More

    ಉತ್ತಮ ಸೇವೆ ಸಲ್ಲಿಸಿದರೆ ಸಮಾಜದ ಗೌರವ ಸಿಗುತ್ತದೆ: ಶಾಲಿನಿ ರಜನೀಶ್

    ಬೆಂಗಳೂರು: ಮಹಿಳೆಯರು ಸರ್ಕಾರದ ಉನ್ನತ ಮಟ್ಟದ ಹುದ್ದೆ ಮತ್ತು ನ್ಯಾಯಾಂಗ ಕ್ಷೇತ್ರದಲ್ಲೂ ಹಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಬೇಕು ಎಂದು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಹೇಳಿದರು.

    ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಕರ್ನಾಟಕ ಸರ್ಕಾರ ಸಚಿವಾಲಯ ನೌಕರರ ಸಂಘದ ಸಹಯೋಗದಲ್ಲಿ ನೌಕರರ ಸಂಘದ ಆವರಣದಲ್ಲಿ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

    ಮಹಿಳೆಯರು ಇತ್ತೀಚಿನ ವರ್ಷಗಳಲ್ಲಿ ಸರ್ಕಾರಿ ಉದ್ಯೋಗದಲ್ಲಿ ಹೆಚ್ಚಿನ ಅವಕಾಶ ಬಳಸಿಕೊಳ್ಳುತ್ತಿರುವುದು ಸಂತೋಷದ ಸಂಗತಿ. ಜನಸಾಮಾನ್ಯರು ಸರ್ಕಾರಿ ನೌಕರರಿಂದ ಪ್ರೀತಿ ಮತ್ತು ಉತ್ತಮ ಸೇವೆ ನಿರೀಕ್ಷಿಸುತ್ತಾರೆ. ರಾಜ್ಯದ 7 ಕೋಟಿ ಜನಸಂಖ್ಯೆಗೆ ಶೇ. 1 ರಷ್ಟಿರುವ ನೌಕರರರು ಶೇ. 99 ಜನಸಂಖ್ಯೆಗೆ ಸೇವೆ ಸಲ್ಲಿಸುವ ಜವಾಬ್ದಾರಿ ಇದೆ ಎಂದರು.

    ಸರ್ಕಾರಿ ನೌಕರರು ಒಗ್ಗಟ್ಟಾಗಿ ಉತ್ತಮ ಸೇವೆ ಸಲ್ಲಿಸಿದಲ್ಲಿ ಸಮಾಜ ನಮ್ಮನ್ನು ಗೌರವಿಸುತ್ತದೆ ಎಂದು ತಿಳಿಸಿದರು. ಮಹಿಳಾ ನೌಕರರ ಒತ್ತಡ ನಿವಾರಣೆ ಹಾಗೂ ಆರೋಗ್ಯದ ದೃಷ್ಟಿಯಿಂದ ಕಾರ್ಯನಿರ್ವಹಿಸುವ ಸ್ಥಳಗಳಲ್ಲಿ ಶೌಚಾಲಯ, ವಿಶ್ರಾಂತಿ ಕೊಠಡಿ ನಿರ್ಮಾಣಕ್ಕೆ ಸಂಘಟನೆ ಗಮನಹರಿಸಬೇಕು.ಈ ಬಗ್ಗೆ ಸರ್ಕಾರದ ಇಲಾಖೆಗಳ ಸಹಕಾರ ಪಡೆಯಬೇಕು ಎಂದು ಹೇಳಿದರು.

    ಸರ್ಕಾರಿ ನೌಕರರ ಸಹಕಾರದಿಂದಾಗಿ ‘ಸಕಾಲ’ ಯೋಜನೆ ಯಶಸ್ಸಿಯಾಗಿದೆ. ಈ ಯೋಜನೆಯನ್ನು ಹಲವರು ರಾಜ್ಯ ಮತ್ತು ರಾಷ್ಟ್ರಗಳಲ್ಲಿ ಅಳವಡಿಸಿಕೊಂಡಿರುವುದು ರಾಜ್ಯದ ಹೆಮ್ಮೆ ಎಂದರು.

    ಸದೃಢ ಆಡಳಿತ ನೀಡಲು ಸಶಕ್ತರಾಗಿ

    ಪಂಚಾಯತ್ ರಾಜ್ ಆಯುಕ್ತಾಲಯದ ಆಯುಕ್ತೆ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಅಪರ ಕಾರ್ಯದರ್ಶಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಮಾತನಾಡಿ, ಮಹಿಳಾ ನೌಕರರು ಸಮರ್ಥ ಹಾಗೂ ಸದೃಢ ಆಡಳಿತ ನೀಡಲು ಅವರ ಕಾರ್ಯಕ್ಷೇತ್ರದಲ್ಲಿ ಸಶಕ್ತರಾಗಬೇಕು. ಮಹಿಳಾ ಸ್ವಾವಲಂಬನೆ ಮತ್ತು ಪ್ರತಿನಿಧಿತ್ವದ ನಾಯಕತ್ಟವನ್ನು ವಹಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.

    ಮಹಿಳೆಯರಿಗೆ ಸಂಘದಲ್ಲಿ ಪ್ರಾತಿನಿಧ್ಯ:

    ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿಎಸ್. ಪಡಾಕ್ಟರಿ ಮಾತನಾಡಿ, ಒಡಿಸ್ಸಾ ಸರ್ಕಾರದ ಮಾದರಿಯಲ್ಲಿ ರಾಜ್ಯದ ಮಹಿಳಾ ನೌಕರರಿಗೆ ವಾರ್ಷಿಕ 25 ಸಾಂದರ್ಭಿಕ ರಜೆ ನೀಡುವುದು ಮತ್ತು ಮಹಿಳಾ ನೌಕರರು ಕರ್ತವ್ಯ ನಿರ್ವಹಿಸುವ ಸ್ಥಳಗಳಲ್ಲಿ ಖಾಸಗಿ ವ್ಯಕ್ತಿಗಳು ಚಿತ್ರೀಕರಣ ಮಾಡದಂತೆ ಆದೇಶ ಮಾಡುವುದು ಆವಶ್ಯ ಎಂದು ತಿಳಿಸಿದರು. ಸರ್ಕಾರಿ ನೌಕರರ ಸಂಘದಲ್ಲಿ ಮಹಿಳಾ ನೌಕರರಿಗೆ ವಿವಿಧ ಹಂತದ ಪದಾಧಿಕಾರಿಗಳ ಹುದ್ದೆಯನ್ನು ನೀಡಲಾಗಿದೆ. ಮಹಿಳಾ ಸಲಹಾ ಕೇಂದ್ರವನ್ನು ಸ್ಥಾಪಿಸುವ ಮೂಲಕ ಮಹಿಳಾ ನೌಕರರ ಪರವಾದ ಸಂಘಟನೆಯಾಗಿದೆ ಎಂದು ಹೇಳಿದರು.

    ಬೆಂಗಳೂರು ನಗರದ ಸುಮಾರು 400ಕ್ಕೂ ಹೆಚ್ಚು ಮಹಿಳಾ ನೌಕರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವೇದಿಕೆಯಲ್ಲಿ ಮಹಿಳಾ ಪದಾಧಿಕಾರಿಗಳಾದ ಎಚ್.ಎಸ್. ಹೇಮಲತಾ, ಯಶೋಧ, ರುಚಿತಬಿ, ಕಲಾವತಿ, ಕೇಂದ್ರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸ್ ತಿಮ್ಮೇಗೌಡ, ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಬಿ. ಬಳ್ಳಾರಿ, ಗೌರವಾಧ್ಯಕ್ಷ ಬಿ.ಎಚ್. ವೆಂಕಟೇಶಯ್ಯ, ಖಜಾಂಚಿ ಡಾ. ಸಿದ್ದರಾಮಣ್ಣ, ಹಿರಿಯ ಉಪಾಧ್ಯಕರಾದ ಎಂ.ವಿ. ರುದ್ರಪ್ಪ, ಎಸ್.ಬಸವರಾಜು, ರಾಜ್ಯ ಕಾರ್ಯದರ್ಶಿಡಾ. ನೆಲ್ಕುದ್ರಿ ಸದಾನಂದಪ್ಪ, ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ರಮೇಶ್ ಸಂಗಾ, ಬಿ.ಬಿ.ಎಂ.ಪಿ. ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಮೃತ್ ರಾಜ್, ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts