More

    ಸೂಪರ್ ಫೀಸ್ ಕೊಟ್ರೆ ಸಿಗಲಿದೆ ಅಮೆರಿಕ ಗ್ರೀನ್ ಕಾರ್ಡ್; ಭಾರತೀಯರ ಕನಸು ನನಸಾಗಿಸಲಿದೆ ಮಸೂದೆ..

    ವಾಷಿಂಗ್ಟನ್: ಭಾರತೀಯರು ಸೇರಿ ಲಕ್ಷಾಂತರ ಜನರ ‘ಗ್ರೀನ್ ಕಾರ್ಡ್’ ಕನಸು ನನಸು ಮಾಡುವ ಮಸೂದೆ ಮಂಡಿಸಲು ಅಮೆರಿಕ ಸರ್ಕಾರ ಸಿದ್ಧತೆ ನಡೆಸಿದೆ. ಇದು ಅಂಗೀಕಾರಗೊಂಡು ಕಾನೂನಾಗಿ ಜಾರಿಯಾದರೆ ‘ಸೂಪರ್ ಫೀಸ್’ ಕೊಟ್ಟು ಗ್ರೀನ್ ಕಾರ್ಡ್ ಪಡೆಯುವ ಅವಕಾಶ ಲಕ್ಷಾಂತರ ಜನರಿಗೆ ಸಿಗಲಿದೆ.

    ಸಾವಿರಾರು ಭಾರತೀಯರು ವಿಶೇಷವಾಗಿ ಐಟಿ ವೃತ್ತಿಪರರು ಅಮೆರಿಕದ ಗ್ರೀನ್ ಕಾರ್ಡ್​ಗಾಗಿ ಹಲವು ವರ್ಷಗಳಿಂದ ಕಾಯುತ್ತಿದ್ದಾರೆ. ಅಮೆರಿಕ ಸರ್ಕಾರ ಹೊಸ ಕಾನೂನು ಜಾರಿಗೊಳಿಸುವುದು ಸಾಧ್ಯವಾದರೆ ಇವರೆಲ್ಲರ ಆಸೆ, ಆಶಯಗಳು ಈಡೇರಲಿವೆ. ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್​ನ ಜುಡಿಷಿಯರಿ ಕಮಿಟಿ ಈ ಕುರಿತು ಪ್ರಕಟಣೆ ಹೊರಡಿಸಿದೆ. ಇದರಂತೆ, ಉದ್ಯೋಗ ಆಧಾರಿತ ವಲಸೆ ಅರ್ಜಿಗಳನ್ನು ಗ್ರೀನ್ ಕಾರ್ಡ್​ಗೆ ಸರ್ಕಾರ ಪರಿಗಣಿಸಲಿದೆ. ಆದರೆ, ಈ ಅರ್ಜಿಗಳ ಪೈಕಿ ಆದ್ಯತೆಯು ಎರಡು ವರ್ಷಗಳಿಗಿಂತ ಹೆಚ್ಚು ಕಾಯುವಿಕೆಯಲ್ಲಿ ಇರುವವರಿಗೆ ಸಿಗಲಿದೆ. ಗ್ರೀನ್ ಕಾರ್ಡ್ ವಿತರಣೆಗೆ ಮಿತಿ ಇರಲ್ಲ. ಬದಲಾಗಿ ಅರ್ಜಿದಾರರು 5,000 ಡಾಲರ್ ಸಪ್ಲಿಮೆಂಟಲ್ ಫೀಸ್ ಪಾವತಿಸಬೇಕಾಗುತ್ತದೆ. ಇದುವೇ ಇಬಿ-5 ಕೆಟಗರಿ (ವಲಸೆ ಹೂಡಿಕೆದಾರರು) 50,000 ಡಾಲರ್ ಶುಲ್ಕ ಪಾವತಿಸಬೇಕು. ಈ ಅನುಕೂಲ 2031ರ ತನಕ ಜಾರಿಯಲ್ಲಿ ಇರಲಿದೆ.

    ಕುಟುಂಬ ಆಧಾರಿತ ವಲಸಿಗರನ್ನು ಅಮೆರಿಕದ ಪೌರರು ಪ್ರಾಯೋಜಿಸಬೇಕಾಗಿದ್ದು, ಇದು ಕೂಡ ಎರಡು ವರ್ಷ ಮೊದಲೇ ಅರ್ಜಿ ಸಲ್ಲಿಸಿರಬೇಕು. ಈ ರೀತಿ ಗ್ರೀನ್ ಕಾರ್ಡ್ ಪಡೆಯಬೇಕಾದರೂ 2,500 ಡಾಲರ್ ಶುಲ್ಕ ಪಾವತಿಸಬೇಕು. ದೇಶದಲ್ಲಿ ಇರಲೇಬೇಕಾದ ವಲಸಿಗರಿಗೆ ಅವರ ಅರ್ಜಿ ಎರಡು ವರ್ಷಕ್ಕೆ ಹಿಂದಿನದ್ದು ಅಲ್ಲದೇ ಹೋದರೂ ಗ್ರೀನ್ ಕಾರ್ಡ್ ಸಿಗಲಿದೆ. ಆದರೆ, ಇದಕ್ಕೆ 1,500 ಡಾಲರ್ ಶುಲ್ಕ ಪಾವತಿಸಬೇಕಾಗುತ್ತದೆ. ಈ ಶುಲ್ಕದ ಹೊರತಾಗಿ ಆಡಳಿತಾತ್ಮಕ ಪ್ರೊಸೆಸಿಂಗ್ ಶುಲ್ಕವನ್ನೂ ಅರ್ಜಿದಾರರು ಪಾವತಿಸಬೇಕು. ಆದಾಗ್ಯೂ, ಮಸೂದೆಯಲ್ಲಿ ಕಾನೂನುಬದ್ಧ ವಲಸೆ ವ್ಯವಸ್ಥೆಯ ಖಾಯಂ ಬದಲಾವಣೆಗಳನ್ನು ಅಂದರೆ ಇಂಥ ದೇಶಕ್ಕೆ ಇಷ್ಟು ವೀಸಾ ಎಂಬ ಅಂಶದಲ್ಲಿ ಅಥವಾ ವಾರ್ಷಿಕ ಎಚ್-1ಬಿ ವೀಸಾ ಕೋಟಾದಲ್ಲಿ ಬದಲಾವಣೆ ಮಾಡಿಲ್ಲ.

    ಗ್ರೀನ್ ಕಾರ್ಡ್ ಎಂದರೆ..

    ಅಮೆರಿಕದಲ್ಲಿ ಗ್ರೀನ್ ಕಾರ್ಡ್ ಎಂಬುದು ಪರ್ಮನೆಂಟ್ ರೆಸಿಡೆಂಟ್ ಕಾರ್ಡ್ ಎಂದೇ ಜನಪ್ರಿಯವಾಗಿದೆ. ಇದು ಅಮೆರಿಕದಲ್ಲಿ ಕಾಯಂ ನಿವಾಸಿಯಾಗಿ ಉಳಿದು ಕೊಳ್ಳಲು ವಲಸಿಗರಿಗೆ ಪ್ರಮಾಣವಾಗಿ ಅಲ್ಲಿನ ಸರ್ಕಾರ ನೀಡುವ ದಾಖಲೆ ಯಾಗಿರುತ್ತದೆ. ಈ ಹಿಂದಿನ ಸರ್ಕಾರ ಅಮೆರಿಕ ಫಸ್ಟ್ ನೀತಿಗೆ ಅನುಗುಣವಾಗಿ ಎಚ್1ಬಿ ವಿಸಾ ವಿತರಣೆಗೆ ಪ್ರತಿ ದೇಶಕ್ಕೆ 7% ಮಿತಿ ಹೇರಿತ್ತು. ಇದರಂತೆ, ವಾರ್ಷಿಕವಾಗಿ 1.40 ಲಕ್ಷ ಕಾರ್ಡ್ ಮಾತ್ರ ವಿತರಿಸುವುದಾಗಿ ತಿಳಿಸಿತ್ತು. ಹೊಸ ನಿಯಮದಲ್ಲಿ ಇದು ತೆರವುಗೊಳ್ಳಲಿದೆ.

    ಭಾರತೀಯರ ಅರ್ಜಿ

    ಉದ್ಯೋಗ ಆಧಾರಿತ ಗ್ರೀನ್ ಕಾರ್ಡ್ ಬ್ಯಾಕ್​ಲಾಗ್ (ಇಬಿ2 ಮತ್ತು ಇಬಿ3 ಸ್ಕಿಲ್ಡ್ ಕೆಟಗರಿ) ಪ್ರಕಾರ ಭಾರತೀಯರ ಪ್ರಮಾಣ 2020ರ ಏಪ್ರಿಲ್​ನಲ್ಲಿ 7.41 ಲಕ್ಷ ತಲುಪಿದೆ. ಈಗಿರುವ ನಿಯಮ ಪ್ರಕಾರ ಇದರ ವಿಲೇವಾರಿ ಆಗಬೇಕು ಎಂದರೆ 84 ವರ್ಷ ಕಾಯಬೇಕಾಗುತ್ತದೆ. ಅಗತ್ಯ ಉದ್ಯೋಗಿ ಅವಕಾಶದ ಮೂಲಕ ಕೂಡ ಈಗ ಭಾರತೀಯರು ವಿಸಾ ಪಡೆಯಬಹುದಾಗಿದೆ. ಇದಕ್ಕೆ ಉದ್ಯೋಗದಾತರು ಅವರ ಪ್ರಾಯೋಜಕರಾಗಬೇಕಾಗಿಲ್ಲ. ಬದಲಾಗಿ ಹೊಸ ನಿಯಮ ಪ್ರಕಾರ, 5000 ಡಾಲರ್ ಹಣವನ್ನು ಅರ್ಜಿದಾರರೇ ಪಾವತಿಸಿದರಾಯಿತು. ಆದಾಗ್ಯೂ, 1,500 ಡಾಲರ್ ಫೀಸ್ ಕೂಡ ಪಾವತಿಸಬೇಕು. ಅಗತ್ಯ ಉದ್ಯೋಗಿ ಎನಿಸಬೇಕಾದರೆ ಅಂಥವರು ಐಟಿ, ಹೆಲ್ತ್​ಕೇರ್, ಆಹಾರ, ಕೃಷಿ, ಸಾರಿಗೆ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರಬೇಕು. 2020ರ ಜನವರಿ 31, 2021ರ ಆ.24ರ ನಡುವೆ ‘ಸ್ಥಿರ’ ಆದಾಯ ಹೊಂದಿರಬೇಕು.

    ಶಾಲೆ ಏನೋ ಶುರುವಾಯಿತು, ಆದರೆ ಹಾಜರಾತಿ ಯಾಕೆ ಹೀಗಾಯಿತು!?; ಹಬ್ಬದ ಬಳಿಕದ ಆ ನಿರೀಕ್ಷೆಯೂ ಹುಸಿಯಾಯಿತು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts