More

    ಮಹಿಳಾ ಕ್ರಿಕೆಟ್‌ನಲ್ಲಿ ಜರ್ಮನಿ ಪರ ವಿಶ್ವದಾಖಲೆ ಬರೆದ ಕನ್ನಡತಿ!

    ಬೆಂಗಳೂರು: ಇಂಗ್ಲೆಂಡ್‌ನಲ್ಲಿ ಪುರುಷರ ಅಂತಾರಾಷ್ಟ್ರೀಯ ಕ್ರಿಕೆಟ್ ನಡೆಯುತ್ತಿರುವ ನಡುವೆ ಆಸ್ಟ್ರಿಯಾದಲ್ಲೂ ಸದ್ದಿಲ್ಲದೆ ಮಹಿಳೆಯರ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ನಡೆಯುತ್ತಿದೆ. ಪ್ರವಾಸಿ ಜರ್ಮನಿ ತಂಡದ ವಿರುದ್ಧ ಆಸ್ಟ್ರಿಯಾ ತಂಡ 5 ಪಂದ್ಯಗಳ ಟಿ20 ಸರಣಿ ಆಡುತ್ತಿದೆ. ಶುಕ್ರವಾರ ನಡೆದ ಸರಣಿಯ 4ನೇ ಪಂದ್ಯದಲ್ಲಿ ಜರ್ಮನಿ ತಂಡ 137 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಜರ್ಮನಿ ಮಹಿಳಾ ಕ್ರಿಕೆಟ್ ತಂಡವನ್ನು ಮುನ್ನಡೆಸುತ್ತಿರುವ ಕನ್ನಡತಿ ಅನುರಾಧ ದೊಡ್ಡಬಳ್ಳಾಪುರ ಪಂದ್ಯದಲ್ಲಿ ವಿಶ್ವದಾಖಲೆ ಬರೆದು ಗಮನಸೆಳೆದಿದ್ದಾರೆ.

    ಮಹಿಳಾ ಕ್ರಿಕೆಟ್‌ನಲ್ಲಿ ಜರ್ಮನಿ ಪರ ವಿಶ್ವದಾಖಲೆ ಬರೆದ ಕನ್ನಡತಿ!

    ಪಂದ್ಯದಲ್ಲಿ 3 ಓವರ್‌ಗಳಲ್ಲಿ 2 ಮೇಡನ್ ದಾಳಿಯೊಂದಿಗೆ ಕೇವಲ 1 ರನ್ ಬಿಟ್ಟುಕೊಟ್ಟು 5 ವಿಕೆಟ್ ಕಬಳಿಸಿದ ಬಲಗೈ ಮಧ್ಯಮ ವೇಗಿ ಅನುರಾಧ ದೊಡ್ಡಬಳ್ಳಾಪುರ, ಸತತ 4 ಎಸೆತಗಳಲ್ಲಿ 4 ವಿಕೆಟ್ ಕಬಳಿಸಿ ವಿಶ್ವದಾಖಲೆ ಬರೆದರು. ಮಹಿಳಾ ಕ್ರಿಕೆಟ್‌ನಲ್ಲಿ ಸತತ 4 ಎಸೆತಗಳಲ್ಲಿ 4 ವಿಕೆಟ್ ಕಬಳಿಸಿದ ಮೊದಲ ಬೌಲರ್ ಎಂಬ ಹೆಗ್ಗಳಿಕೆ ಅವರದಾಗಿದೆ. ಬೆಂಗಳೂರಿನ ಕೆಐಒಸಿಯಲ್ಲಿ ಕ್ರಿಕೆಟ್ ತರಬೇತಿ ಪಡೆದಿರುವ 33 ವರ್ಷದ ಅನುರಾಧ ದೊಡ್ಡಬಳ್ಳಾಪುರ ಅವರು ಈಗ ಜರ್ಮನಿಯಲ್ಲಿ ವೈದ್ಯೆಯಾಗಿದ್ದಾರೆ. ಜರ್ಮನಿಯ ಹಾರ್ಟ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನಲ್ಲಿ ಅವರು ಕೆಲಸ ನಿರ್ವಹಿಸುತ್ತಿದ್ದು, ಕಳೆದ 4 ವರ್ಷಗಳಿಂದ ಜರ್ಮನಿಯಲ್ಲೇ ಕ್ರಿಕೆಟ್ ಕೂಡ ಆಡುತ್ತಿದ್ದಾರೆ.

    ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ಗೆ ಇಳಿದ ಜರ್ಮನಿ ತಂಡ ಆರಂಭಿಕರಾದ ಜಾನೆಟ್ ರೊನಾಲ್ಡ್ಸ್ (68*) ಮತ್ತು ಕ್ರಿಸ್ಟಿನಾ ಗೋವ್ (101*) ಭರ್ಜರಿ ಜತೆಯಾಟದಿಂದ ನಿಗದಿತ 20 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 198 ರನ್ ಪೇರಿಸಿತು. ಇದು ಮಹಿಳಾ ಕ್ರಿಕೆಟ್‌ನಲ್ಲಿ ಸಿಕ್ಸರ್ ಇಲ್ಲದೆ ದಾಖಲಿಸಿದ ಗರಿಷ್ಠ ಮೊತ್ತವೆನಿಸಿದೆ. ಪ್ರತಿಯಾಗಿ ಅನುರಾಧಾ ದೊಡ್ಡಬಳ್ಳಾಪುರ ದಾಳಿಗೆ ಕುಸಿದ ಆಸ್ಟ್ರಿಯಾ ತಂಡ 9 ವಿಕೆಟ್‌ಗೆ 61 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರಿಂದ ಜರ್ಮನಿ ತಂಡ ಸರಣಿಯಲ್ಲಿ 4-0 ಮುನ್ನಡೆ ಸಾಧಿಸಿತು.

    ಇದನ್ನೂ ಓದಿ: VIDEO | ಕೊಹ್ಲಿ-ಅನುಷ್ಕಾ ನಡುವೆ ಜಗಳವಾದರೆ ಮೊದಲು ಸಾರಿ ಕೇಳೋದು ಯಾರು ಗೊತ್ತೇ?

    ಅನುರಾಧಾ ದೊಡ್ಡಬಳ್ಳಾಪುರ ಇನಿಂಗ್ಸ್‌ನ 15ನೇ ಓವರ್‌ನಲ್ಲಿ ಕ್ರಮವಾಗಿ 2, 3, 4 ಮತ್ತು 5ನೇ ಎಸೆತದಲ್ಲಿ ವಿಕೆಟ್ ಕಬಳಿಸಿದರು. ಬಳಿಕ ಇನಿಂಗ್ಸ್‌ನ 19ನೇ ಓವರ್‌ನಲ್ಲಿ ಮತ್ತೊಂದು ವಿಕೆಟ್ ಕಬಳಿಸಿ 5 ವಿಕೆಟ್ ಗೊಂಚಲು ಪೂರ್ಣಗೊಳಿಸಿದರು. ಇದು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅವರ ಜೀವನಶ್ರೇಷ್ಠ ಬೌಲಿಂಗ್ ನಿರ್ವಹಣೆಯೂ ಆಗಿದೆ. ಜರ್ಮನಿ ತಂಡ ಶರಣ್ಯ ಸದರಂಗನಿ, ಅಸ್ಮಿತಾ ಕೊಹ್ಲಿ ಮತ್ತು ಕಾರ್ತಿಕಾ ವಿಜಯರಾಘವನ್ ಎಂಬ ಇನ್ನೂ ಕೆಲ ಭಾರತ ಮೂಲದ ಆಟಗಾರ್ತಿಯರನ್ನು ಹೊಂದಿದೆ. ಎದುರಾಳಿ ಆಸ್ಟ್ರಿಯಾ ತಂಡ ಕೂಡ ಕೆಲ ಭಾರತ ಮೂಲದ ಆಟಗಾರ್ತಿಯರಿಂದ ಕೂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts