More

    ಬೆಳಪುವಿನಲ್ಲಿ ಸರ್ಕಾರಿ ಪಾಲಿಟೆಕ್ನಿಕ್

    ಪಡುಬಿದ್ರಿ: ಕಾಪು ತಾಲೂಕಿನ ಮೊತ್ತ ಮೊದಲ ಎಐಸಿಟಿಇ ಮಾನ್ಯತೆ ಪಡೆದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಜಿಲ್ಲೆಯಲ್ಲಿಯೇ ನೂತನವಾಗಿರುವ 2 ಡಿಪ್ಲೊಮಾ ಕೋರ್ಸ್‌ಗಳೊಂದಿಗೆ ಬೆಳಪು ಗ್ರಾಮದ ದೇವಿನಗರದಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷದಿಂದಲೇ ಆರಂಭಿಸಲು ಸಿದ್ಧತೆ ನಡೆಸಿದೆ.

    2017ರಲ್ಲಿ ರಾಜ್ಯದ ಚನ್ನಗಿರಿ, ಹೊನ್ನಾಳಿ, ಗೌರಿಬಿದನೂರು, ಕೊಪ್ಪ ಸೇರಿದಂತೆ ಕಾಪು ತಾಲೂಕಿನ ಬೆಳಪು ಗ್ರಾಮದಲ್ಲಿ ನೂತನ ಪಾಲಿಟೆಕ್ನಿಕ್‌ಗಳಿಗೆ ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯಿಂದ ಮಂಜೂರಾತಿ ದೊರೆತು ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಬೆಳಪು ಗ್ರಾಮದ 5.39 ಎಕರೆ ಸರ್ಕಾರಿ ಜಮೀನಿನಲ್ಲಿ 2018ರಲ್ಲಿ ಸುಮಾರು 8 ಕೋಟಿ ರೂಪಾಯಿ ವೆಚ್ಚದಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಿಸಲಾಗಿತ್ತು. ಇತ್ತೀಚೆಗಷ್ಟೇ ಕಟ್ಟಡದ ಹಸ್ತಾಂತರವೂ ನಡೆದಿದೆ.

    ಸರ್ಕಾರಿ ಪಾಲಿಟೆಕ್ನಿಕ್ ವಿದ್ಯಾಲಯಗಳಲ್ಲಿ ಡಿಪ್ಲೊಮಾ ಕೋರ್ಸ್‌ಗಳನ್ನು ಪ್ರಾರಂಭಿಸಲು ಎಐಸಿಟಿಇ (ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಷನ್) ಸಂಸ್ಥೆಯು ಆರಂಭಿಕ ಅನುಮೋದನೆ ನೀಡಬೇಕಿದೆ. ಎಐಸಿಟಿಇ ಅನುಮೋದನೆ ದೊರಕಿದ ಬಳಿಕ ರಾಜ್ಯ ಸರ್ಕಾರ ವಿವಿಧ ಕೋರ್ಸ್‌ಗಳು ಮತ್ತು ಹುದ್ದೆಗಳನ್ನು ಮಂಜೂರುಗೊಳಿಸಲಿದ್ದು, ಬೆಳಪು ಸರ್ಕಾರಿ ಪಾಲಿಟೆಕ್ನಿಕ್ ವಿದ್ಯಾಲಯದಲ್ಲಿ ತಾಂತ್ರಿಕ ಶೈಕ್ಷಣಿಕ ತರಗತಿಗಳನ್ನು ಪ್ರಾರಂಭಿಸಲು ಸಂಬಂಧಪಟ್ಟ ವಿಭಾಗಕ್ಕೆ ಪ್ರಸ್ತಾವನೆ ಕಳುಹಿಸಲಾಗಿತ್ತು.

    ಈಗ ಜಿಲ್ಲೆಯಲ್ಲಿಯೇ ಪ್ರಥಮ ಎಂಬಂತೆ ಅಟೋಮೇಶನ್ ಆ್ಯಂಡ್ ರೊಬೋಟಿಕ್ಸ್, ಕ್ಲೌಡ್ ಕಂಪ್ಯೂಟಿಂಗ್ ಆ್ಯಂಡ್ ಬಿಗ್ ಡೆಟಾ ನೂತನ ಕೋರ್ಸ್ ಆರಂಭಿಸಲು ಅನುಮೋದನೆ ದೊರೆತಿದೆ.
    ಉಡುಪಿ ಜಿಲ್ಲೆಯ ಮಣಿಪಾಲ ಮತ್ತು ಕಾರ್ಕಳದಲ್ಲಿ ಸರ್ಕಾರಿ ಪಾಲಿಟೆಕ್ನಿಕ್‌ಗಳಿದ್ದು, ಬೆಳಪುವಿನಲ್ಲಿ ಆರಂಭವಾಗಲಿರುವ ಮೂರನೇ ಸರ್ಕಾರಿ ಪಾಲಿಟೆಕ್ನಿಕ್ ಆಗಲಿದೆ. ಸರ್ಕಾರಿ ಕಾಲೇಜುಗಳನ್ನು ಹೊರತುಪಡಿಸಿ ನಿಟ್ಟೆಯಲ್ಲಿ 1 ಅನುದಾನಿತ ಪಾಲಿಟೆಕ್ನಿಕ್, 3 ಖಾಸಗಿ ತಾಂತ್ರಿಕ ವಿದ್ಯಾ ಸಂಸ್ಥೆಗಳಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಪಿಟಿ, ಬಂಟ್ವಾಳ, ಬೋಂದೆಲ್‌ನಲ್ಲಿ 3 ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಿವೆ. ಮೂಡುಬಿದಿರೆ, ಸುಂಕದಕಟ್ಟೆ ಮತ್ತು ಸುಳ್ಯದಲ್ಲಿ ಅನುದಾನಿತ ತಾಂತ್ರಿಕ ವಿದ್ಯಾಲಯಗಳು ಕಾರ್ಯನಿರ್ವಹಿಸುತ್ತಿವೆ. ಮಣಿಪಾಲ ಮತ್ತು ಕಾರ್ಕಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಸಿವಿಲ್ ಇಂಜಿನಿಯರಿಂಗ್, ಕಂಪ್ಯೂಟರ್ ಸಯನ್ಸ್ ಇಂಜಿನಿಯರಿಂಗ್, ಎಲೆಕ್ಟ್ರಾನಿಕ್ ಆ್ಯಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್ ಮತ್ತು ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ ಕಾರ್ಯ ನಿರ್ವಹಿಸುತ್ತಿವೆ.

    ಆನ್‌ಲೈನ್ ಅಥವಾ ಆಫ್‌ಲೈನ್ ಪ್ರವೇಶಾತಿ ಮಾಡಬೇಕೋ ಎನ್ನುವ ಬಗ್ಗೆ ಇನ್ನೂ ಅಂತಿಮವಾಗಿಲ್ಲ. ಈಗಷ್ಟೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಕ್ತಾಯವಾಗಿದ್ದು, ಫಲಿತಾಂಶ ಬಂದ ಕೂಡಲೇ ಮೊದಲ ಆದ್ಯತೆಯಲ್ಲಿ ಎಸ್ಸೆಸ್ಸೆಲ್ಸಿ ಉತ್ತೀರ್ಣ ವಿದ್ಯಾರ್ಥಿಗಳ ಪ್ರವೇಶಾತಿಗೆ ಕ್ರಮ ವಹಿಸಲಾಗುವುದು. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ಇತರ ಜಿಲ್ಲೆಗಳಿಂದಲೂ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣ ಪಡೆದುಕೊಳ್ಳಲು ಸೇರ್ಪಡೆಗೆ ಅವಕಾಶವಿದೆ. ಕೆಟಗರಿ ಮತ್ತು ಮೀಸಲು ಮತ್ತು ಮೆರಿಟ್ ಆಧಾರದ ಮೇಲೆ ಎರಡು ಕೋರ್ಸ್‌ಗಳಿಗೆ ತಲಾ 3 ಸರ್ಕಾರಿ ಕೋಟ ಹೊರತು 60 ಸೀಟು ಹಂಚಿಕೆಯಾಗಲಿದೆ.

    ಅಭಿವೃದ್ಧಿಯಾಗಬೇಕಿರುವ ಕಾಮಗಾರಿಗಳು: ಬೆಳಪು ಪಾಲಿಟೆಕ್ನಿಕ್ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ಮುಂದೆ ಕಂಪ್ಯೂಟರ್ ವ್ಯವಸ್ಥೆ, ಪೀಠೋಪಕರಣ, ಹವಾನಿಯಂತ್ರಿತ ಕೊಠಡಿಗಳು, ಕಂಪ್ಯೂಟರ್ ಲ್ಯಾಬ್, ತಾಂತ್ರಿಕ ಶಿಕ್ಷಣಕ್ಕೆ ಸಂಬಂಧಿತ ಯಂತ್ರಗಳ ಜೋಡಣೆ, ವರ್ಕ್‌ಶಾಪ್, ಬಾಲಕರ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯ, ಪ್ರಾಂಶುಪಾಲರು ಮತ್ತು ಸಿಬ್ಬಂದಿ ವಸತಿ ನಿಲಯ, ಕ್ಯಾಂಟಿನ್, ಕೆಫೆಟೇರಿಯಾ, ಭದ್ರತಾ ವ್ಯವಸ್ಥೆಗಳ ಜೋಡಣೆ, ಕಟ್ಟಡದ ಸುತ್ತಲೂ ಆವರಣಗೋಡೆ ಮತ್ತು ಗೇಟ್ ಅಳವಡಿಕೆ ಕಾಮಗಾರಿಗಳು ಇನ್ನಷ್ಟೇ ಆಗಬೇಕಿದೆ. ಕಾಲೇಜಿಗೆ ಸಂಪರ್ಕ ಕಲ್ಪಿಸುವ ರಸ್ತೆ ತೀರಾ ನಾದುರಸ್ತಿಯಲ್ಲಿದ್ದು, ಅದರ ಅಭಿವೃದ್ಧಿಗೆ ಕ್ರಮವಹಿಸಬೇಕಿದೆ.

    ಪಾಲಿಟೆಕ್ನಿಕ್ ಆರಂಭ ಕುರಿತಂತೆ ಉನ್ನತಾಧಿಕಾರಿಗಳಿಂದ ತಪಾಸಣೆ ಕಾರ್ಯ ಪೂರ್ಣಗೊಂಡಿದೆ. 2 ನೂತನ ಕೋರ್ಸ್ ಆರಂಭಕ್ಕೆ ಅನುಮೋದನೆ ದೊರೆತಿದೆ. ಸಂಸ್ಥೆಯ ಅಗತ್ಯತೆಗಳ ಜೋಡಣೆಗೆ ಸುಮಾರು 5 ಕೋಟಿ ರೂಪಾಯಿಗಳ ಮೊತ್ತವನ್ನು ಇಲಾಖೆ ಕಾಯ್ದಿರಿಸಿದ್ದು, ಶೀಘ್ರದಲ್ಲೇ ಅದು ಪೂರೈಕೆಯಾಗಲಿದೆ. ಪ್ರಸ್ತುತ ವಾರದಲ್ಲಿಯೇ ಸಿಬ್ಬಂದಿ ವರ್ಗಾವಣೆ ಪ್ರಕ್ರಿಯೆ ನಡೆಯಲಿದೆ. ಅಗತ್ಯಕ್ಕನುಗುಣವಾಗಿ ಇತರ ಸಿಬ್ಬಂದಿ ನೇಮಕಕ್ಕೆ ಕ್ರಮ ವಹಿಸಲಾಗುತ್ತಿದೆ. ಸಂಪರ್ಕ ರಸ್ತೆ ಅಭಿವೃದ್ಧಿಗೆ ಜಿಲ್ಲಾಧಿಕಾರಿ ಹಾಗೂ ಶಾಸಕರಿಗೂ ಮನವಿ ಮಾಡಲಾಗಿದೆ.
    – ಮಂಜುನಾಥ ಪ್ರಸಾದ್
    ವಿಶೇಷ ಅಧಿಕಾರಿ, ಬೆಳಪು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts