More

    ಚಿರತೆಗೆ ಗುಂಡಿಕ್ಕಲು ಅನುಮತಿ ಕೋರಿ ಸರ್ಕಾರಕ್ಕೆ ಪತ್ರ

    ತುಮಕೂರು: ನರಭಕ್ಷಕ ಚಿರತೆಗೆ ಕಂಡಲ್ಲಿ ಗುಂಡಿಕ್ಕಲು ಅರಣ್ಯ ಸಚಿವ ಆನಂದ್ ಸಿಂಗ್ ಆದೇಶ ನೀಡಿದ ಬೆನ್ನಲ್ಲೇ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಅನುಮತಿ ಕೋರಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

    ಹೆಬ್ಬೂರು ಹೋಬಳಿ ಕರ್ಣಕುಪ್ಪೆ ಗ್ರಾಪಂನ ಬೈಚನಹಳ್ಳಿಯಲ್ಲಿ 3 ವರ್ಷದ ಹೆಣ್ಣುಮಗುವನ್ನು ಕೊಂದು ಹಾಕಿದ್ದ ಘಟನೆ ಬಳಿಕ ಭಾನುವಾರ ಗ್ರಾಮಕ್ಕೆ ಭೇಟಿ ನೀಡಿದ್ದ ಅರಣ್ಯ ಸಚಿವ ಆನಂದ್ ಸಿಂಗ್, ಗುಂಡಿಕ್ಕಲು ಆದೇಶ ಹೊರಡಿಸುವುದಾಗಿ ತಿಳಿಸಿದ್ದರಾದರೂ ಸೋಮವಾರ ಸಂಜೆವರೆಗೆ ಈ ಆದೇಶ ಹೊರಬೀಳಲಿಲ್ಲ.

    ಮನುಷ್ಯನನ್ನು ಹತ್ಯೆಗೈದಿರುವ ತುಮಕೂರು, ಕುಣಿಗಲ್, ಗುಬ್ಬಿ ತಾಲೂಕುಗಳು ಹೊಂದಿಕೊಂಡಿರುವ ಗಡಿಭಾಗದಲ್ಲಿ 4 ನರಭಕ್ಷಕ ಚಿರತೆಗಳಿದ್ದು, ಇವುಗಳನ್ನೂ ಕೊಲ್ಲಲು ಅವಕಾಶ ಕೋರಿ ಡಿಎಫ್‌ಒ ಎಚ್.ಸಿ.ಗಿರೀಶ್ ಪತ್ರ ಬರೆದಿದ್ದಾರೆ. ವನ್ಯಜೀವಿ ಕಾಯ್ದೆ ಸೆಕ್ಷನ್ 11ರ ಅಡಿಯಲ್ಲಿ ಚಿರತೆ ಕೊಲ್ಲಲು ಅವಕಾಶವಿರುವ ಹಿನ್ನೆಲೆಯಲ್ಲಿ ಅವಕಾಶ ಕೋರಲಾಗಿದೆ.

    ಆಪರೇಷನ್ ಚಿರತೆ ಆರಂಭ: ಈ ಮಧ್ಯೆ ಚಿರತೆ ಹಾವಳಿ ಇರುವ ಪ್ರದೇಶಗಳಲ್ಲಿ ಅರಣ್ಯ ಇಲಾಖೆ ‘ಆಪರೇಷನ್ ಚಿರತೆ’ ಆರಂಭಿಸಿದ್ದು, ತುಮಕೂರು ಅರಣ್ಯ ಇಲಾಖೆ ವಿಭಾಗದ 25 ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ. ಚಿರತೆಗಳನ್ನು ಸೆರೆಹಿಡಿಯಲು 25 ಬೋನುಗಳನ್ನು ಇಡಲಾಗಿದೆ. ಬನ್ನಿಕುಪ್ಪೆ, ಮಣಿಕುಪ್ಪೆ, ಚಿಕ್ಕಮಳಲವಾಡಿ, ದೊಡ್ಡಮಳಲವಾಡಿ, ಗಿಡದಪಾಳ್ಯ ಹಾಗೂ ಬೈಚೇನಹಳ್ಳಿಯಲ್ಲಿ ಬೋನುಗಳನ್ನು ಇಟ್ಟಿದ್ದು ಚಿರತೆ ಸೆರೆ ಹಿಡಿಯಲು ಇಲಾಖೆ ಕ್ರಮ ಕೈಗೊಂಡಿದೆ. ಅರವಳಿಕೆ ತಜ್ಞ ಡಾ.ಮುರಳಿ ನೇತೃತ್ವದ ತಂಡ ಇಲ್ಲೇ ಬೀಡುಬಿಟ್ಟಿದೆ.

    4 ತಿಂಗಳಲ್ಲಿ 3 ಚಿರತೆ ಸೆರೆ : ಮನುಷ್ಯನ ಹತ್ಯೆಯಾಗಿರುವ ಪ್ರದೇಶದಲ್ಲಿ 4 ತಿಂಗಳಲ್ಲಿ 3 ಚಿರತೆ ಸೆರೆಹಿಡಿಯಲಾಗಿದೆ. ಒಟ್ಟು ಈ ಪ್ರದೇಶದಲ್ಲಿ ಸದ್ಯ 6 ಚಿರತೆಗಳು ಕಾಣಿಸಿಕೊಂಡಿದ್ದು ಇದರಲ್ಲಿ 4 ಚಿರತೆಗಳನ್ನು ನರಭಕ್ಷಕ ಎಂದು ಗುರುತಿಸಲಾಗಿದೆ. ಆದರೆ, ನಿರ್ದಿಷ್ಟವಾಗಿ ನರಭಕ್ಷಕ ಚಿರತೆ ಎಂಬುದು ಸ್ಪಷ್ಟವಾಗಿಲ್ಲ.

    ವನ್ಯಜೀವಿ ಕಾಯ್ದೆ ಸೆಕ್ಷನ್ 11ರ ಪ್ರಕಾರ 4 ನರಹಂತಕ ಚಿರತೆಗಳನ್ನು ಕೊಲ್ಲಲು ಅನುಮತಿ ಕೋರಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. 24 ಹಳ್ಳಿಗಳಲ್ಲಿ ಅಲರ್ಟ್ ಘೋಷಿಸಲಾಗಿದ್ದು, ಮಕ್ಕಳನ್ನು ಚಿರತೆ ಕಣ್ಣಿಗೆ ಬೀಳದಂತೆ ಪೋಷಕರು ಕಾಪಾಡಿಕೊಳ್ಳಬೇಕು. ಜತೆಗೆ ದನಕರುಗಳನ್ನು ಕೊಟ್ಟಿಗೆಗಳಲ್ಲಿ ಕಟ್ಟಬೇಕು. ಈ ಬಗ್ಗೆ ಜನರಿಗೆ ತಿಳಿಹೇಳಲು ಡಂಗುರು ಕೂಡ ಹೊಡೆಸಲಾಗಿದೆ.
    ಎಚ್.ಸಿ.ಗಿರೀಶ್ ಡಿಎಫ್‌ಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts