More

    ಗಂಭೀರ ಪರಿಸ್ಥಿತಿಯಲ್ಲಿ ದೇವರೇ ಗತಿ!

    ಹಾವೇರಿ ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಸಾಗಿದೆ. ಪ್ರತಿದಿನ ಸರಾಸರಿ 150ರಿಂದ 200 ಕೇಸ್ ಪತ್ತೆಯಾಗುತ್ತಿದ್ದು, 10 ಜನ ಮೃತಪಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರಿಗೆ ಬೆಡ್, ವೆಂಟಿಲೇಟರ್, ಆಕ್ಸಿಜನ್ ವ್ಯವಸ್ಥೆ ಹಾಗೂ ಆಸ್ಪತ್ರೆಗಳಲ್ಲಿ ಸಿಗುತ್ತಿರುವ ಚಿಕಿತ್ಸೆ ಕುರಿತಾದ ರಿಯಾಲಿಟಿ ಚೆಕ್ ಇಲ್ಲಿದೆ.

    ಕರೊನಾ 2ನೇ ಅಲೆ ಜಿಲ್ಲೆಯಲ್ಲಿಯೂ ಗಂಭೀರ ಸ್ಥಿತಿ ತಲುಪಿದ್ದು, ಬೆಡ್​ಗಳ ಕೊರತೆ ಆರಂಭವಾಗಿದೆ. ಜಿಲ್ಲಾಸ್ಪತ್ರೆಯಲ್ಲಿ 172 ಬೆಡ್​ಗಳಿದ್ದು, ಅವೆಲ್ಲ ಭರ್ತಿಯಾಗಿವೆ. ಜಿಲ್ಲೆಯಲ್ಲಿ ವೆಂಟಿಲೇಟರ್​ಗಳು ಈಗಾಗಲೇ ಭರ್ತಿಯಾಗಿದ್ದು, ಗಂಭೀರ ಸ್ಥಿತಿಗೆ ತಲುಪುವ ರೋಗಿಗಳಿಗೆ ಸಾವೇ ಗತಿಯಾಗಿದೆ.
    ಜಿಲ್ಲೆಯಲ್ಲಿ ಜಿಲ್ಲಾಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆಗಳು ಸೇರಿ ಒಟ್ಟು 477 ಬೆಡ್​ಗಳಿವೆ. ಅದರಲ್ಲಿ ಕೇವಲ 89 ಬೆಡ್​ಗಳು ಮಾತ್ರ ಖಾಲಿ ಇವೆ. ತಾಲೂಕು ಕೇಂದ್ರಗಳಲ್ಲಿ ರೋಗಿಗಳ ಸ್ಥಿತಿ ಗಂಭೀರವಾದರೆ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗುತ್ತಿತ್ತು. ಆದರೆ, ಇದೀಗ ಜಿಲ್ಲಾಸ್ಪತ್ರೆಯಲ್ಲಿನ ಎಲ್ಲ ಬೆಡ್​ಗಳು ಭರ್ತಿಯಾಗಿದ್ದು, ತಾಲೂಕು ಆಸ್ಪತ್ರೆಗಳಲ್ಲಿ ರೋಗಿಗಳ ಸ್ಥಿತಿ ಗಂಭೀರಗೊಂಡರೆ ಎಲ್ಲಿಗೆ ಕರೆದುಕೊಂಡು ಹೋಗಬೇಕು ಎಂಬುದು ರೋಗಿಗಳಿಗೆ ತಿಳಿಯದಾಗಿದೆ. ಇನ್ನು ಹುಬ್ಬಳ್ಳಿ ಕಿಮ್ಸ್​ಗೆ ಹೋಗಲು ಕೊನೆಯ ಮಾರ್ಗವಿತ್ತು. ಈಗ ಅಲ್ಲಿಯೂ ಬೆಡ್​ಗಳು ಭರ್ತಿ.
    ಜಿಲ್ಲಾಸ್ಪತ್ರೆಯಲ್ಲಿರುವ 172 ಬೆಡ್​ಗಳಲ್ಲಿ 20 ವೆಂಟಿಲೇಟರ್ ಬೆಡ್​ಗಳಿದ್ದರೆ, ಇನ್ನುಳಿದ 152 ಆಕ್ಸಿಜನ್ ಬೆಡ್​ಗಳಿವೆ. ಅವೆಲ್ಲವೂ ಭರ್ತಿಯಾಗಿವೆ. ಹೊಸದಾಗಿ ಸೋಂಕು ಪತ್ತೆಯಾಗುವ ಹಾಗೂ ಕೋವಿಡ್ ಲಕ್ಷಣಗಳು ಗಂಭೀರವಾಗಿರುವ ರೋಗಿಗಳು ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುವುದು ಅನಿವಾರ್ಯವಾಗಿದೆ.

    ತಾಲೂಕಿನಲ್ಲಿ ಪರಿಸ್ಥಿತಿ ಸ್ಥಿತಿ ಗಂಭೀರ: ಜಿಲ್ಲೆಯ ಆರು ತಾಲೂಕು ಆಸ್ಪತ್ರೆಗಳಲ್ಲಿ ಒಟ್ಟು 305 ಬೆಡ್​ಗಳಿವೆ. ಅದರಲ್ಲಿ ಬ್ಯಾಡಗಿಯಲ್ಲಿ 3, ಹಾನಗಲ್ಲ ತಾಲೂಕಿನಲ್ಲಿ 2, ಸವಣೂರ ತಾಲೂಕಿನಲ್ಲಿ 6, ಶಿಗ್ಗಾಂವಿ 5, ರಾಣೆಬೆನ್ನೂರ ತಾಲೂಕಿನಲ್ಲಿ 6 ವೆಂಟಿಲೇಟರ್ ಬೆಡ್​ಗಳಿವೆ. ಇವು ಸದ್ಯ ಖಾಲಿಯಿವೆ.

    ಟೆಕ್ನಿಶಿಯನ್ ಇಲ್ಲದೇ ಧೂಳು: ಜಿಲ್ಲೆಯಾದ್ಯಂತ ಕೋವಿಡ್ ರೋಗಿಗಳಿಗೆ ಉಸಿರಾಟ ಸಮಸ್ಯೆ ಗಂಭೀರವಾಗುತ್ತಿದೆ. ಇಂತಹ ಸಮಯದಲ್ಲಿ ಹೆಚ್ಚಿನ ಪ್ರಮಾಣದ ವೆಂಟಿಲೇಟರ್​ಗಳು ಅವಶ್ಯಕವಾಗಿವೆ. ಸರ್ಕಾರ ರೋಗಿಗಳ ಜೀವ ಉಳಿಸಲೆಂದು ವೆಂಟಿಲೇಟರ್​ಗಳನ್ನು ಕೊಟ್ಟಿದೆ. ಆದರೆ, ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ 16, ಹಾನಗಲ್ಲ ತಾಲೂಕಾಸ್ಪತ್ರೆಯಲ್ಲಿ 3, ಸವಣೂರ ಆಸ್ಪತ್ರೆಯಲ್ಲಿ 4, ರಾಣೆಬೆನ್ನೂರ ಆಸ್ಪತ್ರೆಯಲ್ಲಿ 3 ವೆಂಟಿಲೇಟರ್​ಗಳಿದ್ದರೂ ಅವುಗಳನ್ನು ನಿರ್ವಹಿಸುವ ತಂತ್ರಜ್ಞರಿಲ್ಲದೇ ಧೂಳು ತಿನ್ನುತ್ತಿವೆ.

    ರೋಗಿಗಳನ್ನು ಕೇಳುವವರೇ ಇಲ್ಲ: ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಿಗೆ ಕರೊನಾ ಸೋಂಕಿನಿಂದ ಆಸ್ಪತ್ರೆಗಳಿಗೆ ದಾಖಲಾಗುವ ರೋಗಿಗಳಿಗೆ ಸೂಕ್ತ ಹಾಗೂ ಸಕಾಲದಲ್ಲಿ ಚಿಕಿತ್ಸೆ ಸಿಗುತ್ತಿಲ್ಲ. ಚಿಕಿತ್ಸೆ ಇರಲಿ ಸರಿಯಾದ ಸಮಯದಲ್ಲಿ ಊಟ, ಉಪಹಾರವನ್ನೂ ನೀಡುತ್ತಿಲ್ಲ ಎಂಬ ದೂರುಗಳಿವೆ. ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳ ಬಳಿ ಹೋಗಿ ಊಟ ಕೊಡುತ್ತಿಲ್ಲ. ವ್ಹೀಲ್​ಚೇರ್​ನಲ್ಲಿ ಪೇಪರ್ ಪ್ಲೇಟ್​ನಲ್ಲಿ ಅನ್ನವನ್ನಿಟ್ಟು ಕೊಠಡಿಯೊಳಗೆ ನೂಕುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ರಾಣೆಬೆನ್ನೂರಿನಲ್ಲಿ ಚಿಂತಾಜನಕ ಸ್ಥಿತಿ: ನಗರದ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಮೂರು ವೆಂಟಿಲೇಟರ್ ಬೆಡ್​ಗಳಿವೆ. ಆದರೆ, ಅವುಗಳ ನಿರ್ವಹಣೆ ಮಾಡುವವರಿಲ್ಲದೆ ಮೂಲೆ ಸೇರಿವೆ. ಕೋವಿಡ್ ಸೋಂಕಿತರಿಗೆ 35 ಆಕ್ಸಿಜನ್ ಬೆಡ್​ಗಳನ್ನು ಕಾಯ್ದಿರಿಸಲಾಗಿದ್ದು, ಎಲ್ಲವೂ ಭರ್ತಿಯಾಗಿವೆ. 32 ಸಾರಿ ಕೇಂದ್ರದಲ್ಲಿ ಆಕ್ಸಿಜನ್ ಬೆಡ್​ಗಳಿವೆ. ಎಲ್ಲವೂ ಭರ್ತಿಯಾಗಿವೆ. 6 ತುರ್ತು ರೋಗಿಗಳ ಬೆಡ್​ಗಳಿದ್ದು ಅವೂ ಭರ್ತಿಯಾಗಿವೆ. ನಿತ್ಯವೂ ತಾಲೂಕು ಆಸ್ಪತ್ರೆಗೆ 90 ಆಕ್ಸಿಜನ್ ಸಿಲಿಂಡರ್ ಅವಶ್ಯಕತೆಯಿದೆ. ಆದರೆ, ಸರ್ಕಾರ ಹಾಗೂ ಇತರೆಡೆಯಿಂದ 70 ಸಿಲಿಂಡರ್ ಮಾತ್ರ ಪೂರೈಕೆಯಾಗುತ್ತಿವೆ. ಆದ್ದರಿಂದ ನಿತ್ಯವೂ ರೋಗಿಗಳಿಗೆ ಯಾವ ರೀತಿ ಚಿಕಿತ್ಸೆ ವ್ಯವಸ್ಥೆ ಮಾಡಬೇಕು ಎಂಬುದು ತಿಳಿಯುತ್ತಿಲ್ಲ. ಮತ್ತೊಂದೆಡೆ ಸೋಂಕಿತರನ್ನು ಹಾವೇರಿಗೆ ಕಳುಹಿಸಬೇಕಾದರೆ ಅಲ್ಲಿಯೂ ಬೆಡ್ ಖಾಲಿ ಇಲ್ಲ ಎನ್ನುತ್ತಿದ್ದಾರೆ. ದಾವಣಗೆರೆಯಲ್ಲೂ ಅದೇ ಸ್ಥಿತಿ. ನಮ್ಮಲ್ಲೂ ಗಂಭೀರ ಸ್ಥಿತಿ ನಿರ್ವಣವಾಗಿದೆ. ಏನು ಮಾಡಬೇಕು ಎಂಬುದೇ ತಿಳಿಯುತ್ತಿಲ್ಲ ಎಂದು ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ. ಗೋವಿಂದ ಯು. ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಹಿರೇಕೆರೂರಿನಲ್ಲಿ ಇಲ್ಲ ತಜ್ಞ ವೈದ್ಯರು: ತಾಲೂಕು ಆಸ್ಪತ್ರೆಯಲ್ಲಿ 5 ವೆಂಟಿಲೇಟರ್, 3 ಐಸಿಯು ವ್ಯವಸ್ಥೆಯಿದೆ. ಆದರೆ, ಪರಿಣಿತ ತಜ್ಞ ವೈದ್ಯರಿಲ್ಲ. 30 ಕೋವಿಡ್ ಸೋಂಕಿತರ ಬೆಡ್ ಇದ್ದು, 4 ಖಾಲಿ ಇವೆ. ಆಕ್ಸಿಜನ್ ಕೊರತೆ ಇಲ್ಲ . ನಾಲ್ಕು ಜಂಬೋ ಸಿಲಿಂಡರ್ ಭರ್ತಿ ಇವೆ. ತುರ್ತು ಚಿಕಿತ್ಸೆಗಾಗಿ ರೋಗಿಗಳನ್ನು ದಾವಣಗೆರೆ, ಹಾವೇರಿ, ಶಿಕಾರಿಪುರ, ಶಿವಮೊಗ್ಗಕ್ಕೆ ಕಳುಹಿಸುತ್ತಿದ್ದಾರೆ. ಅಲ್ಲಿನ ಆಸ್ಪತ್ರೆಗಳೂ ರೋಗಿಗಳಿಂದ ಭರ್ತಿಯಾಗಿದ್ದು, ಪರಿಸ್ಥಿತಿ ಕೈ ಮೀರಿದರೆ ದೇವರೇ ಕಾಪಾಡಬೇಕು. ವ್ಯಾಕ್ಸಿನ್ ಮೊದಲ ಹಾಗೂ ಎರಡನೇ ಲಸಿಕೆ ಪಡೆಯಲು ಏಕಾಏಕಿ ಜನರು ಮುಗಿಬಿದ್ದ ಕಾರಣ ಆಸ್ಪತ್ರೆಯಲ್ಲಿ ಎಲ್ಲರಿಗೂ ಲಸಿಕೆ ಸಿಗುತ್ತಿಲ್ಲ. ಇದರಿಂದ ಅಲ್ಲಿನ ಸಿಬ್ಬಂದಿಯೊಂದಿಗೆ ನಿತ್ಯ ಮಾತಿನ ಚಕಮಕಿ ನಡೆಯುತ್ತಿದೆ.

    ಬ್ಯಾಡಯಲ್ಲಿ 22 ಬೆಡ್ ಭರ್ತಿ: ತಾಲೂಕಿನಲ್ಲಿ 101 ಜನ ಕೋವಿಡ್ ಪಾಸಿಟಿವ್ ದೃಢಪಟ್ಟವರಿದ್ದಾರೆ. ಈ ಪೈಕಿ ಕೋವಿಡ್ ಆಸ್ಪತ್ರೆಯಲ್ಲಿ 23 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದ 54 ಜನರು ಹೋಂ ಐಸೋಲೇಷನ್​ನಲ್ಲಿ, 17 ಜನ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆಯ ಕೋವಿಡ್ ಕೇರ್ ಸೆಂಟರ್​ನಲ್ಲಿದ್ದಾರೆ. ಇಬ್ಬರು ಹಾವೇರಿ ಖಾಸಗಿ ಆಸ್ಪತ್ರೆಯಲ್ಲಿ ಹಾಗೂ ಒಬ್ಬ ರೋಗಿ ಹೊರ ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ ಆಸ್ಪತ್ರೆಯಲ್ಲಿ ಒಟ್ಟು 50 ಬೆಡ್​ಗಳಿದ್ದು, 22 ಭರ್ತಿಯಾಗಿವೆ. ಎಲ್ಲ ಬೆಡ್​ಗಳಿಗೂ ಆಕ್ಸಿಜನ್ ವ್ಯವಸ್ಥೆಯಿದೆ. 3 ವೆಂಟಿಲೇಟರ್ ಬೆಡ್ ಖಾಲಿ ಉಳಿದಿವೆ ಎಂದು ವೈದ್ಯಾಧಿಕಾರಿ ಡಾ. ಸುಹಿಲ್ ಹರವಿ ತಿಳಿಸಿದ್ದಾರೆ.

    ಸವಣೂರಲ್ಲಿ ಉತ್ತಮ ವ್ಯವಸ್ಥೆ: ತಾಲೂಕು ಆಸ್ಪತ್ರೆಯಲ್ಲಿರುವ ಕೋವಿಡ್ ಸೆಂಟರ್ ವ್ಯವಸ್ಥೆ ಸುಸ್ಥಿತಿಯಲ್ಲಿದ್ದು ಒಟ್ಟು 45 ಬೆಡ್​ಗಳನ್ನು ಹೊಂದಿದೆ. 26 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ 6 ರೋಗಿಗಳು ಆಕ್ಸಿಜನ್ ಮೇಲಿದ್ದಾರೆ. ಆಸ್ಪತ್ರೆಯಲ್ಲಿ 6 ವೆಂಟಿಲೇಟರ್ ಸೌಲಭ್ಯವಿದ್ದು, ಅದರಲ್ಲಿ 2 ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಸಿಬ್ಬಂದಿ ಕೊರತೆಯ ಹಿನ್ನೆಲೆಯಲ್ಲಿ 4 ವೆಂಟಿಲೇಟರ್ ಧೂಳು ತಿನ್ನುತ್ತಿವೆ. ಆಸ್ಪತ್ರೆಯಲ್ಲಿ 55 ಸಿಲಿಂಡರ್​ಗಳಲ್ಲಿ 7 ಖಾಲಿಯಾಗಿವೆ. 48 ತುಂಬಿರುವ ಸಿಲಿಂಡರ್ ಲಭ್ಯವಾಗಿವೆ.

    ಶಿಗ್ಗಾಂವಿಯಲ್ಲಿ ತೊಂದರೆ ಇಲ್ಲ: ಶಿಗ್ಗಾಂವಿ ಆಸ್ಪತ್ರೆ ಮತ್ತು ಬಾಡದಲ್ಲಿನ ಕೋವಿಡ್ ಕೇಂದ್ರಗಳಲ್ಲಿ ಸೇರಿ ಒಟ್ಟು 88 ಬೆಡ್​ಗಳಿವೆ. ಇವುಗಳಲ್ಲಿ 44 ಆಕ್ಸಿಜನ್ ಬೆಡ್​ಗಳು 44 ಆಕ್ಸಿಜನ್ ರಹಿತ ಬೆಡ್​ಗಳಿವೆ. ಶಿಗ್ಗಾಂವಿ ಕೋವಿಡ್ ಸೆಂಟರ್​ನಲ್ಲಿ 5 ವೆಂಟಿಲೇಟರ್ ಬೆಡ್​ಗಳ ಲಭ್ಯತೆ ಇದೆ. ತಾಲೂಕಿನ ಎರಡು ಕೇಂದ್ರಗಳಲ್ಲಿ ಒಟ್ಟು 66 ಸೋಂಕಿತರಿದ್ದಾರೆ. ಒಟ್ಟು 44 ಆಕ್ಸಿಜನ್ ಬೆಡ್​ಗಳ ಪೈಕಿ 39 ಬೆಡ್​ಗಳು ಭರ್ತಿಯಾಗಿವೆ. 5 ಖಾಲಿ ಇವೆ. ಇದರ ಜತೆಗೆ 5 ವೆಂಟಿಲೇಟರ್ ಬೆಡ್​ಗಳು ಖಾಲಿ ಇವೆ. ಒಟ್ಟು 91 ಜಂಬೋ ಆಕ್ಸಿಜನ್ ಸಿಲಿಂಡರ್ ಸಂಗ್ರಹವಿದ್ದು, ಇವುಗಳಲ್ಲಿ 13 ಸಿಲಿಂಡರ್ ಖಾಲಿಯಾಗಿದ್ದು, 78 ಆಕ್ಸಿಜನ್ ಸಿಲೆಂಡರ್​ಗಳ ಲಭ್ಯತೆ ಇದೆ. ಸೋಂಕಿತರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಹಾವೇರಿ ಜಿಲ್ಲಾಸ್ಪತ್ರೆಗೆ ಆಂಬುಲೆನ್ಸ್ ಮೂಲಕ ಹೆಚ್ಚಿನ ಚಿಕಿತ್ಸೆಗೆ ದಾಖಲಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ(ಪ್ರಭಾರಿ) ಡಾ. ನಾಗೇಶ ಗೂಂಗಿ ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts