More

    ಮೈದುಂಬಿ ಹರಿಯುತ್ತಿರುವ ಚೆಕ್ ಡ್ಯಾಂಗಳು, ನಂದಗುಡಿ ಸುತ್ತಮುತ್ತ ಉತ್ತಮ ಮಳೆ

    ನಂದಗುಡಿ: ಮುಂಗಾರು ಮಳೆಯ ಕಣ್ಣಾಮುಚ್ಚಾಲೆಯಿಂದ ಸಕಾಲಕ್ಕೆ ಸರಿಯಾಗಿ ಮಳೆಯಾಗದೇ, ತೀವ್ರ ಬರಗಾಲ ಪರಿಸ್ಥಿತಿಯ ಸಂಕಷ್ಟಕ್ಕೆ ಒಳಗಾಗಿದ್ದ ರೈತರ ಮೊಗದಲ್ಲಿ ಸಂತಸ ಅರಳಿದೆ. ಶನಿವಾರ ರಾತ್ರಿ ವಿವಿಧೆಡೆ ಸುರಿದ ಧಾರಾಕಾರ ಮಳೆಯಿಂದಾಗಿ ಕಾಲುವೆ, ಚೆಕ್ ಡ್ಯಾಂಗಳು ಭರ್ತಿಯಾಗಿದ್ದು, ಭರವಸೆ ಮೂಡಿಸಿದೆ.

    ನಂದಗುಡಿ ಹೋಬಳಿಯ ಇಟ್ಟಸಂದ್ರ, ನೆಲವಾಗಿಲು, ನಂದಗುಡಿ, ತಾವರೆಕೆರೆ, ಶಿವನಾಪುರ, ಹೆತ್ತಕ್ಕಿ, ಬೈಲನರಸಾಪುರ ಗ್ರಾಪಂ. ವ್ಯಾಪ್ತಿಯ ಬಹುತೇಕ ಹಳ್ಳಿಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಇದರಿಂದ ರಾಗಿ, ಅವರೆ, ಹುರುಳಿ ಮತ್ತಿತರ ಸಾಲು ಬೆಳೆಗಳು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿವೆ. ಎತ್ತ ಕಣ್ಣು ಹಾಯಿಸಿದರೂ ಹಸಿರಿನ ಸೊಬಗು ಗೋಚರಿಸುತ್ತಿದೆ.

    ಹಳ್ಳ-ಕೊಳ್ಳ, ಚೆಕ್ ಡ್ಯಾಂಗಳಲ್ಲಿ ನೀರು ಸಂಗ್ರಹವಾಗುತ್ತಿರುವ ಕಾರಣ ಈ ಬಾರಿ ಜಾನುವಾರುಗಳಿಗೆ ಹಸಿರು ಮೇವು ದೊರೆಯುವಂತಾಗಿದೆ. ಕೊಳವೆಬಾವಿಗಳ ಅಂತರ್ಜಲ ಮಟ್ಟ ವೃದ್ಧಿಸುವ ಆಸೆ ಚಿಗುರಿದೆ. ಕೆಲವು ತಿಂಗಳ ಮಟ್ಟಿಗಾದರೂ ನೀರಿನ ಸಮಸ್ಯೆ ದೂರವಾದಂತಾಗಿದೆ.

    ತಾಲೂಕಿನಾದ್ಯಂತ ಇತ್ತೀಚೆಗೆ ಜಡಿಮಳೆ ಸುರಿಯುತ್ತಿದೆ. ಕಾಲುವೆ, ಕುಂಟೆ, ಚೆಕ್ ಡ್ಯಾಂ ಹಾಗೂ ಕೃಷಿ ಹೊಂಡಗಳಲ್ಲಿ ನೀರು ತುಂಬಿ ರೈತರು ಸಂತಸಗೊಂಡಿದ್ದಾರೆ. ನೀರು ಪೋಲಾಗದಂತೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಎಚ್ಚರವಹಿಸಬೇಕಾಗಿದೆ.
    ಕೆ.ಎನ್. ಮಂಜುನಾಥ್, ಕರಪನಹಳ್ಳಿ ಗ್ರಾಪಂ ಮಾಜಿ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts