More

    ಮಾದರಿ ಉದ್ಯೋಗ ನೀತಿ ತಯಾರಿಗೆ ಸರ್ಕಾರ ಸಿದ್ಧತೆ; ಅಧಿಕಾರಿಗಳೆದುರು ಕಲ್ಪನೆ ಬಿಚ್ಚಿಟ್ಟ ಸಿಎಂ

    ಬೆಂಗಳೂರು: ರಾಜ್ಯದ ಉದ್ಯೋಗ ಹಸಿವನ್ನು ನೀಗಿಸುವ ನಿಟ್ಟಿನಲ್ಲಿ ನೂತನ ಉದ್ಯೋಗ ನೀತಿ ತರಬೇಕು ಮತ್ತು ತಕ್ಷಣದಿಂದಲೇ ಅದರ ಪರಿಣಾಮ, ಫಲಿತಾಂಶ ಸಿಗಬೇಕೆಂಬ ನಿರೀಕ್ಷೆಯಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ಉನ್ನತ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದರು.

    ಹೂಡಿಕೆದಾರರನ್ನು ಸೆಳೆಯಲು ಸರ್ಕಾರ ಅನೇಕ ಪ್ರೋತ್ಸಾಹಕಗಳನ್ನು ನೀಡುವ ಸಂಪ್ರದಾಯವಿದೆ, ಹೂಡಿಕೆ ಮೊತ್ತದ ಮೇಲೆ ಪ್ರೋತ್ಸಾಹಕಗಳು ನಿರ್ಧಾರವಾಗುತ್ತಿತ್ತು. ಇನ್ನುಮುಂದೆ ಎಷ್ಟು ಉದ್ಯೋಗ ಸೃಷ್ಟಿಯಾಗುತ್ತದೋ ಆ ಸಂಖ್ಯೆಯ ಮೇಲೆ ರಿಯಾಯಿತಿ, ವಿನಾಯಿತಿ ನೀಡಲು ಸಿಎಂ ಒಲವು ತೋರಿದ್ದಾರೆ. ಈ ಬಗ್ಗೆ ಒಂದು ರೂಪುರೇಷೆ ಸಿದ್ಧಪಡಿಸಿ ಮಂಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ಉದ್ಯೋಗ ನೀತಿ ತಯಾರು ಮಾಡುವ ಮುನ್ನ ಪ್ರಾಥಮಿಕ ಸಭೆಯಾದ್ದರಿಂದ ಸಾಕಷ್ಟು ವಿಚಾರ ವಿನಿಮಯಕ್ಕೆ ಒತ್ತು ನೀಡಲಾಯಿತು. ಮುಖ್ಯವಾಗಿ ಎಷ್ಟು ಪ್ರಮಾಣದಲ್ಲಿ ಹೂಡಿಕೆ ಆಯಿತು ಎಂಬುದಕ್ಕಿಂತ ಎಷ್ಟು ಉದ್ಯೋಗ ಸೃಷ್ಟಿಯಾಯಿತು ಎಂಬುದು ನಿರ್ಧಾರವಾದರೆ ರಾಜ್ಯಕ್ಕೆ ಅನುಕೂಲ, ಹೆಚ್ಚು ಉದ್ಯೋಗ ಸೃಷ್ಟಿಸುವವರಿಗೆ ಹೆಚ್ಚಿನ ವಿನಾಯಿತಿ ಕೊಟ್ಟರೆ ಪರಿಣಾಮ ಕಾಣಿಸುತ್ತದೆ ಎಂಬುದು ಸಿಎಂ ಅಭಿಪ್ರಾಯವಾಗಿತ್ತು.

    ವೃತ್ತಿಪರ ತರಬೇತಿ ಹಾಗೂ ಕೃಷಿ, ತೋಟಗಾರಿಕೆಗೂ ಕಡಿಮೆ ಅವಧಿಯ ಕೋರ್ಸ್ ಆರಂಭಿಸಬೇಕು. ಕೃಷಿ, ತೋಟಗಾರಿಕೆ ಉತ್ಪನ್ನಗಳ ಮೌಲ್ಯವರ್ಧನೆ, ಆಹಾರ ಸಂಸ್ಕರಣೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ತರಬೇತಿ ಕೊಡುವ ನಿಟ್ಟಿನಲ್ಲಿ ನೀತಿಯಲ್ಲಿ ಆದ್ಯತೆ ಕೊಡಿ ಎಂದು ಸಿಎಂ ಸಲಹೆ ನೀಡಿದ್ದಾರೆಂದು ಗೊತ್ತಾಗಿದೆ. ಈ ವೇಳೆ ಮಾತನಾಡಿದ ಸಿಎಂ ಬೊಮ್ಮಾಯಿ, ರಾಜ್ಯದಲ್ಲಿ ಉದ್ಯೋಗ ನೀತಿ ಯುವಕರಿಗೆ, ಉದ್ಯೋಗಾಕಾಂಕ್ಷಿಗಳಿಗೆ ಲಾಭದಾಯಕವಾಗಲಿದೆ. ಈ ನೀತಿಯಿಂದ ರಾಜ್ಯದ ಯುವಕರ ಬದುಕು ಹಸನಾಗಲಿದೆ ಎಂದರು. ಸಭೆಯಲ್ಲಿ ಮುಖ್ಯಕಾರ್ಯದರ್ಶಿ ಪಿ.ರವಿಕುಮಾರ್, ಆರ್ಥಿಕ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಐ.ಎಸ್.ಎನ್.ಪ್ರಸಾದ್, ಐಟಿಬಿಟಿ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ, ಸಿಎಂ ಕಾರ್ಯದರ್ಶಿ ಮಂಜುನಾಥ ಪ್ರಸಾದ್, ಕೈಗಾರಿಕೆ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣಾ ಸೇರಿ ಹಿರಿಯ ಅಧಿಕಾರಿಗಳು ಹಾಜರಿದ್ದು ವಿಚಾರ ವಿನಿಮಯ ನಡೆಸಿದರು.

    ಸೆಮಿಕಂಡಕ್ಟರ್ ನೀತಿಗೆ ಹೊಸತನ: ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳು, ನಾವಿನ್ಯತೆಗೆ ಅನುಗುಣವಾಗಿ ರಾಜ್ಯವನ್ನು ಸಜ್ಜುಗೊಳಿಸಲು ಹೊಸ ಸೆಮಿಕಂಡೆಕ್ಟರ್ ನೀತಿ ತರಲು ಸರ್ಕಾರ ನಿರ್ಧರಿಸಿದೆ. ಚಿಪ್ ಆಧಾರಿತ ತಂತ್ರಜ್ಞಾನ ಬಳಕೆ ಹೆಚ್ಚುತ್ತಿದ್ದರೂ ಚಿಪ್ ಉತ್ಪಾದನೆಯಲ್ಲಿ ನಿರೀಕ್ಷಿತ ಪ್ರಗತಿ ಕಾಣಿಸುತ್ತಿಲ್ಲ. ಚಿಪ್​ಗೆ ಬೇಕಾದ ತಂತ್ರಜ್ಞಾನ ನಮ್ಮಲ್ಲಿ ಸಿದ್ಧವಾದರೂ ಚಿಪ್ ಉತ್ಪಾದನೆ ಅಷ್ಟಕ್ಕಷ್ಟೇ ಇದೆ. ಹೀಗಾಗಿ ಈ ನಿಟ್ಟಿನಲ್ಲಿ ಗಮನಿಸುವ ಉದ್ದೇಶ ಹೊಂದಲಾಗಿದೆ.

    ಶಿಷ್ಯವೇತನ ವಿತರಣೆಗೆ ಚಾಲನೆ: ಕಟ್ಟಡ ಕಾರ್ವಿುಕರ ಮಕ್ಕಳ ಶಿಷ್ಯ ವೇತನವನ್ನು ಅವರ ಬ್ಯಾಂಕ್ ಖಾತೆಗೆ ನೇರ ವರ್ಗಾವಣೆಯಿಂದ ಮಧ್ಯವರ್ತಿಗಳ ಹಾವಳಿ ತಪ್ಪಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹರ್ಷ ವ್ಯಕ್ತಪಡಿಸಿದರು. ರಾಜ್ಯ ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ವಿುಕರ ಮಂಡಳಿಯಿಂದ ಕಟ್ಟಡ ಕಾರ್ವಿುಕರ ಮಕ್ಕಳಿಗೆ ಆನ್​ಲೈನ್ ಮೂಲಕ ಶಿಷ್ಯ ವೇತನ ವಿತರಣೆಗೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು. ಕಾರ್ವಿುಕ ಸಚಿವ ಶಿವರಾಮ ಹೆಬ್ಬಾರ್ ಮಾತನಾಡಿ, ಪ್ರಸ್ತುತ ಪೋರ್ಟಲ್ ಮೂಲಕ ಮೆಟ್ರಿಕ್ ನಂತರಕ್ಕೆ 1,45,524, ಮೆಟ್ರಿಕ್ ಪೂರ್ವಕ್ಕೆ 92,061 ಅರ್ಜಿಗಳು ವಿದ್ಯಾರ್ಥಿ ವೇತನಕ್ಕೆ ಸ್ವೀಕೃತವಾಗಿವೆ. ಈ ಪೈಕಿ ಸ್ವೀಕೃತ ಅರ್ಜಿಗಳಲ್ಲಿ ಮೆಟ್ರಿಕ್ ನಂತರ 50,000 ಹಾಗೂ ಮೆಟ್ರಿಕ್​ಪೂರ್ವ 39,000 ದಾಖಲಾತಿಗಳು, ಆಧಾರ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆಗೆ ಜೋಡಣೆ ಸರಿಯಾಗಿವೆ. ಸದರಿ 89,000 ಅರ್ಜಿಗಳಿಗೆ 159 ಕೋಟಿ ರೂ. ನಗದು ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಉಳಿದ ವಿದ್ಯಾರ್ಥಿಗಳ ಅರ್ಜಿಗಳಿಗೆ ಫೆಬ್ರವರಿ ಅಂತ್ಯದೊಳಗೆ ಶಿಷ್ಯವೇತನ ನೇರ ವರ್ಗಾವಣೆ ಗುರಿಯಿಟ್ಟುಕೊಳ್ಳಲಾಗಿದೆ ಎಂದರು.

    ರಾಜ್ಯದಲ್ಲಿ ಮಿತಿ ಮೀರಿದ ಕರೊನಾ ಹಾವಳಿ; ಇಂದು ಕೂಡ ಸೋಂಕಿತರು ಮತ್ತು ಮೃತರ ಸಂಖ್ಯೆಯಲ್ಲಿ ಹೆಚ್ಚಳ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts