More

    ಪತ್ರಿಕಾ ವಿತರಕರಿಗೆ ನಿವೇಶನ ಹಂಚಿಕೆ
    ಆರು ತಿಂಗಳಲ್ಲಿ ಭರವಸೆ ಈಡೇರಿಸಿದ ಜಿ.ಎಚ್.ತಿಪ್ಪಾರೆಡ್ಡಿ ಶಾಸಕರಿಗೆ ಶಾಲು ಹೊದಿಸಿ ಗೌರವಿಸಿದ ವಿತರಕರು

    ಚಿತ್ರದುರ್ಗ: ಚಳಿ, ಮಳೆ, ಗಾಳಿ ಜತೆ ಬೀದಿ ನಾಯಿಗಳ ಬೀತಿ ಮಧ್ಯೆ ನಸುಕಿನಲ್ಲೇ ರಸ್ತೆಗೆ ಇಳಿದು, ಓದುಗರ ಮನೆ ಬಾಗಿಲಿಗೆ ದಿನಪತ್ರಿಕೆ ತಲುಪಿಸುವ ಕಾಯಕಜೀವಿಗಳು ಹಾಗೂ ವಿಜಯನಗರ ಬಡಾವಣೆಯಲ್ಲಿ ವಸತಿ ಕಳೆದುಕೊಂಡಿದ್ದ ನಿರಾಶ್ರಿತರಿಗೆ ನಿವೇಶನ ಭಾಗ್ಯ ಲಭಿಸಿದೆ.

    ಮಂಗಳವಾರ ನಿವೇಶನ ಹಂಚಿಕೆ ಪ್ರಕ್ರಿಯೆ ಮಾಡಲಾಯಿತು. ಬಹುದಿನದ ಕನಸು ನನಸಾದ ಅವರೆಲ್ಲರ ಮೊಗದಲ್ಲಿ ಮಂದಹಾಸ ಬೀರಿತ್ತು.
    ಕಳೆದ ವರ್ಷ ಪತ್ರಿಕಾ ವಿತರಕರ ದಿನಾಚರಣೆಯಲ್ಲಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ವಿತರಕರಿಗೆ ನಿವೇಶನ, ವಸತಿ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ್ದರು. ಕೊಟ್ಟ ಮಾತನ್ನು 6 ತಿಂಗಳಲ್ಲೇ ಉಳಿಸಿಕೊಂಡು ಕಾಳಜಿ ಮೆರೆದಿದ್ದಾರೆ.

    ಮಾದಾರ ಚನ್ನಯ್ಯ ಮಠದ ಹಿಂಭಾಗದ ಸರ್ಕಾರಿ ಜಮೀನಿನಲ್ಲಿ 94 ನಿವೇಶಗಳನ್ನು ಮಾಡಲಾಗಿದ್ದು, ಅದರಲ್ಲಿ 24 ಸೈಟ್‌ಗಳನ್ನು ಪತ್ರಿಕಾ ವಿತರಕರಿಗೆ ಕಾಯ್ದಿರಿಸಲಾಗಿತ್ತು. ಮಂಗಳವಾರ ಸಂಜೆ ಲಾಟರಿ ಮೂಲಕ ಆಯ್ಕೆ ಮಾಡಿ ನಿವೇಶನ ಹಂಚಿಕೆ ಮಾಡಲಾಯಿತು.

    ಪತ್ರಿಕಾ ವಿತರಕು ಶಾಸಕರನ್ನು ಈ ವೇಳೆ ಗೌರವಿಸಿ, ಬದುಕಿನುದ್ದಕ್ಕೂ ಈ ನೆನಪು ಸದಾ ಅಚ್ಚಳಿಯದೆ ಉಳಿಯಲಿದೆ ಎಂದು ಸಂತಸ ವ್ಯಕ್ತಪಡಿಸಿದರು.
    ತಿಪ್ಪಾರೆಡ್ಡಿ ಮಾತನಾಡಿ, ಪತ್ರಿಕಾ ವಿತರಕರು ಹಾಗೂ ವಿಜಯನಗರ ಬಡಾವಣೆಯ 70 ಮಂದಿಗೆ ಇಲ್ಲಿ ನಿವೇಶನ ಕಲ್ಪಿಸಲಾಗಿದೆ. ರಸ್ತೆ, ಉದ್ಯಾನ, ಶಾಲೆ, ಅಂಗನವಾಡಿ ನಿರ್ಮಿಸಲು ಜಾಗ ಬಿಡಲಾಗಿದೆ. ಭವಿಷ್ಯದಲ್ಲಿ ಉತ್ತಮ ಬಡಾವಣೆಯಾಗಿ ಅಭಿವೃದ್ಧಿ ಹೊಂದಲಿದೆ ಎಂದರು.

    ಮಳೆ, ಗಾಳಿ, ಚಳಿಗೆ ಮೈಯೊಡ್ಡಿ ಮುಂಜಾನೆ ಪತ್ರಿಕೆ ಹಂಚುವ ಯುವಕರಿಗೆ ಸಿಗುವ ಲಾಭ ಅಷ್ಟಕ್ಕಷ್ಟೇ. ಹೀಗಾಗಿ ಪವಿತ್ರ ವೃತ್ತಿಯೊಂದರಲ್ಲಿ ತೊಡಗಿರುವ ಇವರಿಗೆ ನಿವೇಶನ ಸೌಲಭ್ಯ ಕಲ್ಪಿಸಿರುವ ಸಂತೃಪ್ತಿ ನನಗಿದೆ.

    ಮುಂದಿನ ದಿನಗಳಲ್ಲಿ ಹಕ್ಕುಪತ್ರ ವಿತರಿಸಿ ವಸತಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು. ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ಇಂಜಿನಿಯರ್ ಕಿರಣ್, ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಪತ್ರಕರ್ತರಾದ ಪತ್ರಕರ್ತರಾದ ಜಿ.ಬಿ. ನಾಗರಾಜ್, ನಾಕಿಕೆರೆ ತಿಪ್ಪೇಸ್ವಾಮಿ, ಚಿಕ್ಕಪ್ಪನಹಳ್ಳಿ ಷಣ್ಮುಖ, ದಿನೇಶ್ ಗೌಡಿಗೆರೆ, ಎಂ.ಎನ್.ಅಹೋಬಲಪತಿ, ದರ್ಶನ್, ಪ್ರಹ್ಲಾದ್, ನಂದಗೋಪಾಲ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts