More

    ಪಹಣಿಯಲ್ಲಿ ಭೂಮಿಹಕ್ಕು ಗೊಂದಲ

    ಸಣ್ಣುವಂಡ ಕಿಶೋರ್ ನಾಚಪ್ಪ ಗೋಣಿಕೊಪ್ಪ
    ಅರಣ್ಯ ಪ್ರದೇಶದಲ್ಲಿ ಬದುಕು ಸಾಗಿಸುತ್ತಿರುವ ಬುಡಕಟ್ಟು ನಿವಾಸಿಗಳಿಗೆ ವಿತರಿಸುತ್ತಿರುವ ಪಹಣಿ ಪತ್ರದಲ್ಲಿ(ಆರ್‌ಟಿಸಿ) ಲೋಪವಿದೆ ಎಂದು ಆತಂಕಗೊಂಡಿರುವ ಹಕ್ಕುದಾರರು ಭೂಮಿ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

    ಹಕ್ಕುಪತ್ರದಲ್ಲಿ ನೀಡಿದ್ದ ಹಕ್ಕು ಆರ್‌ಟಿಸಿಯಲ್ಲಿ ದೊರೆಯುತ್ತಿಲ್ಲ. ಭೂಮಿಯ ಹಕ್ಕು ನಮ್ಮ ಹೆಸರಿನಲ್ಲಿ ನಮೂದಿಸಿ, ಸ್ವಾಧೀನದಾರ, ವ್ಯವಸಾಯಗಾರನ ಹೆಸರು ಅರಣ್ಯ ಇಲಾಖೆ ಎಂದು ನಮೂದಿಸುವ ಮೂಲಕ ನಮ್ಮ ಭೂಮಿ ಹಕ್ಕು ಕಸಿದುಕೊಳ್ಳುವ ಹುನ್ನಾರ ನಡೆಯುತ್ತಿದೆ ಎಂಬ ಆರೋಪ ಹಕ್ಕುದಾರರಿಂದ ವ್ಯಕ್ತವಾಗಿದೆ. ಹಕ್ಕುಪತ್ರದಲ್ಲಿ ನೀಡಿರುವ ಸಂಪೂರ್ಣ ಹಕ್ಕಿನಂತೆ ಪಹಣಿಯಲ್ಲಿಯೂ ಹಕ್ಕು ನೀಡಲಿ ಎಂಬ ಒತ್ತಾಯ ಕೇಳಿ ಬಂದಿದೆ.

    12 ಹಕ್ಕುದಾರರಿಗೆ ಒಂದೇ ಸರ್ವೇ ನಂಬರ್: ನೊಕ್ಯ ಗ್ರಾಮದ 12 ಬುಡಕಟ್ಟು ಹಕ್ಕುದಾರರಿಗೆ ಒಂದೇ ಸರ್ವೇ ನಂಬರ್‌ನಲ್ಲಿ ಆಸ್ತಿ ಹಂಚಿಕೆ ಮಾಡಿ ಆರ್‌ಟಿಸಿ ನೀಡಲಾಗಿದೆ. ಸರ್ವೇ ನಂಬರ್ 104/7 ರಲ್ಲಿ 343.27 ಎಕರೆ ಜಾಗದಲ್ಲಿ ಈ ಸರ್ವೇ ನಂಬರ್ ಅಡಗಿದೆ. ಹಕ್ಕುದಾರನಾಗಿ ಮಾತ್ರ ಫಲಾನುಭವಿ ಹೆಸರು ನೀಡಲಾಗಿದ್ದು, ಉಳಿದ ಹಕ್ಕು ಅರಣ್ಯ ಇಲಾಖೆ ಹೆಸರಿನಲ್ಲಿರುವುದರಿಂದ ಗೊಂದಲ ಗೊಂಡಿದ್ದಾರೆ.

    ಹಕ್ಕುಪತ್ರ ಹೇಗಿತ್ತು: ಈಗಾಗಲೇ ನೀಡಿದ್ದ ಹಕ್ಕುಪತ್ರದಲ್ಲಿ ಅರಣ್ಯ ಹಕ್ಕುದಾರನ ಹೆಸರಿನ ಜತೆಯಲ್ಲಿ ಪತಿ ಅಥವಾ ಪತ್ನಿ ಹೆಸರು ನಮೂದಿಸಿತ್ತು. ತಂದೆ, ತಾಯಿ ಹೆಸರು, ಅವಲಂಬಿತರ ಹೆಸರು ಕೂಡ ಸೇರಿಸಲಾಗಿತ್ತು. ಇದರಿಂದ ಜಾಗದ ಹಕ್ಕಿನ ಬಗ್ಗೆ ಖಾತ್ರಿ ಇತ್ತು. ಇಂತಹದ್ದೇ ಸರ್ವೇ ನಂಬರ್‌ನಲ್ಲಿ ಇಂತಿಷ್ಟು ವಿಸ್ತೀರ್ಣ ಎಂದು ನಮೂದಿಸಿತ್ತು.

    ಹಕ್ಕುಪತ್ರದಲ್ಲಿ ಅನುಸೂಚಿತ ಬುಡಕಟ್ಟು, ಇತರ ಪಾರಂಪಾರಿಕ ಅರಣ್ಯವಾಸಿಗಳ ಹಕ್ಕುಗಳ ಮಾನ್ಯತೆ ನಿಯಮ 2008 ರ 8/ಎಚ್ ನಿಯಮದಡಿ ಅಧಿನಿಯಮದ 4 ನೇ ಉಪ ಪ್ರಕರಣದಲ್ಲಿ ಹಕ್ಕು ಅನುವಂಶೀಯವಾಗಿದ್ದು ಎಂದು ನಮೂದಿಸಲಾಗಿತ್ತು. ಇದರಿಂದ ಆಸ್ತಿಯನ್ನು ಪರಭಾರೆ ಅಥವಾ ವರ್ಗಾವಣೆಗೆ ಅವಕಾಶವಿಲ್ಲ. ಇದರಿಂದ ಅರಣ್ಯ ಹಕ್ಕು ಉಳಿಸಿಕೊಳ್ಳಲು ನಿಯಮ ಪಾಲಿಸಿರುವುದು ಭೂಮಿ ರಕ್ಷಣೆಗೆ ಕಾನೂನು ರೂಪಿಸಿದಂತಿದೆ.

    ಅನುಸೂಚಿತ ಹಾಗೂ ಪಾರಂಪಾರಿಕ ಬುಡಕಟ್ಟು ನಿವಾಸಿಗಳಿಗೆ ಅರಣ್ಯ ಹಕ್ಕು ನೀಡಬೇಕೆಂಬ ಒತ್ತಾಯದಂತೆ ಸರ್ಕಾರ 2006 ರಿಂದ ಅರಣ್ಯ ಹಕ್ಕು ವಿಚಾರದಲ್ಲಿ ಅನುಷ್ಠಾನಕ್ಕೆ ಮುಂದಾಯಿತು. 2008 ರಲ್ಲಿ ಅರಣ್ಯ ಹಕ್ಕು ಮಾನ್ಯತೆಯನ್ನು ಅನುಸೂಚಿತ ಬುಡಕಟ್ಟು ಮತ್ತು ಇತರ ಪಾರಂಪರಿಕ ಅರಣ್ಯವಾಸಿಗಳಿಗೆ ಪ್ರತ್ಯೇಕ ನಿಯಮದ ಮೂಲಕ ಹಕ್ಕುಪತ್ರ ನೀಡಲು ಮುಂದಾಗಿದೆ. ಇದರಿಂದ ಅಲ್ಲಿವರೆಗೆ ಕೃಷಿ ಮತ್ತು ಜೋಪಡಿ ಮೂಲಕ ರಕ್ಷಿಸಿಕೊಂಡ ಭೂಮಿಗೆ ಹಕ್ಕುಪತ್ರ ನೀಡಲಾಗಿದೆ. ಇದರಿಂದ ಅರಣ್ಯವಾಸಿ ಎಂಬ ಹಕ್ಕು ದೊರೆತಿತ್ತು. ಇದೀಗ ಹಕ್ಕುಪತ್ರದ ಬದಲಿಗೆ ಪರ್ಯಾಯವಾಗಿ ಆರ್‌ಟಿಸಿ (ಪಹಣಿಪತ್ರ) ನೀಡುತ್ತಿರುವುದು ಹಕ್ಕಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಆದಿವಾಸಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts