More

    ಡಿಜಿಟಲೀಕರಣದತ್ತ ಗ್ರಾಪಂ ಗ್ರಂಥಾಲಯಗಳು: ಕೋಟಿ ದಾಟಿದ ಓದುಗರು

    | ವಿಲಾಸ ಮೇಲಗಿರಿ ಬೆಂಗಳೂರು

    ಗ್ರಾಮ ಪಂಚಾಯಿತಿ ಗ್ರಂಥಾಲಯಗಳು ಇನ್ನು ಅಂಗವಿಕಲ ಹಾಗೂ ಮಕ್ಕಳಸ್ನೇಹಿಯಾಗಿ ಮಾರ್ಪಡಲಿವೆ. ಸಾಮಾನ್ಯ ಮಕ್ಕಳು ಹಾಗೂ ವಿಶೇಷವಾಗಿ ಅಂಧ ಮಕ್ಕಳಿಗಾಗಿ ಬೀಕನ್ ಲೈಬ್ರರಿ ಅಭಿವೃದ್ಧಿಪಡಿಸಲಾಗುತ್ತಿದೆ. ಗ್ರಾಮೀಣಾಭಿವೃದ್ಧಿ ಇಲಾಖೆ 2017ರ ರಾಷ್ಟ್ರೀಯ ಸಾಧನಾ ಸಮೀಕ್ಷೆ ಅನ್ವಯ ಮಕ್ಕಳ ಸರ್ವಾಂಗೀಣ ಅಭಿವೃದ್ಧಿ, ಗುಣ ಮಟ್ಟದ ಕಲಿಕೆ, ಮಕ್ಕಳ ರಕ್ಷಣೆ, ಮಕ್ಕಳ ಶಿಕ್ಷಣ ಕಾರ್ಯಪಡೆ, ಮಕ್ಕಳ ಆಯವ್ಯಯ, ವಿಜ್ಞಾನ ಪ್ರಯೋಗಾಲಯ ಸೇರಿ ದಂತೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹತ್ತು ಹಲವು ಕಾರ್ಯ ಕ್ರಮಗಳನ್ನು ಕೈಗೆತ್ತಿಕೊಂಡಿದೆ.

    ಈಗ ಇನ್ನೂ ಒಂದು ಹೆಜ್ಜೆ

    ಮುಂದೆ ಹೋಗಿ ಗ್ರಾಮ ಪಂಚಾಯಿತಿ ಗ್ರಂಥಾಲಯ ಗಳನ್ನು ಮಕ್ಕಳು ಮತ್ತು ಅಂಗವಿಕಲಸ್ನೇಹಿ ಆಗಿಸುವತ್ತ ಹೆಜ್ಜೆ ಇಟ್ಟಿದೆ. ಅಂಗವಿಕಲ ಮಕ್ಕಳು ಶಿಕ್ಷಣದ ಮುಖ್ಯವಾಹಿನಿಗೆ ಬರಬೇಕು. ಕೀಳರಿಮೆ ಕಳೆದು ಬದುಕನ್ನು ಕಟ್ಟಿಕೊಳ್ಳಬೇಕು ಎಂಬ ಹಿನ್ನೆಲೆಯಲ್ಲಿ ಹೊಸ ಹೊಸ ಉಪಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ. ಗ್ರಾಮ ಪಂಚಾಯಿತಿ ಗ್ರಂಥಾಲಯಗಳು ಈಗಾಗಲೇ ಹಂತಹಂತವಾಗಿ ಡಿಜಿಟಲೀ ಕರಣಗೊಳ್ಳುತ್ತಿವೆ. ಪುಸ್ತಕ ಓದುವವರಿಲ್ಲ, ಕೊಳ್ಳುವವರಿಲ್ಲ ಎಂಬ ಚರ್ಚೆಗಳ ನಡುವೆಯೇ ರಾಜ್ಯದ ನೂರಾರು ಗ್ರಂಥಾಲಯಗಳು ಡಿಜಿಟಲ್ ಆಯಾಮ ಪಡೆದುಕೊಳ್ಳುತ್ತಿವೆ.

    ಡಿಜಿಟಿಲ್ ಲೈಬ್ರರಿಗಳು: ಗ್ರಾಮೀಣ ಪ್ರದೇಶದಲ್ಲೂ ಪುಸ್ತಕಗಳು ಡಿಜಿಟಲೀಕರಣಗೊಂಡು ಮಕ್ಕಳನ್ನು ಆಕರ್ಷಿಸುತ್ತಿವೆ. ಡಿಜಿಟಲ್ ಗ್ರಂಥಾಲಯದಲ್ಲಿ ಅಂತರ್ಜಾಲ ಪ್ರಿಂಟರ್ ಸೌಲಭ್ಯ, ಇ-ಪುಸ್ತಕಗಳು, ಅಂಡ್ರಾಯ್್ಡ ಟೆಲಿವಿಷನ್​ಗಳ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆ, ಕನ್ನಡ ಕಾದಂಬರಿ, ಕನ್ನಡ ಸಾಹಿತ್ಯ, ಮಕ್ಕಳ ಸಾಹಿತ್ಯ, ವ್ಯಕ್ತಿ ಜೀವನಾಧಾರಿತ ಪುಸ್ತಕಗಳು, ಅಧ್ಯಾತ್ಮಿಕ ಧಾರ್ವಿುಕ ಗ್ರಂಥಗಳು, ದಿನ ಪತ್ರಿಕೆಗಳು , ಸ್ಮಾರ್ಟ್ ಪುಸ್ತಕಗಳು ದೊರೆಯುತ್ತವೆ.

    ಬ್ರೖೆಲ್ ಲಿಪಿ ಪುಸ್ತಕಗಳೂ ಲಭ್ಯ: ಕೆಲವು ಗ್ರಂಥಾಲಯದಲ್ಲಿ ಬ್ರೖೆಲ್ ಲಿಪಿಯ ಪುಸ್ತಕಗಳ ಲಭ್ಯತೆಯೂ ಇದೆ. ದೃಷ್ಟಿ ದೋಷವುಳ್ಳ ಅನೇಕರು ಈಗಾಗಲೇ ಈ ಪುಸ್ತಕಗಳ ಪ್ರಯೋಜನ ಪಡೆಯುತ್ತಿದ್ದಾರೆ. ಇವುಗಳ ಜತೆಗೆ ಈಗ ಶ್ರವ್ಯ ಪುಸ್ತಕಗಳನ್ನು ಕೂಡ ಗ್ರಾಮ ಪಂಚಾಯಿತಿ ಗ್ರಂಥಾಲಯಗಳಿಗೆ ಒದಗಿಸಲು ಸರ್ಕಾರ ಮುಂದಾಗಿದೆ.

    ಪ್ರತಿ ತಾಲೂಕಿನಲ್ಲಿ ಒಂದು ಗ್ರಾಮ ಪಂಚಾಯಿತಿ ಗ್ರಂಥಾಲಯವನ್ನು ಬೀಕನ್ ಗ್ರಂಥಾಲಯ ಒಳಗೊಂಡಂತೆ ಕನಿಷ್ಟ 25 ಗ್ರಾಮ ಪಂಚಾಯಿತಿ ಗ್ರಂಥಾಲಯಗಳನ್ನು ಡಿಜಿಟಲೀಕರಣಗೊಳಿಸಲು ಸೂಕ್ತ ಮಾಹಿತಿಯನ್ನು ಒದಗಿಸುವಂತೆ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗೆ ಪಂಚಾಯತ್ ರಾಜ್ ಆಯುಕ್ತಾಲಯ ಸೂಚಿಸಿದೆ.

    1 ಬೀಕನ್, 24 ಡಿಜಿಟಲೈಸ್: ಈ ವರ್ಷ ಪ್ರತಿ ತಾಲೂಕಿನಲ್ಲಿ ಒಂದು ಬೀಕನ್ ಲೈಬ್ರರಿ ಹಾಗೂ 24 ಡಿಜಿಟಲ್ ಲೈಬ್ರರಿಗಳು ಅಭಿವೃದ್ಧಿ ಹೊಂದಲಿವೆ. ಒಟ್ಟು 226 ತಾಲೂಕುಗಳಲ್ಲಿ ಬೀಕನ್ ಲೈಬ್ರರಿ ಅಭಿವೃದ್ಧಿಗೊಳಿಸಲು ಸರ್ಕಾರ ಉದ್ದೇಶಿಸಿದೆ.

    ಶ್ರವ್ಯ ಪುಸ್ತಕಗಳ ಕಡೆಗೆ ಮಕ್ಕಳ ಚಿತ್ತ

    ಬ್ರೖೆಲ್ ಲಿಪಿಯ ಪುಸ್ತಕಗಳ ಪರಿಚಯ ಈಗಾಗಲೇ ಅನೇಕರಿಗಿದೆ. ಅದರ ಜತೆಗೆ ಈಗ ಶ್ರವ್ಯ ಪುಸ್ತಕಗಳು ಹೆಚ್ಚು ಜನಪ್ರಿಯವಾಗುತ್ತಿವೆ. ಇಂಗ್ಲಿಷ್, ಹಿಂದಿ, ಕನ್ನಡ ಸೇರಿ ಅನೇಕ ಭಾಷೆಗಳಲ್ಲಿ ಈ ಪುಸ್ತಕಗಳಿವೆ. ಕನ್ನಡ, ಇಂಗ್ಲಿಷ್, ಹಿಂದಿ, ಗಣಿತ, ಸ್ಟೋರಿ ಆಲ್ಬಂ, ರೈಮ್್ಸ ಸೇರಿ ಅನೇಕ ಭಾಷೆ/ವಿಷಯಗಳನ್ನು ಈ ಪುಸ್ತಕಗಳಿಂದ ಕಲಿಯಬಹುದು. ರೆಕಾರ್ಡಿಂಗ್ ಸೌಕರ್ಯವೂ ಇಲ್ಲುಂಟು. ಪೆನ್ ಮಾದರಿಯ ಉಪಕರಣವೊಂದನ್ನು ಚಿತ್ರ ಅಥವಾ ಪದದ ಮೇಲೆ ಇರಿಸಿದಾಗ ಅದನ್ನು ಓದುತ್ತದೆ. ನೀವು ಆಯ್ಕೆ ಮಾಡಿದ ಭಾಷೆಯನ್ನು ನುಡಿಸುತ್ತದೆ. ಆಟದ ಕಲಿಕೆ ಆಧಾರದಲ್ಲಿ ಇವು ರೂಪುಗೊಂಡಿವೆ. ಸಂಗೀತದ ಆಲ್ಬಂನ್ನೂ ಇವು ಒಳಗೊಂಡಿವೆ. ರೈಮ್ಳನ್ನು ಮಕ್ಕಳು ಕೇಳಿ ಆನಂದಿಸುತ್ತಾರೆ. ಶ್ರವ್ಯದಲ್ಲಿ ಕನ್ನಡದ ಬಗ್ಗೆ ವಿಶೇಷ ಪುಸ್ತಕಗಳು ಕೂಡ ಬಂದಿವೆ.

    ಸ್ವಯಂ ಕಲಿಕೆಗೆ ಉತ್ತೇಜನ

    ಶ್ರವ್ಯ ಪುಸ್ತಕಗಳಿಂದ ಮಕ್ಕಳ ಆರಂಭಿಕ ಕಲಿಕೆ ಅಭ್ಯಾಸ ವೃದ್ಧಿಯಾಗುತ್ತದೆ. ಏಕಾಗ್ರತೆ ಸುಧಾರಣೆಯಾಗುತ್ತದೆ. ಸ್ಪಷ್ಟ ಉಚ್ಛಾರಣೆ ಕಲಿಯಬಹುದು. ಸ್ವಯಂಗತಿಯ ಕಲಿಕೆಯ ಬೆಳವಣಿಗೆಯನ್ನೂ ಶ್ರವ್ಯ ಪುಸ್ತಕಗಳು ಉತ್ತೇಜಿಸುತ್ತವೆ! ದೃಷ್ಟಿ ವಿಕಲಚೇತನರಿಗಷ್ಟೇ ಅಲ್ಲ, ಓದಲು ಬಾರದವರು ಈ ಪುಸ್ತಕಗಳ ಮೂಲಕ ತಮಗೆ ಬೇಕಾದ ಭಾಷೆಯನ್ನು ಕಲಿಯಬಹುದು! ಈ ಕಾರಣಕ್ಕೆ ಈಗ ಈ ಪುಸ್ತಕಗಳು ಸಾಮಾನ್ಯ ಮಕ್ಕಳನ್ನೂ ಆಕರ್ಷಿಸುತ್ತಿವೆ. ಮಕ್ಕಳ ಆಟದ ಮೂಲಕ ಕಲಿಕೆಯಲ್ಲಿ ಪ್ರಗತಿ ಕಾಣುತ್ತಿದ್ದಾರೆ. ಇಂತಹ ಪುಸ್ತಕಗಳನ್ನು ಬೀಕನ್ ಲೈಬ್ರರಿಗೆ ಒದಗಿಸುವ ಮೂಲಕ ಮಕ್ಕಳ ಕಲಿಕೆಯಲ್ಲಿ ಗಮನಾರ್ಹ ಸುಧಾರಣೆ ತರಲು ಸರ್ಕಾರ ಕೈ ಹಾಕಿದೆ.

    ಇಂದು ಪ್ರಗತಿ ಪರಿಶೀಲನೆ

    ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತೀಕ್ ಬುಧವಾರ ಇಲಾಖೆ ಪ್ರಗತಿ ಪರಿಶೀಲನೆ ನಡೆಸಲಿದ್ದು, ಬೀಕನ್ ಹಾಗೂ ಗ್ರಂಥಾಲಯಗಳ ಡಿಜಿಟಲೀಕರಣ ಚರ್ಚೆಗೆ ಬರಲಿವೆ.

    ಶ್ರವ್ಯ ಪುಸ್ತಕಗಳ ಮೂಲಕ ಮಕ್ಕಳನ್ನು ಡಿಜಿಟಲ್ ಲರ್ನಿಂಗ್ ಕಡೆಗೆ ಆಕರ್ಷಿ ಸಲು ಸಾಧ್ಯವಾಗುತ್ತದೆ. ಮಕ್ಕಳಿಗೆ ಲೈಬ್ರರಿ ಜತೆಗೆ ಒಡನಾಟ ಬೆಳೆಯುತ್ತದೆ. ಸರ್ಕಾರ ಬೀಕನ್ ಲೈಬ್ರರಿ ಅಭಿವೃದ್ಧಿಪಡಿಸಲು ಮುಂದಾಗಿರುವುದು ಗ್ರಾಮೀಣ ಮಟ್ಟದಲ್ಲಿ ಮಹತ್ವದ ಮೈಲಿಗಲ್ಲಾಗಲಿದೆ. ದೃಷ್ಟಿ ದೋಷವುಳ್ಳ ಮಕ್ಕಳಿಗೂ ಹೆಚ್ಚು ಪ್ರಯೋಜನ ವಾಗಲಿದೆ. ಓದುವ ಹವ್ಯಾಸ ಕ್ಷೀಣಿಸುತ್ತಿರುವ ಕಾಲಘಟ್ಟದಲ್ಲಿ ಮಕ್ಕಳನ್ನು ಪುಸ್ತಕಗಳತ್ತ ಸೆಳೆಯಲು ಇಂತಹ ಉಪಕ್ರಮಗಳು ಪೂರಕವಾಗಲಿವೆ.
    | ಎ.ಎ.ಅಬ್ದುಲ್ಲಾ ಪಿಡಿಒ, ಹೊದ್ದೂರು

    ಕೋಟಿ ದಾಟಿದ ಡಿಜಿಟಲ್ ಓದುಗರು

    ಭರತ್ ಶೆಟ್ಟಿಗಾರ್

    ಮಂಗಳೂರು: ಕರೊನಾ ಲಾಕ್​ಡೌನ್ ಬಳಿಕ ದೇಶದಲ್ಲಿ ಡಿಜಿಟಲ್ ವ್ಯವಸ್ಥೆಗೆ ಹೊಂದಿಕೊಂಡವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದಕ್ಕೆ ಪುಸ್ತಕ ಓದುಗರೂ ಹೊರತಾಗಿಲ್ಲ. ವರ್ಷದ ಹಿಂದೆ ಆರಂಭವಾದ ಇ-ಸಾರ್ವಜನಿಕರ ಗ್ರಂಥಾಲಯದ ಓದುಗರ ಸಂಖ್ಯೆ 1 ಕೋಟಿ ಮೀರಿರುವುದು ಇದಕ್ಕೆ ನಿದರ್ಶನ. 2020ರ ಫೆ.26ರಂದು ದೇಶದಲ್ಲೇ ಪ್ರಥಮವಾಗಿ ಡಿಜಿಟಲ್ ಗ್ರಂಥಾಲಯ ಯೋಜನೆಗೆ ರಾಜ್ಯ ಸರ್ಕಾರ ಚಾಲನೆ ನೀಡಿತ್ತು. ನಂತರ ಲಾಕ್ಡೌನ್​ನಿಂದಾಗಿ ಗ್ರಂಥಾಲಯ ಗಳಿಗೆ ಬೀಗ ಬಿದ್ದಾಗ ‘ಇ-ಸಾರ್ವಜನಿಕ ಗ್ರಂಥಾಲಯ’ ಪುಸ್ತಕ ಪ್ರಿಯರಿಗೆ ನೆರವಾಗಲು ಪ್ರಮುಖ ಪಾತ್ರ ವಹಿಸಿತು. ಸ್ಮಾರ್ಟ್ ಫೋನ್​ಗಳ ಮೂಲಕ ಪುಸ್ತಕಗಳನ್ನು ಆಯ್ಕೆ ಮಾಡಿ ಓದುವ ಅವಕಾಶವನ್ನು ಇಲಾಖೆ ಕಲ್ಪಿಸಿಕೊಟ್ಟಿದ್ದು, ಇ-ಸಾರ್ವಜನಿಕ ಗ್ರಂಥಾಲಯ ವೆಬ್​ಸೈಟ್ ಅಥವಾ ಮೊಬೈಲ್ ಆಪ್ ಡೌನ್​ಲೋಡ್ ಮಾಡಿ ಲಾಗಿನ್ ಆಗಿ ಪುಸ್ತಕ ಓದಬಹುದಾಗಿದೆ.

    ಈಗಾಗಲೇ ಒಂದು ಕೋಟಿಗೂ ಅಧಿಕ ಮಂದಿ ನೋಂದಣಿ ಮಾಡಿಸಿಕೊಂಡಿದ್ದು, ಲಕ್ಷಕ್ಕೂ ಅಧಿಕ ಮಂದಿ ಆಪ್ ಡೌನ್​ಲೋಡ್ ಮಾಡಿಕೊಂಡಿದ್ದಾರೆ. ಆಪ್ ಅಥವಾ ವೆಬ್​ಸೈಟ್​ಗೆ ಹೋಗಿ ತಮ್ಮ ಮೊಬೈಲ್ ಸಂಖ್ಯೆ, ಹೆಸರು, ಜಿಲ್ಲೆ ಇತ್ಯಾದಿಗಳನ್ನು ನೀಡಿ, ಪಾಸ್​ವರ್ಡ್ ಸೃಷ್ಟಿಸಿದರೆ ಸಾಕು. ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿ ಲಭ್ಯವಿರುವ ಪುಸ್ತಕಗಳ ಭಂಡಾರದಲ್ಲಿ ತಮಗೆ ಬೇಕಾದ ಪುಸ್ತಕವನ್ನು ಮೊಬೈಲ್ ಮೂಲವೇ ಓದಬಹುದಾಗಿದೆ.

    ಕಥೆ, ಕಾದಂಬರಿ ಮಾತ್ರವಲ್ಲದೆ, ಪ್ರಾಥಮಿಕ ಹಾಗೂ ಪ್ರೌಢ ತರಗತಿಗಳ ಪಠ್ಯ ಪುಸ್ತಕಗಳು, ದ್ವಿತೀಯ ಪಿಯುಸಿ ವಾಣಿಜ್ಯ, ವಿಜ್ಞಾನ, ಕಲೆ ಹಾಗೂ ಕೆಎಎಸ್, ಐಪಿಎಸ್, ಎಫ್​ಡಿಎ, ಎಸ್​ಡಿಎ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ ಪುಸ್ತಕಗಳನ್ನೂ ಇ-ಗ್ರಂಥಾಲಯಕ್ಕೆ ಅಪ್​ಲೋಡ್ ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts