More

    ಚಿನ್ನಕ್ಕೂ ಕರೊನಾ ಕೆಂಗಣ್ಣು!

    ಬೆಳಗಾವಿ: ಜಾಗತಿಕ ಮಾರುಕಟ್ಟೆಯಲ್ಲಿ ಸದಾ ಮುಕುಟ ಹೊತ್ತೇ ಮೆರೆಯುತ್ತಿದ್ದ ಬಂಗಾರದ ಮಾರುಕಟ್ಟೆಯೂ ಕರೊನಾ ಹೊಡೆತಕ್ಕೆ ಸಿಲುಕಿ ಏದುಸಿರುವ ಬಿಡುತ್ತಿದೆ. ನೀರಸ ವಹಿವಾಟಿನಿಂದ ಚಿನ್ನದ ವ್ಯಾಪಾರಿಗಳು ಚಿಂತಿತರಾಗಿದ್ದಾರೆ.

    ಕೋವಿಡ್ ಸೃಷ್ಟಿಸಿದ ಅಡ್ಡ ಪರಿಣಾಮದಿಂದ ಆರ್ಥಿಕವಾಗಿ ಜರ್ಜರಿತರಾದ ಜನರು ‘ಖರೀದಿ ಸಾಮರ್ಥ್ಯ’ವನ್ನೇ ಕಳೆದುಕೊಂಡಿದ್ದು, ಇದು ಚಿನ್ನಾಭರಣ ಮಾರುಕಟ್ಟೆಗೆ ಮತ್ತಷ್ಟು ಸವಾಲು ತಂದೊಡ್ಡಿದೆ. ಲಾಕ್‌ಡೌನ್ ಸಡಿಲಿಕೆ ನಂತರವೂ ಕರೊನಾ ವೈರಸ್ ನಿಯಂತ್ರಣಕ್ಕಾಗಿ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯಿಂದಾಗಿ ಹೊರರಾಜ್ಯಗಳಿಂದ ಅತ್ಯಾಕರ್ಷಕ ಚಿನ್ನಾಭರಣಗಳ ಆಮದು ಸಾಧ್ಯವಾಗುತ್ತಿಲ್ಲ. ಮತ್ತೊಂದೆಡೆ, ಮಳಿಗೆಯಲ್ಲಿನ ಆಭರಣಗಳ ಖರೀದಿಗೆ ಈ ಮೊದಲಿನಂತೆ ಜನ ಆಸಕ್ತಿ ತೋರದಿರುವುದು ಚಿನ್ನಾಭರಣ ಅಂಗಡಿಗಳ ಮಾಲೀಕರಲ್ಲಿ ನಿರಾಸೆ ಮೂಡಿಸಿದೆ.

    ಆಮದು ಸ್ಥಗಿತ: ಸಣ್ಣ ಪ್ರಮಾಣದ ಹಾಗೂ ಬೃಹತ್ ಚಿನ್ನಾಭರಣಗಳ ಅಂಗಡಿಗಳು ಸೇರಿ ರಾಜ್ಯದಲ್ಲಿ ಲಕ್ಷಾಂತರ ಮಳಿಗೆಗಳಿವೆ. ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 800ಕ್ಕೂ ಅಧಿಕ ಮಳಿಗೆಗಳಿದ್ದು, ಗಡಿ ಜಿಲ್ಲೆ ಬೆಳಗಾವಿಗೆ ನೆರೆಯ ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಿಂದಲೂ ಜನ ಆಗಮಿಸಿ ಚಿನ್ನ ಖರೀದಿಸುತ್ತಾರೆ. ಹೀಗಾಗಿ ಇಲ್ಲಿನ ಚಿನ್ನದ ವ್ಯಾಪಾರಿಗಳು ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಕೇರಳ ಹಾಗೂ ತಮಿಳುನಾಡು ರಾಜ್ಯಗಳಿಂದ ಅತ್ಯಾಕರ್ಷಕ ವಿನ್ಯಾಸದ ಚಿನ್ನಾಭರಣಗಳನ್ನು ಆಮದು ಮಾಡಿಕೊಳ್ಳುತ್ತಾರೆ. ಆದರೆ, ಇದೀಗ ಕರೊನಾತಂಕದಿಂದ ಅನ್ಯ ರಾಜ್ಯಗಳಿಂದ ಚಿನ್ನಾಭರಣ ಆಮದು ಕಷ್ಟವಾಗಿದೆ. ಅಲ್ಲದೆ, ವಹಿವಾಟು ಪಾತಾಳ ಕಂಡಿದೆ.

    ಚಿನ್ನ ಖರೀದಿಗೆ ನಿರುತ್ಸಾಹ: ಲಾಕ್‌ಡೌನ್ ಆರಂಭದಿಂದ ಈವರೆಗೂ ಚಿನ್ನಾಭರಣ ವ್ಯಾಪಾರ ಕಳೆಗಟ್ಟಿಲ್ಲ. ಬಹುತೇಕ ಮಳಿಗೆಗಳಲ್ಲಿ ನೀರಸ ವಹಿವಾಟು ನಡೆಯುತ್ತಿದೆ. ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ಬಳಕೆ ಜತೆಗೆ ಮಳಿಗೆಗಳಲ್ಲಿ ದೈಹಿಕ ಅಂತರ ಕಾಪಾಡುವುದಕ್ಕೆ ಆದ್ಯತೆ ನೀಡಿದರೂ ಜನರು ಆಗಮಿಸಿ ಖರೀದಿಗೆ ನಿರುತ್ಸಾಹ ತೋರುತ್ತಿದ್ದಾರೆ.

    ಚಿನ್ನಾಭರಣಗಳ ಅತೀ ಹೆಚ್ಚು ವ್ಯಾಪಾರ-ವಹಿವಾಟು ನಡೆಯುತ್ತಿದ್ದ ಏಪ್ರಿಲ್ ಮತ್ತು ಮೇ ತಿಂಗಳುಗಳು ಲಾಕ್‌ಡೌನ್‌ನಲ್ಲಿಯೇ ಮುಗಿದಿದೆ. ಲಾಕ್‌ಡೌನ್‌ಗೂ ಮುಂಚಿನ ಪರಿಸ್ಥಿತಿಯಂತೂ ಈಗಿಲ್ಲ. ಬಹುತೇಕರು ಮದುವೆ ಅವಶ್ಯಕತೆಗಾಗಿ ಮಾತ್ರ ಮಳಿಗೆಗೆ ಆಗಮಿಸುತ್ತಿದ್ದಾರೆ. ಹೊರರಾಜ್ಯಗಳಿಂದ ಬೆಂಗಳೂರಿಗೆ ತರಲಾಗುವ ಚಿನ್ನಾಭರಣಗಳನ್ನು ಖರೀದಿಸಿ, ಅಲ್ಲಿಂದ ತಂದು ಇಲ್ಲಿ ಮಾರಾಟ ಮಾಡಬೇಕಾದರೆ ಹೆಚ್ಚುವರಿ ಮೇಕಿಂಗ್ ಶುಲ್ಕ ವಿಧಿಸಬೇಕಾಗುತ್ತಿದೆ. ಶುಲ್ಕ ಹೆಚ್ಚಾದರೆ ಗ್ರಾಹಕರು ಖರೀದಿಸುವುದಿಲ್ಲ. ಹೀಗಾಗಿ ರಾಜಧಾನಿಯಿಂದ ಚಿನ್ನಾಭರಣ ತರಿಸುತ್ತಿಲ್ಲ.
    |ಅನಿಲ್ ಪೋತದಾರ್ ಬೆಳಗಾವಿ ಜಿಲ್ಲಾ ಸರಾಫ್ ವರ್ತಕರ ಸಂಘದ ಅಧ್ಯಕ್ಷ

    ಉದ್ಯೋಗ ಕಡಿತದ ದುಷ್ಪರಿಣಾಮ: ಕರೊನಾದಿಂದ ಖಾಸಗಿ ವಲಯ ತತ್ತರಿಸಿದೆ. ಉದ್ಯೋಗ ಕಡಿತ, ವೇತನ ಕಡಿತದಂತಹ ಸಮಸ್ಯೆಗಳಿಗೆ ಸಿಲುಕಿಕೊಂಡವರು ಕುಟುಂಬ ನಿರ್ವಹಣೆಗೂ ಕಷ್ಟಪಡುತ್ತಿದ್ದಾರೆ. ಹೀಗಾಗಿ ಆರ್ಥಿಕ ನಷ್ಟ ನಿಭಾಯಿಸಲು ಚಿನ್ನಾಭರಣ ಹಾಗೂ ಬಟ್ಟೆಗಳ ಖರೀದಿಯಿಂದಲೂ ಜನರು ದೂರ ಉಳಿದಿದ್ದಾರೆ. ವಿವಾಹ ವಾರ್ಷಿಕೋತ್ಸವ, ಜನ್ಮದಿನ ಆಚರಣೆ ಸೇರಿ ಇನ್ನಿತರ ಉದ್ದೇಶಕ್ಕಾಗಿ ಆಭರಣ ಖರೀದಿಸುವವರ ಸಂಖ್ಯೆ ಅತಿ ವಿರಳವಾಗಿದೆ. ಹಳೆಯ ಆಭರಣ ಕೊಟ್ಟು ಹೊಸ ಆಭರಣ ಖರೀದಿಸುವವರೂ ಸುಳಿಯುತ್ತಿಲ್ಲ. ಹೂಡಿಕೆ ರೂಪದಲ್ಲಿಯೂ ಚಿನ್ನ ಖರೀದಿ ಆಗುತ್ತಿಲ್ಲ. ಯಾವಾಗಲೂ ಟ್ರೆಂಡ್ ಹಿಂದೆ ಬೀಳುತ್ತಿದ್ದ ಜನ ಮಾರುಕಟ್ಟೆಯಿಂದಲೇ ಅಂತರ ಕಾಯ್ದುಕೊಳ್ಳುತ್ತಿದ್ದು, ಚಿನ್ನಾಭರಣ ಲೋಕದ ಮೇಲೂ ಕಾರ್ಮೋಡ ಕವಿಯುವಂತೆ ಮಾಡಿರುವುದು ಸುಳ್ಳಲ್ಲ.

    |ರವಿ ಗೋಸಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts