂಡಿದ್ದ ಬಿಜೆಪಿ 2015ರ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಚೇತರಿಸಿಕೊಂಡಿತ್ತು. ದ.ಕ ಜಿಲ್ಲೆಯ 227 ಪಂಚಾಯಿತಿಗಳ ಪೈಕಿ 129 ಪಂಚಾಯಿತಿಗಳಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿತ್ತು. ಕಾಂಗ್ರೆಸ್ 80 ಪಂಚಾಯಿತಿಯಲ್ಲಿ ಅಧಿಕಾರ ಪಡೆದಿತ್ತು. ಉಡುಪಿ ಜಿಲ್ಲೆಯಲ್ಲಿ ಬಿಜೆಪಿ 89 ಪಂಚಾಯಿತಿಯಲ್ಲಿ ಬಹುಮತ ಪಡೆದಿದ್ದರೆ, ಕಾಂಗ್ರೆಸ್ 54ರಲ್ಲಿ ಗದ್ದುಗೆ ಏರಿತ್ತು.
    ಅಧಿಕಾರದ ಬಲ: ಬಿಜೆಪಿ ಪಾಳಯಕ್ಕೆ ಸಂಸದರ ಹಾಗೂ ಶಾಸಕರ ಬಲವಿದೆ. ಜತೆಗೆ ಪಕ್ಷ ಸಂಘಟನೆಗೆ ಬಿಜೆಪಿ ಹೆಚ್ಚಿನ ಮುತುವರ್ಜಿ ವಹಿಸಿದೆ. ಮಂಗಳೂರಿನಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ, ಪುತ್ತೂರು ಮತ್ತು ಬಂಟ್ವಾಳದಲ್ಲಿ ಗ್ರಾಮ ಸ್ವರಾಜ್ಯ ಯಾತ್ರೆ, ಎಲ್ಲ ಪಂಚಾಯಿತಿಗಳಲ್ಲಿ ಕುಟುಂಬ ಮಿಲನ ಕಾರ್ಯಕ್ರಮ ನಡೆಸುವ ಮೂಲಕ ಬಿಜೆಪಿ ಗ್ರಾಪಂ ಚುನಾವಣೆಗೆ ಭರ್ಜರಿ ತಯಾರಿ ನಡೆಸಿದೆ. ವಿಧಾನಸಭೆ ಚುನಾವಣೆ ಸೋಲಿನಿಂದ ಕಂಗೆಟ್ಟಿದ್ದ ಕಾಂಗ್ರೆಸ್‌ಗೆ ಈಗ ಡಿ.ಕೆ.ಶಿವಕುಮಾರ್ ಸಾರಥ್ಯ ಚೇತರಿಕೆ ನೀಡಿದೆ. ಉಡುಪಿಯಲ್ಲಿ ಕಾರ್ಯಕರ್ತರ ಸಮಾವೇಶ ಆಯೋಜಿಸುವ ಮೂಲಕ ಕಾಂಗ್ರೆಸ್ ಕೂಡ ಚುನಾವಣೆಗೆ ಸಜ್ಜಾಗುತ್ತಿದೆ.
    ಅವಧಿ ಪೂರ್ಣವಾಗದ 3 ಗ್ರಾಪಂ: ದ.ಕ. ಜಿಲ್ಲೆಯ 228 ಗ್ರಾಪಂಗಳ ಪೈಕಿ ವೇಣೂರು, ಪುದು ಮತ್ತು ಅರಂಬೋಡಿ ಪಂಚಾಯಿತಿಗಳ ಅವಧಿ ಇನ್ನೂ ಪೂರ್ಣಗೊಂಡಿಲ್ಲ. ಬಜ್ಪೆ ಮತ್ತು ಮರವೂರು ಗ್ರಾಪಂಗಳು ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೇರಿವೆ. ಹಾಗಾಗಿ 223 ಗ್ರಾಪಂಗಳಿಗೆ ಚುನಾವಣೆ ನಿಗದಿಯಾಗಿದೆ.

    ಚುನಾವಣೆ ದಿನಾಂಕ ಹಾಗೂ ತಾಲೂಕುವಾರು ಗ್ರಾಪಂ ಸಂಖ್ಯೆ:
    ದ.ಕ. ಜಿಲ್ಲೆ: ಒಟ್ಟು ಗ್ರಾಪಂ 223
    ಡಿ.22: ಮಂಗಳೂರು-40, ಮೂಡುಬಿದಿರೆ-12, ಬಂಟ್ವಾಳ-57
    ಡಿ.27: ಬೆಳ್ತಂಗಡಿ-42, ಪುತ್ತೂರು-22, ಸುಳ್ಯ-25, ಕಡಬ-21.
    ಉಡುಪಿ ಜಿಲ್ಲೆ: ಒಟ್ಟು ಗ್ರಾಪಂ 154
    ಡಿ.22: ಉಡುಪಿ-16, ಹೆಬ್ರಿ-9, ಬ್ರಹ್ಮಾವರ-27, ಬೈಂದೂರು-15
    ಡಿ.27: ಕುಂದಾಪುರ-44, ಕಾರ್ಕಳ-27, ಕಾಪು-16

    ಡಿ.31ರವರೆಗೆ ನೀತಿ ಸಂಹಿತೆ
    ಉಡುಪಿ: ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಡಿಸೆಂಬರ್ 31ರವರೆಗೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರಲಿದ್ದು, ಅಧಿಕಾರಿಗಳು ಇಂದಿನಿಂದಲೇ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಅನುಷ್ಠಾನ ಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಜಿಲ್ಲೆಯಲ್ಲಿ 3,82,785 ಪುರುಷ, 4,12,887 ಮಹಿಳಾ ಹಾಗೂ 9 ಮಂದಿ ಇತರ ಮತದಾರರು ಸೇರಿದಂತೆ ಒಟ್ಟು 7,95,681 ಮತದಾರರಿದ್ದಾರೆ. 890 ಮತಗಟ್ಟೆ ಮತ್ತು 282 ಆಕ್ಸಿಲರಿ ಮತಗಟ್ಟೆ ಸಹಿತ ಒಟ್ಟು 1172 ಮತಗಟ್ಟೆಗಳಿವೆ. ಚುನಾವಣೆಗೆ ಬೇಕಾದ ಎಲ್ಲ ರೀತಿಯ ತಯಾರಿಯನ್ನು ಜಿಲ್ಲಾಡಳಿತ ಮಾಡಿಕೊಂಡಿದೆ. ಎಂದು ಮೊದಲ ಹಂತದ ಚುನಾವಣೆಗೆ ಡಿ.7, ಎರಡನೇ ಹಂತಕ್ಕೆ ಡಿ.11ರಂದು ಅಧಿಸೂಚನೆ ಹೊರಡಿಸಲಾಗುವುದು. ನಾಮಪತ್ರ ಸಲ್ಲಿಕೆಗೆ ಮೊದಲ ಹಂತಕ್ಕೆ ಡಿ.11 ಹಾಗೂ ಎರಡನೇ ಹಂತಕ್ಕೆ ಡಿ.16 ಕೊನೆಯ ದಿನವಾಗಿರುತ್ತದೆ. ಕ್ರಮವಾಗಿ ಡಿ.12 ಹಾಗೂ 17ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಡಿ.14 ಮತ್ತು 19 ನಾಮಪತ್ರ ಹಿಂಪಡೆಯಲು ಕೊನೆಯ ದಿನ ಎಂದು ತಿಳಿಸಿದರು.

    ಕೋವಿಡ್ ತಡೆ ನಿಯಮ ಕಡ್ಡಾಯ: ಮತದಾರರರು ಕಡ್ಡಾಯ ಮಾಸ್ಕ್ ಧರಿಸಿ, ಅಂತರ ಪಾಲಿಸಬೇಕು. ಮತಗಟ್ಟೆ ಪ್ರವೇಶಿಸುವ ಮೊದಲು ಕೈಗಳನ್ನು ಸ್ಯಾನಿಟೈಸ್‌ಗೊಳಿಸಬೇಕು. ಕೋವಿಡ್ ಸೋಂಕಿತರು ಹಾಗೂ ಕೋವಿಡ್ ಶಂಕಿತರನ್ನು ಮುನ್ನಚ್ಚರಿಕೆ ಕ್ರಮ ಅನುಸರಿಸಿ ಸಂಬಂಧಪಟ್ಟ ಮತಗಟ್ಟೆಗಳಲ್ಲಿ ಮತದಾನದ ಕೊನೆಯ ಒಂದು ಗಂಟೆಯ ಅವಧಿಯಲ್ಲಿ ಮತದಾನ ಮಾಡಲು ಅವಕಾಶ ಕಲ್ಪಿಸಲಾಗುವುದು. ಪ್ರತಿ ಮತಗಟ್ಟೆಯಲ್ಲಿ ಮತದಾರರ ಸಂಖ್ಯೆಯನ್ನು ಗರಿಷ್ಠ ಒಂದು ಸಾವಿರಕ್ಕೆ ಮಿತಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts