More

    ಸರ್ಕಾರಿ ಗೌರವದೊಂದಿಗೆ ಎಎಸ್‌ಐ ಅಂತ್ಯಕ್ರಿಯೆ

    ಸವದತ್ತಿ: ರಸ್ತೆ ಅಪಘಾತದಲ್ಲಿ ಶನಿವಾರ ರಾತ್ರಿ ಮೃತಪಟ್ಟಿದ್ದ ಸ್ಥಳೀಯ ಪೊಲೀಸ್ ಠಾಣೆಯ ಎಎಸ್‌ಐ ಯಲ್ಲಪ್ಪ ರಾಮಪ್ಪ ತಳವಾರ (59) ಅವರ ಅಂತ್ಯಕ್ರಿಯೆ ಸರ್ಕಾರಿ ಗೌರವದೊಂದಿಗೆ ಅವರ ಸ್ವ-ಗ್ರಾಮ ಬೈಲಹೊಂಗಲ ತಾಲೂಕಿನ ಆನಿಗೋಳದಲ್ಲಿ ಭಾನುವಾರ ನೆರವೇರಿತು.

    ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಎಸ್ಪಿ ಲಕ್ಷ್ಮಣ ನಿಂಬರಗಿ, ಮೃತ ಎಎಸ್‌ಐ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಕರೊನಾ ಮಹಾಮಾರಿ ವಿರುದ್ಧದ ಹೋರಾಟದಲ್ಲಿ ಕರ್ತವ್ಯ ನಿರತ ಎಎಸ್‌ಐ ಯಲ್ಲಪ್ಪ ರಾಮಪ್ಪ ತಳವಾರ ಅವರಿಗೆ ಸರ್ಕಾರದಿಂದ ದೊರೆಯಬೇಕಾದ 30 ಲಕ್ಷ ರೂ. ಪರಿಹಾರ ಹಾಗೂ 20 ಲಕ್ಷ ರೂ. ವಿಮೆ ಪರಿಹಾರ ಸೇರಿ 50 ಲಕ್ಷ ರೂ.ಗಳನ್ನು ಆದಷ್ಟು ಬೇಗನೆ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.

    ಅನಿಗೋಳ ಗ್ರಾಮದ ನಿವಾಸಿಯಾಗಿದ್ದ ಯಲ್ಲಪ್ಪ ತಳವಾರ ಅವರು ಮೇ 1986ರಿಂದ ಪೊಲೀಸ್ ವೃತ್ತಿ ಪ್ರಾರಂಭಿಸಿದ್ದರು. ಬೈಲಹೊಂಗಲ, ಕಿತ್ತೂರ, ಸವದತ್ತಿ ಸೇರಿ ಇನ್ನೂ ಹಲವಾರು ಪ್ರದೇಶಗಳಲ್ಲಿ ಸೇವೆ ಸಲ್ಲಿಸಿದ್ದರು. 2020ರ ಜುಲೈ 31ಕ್ಕೆ ನಿವೃತ್ತಿ ಹೊಂದಲಿದ್ದ ಅವರು, ಕರೊನಾ ವೈರಸ್ ನಿಯಂತ್ರಣ ಕಾರ್ಯದಲ್ಲಿ ತೊಡಗಿದ್ದರು. ಅಪಘಾತದ ಕುರಿತು ಸಿಪಿಐ ಮಂಜುನಾಥ ನಡುವಿನಮನಿ, ಪಿಎಸ್‌ಐ ನಾಗನಗೌಡ ಕಟ್ಟಿಮನಿಗೌಡ್ರ ತನಿಖಾ ಕಾರ್ಯ ಚುರುಕುಗೊಳಿಸಿದ್ದಾರೆ.

    ಶಾಸಕ ಮಹಾಂತೇಶ ಕೌಜಲಗಿ, ಮಾಜಿ ಶಾಸಕರಾದ ಡಾ. ವಿಶ್ವನಾಥ ಪಾಟೀಲ, ಜಗದೀಶ ಮೆಟಗುಡ್ಡ, ರಾಮದುರ್ಗ ಡಿವೈಎಸ್‌ಪಿ ಶಂಕರಗೌಡ ಪಾಟೀಲ, ತಹಸೀಲ್ದಾರ್ ಡಾ. ದೊಡ್ಡಪ್ಪ ಹೂಗಾರ, ಪೊಲೀಸ್ ಸಿಬ್ಬಂದಿ ಹಾಗೂ ಗ್ರಾಮಸ್ಥರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

    ಈ ಘಟನೆಯಿಂದ ತುಂಬಾ ನೋವಾಗಿದೆ. ಭಗವಂತ ಮೃತ ಎಎಸ್‌ಐ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಕರುಣಿಸಲಿ. ಸರ್ಕಾರದಿಂದ ಅವರಿಗೆ ದೊರಕುವ ಎಲ್ಲ ರೀತಿಯ ಸೌಲಭ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.
    | ಆನಂದ ಮಾಮನಿ ವಿಧಾನಸಭೆ ಉಪಸಭಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts