More

    ಜಾನುವಾರು ಸಂರಕ್ಷಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲ

    ಪಾಂಡವಪುರ: ಬರ ಪರಿಹಾರ ನಿರ್ವಹಣೆ ಹಾಗೂ ಜಾನುವಾರು ಸಂರಕ್ಷಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎಂ.ಆರ್.ಕುಮಾರಸ್ವಾಮಿ ಆರೋಪಿಸಿದರು.

    ರಾಜ್ಯದಲ್ಲಿ 1.15 ಕೋಟಿ ಪ್ರಮುಖ, 1.72 ಕೋಟಿ ಸಣ್ಣ-ಪುಟ್ಟ ಜಾನುವಾರುಗಳಿವೆ. ಹಸು, ಎಮ್ಮೆ ಸೇರಿದಂತೆ ಪ್ರಮುಖ ಜಾನುವಾರುಗಳಿಗೆ ನಿತ್ಯ 6 ಕೆ.ಜಿ ಒಣ ಮೇವು ಹಾಗೂ ಕುರಿ, ಮೇಕೆ, ಆಡು ಇತರ ಸಣ್ಣಪುಟ್ಟ ಜಾನುವಾರುಗಳಿಗೆ ಅರ್ಧ ಕೆ.ಜಿ ಒಣ ಮೇವಿನ ಅವಶ್ಯಕತೆ ಇದೆ. ಬರಗಾಲ ನಡುವೆಯೂ ರಾಜ್ಯ ಸರ್ಕಾರ ಜಾನುವಾರುಗಳ ರಕ್ಷಣೆಗೆ ಮುಂದಾಗಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

    ಹಸಿರು ಮೇವು ಉತ್ಪಾದಿಸಲು ರೈತರಿಗೆ ಬಿತ್ತನೆ ಬೀಜ ವಿತರಿಸಲಾಗಿದೆ ಎಂದು ಸರ್ಕಾರ ಹೇಳುತ್ತಿದೆಯಾದರೂ ಪರಿಣಾಮಕರಿಯಾಗಿ ಅನುಷ್ಠಾನಗೊಂಡಿಲ್ಲ. ಹಸಿರು ಮೇವು ಬೆಳೆಯಲು ಗೋಮಾಳ ಮತ್ತು ಖಾಲಿ ಜಾಗ ಗುರುತಿಸಿ ಮೇವು ಬೆಳೆಯಬೇಕಿತ್ತು. ಆದರೆ ಈ ರೀತಿಯ ಮೇವು ಎಲ್ಲೂ ಕಂಡು ಬಂದಿಲ್ಲ. ಅಲ್ಲದೆ ಜಾನುವಾರುಗಳಿಗೆ ಆರೋಗ್ಯ ತಪಾಸಣೆಯೂ ನಡೆಯುತ್ತಿಲ್ಲ ಎಂದು ದೂರಿದರು.

    ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ರಾಜ್ಯದಲ್ಲಿ 460 ಶಿಬಿರ ಅವಶ್ಯಕತೆ ಇದ್ದು, ಎಷ್ಟು ಜಿಲ್ಲೆಗಳಲ್ಲಿ ಶಿಬಿರ ಆಯೋಜಿಸಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಬೇಕು. ರಾಜ್ಯದ 713 ಹೋಬಳಿಗಳಲ್ಲಿ ಮೇವು ಬ್ಯಾಂಕ್ ತೆರೆಯಬೇಕಿತ್ತು. ಆದರೆ ಎಲ್ಲಿಯೂ ಮೇವು ಡಿಪೋಗಳನ್ನು ತೆರೆದಿಲ್ಲ. ಜತೆಗೆ ಸಾಂಕ್ರಾಮಿಕ ರೋಗ ತಡೆಗಟ್ಟಲು ಚುಚ್ಚುಮದ್ದು, ಪ್ರತಿ ಜೀವಕ ಔಷಧ ಮತ್ತಿತರ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿಲ್ಲ. ಪೂರಕ ಪೋಷಣೆ ಔಷಧ ವಿತರಿಸದ ಕಾರಣ ಕಳಪೆ ಸಂತಾನೋತ್ಪತ್ತಿಯಾಗುವ ಸಾಧ್ಯತೆಯಿದ್ದು, ಹಾಲಿನ ಉತ್ಪಾದನೆ ಕಡಿಮೆಯಾಗಲಿದೆ ಎಂದು ಟೀಕಿಸಿದರು.

    ಕೆಆರ್‌ಎಸ್, ಹೇಮಾವತಿ, ಹಾರಂಗಿ ಮತ್ತು ಕಬಿನಿ ಜಲಾಶಯಗಳಲ್ಲಿ ಹೂಳು ತುಂಬಿಕೊಂಡು ನೀರಿನ ಸಂಗ್ರಹ ಕಡಿಮೆಯಾಗಿದೆ. ಸರ್ಕಾರ ಈ ಎಲ್ಲ ಜಲಾಶಯಗಳಲ್ಲಿನ ಹೂಳು ತೆಗೆಯಲು ಕ್ರಮ ವಹಿಸಿದರೆ 8.5 ಟಿಎಂಸಿ ನೀರಿನ ಸಂಗ್ರಹ ಹೆಚ್ಚಾಗಲಿದೆ. ಇದರಿಂದ ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಗೆ ಕುಡಿಯುವ ನೀರು ಒದಗಿಸಲು ಅನುಕೂಲವಾಗಲಿದೆ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.


    ಪರಿಶಿಷ್ಟ ಜಾತಿ ಮತ್ತು ಪಂಗಡ ಜಿಲ್ಲಾ ಕಾರ್ಯದರ್ಶಿ ಪುಟ್ಟರಾಜು, ಪಿಎಲ್‌ಡಿ ಬ್ಯಾಂಕ್ ಮಾಜಿ ನಿರ್ದೇಶಕ ಕಣಿವೆ ಮಹೇಶ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts