More

    ಗಿರ್​ಮಿಟ್​| ಒಗ್ಗರಣಿಗೆ ಸಾಸ್ವಿ ಜಾಸ್ತಿ ಹಾಕಿದರ ಆಡಿಟ್ ಆಬ್ಜೆಕ್ಶನ್ ಆಗ್ತದ

    ಗಿರ್​ಮಿಟ್​| ಒಗ್ಗರಣಿಗೆ ಸಾಸ್ವಿ ಜಾಸ್ತಿ ಹಾಕಿದರ ಆಡಿಟ್ ಆಬ್ಜೆಕ್ಶನ್ ಆಗ್ತದನಮ್ಮ ಮಾಮಾ ಒಬ್ಬೊಂವ ಬ್ಯಾಂಕಿನಾಗ ನೌಕರಿ ಮಾಡ್ತಿದ್ದಾ, ಮೊನ್ನೆ ರಿಟೈರ್ಡನೂ ಆದಾ. ಮನ್ಯಾಗ ನಮ್ಮ ಮಾಮಿ ‘ನಮ್ಮ ಮನೆಯವರ ರಿಟೈರ್ಡ ಆಗ್ಯಾರ, ನಾಳಿಂದ ನೀ ಕೆಲಸಕ್ಕ ಬರೋದ ಬ್ಯಾಡಾ’ ಅಂತ ಕೆಲಸ್ದೊಕಿನ ಅಗದಿ ಖುಶಿಲೇ ಬಿಡಸಿದ್ರ ಅತ್ತಲಾಗ ಆ ಬ್ಯಾಂಕಿನವರ ನಮ್ಮ ಮಾಮಿಗಿಂತಾ ಜಾಸ್ತಿ ಖುಶ್ ಆಗಿ ತಮ್ಮ ಕಾರನಾಗ ಮಾಮಾಗ ಲಾಸ್ಟ ದಿವಸ ಮನಿತನಕ ಬಿಟ್ಟ ಹೋದರು.
    ಹಂಗ ನಮ್ಮ ಮಾಮಿ ಒಂದ ಗಂಡಾಳ ಸಿಗ್ತ ಅಂತ ಖುಶ್ ಆದರ ಬ್ಯಾಂಕಿನವರ ‘ಯಪ್ಪಾ..ಕಡಿಕೂ ಈ ದೇಶಪಾಂಡೆ ರಿಟೈರ್ಡ್ ಆದನಲಾ’ ಅಂತ literally ಪಟಾಕ್ಷಿ ಹಚ್ಚಿ celebrate ಮಾಡಿದರು. ಅದಕ್ಕ ಕಾರಣ ಏನಪಾ ಅಂದರ ನಮ್ಮ ಮಾಮಾ ಭಾರಿ ಶಾಣ್ಯಾ. ಮ್ಯಾಲೆ CA ಬ್ಯಾರೆ ಕಲ್ತೇನಿ ಅಂತ ಹೇಳ್ತಿದ್ದಾ..ಹಂಗ ಖರೆ ಅಂದರ ಹತ್ತ ಸರತೆ CA attempt ಮಾಡಿ ಫೇಲ್ ಆಗಿದ್ದಾ ಆದರ ಹತ್ತ ಸರತೆ ಓದಿದ್ದಕ್ಕ ಸ್ವಲ್ಪ ಜಾಸ್ತಿನ ಶಾಣ್ಯಾ ಇದ್ದಾ ಅನ್ನರಿ. ಅಲ್ಲಾ ನನ್ನ ಸೋದರಮಾವ ಅಂದರ ಶಾಣ್ಯಾ ಇರಲಾರದ ಏನ ಬಿಡ್ರಿ. ಸೋದರ ಅಳಿಯಾನ ಸ್ವಲ್ಪರ ಹೋಲಬೇಕಲಾ? ಅದರಾಗ ಇವಂದ ಅಕೌಂಟಿಂಗ ಇಷ್ಟ ಶಾರ್ಪ್ ಇತ್ತಂದರ ಜಗತ್ತಿನಾಗ ಟ್ಯಾಲಿ ಆಗಲಾರದ್ದ ಅಕೌಂಟ್ಸ ಎಲ್ಲಾ ಕಣ್ಣ ಮುಚ್ಚಿ ಕಣ್ಣ ತಗೆಯೋದರಾಗ ಟ್ಯಾಲಿ ಮಾಡ್ತಿದ್ದಾ. ಅಂವಾ ಆ ಪರಿ ಶಾಣ್ಯಾ ಇದ್ದದ್ದಕ್ಕ ಅವಂಗ ಅಡಿಟ್ ಡಿಪಾರ್ಟಮೆಂಟಗೆ ಹಾಕಿದ್ದರು. ತೊಗೊ ಕೇಳ್ತಿರೇನ, ರಿಟೈರ್ಡ್ ಆಗೋ ಮಟಾ ಬ್ಯಾಂಕಿನವರದ ಅಡಿಟ್ ಮಾಡಿ ಮಾಡಿ ಗೋಳ ಹೋಯ್ಕೊಂಡಿದ್ದ ಹೋಯ್ಕೊಂಡಿದ್ದ. ಮ್ಯಾನೇಜರಗೊಳ ಇವಂಗ ಟ್ರಾನ್ಸಫರ್ ಮಾಡಿ ಮಾಡಿ ಸಾಕಾಗಿ ಕಡಿಕೆ ಅವರ ವಾಲಿಂಟರಿ ರಿಟೈರಮೆಂಟ್ ತೊಗೊಂಡ ಹೋಗ್ತಿದ್ದರು, ಅಷ್ಟ ಜೀವಾ ತಿಂತಿದ್ದಾ. ಅಗದಿ ಪರಫೆಕ್ಟ ಅಕೌಂಟಿಂಗ್ ಮನಷ್ಯಾ. principally correct but practically illogical. ಬ್ಯಾಂಕಿನವರಿಗೆ ಒಂಥರಾ ಬಿಸಿ ತುಪ್ಪ ಇದ್ದಂಗ ಇದ್ದಾ.

    He never went to sleep until ledger debits and credits are equal, , ಮ್ಯಾಲೆ ಮತ್ತೊಬ್ಬರಿಗೆ ಮಲ್ಕೊಳಿಕ್ಕೂ ಕೊಡ್ತಿದ್ದಿಲ್ಲಾ. ಎಲ್ಲಾ ಬ್ರ್ಯಾಂಚನವರು ಇಂವಾ ಅಕೌಂಟಿಂಗಗೆ ಬರ್ತಾನ ಅಂದರ ಹೆದರಿ ಸಾಯಿತಿದ್ದರು. ಯಾ ಬ್ರ್ಯಾಂಚಿಗೆ ಹೋದರು ಒಂದ ಇಪ್ಪತ್ತ audit objections ಬರದ ಹೆಡ ಆಫೀಸಿಗೆ ಕಳಿಸಿ ಬಿಡ್ತಿದ್ದಾ, ಪಾಪ ಅವರ ಆ ಅಡಿಟ್ ಆಬ್ಜೇಕ್ಶನ್ಸ್ ಕ್ಲೋಸ್ ಮಾಡಲಿಕ್ಕೆ ವರ್ಷಾನಗಟ್ಟಲೇ ಹೆಣಗಾಡತಿದ್ದರು.

    ಅವನ ಅಡಿಟ್ ಆಬ್ಜೇಕ್ಶನ್ಸ್ ನೀವು ಒಮ್ಮೆ ಓದಿ ಬಿಟ್ಟರ ನಿಮಗ ವಿಚಿತ್ರ ಅನಸ್ತದ. ಅಮವಾಸಿ, ದೀಪಾವಳಿ- ದಸರಾ ಗಣಪತಿ ಹಬ್ಬದ್ದ ಪೂಜಾಕ್ಕ ಹೂ, ಕಾಯಿ ತಂದರ ನಿಮ್ finance rules and regulations ಒಳಗ ಹಬ್ಬಕ್ಕfunds provision ಎಲ್ಲೇ ಅದ ಅಂತಿದ್ದಾ, govt statutes ಒಳಗ ಇವಕ್ಕೇಲ್ಲಾ ಪೂ›ವಿಜನ್ ಇಲ್ಲಾ ಅಂತ ಆಬ್ಜೆಕ್ಶನ್ ಹಾಕ್ತಿದ್ದಾ. ಯಾವದರ ರಿಟೈರ್ಡ ಆದೋರಿಗೆ ಪಾಪ ಮೂವತ್ತ ವರ್ಷ ಸರ್ವೀಸ್ ಮಾಡಿರಿ ಅಂತ ಕರದ ಒಂದ ಶಾಲ ಹೊಚ್ಚಸಿಸಿ ಮಾಲಿ ಹಾಕಿದರ ಅದಕ್ಕ ಆಬ್ಜೇಕ್ಶನ್ ಹಾಕಿ ಮಾಲಿ ಹಾಕಿದವರ ಕಡೆಯಿಂದ recovery ಮಾಡ್ರಿ ಅಂತ ಗಂಟ ಬಿಳ್ತಿದ್ದಾ. ಒಮ್ಮೊಮ್ಮೆ ಅಂತೂ ಆ ರಿಟೈರ್ಡ ಆದೋರಿಗೆ ಮಾಲಿ ಹಾಕಿಸ್ಗೊಂಡಿದ್ದಕ್ಕ ಮೆಮೋ ಕೊಡ್ತಿದ್ದಾ. ಹಿಂಗ ಇವನ ಅಡಿಟ್ ಆಬ್ಜೇಕ್ಷನ್ಸ್ ಕೇಳ್ಕೋತ ಕೂತರ ಮುಗದ ಹೋತ. ಅಲ್ಲಾ ಹಂಗ ಅಂವಾprincipally correct ಆದರ ಅಮವಾಸಿ ಪೂಜಾಕ್ಕ ಕಾಯಿ ಒಡದರ ಅದರ ಖರ್ಚ ಯಾ ಹೆಡ್ ಒಳಗ ತೊರಿಸಿರಿ, ಅದಕ್ಕ provision ಎಲ್ಲೇ ಅದ ಅಂತ ಕೇಳಿದರ ಏನ್ಮಾಡಬೇಕ? ಹಿಂಗಾಗಿ ಬ್ಯಾಂಕಿನವರ ಇಂವಾ ರಿಟೈರ್ಡ ಆದರ ನಮ್ಮ ಪರ್ಸನಲ್ ರೊಕ್ಕದಲೇ ಜೋಡ ಕಾಯಿ ಒಡಸ್ತೇನಿ ಅಂತಿದ್ದರು.

    ಅವನ ಸ್ವಭಾವನ ಹಂಗ. ಅಂವಾ ತನ್ನ ಸಂಸಾರಿಕ ಜೀವನದಾಗೂ ಹಂಗ ಇದ್ದಾನ ಮತ್ತ. ಮಾಮಿದ ಕುಂಡಲಿನ ಹತ್ತ ಸರತೆ ಟ್ಯಾಲಿ ಮಾಡಿ ನೋಡಿ profit before&after marriage ಲೆಕ್ಕಾ ಮಾಡಿ ಲಗ್ನಾ ಮಾಡ್ಕೊಂಡಂವಾ. ನಮ್ಮ ಮಾಮಿಗಂತೂ ಯಾಕರ ಅಕೌಂಟಿಂಗ್ ಮನಷ್ಯಾನ ಲಗ್ನಾ ಮಾಡ್ಕೊಂಡೇನೊ ಅನಿಸಿತ್ತ. ಇರೋ ಒಂದ ಸಣ್ಣ ಸಂಸಾರಕ್ಕೂ ಬಜೆಟ್ ಫಿಕ್ಸ ಮಾಡ್ತಿದ್ದಾ, ಮಂದಿಗೆ ಗಿಫ್ಟ ಕೊಡಲಿಕ್ಕೂ ಫಂಡ ಅಲಾಟ್ ಮಾಡ್ತಿದ್ದ, ಅವನ್ನ ಬಜೆಟ್ ದಾಟಿ ಒಂದ ಜಂಪರ್ ಪೀಸ ಎಕ್ಸಾ್ಟ್ರ ಉಡಿ ತುಂಬಿದರು ಹೆಂಡ್ತಿಗೆ ಅಡಿಟ್ ಆಬ್ಜೇಕ್ಷನ್ ಅನ್ನೊವಾ. ಅದ ಬಿಡ್ರಿ ನಮ್ಮ ಮಾಮಿ ಅಂವಾ ಹಂಗ ಮಾಡೋದಕ್ಕ ‘ಎಲ್ಲೇ ಒಗ್ಗರಣಿಗೆ ಸಾಸ್ವಿ ಜಾಸ್ತಿ ಹಾಕಿದರ audit objection ಅಂತಾನೊ, ಕಟ್ಟಿನ ಸಾರಿಗೆ ಒಂದ ಕಡ್ಡಿ ಕರಿಬೇವು ಜಾಸ್ತಿ ಬಿದ್ದರ ಬೈತಾನೋ’ ಅಂತ ಹೆದರಿ ಸಾಯ್ತಿದ್ಲು.

    ಒಂದ ಕಾಯಿಪಲ್ಯಾ ತರಲಿಕ್ಕೆ ಹೆದರೋಕಿ, ಮನಿ ಕಿರಾಣಿ ಸಾಮಾನ ತರಲಿಕ್ಕೆ ಟೆನ್ಶನ್ ಮಾಡ್ಕೊಳೊಕಿ. ಅದರಾಗ ಅವನ ಬಾರ್ಗೆನ್ ಅಂತೂ ಖತರನಾಕ ಇತ್ತ. ಇಂವಾ ಹತ್ತ ಸರತೆ ಜಿಕೇರಿ ಮಾಡೋದಕ್ಕ ಆ ಕಾಯಿಪಲ್ಲೆ ಮಾರೋರ ಸಹಿತ ಇವಂಗ ‘ಯಪ್ಪಾ ನೀ ಒಂದ ಸೀವಡ ಕೋತಂಬರಿಗೆ ಕೋಟೇಶನ್ ಕೇಳ್ ಬ್ಯಾಡ…ನಂಬದ ಒಂದ ರೇಟ ಬೇಕಾರ ತೊಗೊ ಬ್ಯಾಡರ ಬಿಡ’ ಅಂತ ಲಾಸ್ಟಿಗೆ ಇಂವಾ ವ್ಯಾಪಾರ ಮುಗಿಸಿದನಂದರ ಪೀಡಾ ಹೋತ ಅಂತ ಮತ್ತ ಕರದ ಒಂದ ಟೊಮೇಟೊ ಎಕ್ಸ್​ಟ್ರಾ ಬ್ಯಾಗಿನಾಗ ಹಾಕಿ ‘ಬೋನಸ್ ತೊಗೊಂಡ ಹೋಗ’ ಅಂತ ಕಳಸ್ತಿದ್ದರು.

    ಇದನ್ನೂ ಓದಿ: ಬೆಳಗ್ಗೆ ನಡೆಯಬೇಕಿದ್ದ ಮದುವೆ ರಾತ್ರೋರಾತ್ರಿ ರದ್ದು, ವಧು-ವರ ಒಂದಾಗುವ ಕ್ಷಣಕ್ಕೆ ಭಂಗ ತಂದಿದ್ದೇನು?

    ಅಲ್ಲಾ ಮಕ್ಕಳ ಲಗ್ನಾ ಮಾಡಿದಾಗ ಕಿರಾಣಿ ಸಾಮಾನದಿಂದ ಹಿಡದ ಶಾಮಿಯಾನದವರ ತನಕಾ ಎಲ್ಲಾರಿಗೂ ಸೀಲಡ ಕವರ ಟೆಂಡರ್ ಕರದ ಲಗ್ನಾ ಮಾಡಿದೊಂವಾ. ಮುಂದ ಪೇಮೆಂಟ್ 60 ಡೇಜ್ LC ಮ್ಯಾಲೆ ಕೊಟ್ಟಾ ಆ ಮಾತ ಬ್ಯಾರೆ. ನಮ್ಮ ಮಾಮಿಗಂತೂ ಅವನ ಸಂಬಂಧ ಸಾಕ ಸಾಕಾಗಿ ಹೋಗಿತ್ತ. ಏನೋ accountants are good lovers because they are great with figures ಅಂತ ನಮ್ಮ ಮಾಮಿ ಮಾಡ್ಕೊಂಡಿದ್ಲು…ಪಾಪ ಅಕಿಗೇನ ಗೊತ್ತಿತ್ತ ಅಕೌಂಟಂಟ್ ಮಾಡ್ಕೊಂಡರ ಹಣೇಬರಹ ಹಿಂಗ ಆಗ್ತದ ಅಂತ.

    ‘ನಿಮ್ಮ ಜೊತಿ ಸಂಸಾರ ಮಾಡಿ ಮಾಡಿ ನಾ ಛಛಿಟ್ಟಛಿಠಠಜಿಟ್ಞಗೆ ಹೋಗೊದ ಬಾಕಿ ಅದ’ ಅಂತ ನಮ್ಮ ಮಾಮಿ ಅಂದರ ಇಂವಾ ‘ನಿನ್ನ ಮಾಡ್ಕೊಂಡ ವರ್ಷಾ ವರ್ಷಾ ನಾ Depreciate ಆಗಕೋತ ಹೋಂಟೆನಿ ತೊಗೊ’ ಅಂತಿದ್ದಾ. ‘ಅದ ಏನೊ ಅಂತಾರಲಾ A fine is a tax for doing a wrong ಅಂತ, ಹಂಗ ನಾ ನಿಮ್ಮ ಕಟಗೊಂಡ ದಂಡಾ ತುಂಬಲಿಕತ್ತೇನಿ ತೊಗೊರಿ’ ಅಂತ ಮಾಮಿ ಅಂದರ ಇಂವಾ “A tax is a fine for doing well ಅಂತಾರ…ನೀ ನನ್ನ ಕಟಗೊಂಡಿದ್ದಕ್ಕ ಟ್ಯಾಕ್ಸ ಕೊಟ್ಟಿ ಅಂತ ತಿಳ್ಕೊ’ ಅಂತ ಮಾಮಿಗೆ ಮಸ್ಕಾ ಹೊಡಿತಿದ್ದಾ.

    ಅಲ್ಲಾ ಎಲ್ಲಾ ಬಿಟ್ಟ ಇವತ್ತ ನಮ್ಮ ಅಕೌಂಟೆಂಟ್ ಮಾಮಾಂದ ಯಾಕ ನೆನಪಾತ ಅಂದರ ಇನ್ನ ನಾಲ್ಕ ದಿವಸ ಬಿಟ್ಟರ National Chartered Accountant Day ಬರ್ತದ, ಅಂದರ ಜುಲೈ 1ಕ್ಕ ನಮ್ಮ ದೇಶದೊಳಗ ಲೆಕ್ಕ ಪರಿಶೋಧಕರ ದಿನ ಸೆಲೆಬ್ರೇಟ್ ಮಾಡ್ತಾರ. ಮೊನ್ನೆ ನಮ್ಮ ಚೇಂಬರ್ ಆಫ್ ಕಾಮರ್ಸ್​ದ ಪಾಸ್ಟ ಪ್ರೆಸಿಡೆಂಟ್ ರಮೇಶ ಪಾಟೀಲರು ‘ಈ ಸರತೆ National Chartered Accountant Dayಕ್ಕ ನಿಮ್ಮ ಮಾಮಾನ guest fix ಮಾಡಿದರ ಹೆಂಗ’ ಅಂತ ನನ್ನ ಕೇಳಿದರು. ಅದಕ್ಕ ಅವನ ಬಗ್ಗೆ ಇಷ್ಟ ಬರಿಬೇಕಾತ. ಇನ್ನ ಇದನ್ನ ಓದಿದ ಮ್ಯಾಲೆ ಅವರೇನ ಅವನ್ನ ಕರಿತಾರೊ ಇಲ್ಲೊ ಡೌಟ ಬಿಡ್ರಿ..ಎಲ್ಲರ ನಮ್ಮ ಮಾಮಾ ತನಗ ಹೊದಸಿದ್ದ ಶಾಲ್, ಕೊರಳಾಗ ಹಾಕಿದ್ದ ಮಾಲಿಗೆ ‘ನಿಮ್ಮ ಬೈ-ಲಾ ಒಳಗ ಇದಕ್ಕ ಪೂ›ವಿಜನ್ ಎಲ್ಲೇ ಅದ ತೊರಸರಿ’ ಅಂತ ಅವರನ ಕೇಳಿದರ ಏನ್ಮಾಡ್ತೀರಿ?

    ಈಗ ರಿಟೈರ್ಡ ಆದಮ್ಯಾಲೂ ನಮ್ಮ ಮಾಮಾ ಯಾವಾಗಲೂ ಕಿಸೆದಾಗ ಒಂದ ಇಪ್ಪತ್ತ ವರ್ಷದ ಹಿಂದಿನ ಕ್ಯಾಷಿಯೊ ಪಾಕೆಟ್ ಕ್ಯಾಲ್ಕುಲೇಟರ್ ಇಟಗೊಂಡ ಅಡ್ಡಾಡತಾನ….ನಾವ ಹೆಂಗ ಮೋಬೈಲ ಇಟ್ಕೊಂಡಿರ್ತೆವಿ ಹಂಗ, ಯಾಕ ಮಾಮಾ ಅಂದರ “an accountant with a calculator will never be Lonely’ ಅಂತಾನ. ಎನ್ಮಾಡ್ತಿರಿ? ಇನ್ನ ಇವತ್ತಿನ ನನ್ನ ಪ್ರಹಸನದ ಬ್ಯಾಲೆನ್ಸ ಶೀಟ್ ನಿಮ್ಮ ಮುಂದ ಇಟ್ಟೇನಿ..ಇದಕ್ಕ ನೀವು ಅಂದರ ಓದುಗರ auditors…. ನೋಡ್ರಿ objections ಏನರ ಇದ್ದರ ಹೋಟ್ಯಾಗ ಹಾಕೋರ್ರಿ ಮತ್ತ…
    ಇರಲಿ…ನಮ್ಮ ದೇಶದ ಎಲ್ಲಾ ಚಾರ್ಟರ್ಡ್ ಅಕೌಂಟೆಂಟ್ಸಗೆ ಲೆಕ್ಕ ಪರಿಶೋಧಕರ ದಿನದ advance ಶುಭಾಶಯಗಳು….ಇದ advance income tax ಇದ್ದಂಗ.
    (ಲೇಖಕರು ಹಾಸ್ಯ ಬರಹಗಾರರು)

    ಕೋವಿಡ್​ 19ಗೆ ಉಪ್ಪುನೀರು ರಾಮಬಾಣವಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts