ಆಲ್ದೂರು: ಅಡಕೆ, ಕಾಫಿ ಬೆಳೆಗಾರರ ಸಮಸ್ಯೆ, ಒತ್ತುವರಿ ಸಮಸ್ಯೆ, ಕಾಡು ಪ್ರಾಣಿಗಳಿಂದಾಗುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು, ಕೇಂದ್ರ ಸರ್ಕಾರದ ಯೋಜನೆ, ರಾಜ್ಯ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಶನಿವಾರ ನಾರಾಯಣಗುರು ಸಮುದಾಯ ಭನವದಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಈ ಚುನಾವಣೆ ದೇಶದ ಭವಿಷ್ಯ ನಿರ್ಧರಿಸುತ್ತದೆ. ಮೋದಿ ಭಾರತ ಎನ್ನುವಷ್ಟು ದೇಶ ಹೆಸರು ಮಾಡಿದೆ. ಅಭಿವೃದ್ಧಿ, ದೇಶ ರಕ್ಷಣೆ ಬಿಜೆಪಿ ಗುರಿ ಎಂದರು.
ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರ್ಕಾರ ರಾಮ ಎನ್ನುವವನೇ ಕಾಲ್ಪನಿಕ ಎಂದು ಸುಪ್ರೀಂ ಕೋರ್ಟ್‌ಗೆ ಹೋಗಿತ್ತು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದಾಗ ರಾಹುಲ್ ಗಾಂಧಿ ಸೇರಿ ಕಾಂಗ್ರೆಸ್ ಸಂಸದರು ಕಪ್ಪು ಬಟ್ಟೆ ಧರಿಸಿ ಸಂಸತ್ತಿಗೆ ಬಂದಿದ್ದರು. ರಾಮ ಮಂದಿರ ನಿರ್ಮಾಣವಾದರೆ ರಕ್ತದ ಓಕುಳಿ ಹರಿಯುತ್ತದೆ ಎಂದಿದ್ದರು. ಈಗ ಅಧಿಕಾರದಲ್ಲಿರುವುದು ಭಯೋತ್ಪಾದಕರಿಗೆ ಬೆಂಬಲ ಕೊಡುವ ಸರ್ಕಾರ ಅಲ್ಲ ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ, ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕಲ್ಮರುಡಪ್ಪ, ಆಲ್ದೂರು ಮಂಡಲ ಅಧ್ಯಕ್ಷ ರವಿ ಬಸರವಳ್ಳಿ, ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನೇಶ್ ಮುಗಳವಳ್ಳಿ, ಜಿಲ್ಲಾ ಉಪಾಧ್ಯಕ್ಷ ಕವೀಶ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸಂತೋಷ್ ಕೋಟ್ಯಾನ್, ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ರವೀಂದ್ರ ಬಸರವಳ್ಳಿ, ಅರವಿಂದ್ ಭೂತನಕಾಡು, ಬಿಜೆಪಿ ಮುಖಂಡರಾದ ದೀಪಕ್ ದೊಡ್ಡಯ್ಯ, ರಾಜಪ್ಪ, ರಾಜಶೇಖರ್, ರಂಗನಾಥ್, ಮನು ಬಸರವಳ್ಳಿ, ನಾರಾಯಣ ಆಚಾರ್ಯ, ಮಹಿಳಾ ಮೋರ್ಚಾದ ಮಂಜುಳಾ, ಕಾರ್ಯಕರ್ತರು ಇದ್ದರು.