More

    ಬಾಣಮಾಕನಹಳ್ಳಿಯಲ್ಲಿ ರೋಗ ಭೀತಿ: ಗ್ರಾಮದಲ್ಲಿ ಮರೀಚಿಕೆಯಾದ ಸ್ವಚ್ಛತೆ

    ಎಂ. ರಾಮೇಗೌಡ ನಂದಗುಡಿ
    ಹೋಬಳಿಯ ಹೆತ್ತಕ್ಕಿ ಗ್ರಾಪಂ ವ್ಯಾಪ್ತಿಯ ಬಾಣಮಾಕನಹಳ್ಳಿಯಲ್ಲಿ ಮೂಲಸೌಕರ್ಯ ಇಲ್ಲದೆ ಅಭಿವೃದ್ಧಿ ವಂಚಿತ ಗ್ರಾಮಸ್ಥರು ಅಧಿಕಾರಿಗಳಿಗೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
    ರಸ್ತೆಯಲ್ಲಿ ಕೊಳೆತು ನಾರುತ್ತಿರುವ ಕಸದ ನಡುವೆ ಜನ ಓಡಾಡುವ ದುಸ್ಥಿತಿ ಒಂದೆಡೆಯಾದರೆ ಕಟ್ಟಿಕೊಂಡ ಚರಂಡಿಗಳ ಕೆಟ್ಟವಾಸನೆ ಗ್ರಾಮಕ್ಕೆ ಕಪ್ಪುಚುಕ್ಕೆಯಾಗಿವೆ.
    ಗ್ರಾಮದ ಮುಖ್ಯರಸ್ತೆ ಪಕ್ಕದಲ್ಲೇ ಹೊಸದಾಗಿ ನಿರ್ಮಿಸಿರುವ ಅಭಯಾಂಜನೇಯ ದೇವಾಲಯದ ಕಾಂಪೌಂಡ್ ಸಮೀಪದ ಚರಂಡಿ ಕಟ್ಟಿಕೊಂಡು ಮಲೀನ ನೀರು ನಿಂತು ಗಬ್ಬು ನಾರುತ್ತಿದೆ. ಇದೇ ರಸ್ತೆಯಲ್ಲೇ ಕಸದ ರಾಶಿಗೆ ನಿತ್ಯ ಬೆಂಕಿ ಇಟ್ಟು ಕಸ ಕರಗಿಸುವ ಕೆಲಸ ಮಾಡಲಾಗುತ್ತಿದೆ.
    ಚರಂಡಿಗಳಲ್ಲಿ ತ್ಯಾಜ್ಯ ವಿಲೇವಾರಿಯಾಗದೆ ಕೊಳಚೆ ನೀರು ತುಂಬಿಕೊಂಡು, ಹಗಲು-ರಾತ್ರಿ ಸೊಳ್ಳೆಗಳ ಹಾವಳಿಯಿಂದ ಜನರು ಸಾಂಕ್ರಾಮಿಕ ರೋಗ ಭೀತಿ ಎದುರಿಸುತ್ತಿದ್ದಾರೆ. ಈ ಭಾಗದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದ್ದು, ಗ್ರಾಪಂ ಅಧಿಕಾರಿಗಳು ಅಥವಾ ಸ್ಥಳೀಯ ಜನಪ್ರತಿನಿಧಿಗಳು ಸ್ವಚ್ಛತೆ ಬಗ್ಗೆ ನಿರ್ಲಕ್ಷ್ಯ ಮುಂದುವರಿಸಿದ್ದಾರೆ.
    ಬರೀ ರಾಜಕೀಯ: ಹೊಸಕೋಟೆ ವಿಧಾನಸಭಾ ಕ್ಷೇತ್ರ ರಾಜಕೀಯದಲ್ಲಿ ಎತ್ತಿದ ಕೈ, ಅದೇ ರೀತಿ ಈ ಪಂಚಾಯಿತಿ ವ್ಯಾಪ್ತಿಯಲ್ಲೂ ಬಣ ರಾಜಕೀಯಕ್ಕೇನು ಕೊರತೆ ಇಲ್ಲ. ಮುಖಂಡರಿಗೆ ಸಾಕಷ್ಟು ಹಿಂಬಾಲಕರಿದ್ದಾರೆ, ಆದರೆ ಗ್ರಾಮದ ಅಭಿವೃದ್ಧಿ ವಿಷಯದಲ್ಲಿ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ. ಪಂಚಾಯಿತಿಗೆ ಸ್ವಚ್ಛತೆ ಕಾಪಾಡುವಂತೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಸರ್ಕಾರಿ ಕಾರ್ಯಕ್ರಮಗಳಂದು ಸ್ವಚ್ಛತೆ ಜಾಗೃತಿ ಮೂಡಿಸುವ ನಾಟಕವಾಡುತ್ತದೆ ಅಷ್ಟೇ ಎಂಬುದು ಸ್ಥಳೀಯರ ಆರೋಪವಾಗಿದೆ.

    ಪಂಚಾಯಿತಿ ವ್ಯಾಪ್ತಿಯಲ್ಲಿ ಆಯಾ ವಾರ್ಡ್‌ನಲ್ಲಿ ಯಾವುದೇ ಮೂಲಸೌಕರ್ಯ ಸಮಸ್ಯೆಗಳಿದ್ದರೂ, ಅದರ ನಿರ್ವಹಣೆ ಜವಾಬ್ದಾರಿಯನ್ನು ಸ್ಥಳೀಯ ಸದಸ್ಯರೇ ವಹಿಸುತ್ತಾರೆ. ಹಿಂದಿನಿಂದಲೂ ಈ ಪದ್ಧತಿ ರೂಢಿಸಿಕೊಂಡಿದ್ದಾರೆ. ನಾನು ಇತ್ತೀಚೆಗಷ್ಟೆ ವರ್ಗಾವಣೆಯಾಗಿ ಬಂದಿದ್ದು, ಸರ್ವ ಸದಸ್ಯರ ಸಭೆ ಕರೆದು ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು. ಡಿ.ಹರೀಶ್ ಪಿಡಿಒ ಹೆತ್ತಕ್ಕಿ ಗ್ರಾಪಂ


    ದೇವಾಲಯದ ಬಳಿ ಕೆಟ್ಟ ವಾಸನೆಯಿಂದ ಮೂಗು ಮುಚ್ಚಿಕೊಂಡು ಪೂಜಾ ಕೈಂಕರ್ಯ ಮಾಡಬೇಕಾಗಿದೆ. ಸೊಳ್ಳೆ ನೊಣಗಳ ಹಾವಳಿಯಿಂದ ದೇಗುಲ ಪ್ರದೇಶ ರೋಗ ಹರಡುವ ತಾಣವಾಗಿ ರೂಪುಗೊಂಡಿದೆ. ಮುನಿಯಮ್ಮ ಗೃಹಿಣಿ, ಬಾಣಮಾಕನಹಳ್ಳಿ
    ಇಲ್ಲಿನ ಅವ್ಯವಸ್ಥೆ ಗಮನಕ್ಕೆ ಬಂದಿದ್ದು, ಕಳೆದೆರಡು ವರ್ಷದ ಹಿಂದೆ 2 ಬಾರಿ ಚರಂಡಿಯಲ್ಲಿ ಕಸ ತೆಗೆಸಿದ್ದೇವೆ. ವರ್ಷಕ್ಕೆ ಒಂದು ಬಾರಿ 15ನೇ ಹಣಕಾಸಿನ ಕ್ರಿಯಾಯೋಜನೆ ಸಿದ್ಧಪಡಿಸಿ ಗ್ರಾಮಕ್ಕೆ 30 ಸಾವಿರ ರೂ. ಸ್ವಚ್ಛತೆಗೆ ನೀಡಿದ್ದು, ಪ್ರಸ್ತುತ ವರ್ಷದಲ್ಲೂ ಚರಂಡಿ ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಪದ್ಮಾವತಿ ರಮೇಶ್ ಗ್ರಾಪಂ ಸದಸ್ಯೆ, ಬಾಣಮಾಕನಹಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts