More

    ಪ್ರಾಥಮಿಕ ಆರೋಗ್ಯ ಕೇಂದ್ರಕ್ಕಿಲ್ಲ ವೈದ್ಯಾಧಿಕಾರಿ

    ಗಂಗೊಳ್ಳಿ: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೈದ್ಯಾಧಿಕಾರಿ ವೈಯಕ್ತಿಕ ಕಾರಣದಿಂದ ರಾಜೀನಾಮೆ ನೀಡಿದ್ದು ಕೇಂದ್ರದಲ್ಲಿ ವೈದ್ಯಾಧಿಕಾರಿ ಇಲ್ಲದೆ ರೋಗಿಗಳು ಪರದಾಡುವ ಸ್ಥಿತಿ ಉದ್ಭವಿಸಿದೆ. ಒಂದು ವರ್ಷದಿಂದ ಕಾಯಂ ವೈದ್ಯಾಧಿಕಾರಿ ಇಲ್ಲದೆ ಜನರ ಆಕ್ರೋಶಕ್ಕೆ ಕಾರಣವಾಗಿದ್ದ ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಿಂಗಳ ಹಿಂದೆ ವೈದ್ಯಾಧಿಕಾರಿ ನೇಮಕವಾಗಿತ್ತು. ಅವರು ಒಂದು ವಾರದ ಹಿಂದೆ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮತ್ತೆ ವೈದ್ಯಾಧಿಕಾರಿ ಕೊರತೆ ಕಾಡಲಾರಂಭಿಸಿದ್ದು, ಚಿಕಿತ್ಸೆಗೆ ಬರುವವರು ಪರದಾಡುವಂತಾಗಿದೆ. ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಾಯಂ ವೈದ್ಯಾಧಿಕಾರಿಗಳನ್ನು ನೇಮಕ ಮಾಡುವಂತೆ ಸ್ಥಳೀಯರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಗಂಗೊಳ್ಳಿ, ಹೆಮ್ಮಾಡಿ, ಕಟ್‌ಬೆಲ್ತೂರು ಹಾಗೂ ತಲ್ಲೂರು ಗ್ರಾಪಂಗಳನ್ನೊಳಗೊಂಡ ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ 4 ಗ್ರಾಮಗಳ ಸುಮಾರು 30 ಸಾವಿರ ಜನಸಂಖ್ಯೆಯಿದ್ದು, 7 ಉಪ ಕೇಂದ್ರಗಳು ಬರುತ್ತವೆ. ಗಂಗೊಳ್ಳಿ ಎ ಮತ್ತು ಬಿ, ಕಟ್‌ಬೆಲ್ತೂರು, ತಲ್ಲೂರು, ಹೆಮ್ಮಾಡಿ, ಉಪ್ಪಿನಕುದ್ರು ಹಾಗೂ ದೇವಲ್ಕುಂದ ಈ ಉಪಕೇಂದ್ರಗಳು. ಕುಂದಾಪುರ ತಾಲೂಕು ಕೇಂದ್ರದಿಂದ ಗಂಗೊಳ್ಳಿಗೆ ಸುಮಾರು 18 ಕಿ.ಮೀ.ಗೂ ಹೆಚ್ಚು ದೂರವಿದ್ದು, ಸದಾ ಚಟುವಟಿಕೆಯಿಂದ ಕೂಡಿರುವ ಮೀನುಗಾರಿಕಾ ಬಂದರು ಪ್ರದೇಶವಾಗಿದೆ. ಪ್ರತಿನಿತ್ಯ ಸಹಸ್ರಾರು ಮಂದಿ ಮೀನುಗಾರರು, ಕಾರ್ಮಿಕರು ಗಂಗೊಳ್ಳಿಗೆ ಆಗಮಿಸುತ್ತಿದ್ದಾರೆ. ಈಗ ದಿನಕ್ಕೆ ಸುಮಾರು 125ಕ್ಕೂ ಹೆಚ್ಚು ಮಂದಿ ರೋಗಿಗಳು ಚಿಕಿತ್ಸೆ ಹಾಗೂ ತಪಾಸಣೆ ಮಾಡಿಕೊಳ್ಳಲು ಬರುತ್ತಿದ್ದಾರೆ.

    ಮೀನುಗಾರಿಕಾ ಬಂದರು ಪ್ರದೇಶವಾಗಿರುವ ಗಂಗೊಳ್ಳಿಯಲ್ಲಿ ಮೀನುಗಾರರೇ ಹೆಚ್ಚಿದ್ದು, ಇಲ್ಲಿನ ಜನರ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಇಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಾಯಂ ವೈದ್ಯಾಧಿಕಾರಿ ನೇಮಕ ಮಾಡಬೇಕಿದೆ. ಕಾಯಂ ವೈದ್ಯಾಧಿಕಾರಿಗಳಿಲ್ಲದೆ ಬಡ ರೋಗಿಗಳಿಗೆ ಸಮಸ್ಯೆಯಾಗುತ್ತಿದೆ. ಶೀಘ್ರ ವೈದ್ಯಾಧಿಕಾರಿ ನೇಮಕಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು.
    -ಬಿ.ಸದಾನಂದ ಶೆಣೈ, ಮಾಜಿ ಮಂಡಲ ಪ್ರಧಾನ, ಗಂಗೊಳ್ಳಿ

    ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ವೈಯಕ್ತಿಕ ಕಾರಣದಿಂದ ರಾಜೀನಾಮೆ ನೀಡಿದ್ದಾರೆ. ರೋಗಿಗಳಿಗೆ ತೊಂದರೆಯಾಗದಂತೆ ಇನ್ನೊಬ್ಬರನ್ನು ನಿಯೋಜಿಸಲಾಗಿದೆ. ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಾಯಂ ವೈದ್ಯಾಧಿಕಾರಿ ನೇಮಕಕ್ಕೆ ಸರ್ಕಾರಕ್ಕೆ ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸಲಾಗುವುದು.
    -ಡಾ.ನಾಗಭೂಷಣ ಉಡುಪ, ತಾಲೂಕು ಆರೋಗ್ಯಾಧಿಕಾರಿ ಕುಂದಾಪುರ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts