More

    ಆದೇಶ ಹೊರಡಿಸಿ ಮುಜುಗರಕ್ಕೀಡಾಗಿ ವಾಪಸ್ ಪಡೆದ ಸರ್ಕಾರ; ಪದೇಪದೆ ಎಡವುತ್ತಿರುವುದಕ್ಕೆ ಜನರಿಂದ ಟೀಕೆ..

    ಬೆಂಗಳೂರು: ರಾಜ್ಯದ 21 ಟ್ರಸ್ಟ್​ ಹಾಗೂ ಪ್ರತಿಷ್ಠಾನಗಳ ಅಧ್ಯಕ್ಷರು-ಸದಸ್ಯರ ಕುರಿತಂತೆ ತಕ್ಷಣದಿಂದ ಜಾರಿಗೆ ಬರುವಂತೆ ನಿನ್ನೆಯಷ್ಟೇ ಆದೇಶ ಹೊರಡಿಸಿದ್ದ ಸರ್ಕಾರ, ಅದರಿಂದಾಗಿ ಮುಜುಗರಕ್ಕೆ ಒಳಗಾಗಿದ್ದು, ಇಂದು ಆ ಆದೇಶವನ್ನು ವಾಪಸ್ ಪಡೆದಿದೆ. ಆ ಮೂಲಕ ಇಂದು ಮತ್ತೊಮ್ಮೆ ಸಾರ್ವಜನಿಕರಿಂದ ಟೀಕೆಗ ಒಳಗಾಗಿದೆ.

    ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸರ್ಕಾರದಿಂದ ರಚಿಸಲಾಗಿರುವ ಒಟ್ಟು 21 ಟ್ರಸ್ಟ್​​-ಪ್ರತಿಷ್ಠಾನಗಳ ನೂತನ ಅಧ್ಯಕ್ಷರು ಹಾಗೂ ಸದಸ್ಯರ ಪಟ್ಟಿಯನ್ನು ನಿನ್ನೆ ಬಿಡುಗಡೆ ಮಾಡಿತ್ತು. ಅಲ್ಲದೆ ‘ಇದು ತಕ್ಷಣದಿಂದಲೇ ಜಾರಿಗೆ ಬರಲಿದೆ’ ಎಂದೂ ಹೇಳಿತ್ತು. ಆದರೆ ಆದೇಶದಲ್ಲಿ ಎಡವಟ್ಟುಗಳಾಗಿದ್ದರಿಂದ ಇಂದು ತಕ್ಷಣದಿಂದ ಜಾರಿಗೆ ಬರುವಂತೆ ಆ ಆದೇಶವನ್ನು ಹಿಂಪಡೆದಿದೆ.

    ನಿನ್ನೆ ಹೊರಡಿಸಲಾಗಿದ್ದ ಆದೇಶದಲ್ಲಿ ಚಿಕ್ಕಮಗಳೂರಿನ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ನೂತನ ಪದಾಧಿಕಾರಿಗಳ ಪಟ್ಟಿಯಲ್ಲಿ ಸದಸ್ಯರಾಗಿ ರಾಜೇಶ್ವರಿ ಪೂರ್ಣಚಂದ್ರ ತೇಜಸ್ವಿ ಅವರ ಹೆಸರನ್ನು ನಮೂದಿಸಲಾಗಿತ್ತು. ಆದರೆ ಲೇಖಕ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಪತ್ನಿ, ಸಾಹಿತಿ ರಾಜೇಶ್ವರಿ ತೇಜಸ್ವಿ (86) ಅವರು 2021ರ ಡಿಸೆಂಬರ್​ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು. ಜೀವಂತ ಇರದ ಅವರ ಹೆಸರು ಸದಸ್ಯರಾಗಿ ನಮೂದಿಸಿದ್ದರಿಂದ ಟೀಕೆಗಳು ವ್ಯಕ್ತವಾಗಿದ್ದವು.

    ಇನ್ನು ಇದೇ ಪ್ರತಿಷ್ಠಾನದ ಅಧ್ಯಕ್ಷರಾಗಿ ನರೇಂದ್ರ ರೈ ದೇರ್ಲ ಅವರ ಹೆಸರನ್ನು ನಮೂದಿಸಲಾಗಿತ್ತು. ಆದರೆ ಈ ಕುರಿತು ತಮ್ಮನ್ನು ಸಂಪರ್ಕಿಸದೇ ಇಲಾಖೆ ತಮ್ಮನ್ನು ಅಧ್ಯಕ್ಷರನ್ನಾಗಿಸಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದರು. ‘..ಸಂಬಂಧಿಸಿದ ಯಾವುದೇ ಇಲಾಖೆಯ ವ್ಯಕ್ತಿಗಳು, ಅಧಿಕಾರಿಗಳು ನನ್ನನ್ನು ಈವರೆಗೆ ಸಂಪರ್ಕಿಸಿಯೂ ಇಲ್ಲ. ಅಂತಹ ಪತ್ರ-ಆದೇಶ ನನಗೆ ಬಂದಿಲ್ಲ. ಒಂದು ವೇಳೆ ಅದು ಬಂದಾಗಲೂ ನನ್ನ ಈ ಅಭಿಪ್ರಾಯ ಬದಲಾಗುವುದಿಲ್ಲ. ಸರ್ಕಾರ ಮುಂದೆ ಯಾರನ್ನೇ ಬೇಕಾದರೂ ಆಯ್ಕೆ ಮಾಡಲಿ, ತೇಜಸ್ವಿಯ ವಿಚಾರದಲ್ಲಿ ಅವರಿಗೆ ನನ್ನ ಸಹಾಯ ಇದ್ದೇ ಇದೆ. ಆದರೆ ಇಂಥ ಪ್ರತಿಷ್ಠಾನ ಪ್ರಾಧಿಕಾರ ಅಕಾಡೆಮಿಗಳಿಗೆ ನೇಮಕ ಮಾಡುವಾಗ ಸೌಜನ್ಯಕ್ಕಾದರೂ ಸಂಪರ್ಕಿಸಿ ಪೂರ್ವಾನುಮತಿ ಪಡೆಯುವುದು ಹೆಚ್ಚು ಸೂಕ್ತ. ಆಗ ಇಂತಹ ಅನಪೇಕ್ಷಿತ ಮುಜುಗರವೂ ತಪ್ಪುತ್ತದೆ. ದಯವಿಟ್ಟು ಸಂಸ್ಕೃತಿ ಇಲಾಖೆ ಇದನ್ನು ಗಮನಿಸಬೇಕೆಂದು ವಿನಮ್ರ ಕೋರಿಕೆ..’ ಎಂದು ನರೇಂದ್ರ ರೈ ದೇರ್ಲ ಫೇಸ್​ಬುಕ್​ನಲ್ಲಿ ಹೇಳಿಕೊಂಡಿದ್ದರು.

    ಹಾವೇರಿಯ ಶ್ರೀಗಳಗನಾಥ ಮತ್ತು ನಾ.ಶ್ರೀರಾಜ ಪುರೋಹಿತ ಪ್ರತಿಷ್ಠಾನಕ್ಕೆ ಅಧ್ಯಕ್ಷರನ್ನಾಗಿ ನೇಮಿಸಿದ್ದರೂ ಚಕ್ರವರ್ತಿ ಸೂಲಿಬೆಲೆ ಆ ಸ್ಥಾನ ಬೇಡ ಎಂದು ನಿರಾಕರಿಸಿದ್ದಾರೆ. ಅಲ್ಲದೆ ಈ ಆದೇಶದಲ್ಲಿ ಇನ್ನೂ ಕೆಲವು ಲೋಪಗಳಿದ್ದು, ಆ ಬಗ್ಗೆ ಸಾರ್ವಜನಿಕರಿಂದ ಬಹಿರಂಗವಾಗಿ ಅಸಮಾಧಾನ ವ್ಯಕ್ತವಾದ್ದರಿಂದ ಸರ್ಕಾರ ಮುಜುಗರಕ್ಕೀಡಾಗಿದೆ. ಹೀಗಾಗಿ ಸರ್ಕಾರ ಇಂದು ಆದೇಶ ಹಿಂಪಡೆದಿದೆ.

    ಆದೇಶ ಹೊರಡಿಸಿ ಮುಜುಗರಕ್ಕೀಡಾಗಿ ವಾಪಸ್ ಪಡೆದ ಸರ್ಕಾರ; ಪದೇಪದೆ ಎಡವುತ್ತಿರುವುದಕ್ಕೆ ಜನರಿಂದ ಟೀಕೆ..
    ನಿನ್ನೆ ಹೊರಡಿಸಿದ್ದ ಆದೇಶ, ಇಂದು ಹಿಂಪಡೆದ ಆದೇಶಗಳ ತುಣುಕು.

    ಈ ಸಲದ ದಸರಾ ಉನ್ನತಮಟ್ಟದ ಸಮಿತಿ ಸಭೆಯ ಕಾರ್ಯಸೂಚಿಯಲ್ಲಿ ಕಳೆದ ವರ್ಷದ ಇಸವಿಯನ್ನೇ ನಮೂದಿಸಿ ಸರ್ಕಾರ ಎಡವಟ್ಟು ಮಾಡಿತ್ತು, ಆಗಲೂ ಟೀಕೆಗೆ ಒಳಗಾಗಿತ್ತು. ಅಲ್ಲದೆ ಸರ್ಕಾರಿ ಕಚೇರಿಗಳಲ್ಲಿ ಫೋಟೋ/ವಿಡಿಯೋ ತೆಗೆಯಬಾರದು ಎಂದು ನಿರ್ಬಂಧ ಹೇರಿ ಆದೇಶ ಹೊರಡಿಸಿದ್ದು, ಅದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾದ್ದರಿಂದ ಮಧ್ಯರಾತ್ರಿಯಲ್ಲೇ ಆ ಆದೇಶವನ್ನು ಹಿಂಪಡೆದಿತ್ತು. ಅದರಲ್ಲೂ ಕನ್ನಡ ಬರಹದಲ್ಲಿ ಹಲವಾರು ತಪ್ಪುಗಳಿದ್ದರಿಂದ ಮತ್ತೆ ತೀವ್ರ ಟೀಕೆಗೆ ಒಳಗಾಗಿತ್ತು. ಆ ನಂತರ ಪರಿಷ್ಕೃತ ಆದೇಶ ಹೊರಡಿಸಿದ್ದರೂ ಅದು ತಪ್ಪುಗಳಿಂದ ಸಂಪೂರ್ಣ ಮುಕ್ತವಾಗಿರಲಿಲ್ಲ. ಹೀಗೆ ಆದೇಶ ಹೊರಡಿಸುವಲ್ಲಿ ಸರ್ಕಾರ ಪದೇಪದೆ ಎಡವುತ್ತಿರುವುದು, ಬಳಿಕ ಅದನ್ನು ವಾಪಸ್ ಪಡೆಯುತ್ತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ ಆಗುತ್ತಿದ್ದು, ಸರ್ಕಾರ ಮುಜುಗರ ಅನುಭವಿಸುವಂತಾಗಿದೆ.

    ಸರ್ಕಾರದಿಂದ ಮತ್ತೊಂದು ಎಡವಟ್ಟು!; ಜೀವಂತ ಇರದವರಿಗೂ ಸದಸ್ಯ ಸ್ಥಾನ?

    ತಪ್ಪು ಆದೇಶದ ಬಳಿಕ ಸರ್ಕಾರ ಮತ್ತೊಂದು ಎಡವಟ್ಟು; ದಸರಾಗೆ ‘ಹಳೇ ಕಾರ್ಯಸೂಚಿ’?

    ಕನ್ನಡ ತಪ್ಪಾಗಿ ಬರೆದು ಸರ್ಕಾರಿ ಆದೇಶ; ಸಂಬಂಧಿತರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ..

    ಮಧ್ಯರಾತ್ರಿ ಮಾಡಿದ ತಪ್ಪನ್ನು ಬೆಳಗಾದ ಮೇಲೆ ತಿದ್ದಿಕೊಂಡ ಸರ್ಕಾರ: ವಾಪಸ್ ಪಡೆದ ಆದೇಶಕ್ಕೆ ಮತ್ತೊಮ್ಮೆ ತಿದ್ದುಪಡಿ!

    ಸರ್ಕಾರದ ಈ ಆದೇಶಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ!; ಆರ್ಡರ್ ಹಿಂಪಡೆಯಲು ಆಗ್ರಹ..

    ಜನಾಕ್ರೋಶಕ್ಕೆ ಮಣಿದ ಸರ್ಕಾರ: ಸರ್ಕಾರಿ ಕಚೇರಿಗಳಲ್ಲಿ ಫೋಟೋ-ವಿಡಿಯೋ ಶೂಟಿಂಗ್​ ಬ್ಯಾನ್​ ಆದೇಶ ವಾಪಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts