More

    ಶಿಕ್ಷಣದ ಜತೆಗೆ ಕ್ರೀಡೆಯಲ್ಲೂ ಸಾಧಿಸಿ: ಸಚಿವ ಕೆ.ಸಿ.ನಾರಾಯಣಗೌಡ ಕಿವಿಮಾತು

    ಮಂಡ್ಯ: ಬಾಲಕಿಯರು ಕ್ರೀಡೆಯಲ್ಲಿ ಸಾಧನೆ ಮಾಡಲು ಅನುಕೂಲವಾಗುವಂತೆ ಕ್ರೀಡಾ ವಸತಿ ನಿಲಯ ನಿರ್ಮಾಣ ಮಾಡಲಾಗಿದೆ. ಈ ಸೌಲಭ್ಯವನ್ನು ಬಳಸಿಕೊಂಡು ಶಿಕ್ಷಣದ ಜತೆಗೆ ಕ್ರೀಡೆಯಲ್ಲಿ ಸಾಧನೆ ಮಾಡಿ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ತಿಳಿಸಿದರು.
    ನಗರದ ಸರ್.ಎಂ.ವಿಶ್ವೇಶ್ವರಯ್ಯ ಒಳಾಂಗಣ ಕ್ರೀಡಾಂಗಣದ ಆವರಣದಲ್ಲಿ ಬಾಲಕಿಯರ ಕ್ರೀಡಾ ವಸತಿ ನಿಲಯದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಸುಸಜ್ಜಿತವಾಗಿ ಬಾಲಕಿಯರ ಕ್ರೀಡಾ ವಸತಿ ನಿಲಯ ಕಟ್ಟಡವನ್ನು ಎರಡು ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಎರಡನೇ ಮಹಡಿ ನಿರ್ಮಾಣ ಕಾಮಗಾರಿ ಹಾಗೂ ಇನ್ನಿತರೆ ಕಾಮಗಾರಿಯನ್ನು ಕೈಗೊಳ್ಳಲು ಹೆಚ್ಚುವರಿಯಾಗಿ 90 ಲಕ್ಷ ರೂ ಬಿಡುಗಡೆ ಮಾಡಲು ಅನುಮೋದನೆ ನೀಡಲಾಗಿದೆ ಎಂದರು.
    ಹಾಲಿ ಇರುವ ಕ್ರೀಡಾ ವಸತಿ ನಿಲಯದಲ್ಲಿ ಸುಮಾರು 60ಕ್ಕೂ ಹೆಚ್ಚು ಬಾಲಕ ಮತ್ತು ಬಾಲಕಿಯರು ವ್ಯಾಸಂಗ ಮಾಡುತ್ತಿದ್ದು, ಅವರುಗಳಿಗೆ ಉತ್ತಮ ಗುಣಮಟ್ಟದ ಆಹಾರ, ಕ್ರೀಡಾ ಸಮವಸ್ತ್ರ, ಕ್ರೀಡಾ ಸಾಮಗ್ರಿಗಳನ್ನು ಸರಬರಾಜು ಮಾಡಲಾಗುತ್ತಿದೆ. ಮುಂಬರುವ ಶೈಕ್ಷಣಿಕ ವರ್ಷದಿಂದ ನೂತನವಾಗಿ ನಿರ್ಮಿಸಿರುವ ಬಾಲಕಿಯರ ಕ್ರೀಡಾ ವಸತಿ ನಿಲಯಕ್ಕೆ ಬಾಲಕಿಯರ ಪ್ರವೇಶಕ್ಕೆ ಅವಕಾಶ ನೀಡಿ ಹೆಣ್ಣು ಮಕ್ಕಳು ಕ್ರೀಡಾ ಕ್ಷೇತ್ರದಲ್ಲಿ ಇನ್ನು ಹೆಚ್ಚಿನ ಸಾಧನೆಯನ್ನು ಮಾಡಲು ಅಗತ್ಯ ಪೂರಕ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಹೇಳಿದರು.
    ಜಿಲ್ಲಾ ಕ್ರೀಡಾಂಗಣವನ್ನು 10 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ಮಾಡಲಾಗುತ್ತಿದ್ದು, ಖೇಲೊ ಇಂಡಿಯಾ ಯೋಜನೆಯಡಿ ಖೇಲೊ ಇಂಡಿಯಾ ಕೇಂದ್ರ ಕೂಡ ಸ್ಥಾಪನೆ ಆಗುತ್ತಿದೆ. ಇದೆಲ್ಲಕ್ಕಿಂತ ಪ್ರಮುಖವಾಗಿ ವೈಜ್ಞಾನಿಕವಾಗಿ ಕ್ರೀಡಾ ಪಟುಗಳಲ್ಲಿರುವ ಕ್ರೀಡಾ ಸಾಮರ್ಥ್ಯ ಗುರುತಿಸುವಂತ ಕ್ರೀಡಾ ವಿಜ್ಞಾನ ಕೇಂದ್ರ 2 ಕೋಟಿ ರೂ. ವೆಚ್ಚದಲ್ಲಿ ಸ್ಥಾಪನೆಯಾಗಿದೆ. ಹೆಚ್ಚಿನ ಕಡೆಗಳಲ್ಲಿ ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಕ್ರೀಡೆಗೆ ಮೂಲ ಸೌಕರ್ಯ ಕಲ್ಪಿಸುತ್ತಿದ್ದೇವೆ. ಕೆಲ ರಾಜ್ಯಗಳಲ್ಲಿ ಕ್ರೀಡೆಗೆ ದಾನಿಗಳು ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದಾರೆ. ಅದೇ ರೀತಿ ಕರ್ನಾಟಕದಲ್ಲಿಯೂ ಆ ಸಂಪ್ರದಾಯ ಹೆಚ್ಚಾಗಬೇಕು ಎಂದ ಅವರು, 2024ರಲ್ಲಿ ಪ್ಯಾರಿಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ಗೆ ರಾಜ್ಯದಿಂದ 100 ಕ್ರೀಡಾಪಟುಗಳನ್ನು ಕಳುಹಿಸುವ ಯೋಜನೆ ರೂಪಿಸಲಾಗಿದೆ. ಈಗಾಗಲೇ 35 ಕ್ರೀಡಾಪಟುಗಳನ್ನು ಗುರುತಿಸಲಾಗಿದೆ. ಕ್ರೀಡಾ ಪಟುಗಳಿಗೆ ತಲಾ 5 ಲಕ್ಷ ರೂ ಪ್ರೋತ್ಸಾಹ ಧನ ನೀಡಲಾಗುತ್ತಿದೆ ಎಂದು ತಿಳಿಸಿದರು.
    ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಮಾತನಾಡಿ, ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ಹೆಚ್ಚಿಸುವ ಸಲುವಾಗಿ ರಾಜ್ಯದ ಕ್ರೀಡಾಪಟುಗಳಿಗೆ ಪೊಲೀಸ್ ಇಲಾಖೆ ಘೋಷಿಸಿರುವ ಶೇ.2ಮೀಸಲಾತಿಯನ್ನು ಎಲ್ಲ ಇಲಾಖೆಗಳಿಗೂ ವಿಸ್ತರಿಸುವ ಚಿಂತನೆ ನಡೆಸಲಾಗುತ್ತಿದೆ. ಅಂತೆಯೇ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಬಾಲಕಿಯರಿಗಾಗಿ ಪ್ರತ್ಯೇಕ ಕ್ರೀಡಾ ವಸತಿ ನಿಲಯಗಳನ್ನು ಸ್ಥಾಪನೆಗೆ ಮುಂದಾಗಿದ್ದು, ಅದರಂತೆ ಮಂಡ್ಯ ಸೇರಿದಂತೆ 9 ಕಡೆ ನಿರ್ಮಾಣ ಮಾಡಿ ಉದ್ಘಾಟಿಸಲಾಗಿದೆ ಎಂದರು.
    ಮುಡಾ ಅಧ್ಯಕ್ಷ ಕೆ.ಶ್ರೀನಿವಾಸ್, ನಗರಸಭೆ ಅಧ್ಯಕ್ಷ ಎಚ್.ಎಸ್.ಮಂಜು, ಸದಸ್ಯ ಎಂ.ಪಿ.ಅರುಣ್‌ಕುಮಾರ್, ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ, ಜಿಲ್ಲಾ ಪಂಚಾಯಿತಿ ಸಿಇಒ ಶಾಂತಾ ಎಲ್ ಹುಲ್ಮನಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನಿರ್ದೇಶಕ ಓಂಪ್ರಕಾಶ್, ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ನರೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts