More

    ನ್ಯಾಯಾಲಯ ತೀರ್ಪಿನ ತಪ್ಪು ವ್ಯಾಖ್ಯಾನ: ಶ್ರೀಧರ ಪೂಜಾರಿ ವಿರುದ್ಧ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ ಪ್ರತ್ಯಾರೋಪ

    ಮಂಗಳೂರು: ಗೆಜ್ಜೆಗಿರಿ ದೇಯಿ ಬೈದೆತಿ ಕೋಟಿ ಚೆನ್ನಯ ಕ್ಷೇತ್ರಾಡಳಿತ ಸಮಿತಿ ಆಡಳಿತ ಹಾಗೂ ನಿತ್ಯ ಕಾರ್ಯಗಳಿಗೆ ಸಂಬಂಧಿಸಿ ನ್ಯಾಯಾಲಯ ನೀಡಿರುವ ಮಧ್ಯಂತರ ತೀರ್ಪು ಕುರಿತು ಶ್ರೀಧರ್ ಪೂಜಾರಿ (ಜಮೀನಿನ ಮಾಲೀಕ) ಅವರದು ತಪ್ಪು ವ್ಯಾಖ್ಯಾನ ಎಂದು ಸಮಿತಿ ಮುಖಂಡರು ಪ್ರತ್ಯಾರೋಪ ಮಾಡಿದ್ದಾರೆ.
    ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಮಿತಿ ಅಧ್ಯಕ್ಷ ಜಯಂತ್ ನಡುಬೈಲ್, ಪುತ್ತೂರಿನ ಸಿವಿಲ್ ಜಡ್ಜ್ ಹಾಗೂ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಶ್ರೀಧರ್ ಪೂಜಾರಿ ಅರ್ಜಿ ಸಲ್ಲಿಸಿ ಕ್ಷೇತ್ರಾಡಳಿತ ಸಮಿತಿಯ ಆಡಳಿತ ಮತ್ತು ನಿತ್ಯ ಕಾರ್ಯಗಳಿಗೆ ತಡೆಯಾಜ್ಞೆ ಕೋರಿದ್ದರು. ಆದರೆ ಮಾ.8ರ ತೀರ್ಪಿನಲ್ಲಿ ಸಮಿತಿ ಆಡಳಿತಕ್ಕೆ ತಡೆ ನೀಡಲು ಕೋರ್ಟ್ ನಿರಾಕರಿಸಿದೆ. ಸಮಿತಿ ಪೂರ್ಣವಾಗಿ ಹಿಂದಿನಂತೆ ಕರ್ತವ್ಯ ನಿರ್ವಹಿಸಲಿದೆ ಎಂದರು.

    ಶ್ರೀಧರ್ ಪೂಜಾರಿ ವಾಸ್ತವ ಮರೆಮಾಚಿ ಮಾಧ್ಯಮಗಳಿಗೆ ತಪ್ಪು ಹೇಳಿಕೆ ನೀಡುವ ಮೂಲಕ ಕೊರ್ಟ್ ತೀರ್ಪಿಗೆ ಅಗೌರವ ತೋರಿದ್ದಾರೆ. ಸಮಿತಿ ಅಧಿಕಾರ ಅವಧಿ 2019ಕ್ಕೆ ಅಂತ್ಯವಾಗಿದೆ ಎಂಬ ಮಾಹಿತಿ ತಪ್ಪು. ರಿಜಿಸ್ಟರ್ಡ್ ಸಮಿತಿ ಅಧಿಕಾರ ಅವಧಿಯನ್ನು 2022 ತನಕ ನವೀಕರಣ ಮಾಡಿದೆ ಎಂದರು.
    ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಅಧ್ಯಕ್ಷ ಡಾ.ರಾಜಶೇಖರ್ ಕೋಟ್ಯಾನ್, ಮುಂಬೈ ಬಿಲ್ಲವರ ಅಸೋಸಿಯೇಶನ್ ಅಧ್ಯಕ್ಷ ಹರೀಶ್ ಅಮೀನ್, ಕ್ಷೇತ್ರಾಡಳಿತ ಸಮಿತಿ ಉಪಾಧ್ಯಕ್ಷ ಪೀತಾಂಬರ ಹೆರಾಜೆ, ಪ್ರಧಾನ ಕಾರ್ಯದರ್ಶಿ ರವಿ ಪೂಜಾರಿ ಚಿಲಿಂಬಿ, ಕೋಶಾಧಿಕಾರಿ ದೀಪಕ್ ಕೋಟ್ಯಾನ್, ಭಾರತ ಬ್ಯಾಂಕ್ ನಿರ್ದೇಶಕರಾದ ಭಾಸ್ಕರ್ ಸಾಲ್ಯಾನ್, ಸೂರ್ಯಕಾಂತ್ ಜಯ ಸುವರ್ಣ, ಮುಂಬೈ ಉದ್ಯಮಿ ಸುರೇಂದ್ರ ಪೂಜಾರಿ, ಬಿಲ್ಲವ ಪರಿಷತ್ ಉಡುಪಿ ಅಧ್ಯಕ್ಷ ನವೀನ್ ಅಮೀನ್ ಸುದ್ದಿಗೋಷ್ಠಿಯಲ್ಲಿದ್ದರು.

    ಊರ-ಪರವೂರವರ ಸಹಕಾರದಿಂದ ಕ್ಷೇತ್ರ ಅಭಿವೃದ್ಧಿ: 2014ರಲ್ಲಿ ಮೂಲಸೌಕರ್ಯಗಳಿಲ್ಲದ 8.50 ಎಕರೆ ಜಮೀನನ್ನು ಶ್ರೀಧರ ಪೂಜಾರಿ ಕ್ಷೇತ್ರ ಅಭಿವೃದ್ಧಿ ಉದ್ದೇಶದಿಂದ ಪ್ರತಿಫಲಾಪೇಕ್ಷೆ ಇಲ್ಲದೆ ಸಮಾಜಕ್ಕೆ ಒಪ್ಪಿಸುವುದಾಗಿ ಸಮಾಜವನ್ನು ನಂಬಿಸಿ, ಜಮೀನಿನ ಅಭಿವೃದ್ಧಿಗೆ ಮನವಿ ಮಾಡಿದ್ದರು. ನಂತರ ದೇಶ, ವಿದೇಶಗಳಲ್ಲಿ ನೆಲೆಸಿರುವ ಬಿಲ್ಲವ ಮುಖಂಡರಿಂದ ಸಾಮಾನ್ಯ ಜನರ ತನಕ 9.5 ಕೋಟಿ ರೂ. ತನಕ ಕೊಡುಗೆ ಲಭಿಸಿ, ಕ್ಷೇತ್ರ ಹಾಗೂ ಪೂರಕ ವ್ಯವಸ್ಥೆಗಳನ್ನು ಅಭಿವೃದ್ಧಿ ಮಾಡಲಾಯಿತು. ವ್ಯವಸ್ಥೆಗಳಿಗೆ ಸರ್ಕಾರವೂ 1.80 ಕೋಟಿ ರೂ.ವೆಚ್ಚ ಮಾಡಿದೆ. ಆದರೆ ವಿವಿಧ ನೆಪಗಳನ್ನು ಮುಂದಿಟ್ಟು ಶ್ರೀಧರ ಪೂಜಾರಿ ಜಮೀನು ರಿಜಿಸ್ಟ್ರೇಷನ್ ಮುಂದೂಡಿದ್ದಾರೆ ಎಂದು ಆಡಳಿತ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಚಿತ್ತರಂಜನ್ ಕಂಕನಾಡಿ ಹೇಳಿದರು. 2018ರಲ್ಲಿ ಶ್ರೀಧರ್ ಪೂಜಾರಿ ಮತ್ತು ಅವರ ಕುಟುಂಬ ಸದಸ್ಯರು ಪ್ರತಿಫಲಾಪೇಕ್ಷೆ ಇಲ್ಲದೆ ಜಮೀನನ್ನು ಕ್ಷೇತಾಡಳಿತ ಸಮಿತಿಗೆ ಒಪ್ಪಿಸುವ ಕುರಿತು ಸಮಿತಿ ಜೊತೆ ಕರಾರುಪತ್ರ ಮಾಡಿದ ದಾಖಲೆಯನ್ನೂ ಅವರು ಪ್ರದರ್ಶಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts