More

    ಗ್ಲೆನ್ ಫಿಲಿಪ್ಸ್ ಸ್ಫೋಟಕ ಶತಕ, ಟಿ20 ಸರಣಿ ಜಯಿಸಿದ ನ್ಯೂಜಿಲೆಂಡ್

    ಮೌಂಟ್ ಮೌಂಗನುಯಿ: ಯುವ ಬ್ಯಾಟ್ಸ್‌ಮನ್ ಗ್ಲೆನ್ ಫಿಲಿಪ್ಸ್ (108 ರನ್, 51 ಎಸೆತ, 10 ಬೌಂಡರಿ, 8 ಸಿಕ್ಸರ್) ಸ್ಫೋಟಕ ಶತಕದ ನೆರವಿನಿಂದ ನ್ಯೂಜಿಲೆಂಡ್ ತಂಡ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ 72 ರನ್‌ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 3 ಪಂದ್ಯಗಳ ಸರಣಿಯನ್ನು 2-0ಯಿಂದ ವಶಪಡಿಸಿಕೊಂಡಿದೆ. ಅಂತಿಮ ಪಂದ್ಯ ಸೋಮವಾರ ಇಲ್ಲೇ ನಡೆಯಲಿದೆ.

    ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಕಿವೀಸ್ ಪರ 23 ವರ್ಷದ ಫಿಲಿಪ್ಸ್ 46 ಎಸೆತಗಳಲ್ಲೇ ಶತಕ ಪೂರೈಸಿದರು. ಈ ಮೂಲಕ ಕಿವೀಸ್ ಪರ ಅತಿವೇಗದ ಟಿ20 ಶತಕ ಸಿಡಿಸಿದ ಕಾಲಿನ್ ಮನ್ರೋ (47 ಎಸೆತ) ದಾಖಲೆ ಮುರಿದರು. ಇದಲ್ಲದೆ ಅವರು 3ನೇ ವಿಕೆಟ್‌ಗೆ ಡೆವೊನ್ ಕಾನ್‌ವೇ (65* ರನ್, 37 ಎಸೆತ, 4 ಬೌಂಡರಿ, 4 ಸಿಕ್ಸರ್) ಜತೆಗೂಡಿ ಸೇರಿಸಿದ 184 ರನ್ ನೆರವಿನಿಂದ ಕಿವೀಸ್ ತಂಡ 3 ವಿಕೆಟ್‌ಗೆ 238 ರನ್ ಪೇರಿಸಿತು. ಪ್ರತಿಯಾಗಿ ವಿಂಡೀಸ್ ತಂಡ 9 ವಿಕೆಟ್‌ಗೆ 166 ರನ್ ಗಳಿಸಲಷ್ಟೇ ಶಕ್ತವಾಯಿತು.

    ಫಿಲಿಪ್-ಕಾನ್‌ವೇ ಸೇರಿಸಿದ 184 ರನ್, ಕಿವೀಸ್ ಪರ ಟಿ20 ಕ್ರಿಕೆಟ್‌ನಲ್ಲಿ ಅತ್ಯಧಿಕ ಜತೆಯಾಟವಾಗಿದೆ. ಮಾರ್ಟಿನ್ ಗುಪ್ಟಿಲ್-ಕೇನ್ ವಿಲಿಯಮ್ಸನ್ 2016ರಲ್ಲಿ ಪಾಕ್ ವಿರುದ್ಧ 171 ರನ್ ಜತೆಯಾಟವಾಡಿದ್ದು ಹಿಂದಿನ ಗರಿಷ್ಠ. ಗ್ಲೆನ್ ಫಿಲಿಪ್ಸ್ ಟಿ20 ಪಂದ್ಯದಲ್ಲಿ ಪವರ್‌ಪ್ಲೇ ನಂತರ ಬ್ಯಾಟಿಂಗ್‌ಗೆ ಇಳಿದು ಗರಿಷ್ಠ ರನ್ ಗಳಿಸಿದ ಬ್ಯಾಟ್ಸ್‌ಮನ್ ಎನಿಸಿದರು. ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್ 101 ರನ್ ಗಳಿಸಿದ್ದು ಹಿಂದಿನ ಗರಿಷ್ಠ. ಇದು ಟಿ20 ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್‌ನ 2ನೇ ಗರಿಷ್ಠ ಮೊತ್ತವಾಗಿದೆ. ಈ ಮುನ್ನ 2 ಬಾರಿ 243 ರನ್ ಪೇರಿಸಿತ್ತು.

    ನ್ಯೂಜಿಲೆಂಡ್: 3 ವಿಕೆಟ್‌ಗೆ 238 (ಗುಪ್ಟಿಲ್ 34, ಸೀರ್ಟ್ 18, ಕಾನ್‌ವೇ 65*, ಗ್ಲೆನ್ ಫಿಲಿಪ್ಸ್ 108, ಅಲೆನ್ 35ಕ್ಕೆ 1, ಪೊಲ್ಲಾರ್ಡ್ 33ಕ್ಕೆ 1), ವೆಸ್ಟ್ ಇಂಡೀಸ್: 9 ವಿಕೆಟ್‌ಗೆ 166 (ಫ್ಲೆಚರ್ 20, ಹೆಟ್ಮೆಯರ್ 25, ಮೇಯರ್ಸ್‌ 20, ಪೊಲ್ಲಾರ್ಡ್ 28, ಪೂರನ್ 7, ಕೀಮೊ ಪೌಲ್ 26*, ಜೇಮಿಸನ್ 15ಕ್ಕೆ 2, ಸ್ಯಾಂಟ್ನರ್ 41ಕ್ಕೆ 2, ಸೌಥಿ 49ಕ್ಕೆ 1, ಫರ್ಗ್ಯುಸನ್ 22ಕ್ಕೆ 1, ನೀಶಾಮ್ 12ಕ್ಕೆ 1, ಸೋಧಿ 26ಕ್ಕೆ 1). ಪಂದ್ಯಶ್ರೇಷ್ಠ: ಗ್ಲೆನ್ ಫಿಲಿಪ್ಸ್.

    2ನೇ ಏಕದಿನ ಪಂದ್ಯದಲ್ಲೂ ಎಡವಿದ ಭಾರತ, ಸರಣಿ ಗೆದ್ದ ಆಸ್ಟ್ರೇಲಿಯಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts