More

    ಗಡಿ ರಕ್ಷಣೆಗೆ ಮೂವರು ಕನ್ನಡ ಕುವರಿಯರು…

    ಶತಶತಮಾನಗಳಿಂದಲೂ ಗಂಡಿಗಷ್ಟೇ ಸೀಮಿತ ಎನಿಸಿಕೊಂಡಿದ್ದ ಅದೆಷ್ಟೋ ಕ್ಷೇತ್ರಗಳಲ್ಲಿ ಹೆಣ್ಣು ಕಾಲಿಟ್ಟು ದಶಕಗಳೇ ಕಳೆದಿವೆ. ಸೇನೆಯಲ್ಲಿ ಕೂಡ ಇದೀಗ ಸಿಂಹಿಣಿಯರು ಗರ್ಜಿಸುತ್ತಿದ್ದಾರೆ. ಸೇನಾ ನೆಲೆಯಲ್ಲಿ ಅತ್ಯಂತ ಕಠಿಣ ಎನಿಸಿರುವ ವಿಭಾಗಗಳಲ್ಲಿ ಒಂದಾಗಿರುವ ಗಡಿ ಭದ್ರತಾ ಪಡೆಗೆ ಕಳೆದ ವಾರವಷ್ಟೇ ಮೂವರು ಕನ್ನಡ ಕುವರಿಯರು ಆಯ್ಕೆಯಾಗಿದ್ದಾರೆ.

    ರೈಫಲ್ ಹಿಡಿದ ರಮ್ಯಾ

    ವಿಮಾನ ಹಾರುವುದನ್ನು ನೋಡಿದಾಗಲೆಲ್ಲ ಈಕೆಗೆ ಇದ್ದದ್ದು ಒಂದೇ ಆಸೆ, ನಾನೂ ಮುಂದೊಂದು ದಿನ ಪೈಲಟ್ ಆಗಬೇಕು ಎನ್ನುವುದು. ಪೈಲಟ್ ಸಮವಸ್ತ್ರ ಧರಿಸಿ ಹಾರುವ ಆಸೆ ಕಂಡಿದ್ದ ಈ ಬಾಲಕಿ ಎನ್​ಸಿಸಿ ಸೇರಿದಳು. ಬೆಳೆಯುತ್ತಾ ಬೆಳೆಯುತ್ತಾ ಸೇನೆಯ ಹುಚ್ಚು ಹೆಚ್ಚಾಯಿತು. ಎರಡು ವರ್ಷಗಳ ಹಿಂದೆ ಬಿಎಸ್​ಎಫ್ ಸೇರಲು ಅರ್ಜಿ ಸಲ್ಲಿಸಿದ್ದಳು. ವಿವಿಧ ಹಂತದ ಪರೀಕ್ಷೆ ಬಳಿಕ ಇದೀಗ ಬಿಎಸ್​ಎಫ್ ತರಬೇತಿಗೆ ಆಯ್ಕೆಯಾಗಿ ದೇಶಸೇವೆಗೆ ಹೊರಟು ನಿಂತಿದ್ದಾಳೆ. ಇವರೇ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗದ ಪುತ್ತೂರಿನ ಬಲ್ನಾಡು ನಿವಾಸಿ ರಮ್ಯಾ. ಪದ್ಮಯ್ಯ ಗೌಡ – ತೇಜವತಿ ದಂಪತಿಯ ಪುತ್ರಿ ರಮ್ಯಾ ಬಲ್ನಾಡು ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಕೊಂಬೆಟ್ಟು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢ, ಪಿಯುಸಿ ಹಾಗೂ ಪದವಿಯನ್ನು ವಿವೇಕಾನಂದ ಕಾಲೇಜಿನಲ್ಲಿ ಪಡೆದಿದ್ದಾರೆ. ವಿವಿಧ ಹಂತದ ಪರೀಕ್ಷೆ ಬಳಿಕ ಇದೀಗ ಬಿಎಸ್​ಎಫ್ ತರಬೇತಿಗೆ ಆಯ್ಕೆಯಾಗಿದ್ದಾರೆ. ಮೇ 1ರಿಂದ ಬಾರ್ಡರ್ ಸೆಕ್ಯುರಿಟಿ ಫೋರ್ಸ್ ಸೇರಿ ದೇಶ ಸೇವೆಯಲ್ಲಿ ತೊಡಗಿಕೊಳ್ಳಲಿದ್ದಾರೆ. ಗ್ರಾಮೀಣ ಭಾಗದ ಮಹಿಳೆಯರು ಪುರುಷರಂತೆ ಎಲ್ಲ ವರ್ಗದಲ್ಲೂ ಕರ್ತವ್ಯ ನಿರ್ವಹಿಸುವ ಅವಕಾಶ ಪಡೆಯುತ್ತಾರೆ. ಆದರೆ, ಭಯ ಹಾಗೂ ರಕ್ಷಣೆಯ ವಿಚಾರದಲ್ಲಿ ಸೇನೆ, ಪೊಲೀಸ್ ಕರ್ತವ್ಯದಂತಹ ಕಾರ್ಯಗಳಿಗೆ ಹಿಂಜರಿಯುತ್ತಾರೆ. ಆದರೆ ನನಗೆ ಈ ಅವಕಾಶ ಸಿಕ್ಕಿದೆ. ಧನ್ಯಳಾಗಿದ್ದೇನೆ ಎನ್ನುತ್ತಾರೆ ರಮ್ಯಾ.

    ಕೃಷಿ ಕುಟುಂಬದ ವಿದ್ಯಾ

    ನಮ್ಮ ಜಿಲ್ಲೆಯಲ್ಲಿ ಯಾರೂ ಮಾಡದ ಸಾಧನೆ ಮಾಡಬೇಕು ಎಂದುಕೊಂಡವಳು ನಾನು. ಹಾಗಾಗಿ ಸೇನೆ ಆಯ್ದುಕೊಂಡೆ. ನನ್ನ ಕನಸು ನನಸಾಗಿದೆ. ನನಗಷ್ಟೇ ಅಲ್ಲ, ಕುಂಟುಂಬಕ್ಕೂ ಹೆಮ್ಮೆಯ ಕ್ಷಣವಿದು. ನಮ್ಮೂರಿನ ಹುಡುಗಿ ಸೈನ್ಯ ಸೇರಿದ್ದಾಳೆ ಎಂದು ಎಲ್ಲರೂ ಹೇಳುವಾಗ ನನಗಾಗುವ ಆನಂದ ಅಷ್ಟಿಷ್ಟಲ್ಲ ಎಂದು ಮನದಾಳದ ಮಾತು ಬಿಚ್ಚಿಡುವವರು ಸೇನೆ ಸೇರಿರುವ ವಿದ್ಯಾ ಗೌಡ. ಏಳಜಿತ, ಕೊಲ್ಲೂರು, ಕುಂದಾಪುರ ಜೂನಿಯರ್ ಕಾಲೇಜು, ಭಂಡಾರ್​ಕಾರ್ಸ್ ಕಾಲೇಜು, ಬಿಎಡ್ ಪದವಿ ಕೋಡಿ ಬ್ಯಾರೀಸ್ ಕಾಲೇಜಿನಲ್ಲಿ ಶಿಕ್ಷಣ ಮುಗಿಸಿರುವ ವಿದ್ಯಾ, ಪದವಿಯ ಕೊನೇ ಹಂತದಲ್ಲಿರುವಾಗಲೇ ಬಿಎಸ್​ಎಫ್​ನಿಂದ ನೇಮಕಾತಿ ಆದೇಶ ಪಡೆದಿದ್ದಾರೆ. ಬೈಂದೂರು ತಾಲೂಕು ಏಳಜಿತ ಹುಣ್ಸೆಮಕ್ಕಿ ರಮೇಶ್ ಗೌಡ-ಪಾರ್ವತಿ ದಂಪತಿಯ ಪುತ್ರಿ ಇವರು. ಅಲ್ಪಸ್ವಲ್ಪ ಜಮೀನಿದ್ದರೂ ಕೂಲಿಯೇ ಜೀವನಕ್ಕೆ ದಾರಿ. ಅವಕಾಶ ಸಿಕ್ಕಿರುವುದು ನನ್ನ ಭಾಗ್ಯ. ಎಲ್ಲವನ್ನೂ ನಿಭಾಯಿಸುತ್ತೇನೆ ಎನ್ನುವ ಧೈರ್ಯ ಇರುವ ಕಾರಣ ಇಷ್ಟು ದೂರ ಬಂದಿದ್ದೇನೆ ಎನ್ನುತ್ತಾರೆ. ತರಬೇತಿ ಕಷ್ಟ ಎನ್ನುವುದು ಗೊತ್ತಿದೆ. ಈ ಹಂತವನ್ನು ಯಶಸ್ವಿಯಾಗಿ ಪೂರೈಸುತ್ತೇನೆ. ಭಾರತ ಸರ್ಕಾರ ಮಹಿಳೆಯರಿಗೆ ಸೇನೆ ಸೇರುವ ಅವಕಾಶ ನೀಡಿದ್ದು ವರದಾನವಾಗಿದೆ ಎನ್ನುತ್ತಾರೆ. ವಿದ್ಯಾ ಕ್ರೀಡೆಯಲ್ಲೂ ಸಾಧನೆ ಮಾಡಿದ್ದಾರೆ. ನೆಟ್​ಬಾಲ್​ನಲ್ಲಿ ಐದು ಬಾರಿ ರಾಜ್ಯ, ಒಮ್ಮೆ ರಾಷ್ಟ್ರವನ್ನೂ ಪ್ರತಿನಿಧಿಸಿದ್ದರು. ಅಥ್ಲೆಟಿಕ್ಸ್​ನಲ್ಲಿ 6 ಬಾರಿ ರಾಜ್ಯವನ್ನು ಪ್ರತಿನಿಧಿಸಿದ್ದು, ಪೋಲ್​ವಾಲ್ಟ್​ನಲ್ಲಿ ಕಂಚಿನ ಪದಕ ವಿಜೇತೆ. ಮಂಗಳೂರು ವಿವಿ, ಜಿಲ್ಲಾ, ತಾಲೂಕು ಮಟ್ಟದಲ್ಲಿ ಹತ್ತು ಹಲವು ಬಾರಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದಿದ್ದಾರೆ. ಕ್ರೀಡಾ ಇಲಾಖೆ ನೀಡುವ ಚೈತ್ರದ ಚಿಗುರು ಪ್ರಶಸ್ತಿಯೂ ಈಕೆಯ ಪಾಲಾಗಿದೆ.

    ಕಟ್ಟುಪಾಡನ್ನು ಮೆಟ್ಟಿನಿಂತ ಯೋಗಿತಾ

    ಗ್ರಾಮೀಣ ಭಾಗದ ಮಹಿಳೆಯರು ತಮ್ಮ ಊರಲ್ಲೇ ಉದ್ಯೋಗ ಸಿಗಲಿ ಎಂದು ಬಯಸು ತ್ತಾರೆ. ಸೇನೆಯಲ್ಲಿ ಉತ್ತರ ಭಾರತದ ಮಹಿಳೆಯರೇ ಅಧಿಕ. ದಕ್ಷಿಣ ಭಾರತದ ಗ್ರಾಮೀಣ ಮಹಿಳೆಯರಿಗೆ ಅವಕಾಶ ಕಡಿಮೆ. ಕೆಲವು ಕಟ್ಟುಪಾಡು, ಕೌಟುಂಬಿಕ ವಿಚಾರಗಳಿಂದ ಹೀಗೆ ಮಹಿಳೆಯರು ಹಿಂಜರಿಯುತ್ತಾರೆ. ಅವುಗಳನ್ನು ಮೆಟ್ಟಿನಿಂತು ಸೇನೆಗೆ ಸೇರುವ ಅದಮ್ಯ ಬಯಕೆ ಈಡೇರಿದ್ದು, ದೇಶಸೇವೆಗಾಗಿ ಹೊರಟು ನಿಂತಿದ್ದೇನೆ ಎಂದವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕಡಬ ತಾಲೂಕಿನ ಕಾಣಿಯೂರು ನಿವಾಸಿ ಯೋಗಿತಾ. ಇವರು ಮಧ್ಯಪ್ರದೇಶದ ಗ್ವಾಲಿಯರ್ ತೇಕನ್ಪುರ್​ನಲ್ಲಿ ನಡೆಯುವ ತರಬೇತಿಗೆ ಹಾಜರಾಗಲಿದ್ದಾರೆ. ಮಲೆಕರ್ಚಿ ಮೇದಪ್ಪ ಗೌಡ -ದೇವಕಿ ದಂಪತಿಯ ಪುತ್ರಿ ಯೋಗಿತಾ ಬಾಲ್ಯದಲ್ಲಿ ಪೊಲೀಸ್ ಆಗಬೇಕೆಂದು ಕನಸು ಕಂಡವರು. ನಂತರ ದೇಶಸೇವೆಗೆ ಆಸೆ ಮೊಳಕೆಯೊಡೆದಿದೆ. ಬೊಬ್ಬೆಕೇರಿ ಮತ್ತು ಅಲಂಕಾರಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು, ಪ್ರೌಢ ಶಿಕ್ಷಣವನ್ನು ಸರ್ಕಾರಿ ಪ್ರೌಢಶಾಲೆ ಕಾಣಿಯೂರು, ಕೆ.ಎಸ್ ಗೌಡ ಪಿಯು ಕಾಲೇಜು ನಿಂತಿಕಲ್​ನಲ್ಲಿ ವಿಜ್ಞಾನ ವಿಭಾಗದಲ್ಲಿ ಶೇ. 70 ಅಂಕಗಳೊಂದಿಗೆ ಪಿಯು ಶಿಕ್ಷಣ ಪಡೆದಿದ್ದಾರೆ. ವಿವಿ ಕಾಲೇಜು ಮಂಗಳೂರಿನಲ್ಲಿ ಬಿಎಸ್ಸಿ ಪದವಿ, ಮಂಗಳಗಂಗೋತ್ರಿಯಲ್ಲಿ ಮೈಕ್ರೋಬಯಾಲಾಜಿ ವಿಷಯದಲ್ಲಿ ಎಂಎಸ್ಸಿ ಪದವಿ ಪಡೆದಿದ್ದಾರೆ. ‘ನಮ್ಮ ಮನೆಯಲ್ಲಿ ಗಂಡು ಹೆಣ್ಣು ಎಂಬ ತಾರತಮ್ಯ ಇಲ್ಲ. ನನ್ನ ಇಷ್ಟದ ಕ್ಷೇತ್ರ ಆಯ್ಕೆಗೆ ನನ್ನ ಪಾಲಕರ ಪ್ರೋತ್ಸಾಹವಿದೆ. ಈ ಕಾರಣದಿಂದಲೇ ನಾನು ಬಿಎಸ್​ಎಫ್​ಗೆ ಸೇರಲು ಸಾಧ್ಯವಾಗಿದೆ’ ಎನ್ನುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts