More

    ಸರ್ಕಾರಿ ನೌಕರರ ಒಕ್ಕೂಟ ರಾಷ್ಟ್ರಮಟ್ಟದ ಮುಷ್ಕರ ನಡೆಸಲು ಕರೆ

    ಗದಗ: ವೇತನ ಪರಿಷ್ಕರಣೆ, ಸರ್ಕಾರಿ ಹುದ್ದೆಗಳ ನೇಮಕ, ಎನ್ ಪಿ ಸ್ ರದ್ದು ಸೇರಿದಂತೆ ವಿವಿಧ ಬೇಡಿಕೆ ಆಗ್ರಹಿಸಿ ಫೆ. 16 ರಂದು ಅಖಿಲ ಭಾರತ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ರಾಷ್ಟ್ರ ಮಟ್ಟದ ಮುಷ್ಕರ ನಡೆಸಲು ಕರೆ ನೀಡಲಾಗಿದೆ ಎಂದು ಒಕ್ಕೂಟದ ರಾಜ್ಯಾಧ್ಯಕ್ಷ ಜೈಕುಮಾರ್ ಹೆಚ್.ಎಸ್ ಹೇಳಿದರು.

    ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಪಿ.ಎಫ್.ಆರ್.ಡಿ.ಎ ಕಾಯಿದೆ, NPS ರದ್ದುಪಡಿಸಿ ಹಳೆಯ ಪಿಂಚಣಿ ಪದ್ಧತಿ ಮರುಸ್ಥಾಪಿಸುವುದು, 7ನೇ ವೇತನ ಪರಿಷ್ಕರಣೆ ಜಾರಿಗೊಳಿಸುವುದು, ಹೊರಗುತ್ತಿಗೆ,ಗುತ್ತಿಗೆ ನೌಕರರ ನಿಯಮಾನುಸಾರ ಖಾಯಂ ನೇಮಕಾತಿ ನಡೆಯಬೇಕು ಎಂದು ಆಗ್ರಹಿಸಿದರು.

    ಕೇಂದ್ರ ಸರ್ಕಾರದ ನೀತಿಗಳು, ದೈನಂದಿನ ಸರಕು ಸೇವೆಗಳ ಬೆಲೆಯೇರಿಕೆ, ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಹಾಗೂ ಅಗತ್ಯ ವಸ್ತುಗಳ ಬೆಲೆಗಳ ಹೆಚ್ಚಳದಿಂದ ಸಾಮಾನ್ಯ ವರ್ಗ ಜೀವನ ದುಸ್ತರ ಆಗಿದೆ. ಕಾರ್ಪೊರೇಟ್ ಕಂಪನಿಗಳಿಗೆ ಹೆಚ್ಚಿನ ಲಾಭ ಹರಿದು ಹೋಗಲು ಕೇಂದ್ರದ ನೀತಿಗಳು ಸಹಕಾರಿಯಾಗಿವೆ. ದೇಶದ ಸಾರ್ವಜನಿಕ ರಂಗದ ಉದ್ದಿಮೆಗಳಾದ ರೈಲ್ವೇ, ವಿದ್ಯುಚ್ಛಕ್ತಿ. ವಿಮಾ ರಂಗ, ಬ್ಯಾಂಕ್ ಮತ್ತು ಹಣಕಾಸು ವಲಯ, ದೂರಸಂಪರ್ಕ, ವಿಮಾನ ವಲಯ, ಬಂದರುಗಳು ಮತ್ತು ಹೆದ್ದಾರಿಗಳು, ರಕ್ಷಣಾ ವಲಯ, ಎಲ್.ಐ.ಸಿ. ಇತ್ಯಾದಿ ಸಾರ್ವಜನಿಕ ಉದ್ದಿಮೆಗಳನ್ನು ಬೃಹತ್ ಪ್ರಮಾಣದಲ್ಲಿ ಖಾಸಗೀಕರಿಸಿ ಕಾರ್ಪೊರೇಟ್ ಕಂಪನಿಗಳಿಗೆ ಖಾಸಗೀಕರಣ ನೀತಿಗಳ ಮೂಲಕ ಮಾರಾಟ ಮಾಡಲಾಗುತ್ತಿದೆ ಎಂದು ಜೈಕುಮಾರದ ಆರೋಪಿಸಿದರು.

    ರಾಜ್ಯ ಪ್ರಧಾನ ಕಾರ್ಯದರ್ಶಿ, ಎನ್ ಶೋಭಾಲೋಕ ನಾಗಣ್ಣ ಮಾತನಾಡಿದ ಅವರು, ಮೀಸಲಾತಿಯಡಿ ಬರುವ ಅಭ್ಯರ್ಥಿಗಳಿಗೆ ಅನ್ಯಾಯ ಮಾಡಲಾಗುತ್ತಿದೆ. ರಾಜ್ಯದಲ್ಲಿಯೂ ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ಪ್ರಕ್ರಿಯೆ ಹಿಂಪಡೆಯಬೇಕಿದೆ. ಕೇಂದ್ರ ಸರ್ಕಾರವು ಪಿ.ಎಫ್.ಆರ್.ಡಿ.ಎ ಕಾಯಿದೆ, ಎನ್.ಪಿ.ಎಸ್ ಪದ್ಧತಿಯ ಮೂಲಕ ನೌಕರರ ಪಿಂಚಣಿ ಹಣವನ್ನು ಷೇರುಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಕಾರ್ಪೊರೇಟ್ ಕಂಪನಿಗಳಿಗೆ ಹರಿದು ಹೋಗುವಂತೆ ಮಾಡಿದೆ. ಈ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರವು ಪಿ.ಎಫ್.ಆರ್.ಡಿ.ಎ ಕಾಯಿದೆಯನ್ನು ರದ್ದುಗೊಳಿಸಿ ಎಂದು ಆರೋಪಿಸಿದರು.

    2016ರಲ್ಲಿ ಸುಪ್ರೀಂ ಕೋರ್ಟ್ ಆದೇಶವಿದ್ದರೂ ರಾಜ್ಯದಲ್ಲಿ ಗುತ್ತಿಗೆ, ದಿನಗೂಲಿ, ಹೊರಗುತ್ತಿಗೆ ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡದೆ ಹೊರಗುತ್ತಿಗೆ ಏಜೆನ್ಸಿಗಳು ಶೋಷಣೆ ಮಾಡುತ್ತಿವೆ. ದೇಶದಾದ್ಯಂತ ಸರ್ಕಾರಿ ಇಲಾಖೆಗಳು, ನಿಗಮ, ಮಂಡಳಿಗಳು, ಸಾರ್ವಜನಿಕ ಉದ್ದಿಮೆಗಳಲ್ಲಿ ಖಾಲಿ ಇರುವ 60 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಿಲ್ಲ.‌ ಅನುಕಂಪ ಆಧಾರಿತ ನೌಕರಿ ನೀಡಲು ಹಲವು ನಿಬಂಧನೆಗಳನ್ನು ವಿಧಿಸಲಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೌಕರ ವಿರೋಧಿ ಅಂಶಗಳನ್ನು, ನಿಯಮಗಳಿಂದ ಕೈಬಿಡಬೇಕಿದೆ ಎಂದು ತಿಳಿಸಿದರು.

    ಮಹದೇವಯ್ಯ ಮಠಪತಿ, ಬಸವರಾಜ್ ಪೂಜಾರ್ ಇತರರು ಇದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts