More

    ಸಂಶೋಧನೆಗೆ ಹೆಚ್ಚು ಆದ್ಯತೆ ನೀಡಿ

    ಹುಬ್ಬಳ್ಳಿ: ಯುವಕರು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವುದರ ಜತೆಗೆ ಸಂಶೋಧನೆಗೆ ಹೆಚ್ಚು ಒತ್ತು ನೀಡಬೇಕು ಎಂದು ಮಹಾರಾಷ್ಟ್ರದ ಶಿವಾಜಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ, ವಿಜ್ಞಾನಿ ಡಾ. ಕೇಶವ ರಾಜಪುರೆ ಹೇಳಿದರು.
    ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ವಿಜ್ಞಾನ ಪ್ರಸಾರ, ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ಭೌತಶಾಸ್ತ್ರ ವಿಭಾಗದ ಸಹಯೋಗದಲ್ಲಿ ಇಲ್ಲಿಯ ಶ್ರೀ ಕಾಡಸಿದ್ಧೇಶ್ವರ ಕಲಾ ಮಹಾವಿದ್ಯಾಲಯ ಮತ್ತು ಎಚ್.ಎಸ್.ಕೆ. ವಿಜ್ಞಾನ ಸಂಸ್ಥೆಯಲ್ಲಿ ಶೂನ್ಯ ನೆರಳು ದಿನಾಚರಣೆ ಕುರಿತು ಏರ್ಪಡಿಸಿರುವ ಎರಡು ದಿನಗಳ ಕಾರ್ಯಾಗಾರವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು. ಸಂಶೋಧನೆಗಳು ಮಾನವನ ಏಳಿಗೆಗೆ ಮೀಸಲಿರಬೇಕು. ಕಂಪ್ಯೂಟರ್ ವಿಜ್ಞಾನ, ಅಟೋಮೇಷನ್, ಕೃತಕ ಬುದ್ಧಿಮತ್ತೆ (ಎ.ಐ), ಸಂವಹನ ಮುಂತಾದ ಕ್ಷೇತ್ರಗಳಲ್ಲಿ ಸಂಶೋಧನೆಗಳು ನಡೆಯಬೇಕಿದೆ ಎಂದರು.
    ಕಾರ್ಯಾಗಾರದ ಸಂಯೋಜಕ ಕೊಳ್ಳೆಗಾಲ ಶರ್ಮಾ ಮಾತನಾಡಿ, ಯುವಕರಲ್ಲಿ ವಿಜ್ಞಾನ ಕುರಿತು ಕುತೂಹಲ-ಪ್ರಜ್ಞೆ ಮೂಡಿಸಲು ಕುತೂಹಲಿ ವತಿಯಿಂದ ವಿವಿಧೆಡೆ ನಾಟಕಗಳನ್ನು ಪ್ರದರ್ಶಿಸಲಾಗುತ್ತಿದೆ ಎಂದರು.
    ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯು ಡಾ. ಉಮಾ ನೇರ್ಲೆ ಮಾತನಾಡಿ, ಈ ಎರಡು ದಿನಗಳ ಕಾರ್ಯಾಗಾರವು ಉಪನ್ಯಾಸಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಹೆಚ್ಚು ಉಪಯೋಗವಾಗಲಿದೆ ಎಂದರು. ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಸಿ.ಎಸ್. ಹಿರೇಮಠ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ, ಭೌತಶಾಸ್ತ್ರ ಉಪನ್ಯಾಸಕಿ ಜಯಶ್ರೀ ಬಿರಾದಾರ ಅತಿಥಿಗಳನ್ನು ಪರಿಚಯಿಸಿದರು. ಉಪನ್ಯಾಸಕಿ ಕೆ.ಪಿ. ರೋಹಿಣಿ ನಿರೂಪಿಸಿದರು. ಲತಾ ಹಿರೇಮಠ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts