More

    ಉತ್ತಮ ಆಡಳಿತ ನೀಡುವ ವಿಶ್ವಾಸ – ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ

    ಬೆಳಗಾವಿ: ನೂತನ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ಮಂಗಳವಾರ ಅಧಿಕಾರ ಸ್ವೀಕರಿಸಿದರು. ಸೇವಾ ನಿವೃತ್ತಿ ಹೊಂದಿದ ನಿಕಟಪೂರ್ವ ಜಿಲ್ಲಾಧಿಕಾರಿ ಡಾ. ಎಸ್.ಬಿ. ಬೊಮ್ಮನಹಳ್ಳಿ ಅವರು ಅಧಿಕಾರ ಹಸ್ತಾಂತರಿಸಿದರು.

    ಬೆಳಗಾವಿ ದೊಡ್ಡ ಮತ್ತು ಸೂಕ್ಷ್ಮ ಜಿಲ್ಲೆಯಾಗಿದೆ. ಆದರೆ, ನಾನು ಮೂಲತಃ ಬೆಳಗಾವಿ ಜಿಲ್ಲೆಯವನಾಗಿರುವುದರಿಂದ ಕೆಲಸ ಸುಲಭವಾಗಲಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹೇಳಿದರು. ಗದಗ ಜಿಲ್ಲೆಯಲ್ಲಿ ಪ್ರವಾಹ ನಿರ್ವಹಿಸಿದ ಅನುಭವವಿದೆ. ಕರೊನಾ, ನೆರೆ, ಬರ ಸೇರಿದಂತೆ ಎಲ್ಲ ಪರಿಸ್ಥಿತಿಯನ್ನು ನಿಭಾಯಿಸಿದ ಅನುಭವವಿದೆ. ಅದು ಇಲ್ಲಿ ಸಹಕಾರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಇದೇ ವೇಳೆ ನಿವೃತ್ತರಾದ ಜಿಲ್ಲಾಧಿಕಾರಿ ಡಾ. ಬೊಮ್ಮನಹಳ್ಳಿ ಅವರಿಗೆ ನೂತನ ಜಿಲ್ಲಾಧಿಕಾರಿ ಹೂಗುಚ್ಛ ನೀಡಿ ಶುಭ ಕೋರಿದರು. ಸೇವಾವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಅವರು ಕೃತಜ್ಞತೆ ಸಲ್ಲಿಸಿದರು.

    ಎಂ.ಎಸ್ಸಿ (ಭೌತಶಾಸ್ತ್ರ) ಪದವೀಧರ: ನೂತನ ಜಿಲ್ಲಾಧಿಕಾರಿ ಮಹಾಂತೇಶ ಜಿ. ಹಿರೇಮಠ ಅವರು ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಗಣಿಕೊಪ್ಪ ಗ್ರಾಮದವರು. ಕರ್ನಾಟಕ ವಿಶ್ವ ವಿದ್ಯಾಲಯದಿಂದ ಎಂ.ಎಸ್ಸಿ (ಭೌತಶಾಸ್ತ್ರ) ಪದವೀಧರರಾಗಿರುವ ಅವರು, ಬೆಳಗಾವಿ ಮತ್ತು ಹುಬ್ಬಳ್ಳಿಯಲ್ಲಿ ಕೆಲಕಾಲ ಭೌತಶಾಸ್ತ್ರ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 1991ರಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತರಾಗಿ ಸರ್ಕಾರಿ ಸೇವೆ ಆರಂಭಿಸಿದರು.

    2015ರ ಜೂನ್‌ನಲ್ಲಿ ಕರ್ನಾಟಕ ಆಡಳಿತ ಸೇವೆಯಿಂದ ಭಾರತೀಯ ಆಡಳಿತ ಸೇವೆಗೆ ಬಡ್ತಿ ಪಡೆದಿದ್ದಾರೆ. ಬಾಗಲಕೋಟೆ ಜಿ.ಪಂ. ಸಿಇಒ, ಹುಬ್ಬಳ್ಳಿ-ಧಾರವಾಡ ಬಿಆರ್‌ಟಿಎಸ್ ಕಂಪನಿ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಆಗಸ್ಟ್ 2018ರಿಂದ ಇಲ್ಲಿಯವರೆಗೆ ಗದಗ ಜಿಲ್ಲಾಧಿಕಾರಿಯಾಗಿ ಹಿರೇಮಠ ಅವರು ಕಾರ್ಯ ನಿರ್ವಹಿಸುತ್ತಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts