More

    ರಾಷ್ಟ್ರಪತಿಗೆ ಕ್ಷಮಾದಾನ ಅರ್ಜಿ ಸಲ್ಲಿಸಲು 7 ದಿನ ಗಡುವು ನೀಡಿ

    ನವದೆಹಲಿ: ಮರಣದಂಡನೆಗೆ ಒಳಗಾದ ಅಪರಾಧಿ ರಾಷ್ಟ್ರಪತಿಗೆ ಕ್ಷಮಾದಾನ ಅರ್ಜಿ ಸಲ್ಲಿಸುವುದಿದ್ದರೆ ಡೆತ್ ವಾರಂಟ್ ಹೊರಡಿಸಿದ ಏಳು ದಿನದೊಳಗೆ ಸಲ್ಲಿಸುವಂತೆ ಗಡುವು ನಿಗದಿ ಪಡಿಸಲು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್​ಗೆ ಬುಧವಾರ ಮನವಿ ಮಾಡಿದೆ ಮತ್ತು ಡೆತ್ ವಾರಂಟ್ ಜಾರಿಯಾದ ಏಳು ದಿನದೊಳಗೆ ಗಲ್ಲು ಶಿಕ್ಷೆ ಜಾರಿಗೊಳಿಸುವುದನ್ನು ಕಡ್ಡಾಯಗೊಳಿಸುವಂತೆಯೂ ಕೋರಿದೆ.

    ಗಲ್ಲು ಶಿಕ್ಷೆ ಕಾಯಂಗೊಳಿಸಿದ ಪ್ರಕರಣಗಳಲ್ಲಿ ಮರುಪರಿಶೀಲನೆ ಅರ್ಜಿ ತಿರಸ್ಕೃತವಾದ ನಂತರ ಕ್ಯುರೇಟಿವ್ ಅರ್ಜಿ ಸಲ್ಲಿಸಲು ಗಡುವು ನಿಗದಿಪಡಿಸುವಂತೆ ಗೃಹ ಸಚಿವಾಲಯ ಸವೋನ್ನತ ನ್ಯಾಯಾಲಯವನ್ನು ಕೋರಿದೆ. ಗಲ್ಲು ಶಿಕ್ಷೆ ಜಾರಿ ಪ್ರಕ್ರಿಯೆಯನ್ನು ವಿಳಂಬವಿಲ್ಲದೆ ಜಾರಿ ಮಾಡುವ ದೃಷ್ಟಿಯಿಂದ ಇದು ಅಗತ್ಯ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದೆ.

    ನಿರ್ಭಯಾ ಪ್ರಕರಣ ಹಿನ್ನೆಲೆ: 2012ರ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಒಳಗಾದವರು ಒಂದಾದ ಮೇಲೆ ಒಂದರಂತೆ ಮರುಪರಿಶೀಲನಾ ಅರ್ಜಿ, ಕ್ಯುರೇಟಿವ್ ಅರ್ಜಿ ಮತ್ತು ಕ್ಷಮಾದಾನ ಅರ್ಜಿಗಳನ್ನು ಸಲ್ಲಿಸುತ್ತಾ ಗಲ್ಲು ಶಿಕ್ಷೆ ಜಾರಿಯನ್ನು ವಿಳಂಬಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಈ ಮನವಿಗೆ ಮಹತ್ವ ಬಂದಿದೆ.

    ಅಪರಾಧ ಎಸಗಿದ ವೇಳೆ ತಾನು ಅಪ್ರಾಪ್ತನಾಗಿದ್ದೆ ಎಂಬ ಮನವಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ನಿರ್ಭಯಾ ಪ್ರಕರಣದ ಅಪರಾಧಿಗಳಲ್ಲಿ ಒಬ್ಬನಾದ ಪವನ್ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದ. ಅದನ್ನು ಸುಪ್ರೀಂಕೋರ್ಟ್ ಜ. 20ರಂದು ತಿರಸ್ಕರಿಸಿತು.

    ಅಪರಧಿಗಳಾದ ವಿನಯ್ ಶರ್ವ, ಅಕ್ಷಯ್ ಕುಮಾರ್ ಸಿಂಗ್, ಮುಕೇಶ್ ಕುಮಾರ್ ಸಿಂಗ್ ಮತ್ತು ಪವನ್​ರನ್ನು ಫೆಬ್ರವರಿ 1ರಂದು ನೇಣಿಗೇರಿಸುವಂತೆ ದೆಹಲಿ ನ್ಯಾಯಾಲಯ ಇತ್ತೀಚೆಗೆ ಹೊಸದಾಗಿ ಡೆತ್ ವಾರಂಟ್ ಹೊರಡಿಸಿದೆ. ಅವರನ್ನು ಜ. 22ರಂದು ನೇಣಿನ ಕುಣಿಕೆಗೆ ಏರಿಸುವಂತೆ ಮೊದಲು ಡೆತ್ ವಾರಂಟ್ ಹೊರಡಿಸಲಾಗಿತ್ತು. ಆದರೆ, ಅಪರಾಧಿಗಳ ತಕಾರರು ಅರ್ಜಿಗಳು ಬಾಕಿಯಿರುವುದರಿಂದಾಗಿ ಪ್ರಕ್ರಿಯೆ ವಿಳಂಬವಾಗಿದೆ. ಇದಕ್ಕೆ ನಿರ್ಭಯಾ ತಾಯಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts