More

    ಜಿಲ್ಲೆಯಲ್ಲಿ ಬೆಳೆ ಸಮೀಕ್ಷೆಗೆ ಉತ್ತಮ ಪ್ರತಿಕ್ರಿಯೆ

    ಮಧುಗಿರಿ: ರಾಜ್ಯ ಕೃಷಿ ಹಾಗೂ ಕಂದಾಯ ಇಲಾಖೆ ಜಾರಿಗೆ ತಂದಿರುವ ಹೊಸ ಮಾದರಿಯ ಬೆಳೆ ಸಮೀಕ್ಷೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 11,16,381 ಸರ್ವೇ ನಂಬರ್‌ಗಳ ಬೆಳೆ ಮಾಹಿತಿಯನ್ನು ರೈತರೇ ಅಪ್ಲೋಡ್ ಮಾಡಿದ್ದಾರೆ.

    10 ತಾಲೂಕುಗಳಲ್ಲಿ ಒಟ್ಟು 17,72,238 ಸರ್ವೇ ನಂಬರ್‌ಗಳ ಬೆಳೆ ಸಮೀಕ್ಷೆ ನಡೆಸಲು ಕ್ರಮ ಕೈಗೊಳ್ಳಲಾಗಿದ್ದು, ಈಗಾಗಲೇ 11,16,381 ಸರ್ವೇ ನಂಬರ್‌ಗಳಲ್ಲಿ ಬೆಳೆದಿರುವ ಬೆಳೆಯ ಮಾಹಿತಿ ಅಪ್ಲೋಡ್ ಆಗಿದೆ. ಇದರಲ್ಲಿ ಒಟ್ಟು 7,70,269 ಪ್ಲಾಟ್‌ಗಳಲ್ಲಿ ರೈತರೇ ಸಮೀಕ್ಷೆ ನಡೆಸಿದ್ದರೆ, 3,46,112 ಪ್ಲಾಟ್‌ಗಳ ಬೆಳೆ ಸಮೀಕ್ಷೆಯನ್ನು ಖಾಸಗಿ ವ್ಯಕ್ತಿಗಳಿಂದ ಕೈಗೊಳ್ಳಲಾಗಿದೆ. ಪ್ರಸ್ತುತ ಶೇ.65.09 ಪ್ರಗತಿ ದಾಖಲಿಸಲಾಗಿದೆ.

    ಏನಿದು ಬೆಳೆ ಸಮೀಕ್ಷೆ: ಬೆಳೆಗಳ ಸಮರ್ಪಕ ಮಾಹಿತಿ, ಪ್ರಕೃತಿ ವಿಕೋಪ, ಬರಗಾಲ ಮತ್ತು ಇತರ ಸಮಸ್ಯೆಗಳ ಸಂದರ್ಭದಲ್ಲಿ ನಷ್ಟದ ಅಂದಾಜು ಮಾಡಿ, ಪರಿಹಾರ ನೀಡಲು ಅನುಕೂಲವಾಗುವ ನಿಟ್ಟಿನಲ್ಲಿ ಈ ಬಾರಿ ರಾಜ್ಯ ಸರ್ಕಾರ ಇದೇ ಮೊದಲು ರೈತ ಬೆಳೆ ಸಮೀಕ್ಷೆ ಆ್ಯಪ್ ಬಿಡುಗಡೆ ಮಾಡಿದ್ದು, ಇದರಲ್ಲಿ ಸ್ವತಃ ರೈತರೇ ಅವರ ಜಮೀನಿನಲ್ಲಿನ ಬೆಳೆಯ ೆಟೋ ಸಮೇತ ದಾಖಲೆ ಅಪ್‌ಲೋಡ್ ಮಾಡುತ್ತಿದ್ದಾರೆ.

    ಅಪ್‌ಲೋಡ್ ಮಾಡುವುದು ಹೇಗೆ?: ಸ್ಮಾರ್ಟ್ ೆನ್ ಮೂಲಕ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಜಿಲ್ಲೆ, ತಾಲೂಕು ಮತ್ತು ಗ್ರಾಮ ನಮೂದಿಸಬೇಕು, ಬಳಿಕ ಜಮೀನಿನ ಸರ್ವೇ ನಂಬರ್ ನಮೂದಿಸಿ, ಬೆಳೆಯ ಚಿತ್ರಗಳನ್ನು ಸೆರೆ ಹಿಡಿದು ಆ್ಯಪ್‌ನಲ್ಲಿ ದಾಖಲಿಸಬೇಕು, ಮಾಹಿತಿ ಕೊರತೆಯಿಂದ ರೈತರು ಮಾಹಿತಿ ದಾಖಲಿಸದಿದ್ದಲ್ಲಿ ಕೃಷಿ ಇಲಾಖೆಯಿಂದ ನಿಯೋಜನೆಗೊಂಡಿರುವ ಖಾಸಗಿ ವ್ಯಕ್ತಿಗಳು ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆ ಸಮೀಕ್ಷೆ ಆ್ಯಪ್‌ಗೆ ದಾಖಲಿಸಲಿದ್ದು, ಇದಕ್ಕಾಗಿ ಜಿಲ್ಲೆಯಲ್ಲಿ ಒಟ್ಟು 2,062 ಖಾಸಗಿ ವ್ಯಕ್ತಿಗಳನ್ನು ನೇಮಿಸಲಾಗಿದೆ, ಇವರಿಗೆ ಕೃಷಿ ಇಲಾಖೆ ವಿಶೇಷ ತರಬೇತಿ ನೀಡಿದೆ. ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆಯ ಜಂಟಿ ಸಹಯೋಗದಲ್ಲಿ ಸರ್ವೇ ನಡೆಯಲಿದ್ದು, ದಾಖಲಾದ ಮಾಹಿತಿಯನ್ನು ತಾಲೂಕು ಆಡಳಿತ ಪರಿಶೀಲಿಸಲಿದೆ.

    ಗಡುವು ವಿಸ್ತರಣೆಗೆ ಒತ್ತಾಯ: ಸರ್ಕಾರ ಜಾರಿಗೆ ತಂದಿರುವ ರೈತ ಬೆಳೆ ಸಮೀಕ್ಷೆಗೆ ಮೊದಲ ವರ್ಷದಲ್ಲೇ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ, ಆದರೆ ಸಮೀಕ್ಷೆಗೆ ಸೆ.23 ಕೊನೆಯ ದಿನಾಂಕ ನಿಗದಿಗೊಳಿಸಿರುವುದು ಮಾಹಿತಿ ಕೊರತೆ ಹಾಗೂ ನೆಟ್‌ವರ್ಕ್ ಸಮಸ್ಯೆಯಿರುವ ಹಳ್ಳಿಗಾಡಿನಲ್ಲಿ ರೈತರು ಸಮೀಕ್ಷೆಯಿಂದ ಹೊರಗುಳಿಯುವ ಆತಂಕವಿದೆ, ಜಿಲ್ಲೆಯಲ್ಲಿ ಇದುವರೆಗೂ ಶೇ.65.09 ಮಾತ್ರ ಗುರಿ ಮುಟ್ಟಲಾಗಿದೆ, ಇದನ್ನು ಗಮನದಲ್ಲಿರಿಸಿಕೊಂಡು ಸರ್ಕಾರ ಗಡುವು ವಿಸ್ತರಿಸಬೇಕೆಂಬುದು ಜಿಲ್ಲೆಯ ರೈತರ ಒತ್ತಾಯ.

    ರೈತರೇ ಬೆಳೆ ಸಮೀಕ್ಷೆ ನಡೆಸಲು ಸೆ.23 ಕೊನೇ ದಿನವಾಗಿದೆ ವಾಗಿದೆ. ಆದರೆ ಕೃಷಿ ಇಲಾಖೆಯಿಂದ ನಿಯೋಜನೆಗೊಂಡ ಖಾಸಗಿ ವ್ಯಕ್ತಿಗಳಿಂದ ಸೆ.30ರವರೆಗೂ ಸಮೀಕ್ಷೆ ನಡೆಸಬಹುದಾಗಿದೆ. ಜಿಲ್ಲೆಯ ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು.
    ಎನ್.ವಿಜಯಾ ಮೂರ್ತಿ ಸಹಾಯಕ ನಿರ್ದೇಶಕಿ, ಕೃಷಿ ಇಲಾಖೆ ಪಾವಗಡ

    ರಾಜ್ಯ ಸರ್ಕಾರ ರೈತ ಬೆಳೆ ಆ್ಯಪ್ ಮೂಲಕ ಬೆಳೆಗಳ ಸರ್ವೇ ನಡೆಸುತ್ತಿರುವುದು ಸ್ವಾಗತಾರ್ಹ. ಆದರೆ, ಯಾವುದೇ ಯೋಜನೆಗಳಿಂದ ರೈತರಿಗೆ ಅನುಕೂಲವಾದಾಗ ಮಾತ್ರ ರೈತರ ಕಲ್ಯಾಣ ಸಾಧ್ಯ. ಸರ್ಕಾರ ಮೊದಲು ರೈತರ ಸಬಲೀಕರಣಕ್ಕಾಗಿ ಸಮರ್ಪಕ ನೀರಾವರಿ ಯೋಜನೆಗಳ ಜಾರಿಗೆ ಒತ್ತು ನೀಡಬೇಕು.
    ಶಂಕರಪ್ಪ ಜಿಲ್ಲಾ ಕಾರ್ಯದರ್ಶಿ, ರೈತ ಸಂಘ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts