More

    ಬೇಷರತ್ ಕ್ಷಮೆ ಯಾಚಿಸಿದ ಸರ್ಕಾರ

    ಹುಬ್ಬಳ್ಳಿ: ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಹೊರಡಿಸಲಾಗಿದ್ದ ವಾರ್ಡ್ ಮರುವಿಂಗಡಣೆ ಹಾಗೂ ಮೀಸಲಾತಿ ಅಧಿಸೂಚನೆಗಳನ್ನು, ನ್ಯಾಯಾಲಯಕ್ಕೆ ನೀಡಿದ್ದ ಭರವಸೆಯಂತೆ ಹಿಂಪಡೆಯದೆ ವಿಳಂಬ ಮಾಡಿದ್ದಕ್ಕೆ ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಬೇಷರತ್ತಾಗಿ ಹೈಕೋರ್ಟ್​ನ ಕ್ಷಮೆ ಯಾಚಿಸಿದ್ದಾರೆ.

    ಅಲ್ಲದೆ, ಆದಷ್ಟು ಬೇಗ ಚುನಾವಣೆ ನಡೆಸಲು ಬದ್ಧವಿರುವುದಾಗಿಯೂ ಅಫಿಡವಿಟ್ ಮೂಲಕ ಸ್ಪಷ್ಟಪಡಿಸಿದ್ದಾರೆ.

    ಪಾಲಿಕೆಗೆ ಶೀಘ್ರ ಚುನಾವಣೆ ನಡೆಸಲು ಸರ್ಕಾರ ಹಾಗೂ ಚುನಾವಣೆ ಆಯೋಗಕ್ಕೆ ನಿರ್ದೇಶಿಸಲು ಕೋರಿ ನಾಗರಾಜ ಗೌರಿ ಮತ್ತು ಗುರುನಾಥ-ಲೋಹಿತ ಎಂಬುವವರು ಸಲ್ಲಿಸಿದ್ದ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠ ಸೋಮವಾರ ವಿಚಾರಣೆ ನಡೆಸಿತು.

    ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರ ಪ್ರಮಾಣಪತ್ರವನ್ನು ನ್ಯಾಯಪೀಠಕ್ಕೆ ಸಲ್ಲಿಸಿದ ಸರ್ಕಾರದ ಪರ ವಕೀಲರು, ಪಾಲಿಕೆಯ ವಾರ್ಡ್ ಮರುವಿಂಗಡಣೆ ಮತ್ತು ಮೀಸಲು ಸಂಬಂಧ ಹೊರಡಿಸಿದ ಅಧಿಸೂಚನೆ ಹಿಂಪಡೆಯಲು ವಿಳಂಬವಾಗಿದೆ. ಅದಕ್ಕಾಗಿ ಬೇಷರತ್ ಕ್ಷಮೆಯಾಚಿಸುವುದಾಗಿ ತಿಳಿಸಿದರು. ಜತೆಗೆ, ಪಾಲಿಕೆಗೆ ಶೀಘ್ರ ಚುನಾವಣೆ ನಡೆಸಲು ಎಲ್ಲ ಕ್ರಮ ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಹೈಕೋರ್ಟ್ ನೀಡುವ ಯಾವುದೇ ನಿರ್ದೇಶನಗಳಿಗೆ ಸರ್ಕಾರ ಬದ್ಧವಿದೆ ಎಂದು ತಿಳಿಸಿದರು.

    ಅದನ್ನು ದಾಖಲಿಸಿಕೊಂಡ ಪೀಠ, ಇಂಥದೇ ಸನ್ನಿವೇಶವಿರುವ ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದ ಮತ್ತೊಂದು ಅರ್ಜಿ ಕುರಿತು ವಿಸõತವಾದ ವಿಚಾರಣೆ ನಡೆಸಲಾಗಿದ್ದು, ಆ ಅರ್ಜಿಯ ತೀರ್ಪು ಕಾಯ್ದಿರಿಸಲಾಗಿದೆ. ಅದೇ ಅರ್ಜಿಯ ತೀರ್ಪಿನಲ್ಲಿ ಈ ಪ್ರಕರಣದ ಬಹುತೇಕ ವಿಚಾರಗಳು ಒಳಗೊಂಡಿರುತ್ತವೆ. ಆದ್ದರಿಂದ, ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದ ತೀರ್ಪು ಪ್ರಕಟಿಸಿದ ನಂತರ ಈ ಅರ್ಜಿಯನ್ನು ಪರಿಗಣಿಸಲಾಗುವುದು ಎಂದು ತಿಳಿಸಿ ವಿಚಾರಣೆಯನ್ನು ಡಿ. 10ಕ್ಕೆ ಮುಂದೂಡಿತು.

    ಪ್ರಕರಣವೇನು?

    ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ 2017ರ ಫೆ. 28ರಂದು ವಾರ್ಡ್ ಮರುವಿಂಗಡಣೆ ಅಧಿಸೂಚನೆ ಹೊರಡಿಸಿದ್ದ ಸರ್ಕಾರ, 2018ರ ಆ. 10ರಂದು ಮೀಸಲಾತಿ ಕಲ್ಪಿಸಿ ಅಧಿಸೂಚನೆ ಪ್ರಕಟಿಸಿತ್ತು. ಈ ಎರಡೂ ಅಧಿಸೂಚನೆಗಳನ್ನು ಪ್ರಶ್ನಿಸಿ ಧಾರವಾಡ ಹೈಕೋರ್ಟ್ ಪೀಠದಲ್ಲಿ ತಕರಾರು ಅರ್ಜಿಗಳು ಸಲ್ಲಿಕೆಯಾಗಿದ್ದವು. ಹೈಕೋರ್ಟ್ 2018ರ ನ. 27ಂದು ಅಧಿಸೂಚನೆಗಳಿಗೆ ತಡೆ ನೀಡಿತ್ತು. ಈ ಮಧ್ಯೆ ಕಾನೂನು ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಅಧಿಸೂಚನೆ ಹಿಂಪಡೆಯುವ ನಿರ್ಧಾರಕ್ಕೆ ಬಂದಿದ್ದ ಸರ್ಕಾರ, ಆ ಸಂಬಂಧ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿತ್ತು.

    ಅದನ್ನು ಪರಿಗಣಿಸಿದ್ದ ಹೈಕೋರ್ಟ್, 2019ರ ಸೆ. 26ರಂದು ಅರ್ಜಿ ಇತ್ಯರ್ಥಪಡಿಸಿತ್ತು. ಆದರೆ, ಸರ್ಕಾರ ಅಧಿಸೂಚನೆಗಳನ್ನು ಹಿಂಪಡೆದಿರಲಿಲ್ಲ. ಮತ್ತೊಂದೆಡೆ ಪಾಲಿಕೆಗೆ ಚುನಾವಣೆಯನ್ನೂ ನಡೆಸಿರಲಿಲ್ಲ. ಇದರಿಂದ, ನಾಗರಾಜ ಗೌರಿ ಮತ್ತಿತರರು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

    ಅರ್ಜಿಯು ಕಳೆದ ಅ.21ರಂದು ಸಿಜೆ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಆಗ ನ್ಯಾಯಪೀಠ, 2019ರ ಸೆ.26ರ ಹೈಕೋರ್ಟ್ ಆದೇಶದಂತೆ ಅಧಿಸೂಚನೆ ಹಿಂಪಡೆದ ದಾಖಲೆ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿತ್ತು. ಆದರೆ, ಸರ್ಕಾರ ಕಳೆದ ನ.12ರಂದು ಅಧಿಸೂಚನೆ ಹಿಂಪಡೆದು ಪ್ರಮಾಣಪತ್ರ ಸಲ್ಲಿಸಿತ್ತು. ನ.13ರಂದು ವಿಚಾರಣೆಗೆ ಬಂದಾಗ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿದ್ದ ಹೈಕೋರ್ಟ್, ಅರ್ಜಿ ವಿಚಾರಣೆಗೆ ಬರುವ ಒಂದು ದಿನ ಮೊದಲು ಅಧಿಸೂಚನೆ ಹಿಂಪಡೆದು ಪ್ರಮಾಣಪತ್ರ ಸಲ್ಲಿಸಲಾಗಿದೆ. ಇದು ಕೋರ್ಟ್ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ. ಸಂವಿಧಾನದ ಪರಿಚ್ಛೇದ 243(ಯು) ನಿಯಮಗಳಿಗೆ ಅಗೌರವ ತೋರಿದಂತಾಗಿದೆ. ಆದ್ದರಿಂದ ನ. 12ರವರೆಗೂ ಅಧಿಸೂಚನೆ ಹಿಂಪಡೆಯದ ಬಗ್ಗೆ ನ್ಯಾಯಾಲಯಕ್ಕೆ ಏಕೆ ಮಾಹಿತಿ ನೀಡಲಿಲ್ಲ ಎಂಬ ಬಗ್ಗೆ ವಿವರಣೆ ನೀಡಿ ಪ್ರಮಾಣಪತ್ರ ಸಲ್ಲಿಸುವಂತೆ ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ತಾಕೀತು ಮಾಡಿತ್ತು.

    ಅಂತೂ ಸನ್ನಿಹಿತ

    ಹುಬ್ಬಳ್ಳಿ: ಕಳೆದ 21 ತಿಂಗಳಿಂದ ಜನಪ್ರತಿನಿಧಿಗಳ ಆಡಳಿತದಿಂದ ದೂರವಾಗಿದ್ದ ಹು-ಧಾ ಮಹಾನಗರ ಪಾಲಿಕೆಗೆ ಚುನಾವಣೆ ಸನ್ನಿಹಿತವಾಗುವುದು ಬಹುತೇಕ ಖಚಿತಗೊಂಡಿದೆ.

    2019 ಮಾರ್ಚ್ 6ರಂದು ಪಾಲಿಕೆಯಲ್ಲಿ ಬಿಜೆಪಿ ಆಡಳಿತ ಕೊನೆಗೊಂಡಿತ್ತು. ಅವಧಿ ಮುಗಿದ ತಕ್ಷಣ ಸರ್ಕಾರ ಚುನಾವಣೆ ಘೋಷಿಸಬೇಕಿತ್ತು. ಆದರೆ, ಕೆಲವರು ರಾಜ್ಯ ಸರ್ಕಾರ ಪ್ರಕಟಿಸಿದ್ದ ವಾರ್ಡ್​ವಾರು ಮೀಸಲಾತಿ ಪ್ರಶ್ನಿಸಿ ನ್ಯಾಯಾಲಯಕ್ಕೆ ಹೋಗಿದ್ದರು.

    ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದಾಗ ಹು-ಧಾ ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ 2 ಬಾರಿ ವಾರ್ಡ್​ವಾರು ಮೀಸಲಾತಿ ಪ್ರಕಟಿಸಲಾಗಿತ್ತು. ಇದಕ್ಕೂ ಮೊದಲು ಪಾಲಿಕೆಯ ವಾರ್ಡ್​ಗಳ ಸಂಖ್ಯೆಯನ್ನು 67 ರಿಂದ 82ಕ್ಕೆ ಏರಿಸಲಾಗಿತ್ತು. ಮೀಸಲಾತಿ ಹಾಗೂ ವಾರ್ಡ್ ಮರು ವಿಂಗಡಣೆ ಪ್ರಶ್ನಿಸಿ ಸಂಜಯ ಕಪಟಕರ, ವೆಂಕಟೇಶ ಮೇಸ್ತ್ರಿ, ಕೃಷ್ಣ ಗಂಡಗಾಳೇಕರ, ಮಹಾವೀರ ಶಿವಣ್ಣವರ್ ಸೇರಿ 14 ಜನ ನ್ಯಾಯಾಲಯದಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದರು. ಈಗ 67 ವಾರ್ಡ್​ಗಷ್ಟೇ ಚುನಾವಣೆ ನಡೆಯುವ ಮತ್ತು ಹಳೆಯ ಮೀಸಲಾತಿಯೇ ಅನ್ವಯವಾಗುವ ಸಾಧ್ಯತೆ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts