More

    ಮೋಡದ ಮರೆಯಲ್ಲಿ ಖಗೋಳ ಕೌತುಕ

    ಮಂಗಳೂರು: ಮಳೆ, ಮೋಡದ ಆತಂಕದ ನಡುವೆಯೂ ಮಂಗಳೂರು ನಗರ ಸೇರಿದಂತೆ ದ.ಕ.ಜಿಲ್ಲೆಯಲ್ಲಿ ಭಾನುವಾರ ಪಾರ್ಶ್ವ ಸೂರ್ಯ ಗ್ರಹಣ ಗೋಚರಿಸಿದೆ.
    10.04ಕ್ಕೆ ಗ್ರಹಣ ಸ್ಪರ್ಶವಾಗಿದ್ದು, ಮಂಗಳೂರು ನಗರದಲ್ಲಿ 10.22ರ ವೇಳೆಗೆ ಶೇ.25ರಷ್ಟು ಆವರಿಸಿದ್ದ ಗ್ರಹಣ ಸ್ಪಷ್ಟವಾಗಿ ಗೋಚರಿಸಿತಾದರೂ, ಬಳಿಕ ಮಳೆ ಆರಂಭವಾಗಿ ವೀಕ್ಷಕರು ಸ್ವಲ್ಪ ನಿರಾಸೆ ಅನುಭವಿಸಿದರು. ಮಧ್ಯಾಹ್ನ 12.45ರಿಂದ 1.20ರ ವರೆಗೆ ಶೇ.40ರಷ್ಟು ಆವರಿಸಿದ್ದ ಸೂರ್ಯಗ್ರಹಣ ಕಾಣಿಸಿದೆ ಎಂದು ಖಗೋಳ ವೀಕ್ಷಕರು ತಿಳಿಸಿದ್ದಾರೆ.

    ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ, ಕುಲಶೇಖರದಲ್ಲಿ ಹವ್ಯಾಸಿ ಖಗೋಳ ವೀಕ್ಷಕರ ಸಂಘದವರು ಸೂರ್ಯಗ್ರಹಣ ವೀಕ್ಷಿಸಿದರು. ಆಕಾಶಭವನದಲ್ಲಿ ಚಿಂತನ ಸಾಂಸ್ಕೃತಿಕ ಬಳಗದಿಂದ ವಿಜ್ಞಾನ ಶಿಕ್ಷಕ ಅರವಿಂದ ಕುಡ್ಲ ಅವರ ನೇತೃತ್ವದಲ್ಲಿ ಗ್ರಹಣ ವೀಕ್ಷಣೆಗೆ ಅವಕಾಶ ಮಾಡಲಾಗಿತ್ತು. ವಿದ್ಯಾರ್ಥಿಗಳು ಹಾಗೂ ಆಸಕ್ತರು ಭಾಗವಹಿಸಿ ನಭದ ಕೌತುಕವನ್ನು ಕಣ್ತುಂಬಿಕೊಂಡರು.
    ದೂರದರ್ಶಕದ ಮೂಲಕ ಮಾತ್ರವಲ್ಲದೆ, ಸೌರಕನ್ನಡಕಗಳ ಮೂಲಕ ಕೆಲವರು ಮನೆಯಿಂದಲೇ ಗ್ರಹಣ ವೀಕ್ಷಿಸಿದರು. ಕರೊನಾ ಹಿನ್ನೆಲೆಯಲ್ಲಿ ಕೆಲವೆಡೆ ಯೂಟ್ಯೂಬ್ ಮತ್ತು ಫೇಸ್‌ಬುಕ್ ಮೂಲಕ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು.

    ದೇವಳಗಳಲ್ಲಿ ಸ್ವಚ್ಛತಾ ಕಾರ್ಯ
    ಗ್ರಹಣ ಮೋಕ್ಷದ ಬಳಿಕ ಕರಾವಳಿಯ ಹೆಚ್ಚಿನ ದೇವಳಗಳಲ್ಲಿ ಸ್ವಚ್ಛತಾ ಕಾರ್ಯ ನೆರವೇರಿಸಿ, ಗ್ರಹಣ ಶಾಂತಿ ಹೋಮಾದಿಗಳು ನೆರವೇರಿದವು. ಗ್ರಹಣ ಅವಧಿಯಲ್ಲಿ ಕೆಲ ದೇವಳಗಳಿಗೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿತ್ತು. ಗ್ರಹಣ ಸ್ಪರ್ಶದಿಂದ ಮೋಕ್ಷದವರೆಗೆ ಕುದ್ರೋಳಿ ದೇವಳದಲ್ಲಿ ಲೋಕ ಕಲ್ಯಾಣಾರ್ಥವಾಗಿ ಅಭಿಷೇಕ ನೆರವೇರಿತು. ಸಾಯಂಕಾಲ 4.30ಕ್ಕೆ ಗ್ರಹಣ ಶಾಂತಿ ಹೋಮ ನಂತರ ಮಹಾಪೂಜೆ ನೆರವೇರಿತು. ಗ್ರಹಣ ಸ್ಪರ್ಶದ ಬಳಿಕ ಹೆಚ್ಚಿನವರು ಮನೆಯಲ್ಲೇ ಇದ್ದ ಪರಿಣಾಮ, ರಸ್ತೆಗಳಲ್ಲಿ ವಾಹನ ಸಂಚಾರ, ಅಂಗಡಿ-ಮಳಿಗೆಗಳಲ್ಲಿ ವಹಿವಾಟು ಕಡಿಮೆಯಿತ್ತು.

    ಮೋಡದ ನಡುವೆ ಸೂರ್ಯಗ್ರಹಣ ನೋಡಲು ಸಾಧ್ಯವೋ ಎಂಬ ಅನುಮಾನವಿತ್ತು. ಆದರೆ ಮಳೆ ಬಿಡುವು ನೀಡಿದ್ದರಿಂದ ಮೋಡದ ಮರೆಯಲ್ಲಿ ಸೂರ್ಯಗ್ರಹಣ ಕಾಣಿಸಿದೆ. ಗ್ರಹಣ ವೀಕ್ಷಣೆ ಒಂದು ಅದ್ಭುತ ಅನುಭವ.
    ಜಯಂತ್ ಎಚ್, ಹವ್ಯಾಸಿ ಖಗೋಳ ವೀಕ್ಷಕ, ಪ್ರಾಧ್ಯಾಪಕ

    ಉಡುಪಿಯಲ್ಲಿ ಶೇ.40 ಗೋಚರ
    ಉಡುಪಿ: ಜಿಲ್ಲೆಯಲ್ಲಿ ಭಾನುವಾರ ಸಂಭವಿಸಿದ ಸೂರ್ಯಗ್ರಹಣ ಧಾರ್ಮಿಕ ನಂಬಿಕೆ ಹಾಗೂ ವೈಜ್ಞಾನಿಕವಾಗಿ ಹಲವು ವಿಶೇಷತೆಗಳಿಗೆ ಕಾರಣವಾಯಿತು. ಉಡುಪಿಯಲ್ಲಿ ಸೂರ್ಯನ ಶೇ.40ರಷ್ಟು ಭಾಗವನ್ನು ಚಂದ್ರ ಆವರಿಸಿರುವುದರಿಂದ ಪಾರ್ಶ್ವ ಗ್ರಹಣ ಕಾಣಿಸಿದೆ. ಬೆಳಗ್ಗೆ 10.04ಕ್ಕೆ ಪ್ರಾರಂಭವಾದ ಗ್ರಹಣ 1.22ಕ್ಕೆ ಮುಕ್ತಾಯಗೊಂಡಿದೆ ಎಂದು ಪೂರ್ಣಪ್ರಜ್ಞ ಕಾಲೇಜು ಹವ್ಯಾಸಿ ಖಗೋಳ ವೀಕ್ಷಕ ಸಂಘದ ಸದಸ್ಯರು ತಿಳಿಸಿದ್ದಾರೆ.
    ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘದಿಂದ ಸೂರ್ಯಗ್ರಹಣವನ್ನು ಟೆಲಿಸ್ಕೋಪ್ ಫಿಲ್ಟರ್, ಕನ್ನಡಕ ಮತ್ತು ವೆಲ್ಡಿಂಗ್ ಗ್ಲಾಸ್ ಮೂಲಕ ವೀಕ್ಷಿಸಲಾಯಿತು. ಕಾಲೇಜಿನ ಆವರಣದಿಂದ ಯೂಟ್ಯೂಬ್‌ನಲ್ಲಿ ಗ್ರಹಣದ ನೇರ ಪ್ರಸಾರ ಮಾಡಲಾಯಿತು. ಆನ್‌ಲೈನ್ ಲೈವ್ ಸ್ಟ್ರೀಮ್‌ನಲ್ಲಿ 1225 ಮಂದಿ ಗ್ರಹಣ ವೀಕ್ಷಣೆ ಮಾಡಿದರು. ಸಂಘದ ಸ್ಥಾಪಕ ಸಂಯೋಜಕ, ಭೌತ ವಿಜ್ಞಾನಿ ಡಾ.ಎ.ಪಿ. ಭಟ್, ಸಂಯೋಜಕ ಅತುಲ್ ಭಟ್, ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲ ಡಾ.ಎ.ರಾಘವೇಂದ್ರ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರತಿಭಾ ಆಚಾರ್ಯ ಉಪಸ್ಥಿತರಿದ್ದರು.

    ದೇವಳಗಳಲ್ಲಿ ಜಪತಪ, ಶಾಂತಿ ಹೋಮ: ಕೃಷ್ಣ ಮಠದಲ್ಲಿ ಬೆಳಗ್ಗೆ ನೈರ್ಮಲ್ಯ ವಿಸರ್ಜನೆ ಪೂಜೆ, ಉಷಾ ಕಾಲ ಪೂಜೆ, ಗೋಪೂಜೆ ನಡೆಯಿತು. ಬಳಿಕ ನಡೆಯುವ ಅಲಂಕಾರ ಪೂಜೆ ಇತ್ಯಾದಿ ನಡೆಯಲಿಲ್ಲ. ಗ್ರಹಣ ಮುಗಿದ ಬಳಿಕ ಶುದ್ಧೀಕರಣ ನಡೆಸಿ ಅಲಂಕಾರ ಪೂಜೆ ನಡೆಸಿ ಅದಮಾರು ಪರ್ಯಾಯ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಮಹಾಪೂಜೆ ನೆರವೇರಿಸಿದರು. ಗ್ರಹಣ ಸಮಯದಲ್ಲಿ ಅದಮಾರು ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ, ಕೃಷ್ಣಾಪುರ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ, ಕಾಣಿಯೂರು ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ, ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ, ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ, ಪಲಿಮಾರು ಕಿರಿಯ ಶ್ರೀ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದು, ಗರ್ಭಗುಡಿಯೊಳಗೆ ಜಪತಪ ನಡೆಸಿದರು. ಕೃಷ್ಣ ಮುಖ್ಯಪ್ರಾಣ ದೇವರಿಗೆ ಮಂಗಳಾರತಿ ಬೆಳಗಿದರು. ಕೊಡವೂರು ಶಂಕರನಾರಾಯಣ ದೇವಳ ಸೇರಿದಂತೆ ಜಿಲ್ಲೆಯ ದೇವಸ್ಥಾನಗಳಲ್ಲಿ ಗ್ರಹಣ ಶಾಂತಿ ಹೋಮ ನಡೆಸಿ, ಬಳಿಕ ಮಹಾಪೂಜೆ ನಡೆಸಲಾಯಿತು. ಗ್ರಹಣ ನಿಮಿತ್ತ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದರ್ಶನ ಸಮಯದಲ್ಲಿ ವ್ಯತ್ಯಯವಾಯಿತು. ಮಧ್ಯಾಹ್ನದ ಮಹಾಪೂಜೆ ಸಾಯಂಕಾಲ 4 ಗಂಟೆಗೆ ನೆರವೇರಿತು.

    ಕರಾವಳಿಯಲ್ಲಿ ಜನ ಸಂಚಾರ ವಿರಳ
    ಗ್ರಹಣ ಹಿನ್ನೆಲೆಯಲ್ಲಿ ಕರಾವಳಿಯಲ್ಲಿ ಎಂದಿನ ಭಾನುವಾರಕ್ಕಿಂತ ಜನರ ಓಡಾಟ ವಿರಳವಾಗಿತ್ತು. ಬಹುತೇಕ ಅಂಗಡಿ-ಮುಂಗಟ್ಟುಗಳು ಬಾಗಿಲು ಮುಚ್ಚಿದ್ದವು. ಬೆಳಗ್ಗೆಯಿಂದ ಮಧ್ಯಾಹ್ನ ಮೂರು ಗಂಟೆವರೆಗೂ ಬೇಕರಿ, ಹೋಟೆಲ್‌ಗಳು ಬಾಗಿಲು ತೆರೆದಿರಲಿಲ್ಲ. ಬಹುತೇಕ ಮಂದಿ ಧಾರ್ಮಿಕ ನೆಲೆಗಟ್ಟಿನ ನಂಬಿಕೆಯಲ್ಲಿ ಬೆಳಗ್ಗೆ ಉಪವಾಸ ಇದ್ದು, ಮಧ್ಯಾಹ್ನ ಗ್ರಹಣ ಮೋಕ್ಷ ಬಳಿಕ ಅಡುಗೆ ಮಾಡಿ ಊಟ ಮಾಡಿದರು.

    ಪೊಲಿಪು ಮಸೀದಿಯಲ್ಲಿ ಗ್ರಹಣ ನಮಾಜ್
    ಪಡುಬಿದ್ರಿ: ಸೂರ್ಯಗ್ರಹಣ ಅಂಗವಾಗಿ ಕಾಪು ಪೊಲಿಪು ಜಾಮಿಯಾ ಮಸೀದಿಯಲ್ಲಿ ಭಾನುವಾರ ವಿಶೇಷ ನಮಾಜ್ ಮತ್ತು ದುವಾ ನೆರವೇರಿತು. ಮಸೀದಿ ಖತೀಬ ಇರ್ಷಾದ್ ಸ ಆದಿ ಪ್ರವಚನ ನೀಡಿ, ಗ್ರಹಣದ ಸಂದರ್ಭ ಆಹಾರ ಸೇವಿಸಬಾರದು, ಜಗತ್ತಿಗೆ ಏನೋ ಒಂದು ಮಹಾ ವಿಪತ್ತು ಸಂಭವಿಸಿಬಹುದೆನ್ನುವುದು ಸರಿಯಲ್ಲ. ಇಸ್ಲಾಂ ಅದನ್ನು ವಿರೋಧಿಸುತ್ತದೆ ಹಾಗೂ ಅದಕ್ಕೆ ಅವಕಾಶವನ್ನೂ ನೀಡುವುದಿಲ್ಲ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts