More

    ಡಯಾಲಿಸಿಸ್ ಸಮಸ್ಯೆ ಸರಿಪಡಿಸಿ; ಜಿಪಂ ಸಿಇಒ ಸೂಚನೆ

    ಕೊಪ್ಪಳ: ನಗರದ ಜಿಲ್ಲಾಸ್ಪತ್ರೆಯಲ್ಲಿ ಡಯಾಲಿಸಿಸ್ ಘಟಕ ನಿರ್ವಹಣೆ ಲೋಪ ಸೇರಿ ಇನ್ನಿತರ ಸಮಸ್ಯೆ ಸರಿಪಡಿಸಿ ಉತ್ತಮ ಸೇವೆ ನೀಡುವಂತೆ ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

    ಜಿಲ್ಲಾಸ್ಪತ್ರೆಗೆ ಮಂಗಳವಾರ ಭೇಟಿ ನೀಡಿ, ವಿವಿಧ ವಿಭಾಗಗಳನ್ನು ಪರಿಶೀಲಿಸಿದ ಅವರು, ಏಕೆ ಡಯಾಲಿಸಿಸ್ ಸಮಸ್ಯೆಯಾಗಿದೆ. ಸರಿಯಾಗಿ ನಿರ್ವಹಿಸುತ್ತಿಲ್ಲವೆಂದು ಪ್ರಶ್ನಿಸಿದರು.

    ಕಿಮ್ಸ್ ನಿರ್ದೇಶಕ ಡಾ.ವಿಜಯನಾಥ ಇಟಗಿ ಹಾಗೂ ವೈದ್ಯಕೀಯ ಅಧೀಕ್ಷಕ ಡಾ.ವೇಣುಗೋಪಾಲ್ ಮಾತನಾಡಿ, ಸಂಜೀವಿನಿ ಸಂಸ್ಥೆಗೆ ರಾಜ್ಯಾದ್ಯಂತ ಡಯಾಲಿಸಿಸ್ ಸೆಂಟರ್ ಟೆಂಡರ್ ಆಗಿದೆ. ಕಳೆದ 6 ತಿಂಗಳಿಂದ ಸಮಸ್ಯೆಯಾಗಿದೆ. ಸಂಸ್ಥೆಯವರು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಆದರೂ, ಕಿಮ್ಸ್‌ನಿಂದ ಸಣ್ಣಪುಟ್ಟ ಸಮಸ್ಯೆಯಾದಲ್ಲಿ ಸರಿಪಡಿಸಿ ರೋಗಿಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳುತ್ತಿದ್ದೇವೆ.

    ಒಟ್ಟು 8 ಯಂತ್ರಗಳಿದ್ದು, ಎರಡು ಪಾಸಿಟಿವ್ ರೋಗಿಗಳಿಗೆ ಉಳಿದ ಆರನ್ನು ಸಾಮಾನ್ಯ ರೋಗಿಗಳಿಗೆ ಬಳಸಲಾಗುತ್ತಿದೆ ಎಂದು ವಿವರಿಸಿದರು. ಈ ಬಗ್ಗೆ ಸರ್ಕಾರಕ್ಕೆ ವರದಿ ಮಾಡಿರುವಿರಾ? ಎಂದು ಸಿಇಒ ಪ್ರಶ್ನಿಸಿದರು. ಪತ್ರ ಬರೆದಿದೆ ಎಂದು ವೈದ್ಯಾಧಿಕಾರಿಗಳು ಉತ್ತರಿಸಿದರು. ಪತ್ರದ ಪ್ರತಿ ನನಗೆ ನೀಡಿ. ನಾನು ಸಚಿವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಸಮಸ್ಯೆ ಸರಿಪಡಿಸುವೆ ಎಂದು ಸಿಇಒ ಭರವಸೆ ನೀಡಿದರು.

    ಬಳಿಕ ಡಯಾಲಿಸಿಸ್ ವಿಭಾಗಕ್ಕೆ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದರು. ವಾಸ್ತವವಾಗಿ ಗುತ್ತಿಗೆದಾರ ಕಂಪನಿಯಿಂದ ಎಂಟು ಹಾಗೂ ಕಿಮ್ಸ್‌ನಿಂದ ಎರಡು ಡಯಾಲಿಸಿಸ್ ಯಂತ್ರಗಳನ್ನು ಅಳವಡಿಸಲಾಗಿದೆ. ಇದರಲ್ಲಿ ಐದು ಕೆಟ್ಟಿದ್ದು, ಸಿಇಒ ಭೇಟಿ ಹಿನ್ನೆಲೆಯಲ್ಲಿ ಅವುಗಳನ್ನು ಮುಚ್ಚಿಡಲಾಗಿತ್ತು. ಎರಡು ವರ್ಷದ ಹಿಂದೆ ಆಕ್ಸಿಜನ್ ಪೈಪ್ ಕಟ್ ಆಗಿದ್ದು, ಅದನ್ನು ಈವರೆಗೂ ಸರಿಪಡಿಸಿಲ್ಲ. ಜಂಬೋ ಸಿಲಿಂಡರ್‌ಗಳನ್ನು ಪೂರೈಸಲಾಗಿದೆ. ಶುಶ್ರೂಷಕ ಸಿಬ್ಬಂದಿಗೆ ಸುಮ್ಮನಿರುವಂತೆ ಸೂಚಿಸಿದ ಡಾ.ವೇಣುಗೋಪಾಲ್ ತಾವೇ ಸಿಇಒಗೆ ಯಾವುದೇ ಸಮಸ್ಯೆಗಳಿಲ್ಲವೆಂದು ಸಾಗ ಹಾಕಿದರು.

    ಸಮಸ್ಯೆ ಪರಿಹರಿಸುವ ಭರವಸೆ
    ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ, ಬೋಧೇತರ ಸಿಬ್ಬಂದಿ ಕೊರತೆ ಹಾಗೂ ನಿರ್ವಹಣೆ ಸಮಸ್ಯೆಗಳನ್ನು ಹೇಳಿಕೊಂಡರು. ಆರೋಗ್ಯ ಇಲಾಖೆ ಅಧೀನಲ್ಲಿದ್ದ ಜಿಲ್ಲಾಸ್ಪತ್ರೆಯನ್ನು 2017ರಿಂದ ಕಿಮ್ಸ್ ಸುಪರ್ದಿಗೆ ಒಳಪಡಿಸಿದ್ದು, ಕಟ್ಟಡ ಸೇರಿ ಇತರ ಸಮಸ್ಯೆಗಳಿವೆ. ಕಿಮ್ಸ್‌ಗಾಗಿ 450 ಹಾಸಿಗೆ ಪ್ರತ್ಯೇಕ ಆಸ್ಪತ್ರೆ ನಿರ್ಮಾಣವಾಗಿದ್ದು, ಅಂತಿಮ ಕಾಮಗಾರಿ ಬಾಕಿ ಇದೆ. 64 ಕೋಟಿ ರೂ. ಅನುದಾನ ಬೇಕಿದ್ದು, ಹಣಕಾಸು ಇಲಾಖೆಗೆ ಪತ್ರ ಬರೆಯಲಾಗಿದೆ. 226 ಹುದ್ದೆ ಮಂಜೂರಾಗಿದ್ದು, 90 ಭರ್ತಿಯಾಗಿವೆ. ಫಾರ್ಮಾಸಿಸ್ಟ್ ಹುದ್ದೆ ಖಾಲಿ ಇದೆ ಎಂದು ವೈದ್ಯಾಧಿಕಾರಿಗಳು ಮಾಹಿತಿ ನೀಡಿದರು. ಸರ್ಕಾರ ಬಜೆಟ್ ಮಂಡಿಸಿದ್ದು, ಎಲ್ಲ ಇಲಾಖೆಗಳಿಂದ ಕ್ರಿಯಾ ಯೋಜನೆ ಪಡೆಯುತ್ತಿದೆ. ಎಲ್ಲ ಸಮಸ್ಯೆಗಳನ್ನು ಸಂಬಂಧಿಸಿದವರ ಗಮನಕ್ಕೆ ತಂದು ಪರಿಹರಿಸುವುದಾಗಿ ಸಿಇಒ ಭರವಸೆ ನೀಡಿದರು. ಪ್ರತಿ ತಿಂಗಳು ಆಸ್ಪತ್ರೆಗೆ ಭೇಟಿ ನೀಡುವೆ. ರೋಗಿಗಳ ಹಿಂದೆ ಕೇವಲ ಒಬ್ಬರು ಪೋಷಕರಿಗೆ ಅವಕಾಶ ನೀಡುವಂತೆ ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts