More

    ತರಗತಿ ಬಹಿಷ್ಕರಿಸಿ ವಿದ್ಯಾರ್ಥಿಗಳ ಪ್ರತಿಭಟನೆ


    ಗೊಳಸಂಗಿ: ಸ್ಥಳೀಯ ಚನ್ನಮಲ್ಲಪ್ಪ ಚನ್ನವೀರಪ್ಪ ಹೆಬ್ಬಾಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅವ್ಯವಸ್ಥೆ ಸರಿಪಡಿಸಲು ಆಗ್ರಹಿಸಿ ಕಾಲೇಜಿನ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಗುರುವಾರ ಪ್ರತಿಭಟಿಸಿದರು.

    ಬೆಳಗ್ಗೆ 9 ರಿಂದ ಸಂಜೆ 4 ಗಂಟೆವರೆಗೆ ಕಾಲೇಜಿನ ಅವಧಿಯಾಗಿದ್ದರೂ ಇಲ್ಲಿ ಉಪನ್ಯಾಸ ಮಾಡಲು ಬರುವ ಬಹುತೇಕ ಸಿಬ್ಬಂದಿ ವರ್ಗಕ್ಕೆ ಸಮಯದ ಪ್ರಜ್ಞೆಯೇ ಇಲ್ಲ. ಭವಿಷ್ಯದ ಕನಸು ಹೊತ್ತು ಕಲಿಯಲು ಬರುವಂತಹ ವಿದ್ಯಾರ್ಥಿಗಳಿಗೆ ಇಲ್ಲಿ ಸಮರ್ಪಕ ಕಲಿಕೆ ಎಂಬುದು ಮರೀಚಿಕೆಯಾಗಿ ಕಾಡುತ್ತಿದೆ. 5 ಜನ ಕಾಯಂ, 20 ಜನ ಅತಿಥಿ ಉಪನ್ಯಾಸಕರಿದ್ದರೂ ಬೋಧನಾ ಕೊರತೆ ಎದ್ದು ಕಾಣುತ್ತಿದೆ. ಗ್ರಂಥಾಲಯದ ಸಮಸ್ಯೆ ಜತೆಗೆ ಕಾಲೇಜಿನಲ್ಲಿ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ. ವಿದ್ಯಾರ್ಥಿನಿಯರಿಗೆ ಶೌಚಗೃಹದ ಸೌಲಭ್ಯವಿಲ್ಲ. ಸಂಬಂಧಪಟ್ಟವರು ಈ ಕುರಿತು ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ವಿದ್ಯಾರ್ಥಿ ಮುಖಂಡರಾದ ಸಿದ್ದು ಕಲಬುರ್ಗಿ, ಸೋಮು ಪಾರ್ವತಿಮಠ ಮತ್ತಿತರರು ಆಗ್ರಹಿಸಿದರು.

    ವಿದ್ಯಾರ್ಥಿಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ಕಾಲೇಜಿನ ಪ್ರಾಚಾರ್ಯ ಡಾ. ಕಾಳಿಂಗ ಗೊಳಸಂಗಿ, ಕಾಲೇಜಿನಲ್ಲಿ ಮೂಲ ಸೌಲಭ್ಯಗಳನ್ನು ಒದಗಿಸಲು ಈಗಾಗಲೇ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಬೋಧನೆಯಲ್ಲಿ ಆಗಿರುವ ಸಮಸ್ಯೆಗೆ ಶೀಘ್ರ ಸಂಬಂಧಪಟ್ಟ ಉಪನ್ಯಾಸಕರಿಗೆಲ್ಲ ನೋಟಿಸ್ ನೀಡಿ ಎಚ್ಚರಿಕೆ ನೀಡಲಾಗುವುದು. ಕಾಲೇಜಿಗೆ ಬಾರದ ವಿದ್ಯಾರ್ಥಿಗಳ ಮೇಲೂ ನಿಗಾ ವಹಿಸಲಾಗುವುದೆಂದು ಹೇಳಿದರು. ನೂರಾರು ವಿದ್ಯಾರ್ಥಿಗಳು ಎರಡು ಗಂಟೆ ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

    ಹೊಸ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ) ಪ್ರಪ್ರಥಮವಾಗಿ ಕರ್ನಾಟಕದಲ್ಲೇ ಜಾರಿಯಾಗಿರುವುದು ಮತ್ತು ಆಗಾಗ ಬೋಧನೆ ಕುರಿತು ಇಲಾಖೆ ವಿಧಿಸುವ ಷರತ್ತುಗಳ ಪಾಲನೆ ಜತೆಗೆ ಅಲ್ಪಸ್ವಲ್ಪ ತೊಂದರೆಯಾಗಿದೆ. ಇದರೊಟ್ಟಿಗೆ ಗ್ರಂಥಾಲಯ, ಕುಡಿಯುವ ನೀರು, ಶೌಚಗೃಹ ಸಮಸ್ಯೆಗಳನ್ನು ಶೀಘ್ರ ಸರಿಪಡಿಸಲಾಗುವುದು.
    ಡಾ. ಕಾಳಿಂಗ ಗೊಳಸಂಗಿ ಪ್ರಾಂಶುಪಾಲರು, ಚ.ಚ. ಹೆಬ್ಬಾಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗೊಳಸಂಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts