More

    ಸರ್ಕಾರದಿಂದ ಮತ್ತೊಂದು ಎಡವಟ್ಟು!; ಜೀವಂತ ಇರದವರಿಗೂ ಸದಸ್ಯ ಸ್ಥಾನ?

    ಬೆಂಗಳೂರು: ಆದೇಶಗಳ ವಿಚಾರದಲ್ಲಿ ಪದೇಪದೆ ಎಡವಿ ನಗೆಪಾಟಲಿಗೆ ಒಳಗಾಗುತ್ತಿರುವ ರಾಜ್ಯ ಸರ್ಕಾರ ಇದೀಗ ಇನ್ನೊಂದು ಆದೇಶದ ಮೂಲಕ ಎಡವಟ್ಟು ಮಾಡಿಕೊಂಡಿದೆ. ಜೀವಂತ ಇರದವರಿಗೂ ಸದಸ್ಯ ಸ್ಥಾನ ನೀಡಿ ಪಟ್ಟಿಯಲ್ಲಿ ಹೆಸರು ಸೇರಿಸಿದೆ. ಇದು ಸಾರ್ವಜನಿಕರಲ್ಲಿ ಅಚ್ಚರಿ ಹಾಗೂ ಗೊಂದಲವನ್ನು ಮೂಡಿಸಿದೆ.

    ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸರ್ಕಾರದಿಂದ ರಚಿಸಲಾಗಿರುವ ಟ್ರಸ್ಟ್​​ ಮತ್ತು ಪ್ರತಿಷ್ಠಾನಗಳ ನೂತನ ಅಧ್ಯಕ್ಷರು ಹಾಗೂ ಸದಸ್ಯರ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿದೆ. ತಕ್ಷಣವೇ ಜಾರಿಗೆ ಬರುವಂತೆ ಹೊರಡಿಸಲಾಗಿರುವ ಈ ಆದೇಶದಲ್ಲಿ ಸದ್ಯ ಜೀವಂತ ಇರದವರ ಹೆಸರನ್ನೂ ಸದಸ್ಯರೆಂದು ನಮೂದಿಸಲಾಗಿದೆ.

    ಚಿಕ್ಕಮಗಳೂರಿನ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ನೂತನ ಪದಾಧಿಕಾರಿಗಳ ಪಟ್ಟಿಯಲ್ಲಿ ಸದಸ್ಯರಾಗಿ ರಾಜೇಶ್ವರಿ ಪೂರ್ಣಚಂದ್ರ ತೇಜಸ್ವಿ ಅವರ ಹೆಸರನ್ನು ನಮೂದಿಸಲಾಗಿದೆ. ಲೇಖಕ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಪತ್ನಿ, ಸಾಹಿತಿ ರಾಜೇಶ್ವರಿ ತೇಜಸ್ವಿ (86) ಅವರು 2021ರ ಡಿಸೆಂಬರ್​ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು. ಆದರೆ ಇದೀಗ ರಾಜೇಶ್ವರಿ ಪೂರ್ಣಚಂದ್ರ ತೇಜಸ್ವಿ ಅವರ ಹೆಸರನ್ನು ಈ ಪಟ್ಟಿಯಲ್ಲಿ ಸೇರಿಸಿರುವುದು ಸಾರ್ವಜನಿಕರಲ್ಲಿ ಅಚ್ಚರಿ ಜತೆಗೆ ಗೊಂದಲವನ್ನೂ ಮೂಡಿಸಿದೆ. ಪಟ್ಟಿಯಲ್ಲಿ ದಿವಂಗತ ರಾಜೇಶ್ವರಿ ಪೂರ್ಣಚಂದ್ರ ತೇಜಸ್ವಿ ಅವರ ಹೆಸರನ್ನು ತಪ್ಪಾಗಿ ಸೇರಿಸಲಾಗಿದೆಯೇ ಅಥವಾ ಇದು ಅದೇ ಹೆಸರಿನ ಬೇರೆಯವರಾ ಎಂಬ ಗೊಂದಲವನ್ನು ಮೂಡಿಸಿದೆ. ಈ ಸಲದ ದಸರಾ ಉನ್ನತಮಟ್ಟದ ಸಮಿತಿ ಸಭೆಯ ಕಾರ್ಯಸೂಚಿಯಲ್ಲಿ ಕೂಡ ಕಳೆದ ವರ್ಷದ ಇಸವಿಯನ್ನೇ ನಮೂದಿಸಿ ಸರ್ಕಾರ ಎಡವಟ್ಟು ಮಾಡಿತ್ತು.

    ಇದನ್ನೂ ಓದಿ: ನಿರುತ್ತರದಲ್ಲಿ ನೀರವ ಮೌನ; ಸಾಹಿತಿ ರಾಜೇಶ್ವರಿ ತೇಜಸ್ವಿ ನಿಧನ; ಮಲೆನಾಡಿನ ಸೊಸೆ ಇನ್ನು ನೆನಪು ಮಾತ್ರ..

    ಸರ್ಕಾರದಿಂದ ಮತ್ತೊಂದು ಎಡವಟ್ಟು!; ಜೀವಂತ ಇರದವರಿಗೂ ಸದಸ್ಯ ಸ್ಥಾನ?

    ತಪ್ಪು ಆದೇಶದ ಬಳಿಕ ಸರ್ಕಾರ ಮತ್ತೊಂದು ಎಡವಟ್ಟು; ದಸರಾಗೆ ‘ಹಳೇ ಕಾರ್ಯಸೂಚಿ’?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts