More

    ನಗರದಲ್ಲಿ ಗೆಡ್ಡೆ ಗೆಣಸು ಮೇಳ ಇಂದು, ನಾಳೆ

    ಮೈಸೂರು: ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಗೆಡ್ಡೆ ಗೆಣಸು ಮೇಳವನ್ನು ಜ.10 ಮತ್ತು 11 ರಂದು ಬೆಳಗ್ಗೆ 10.30ರಿಂದ ರಾತ್ರಿ 8 ಗಂಟೆವರೆಗೆ ಎರಡು ದಿನಗಳವರೆಗೆ ಆಯೋಜಿಸಲಾಗಿದೆ.

    ನಿಸರ್ಗದ ಕೊಡುಗೆಯಾದ ಗೆಡ್ಡೆ ಗೆಣಸುಗಳ ಅದ್ಭುತ ಲೋಕವನ್ನು ಮೈಸೂರಿನ ಗ್ರಾಹಕರಿಗೆ ಪರಿಚಯಿಸಲು ಸಹಜ ಸಮೃದ್ಧ ಮತ್ತು ರೋಟರಿ ಕ್ಲಬ್ ಮೈಸೂರು ಪಶ್ಚಿಮ ಸಂಸ್ಥೆಯು ಗೆಡ್ಡೆ ಗೆಣಸು ಮೇಳವನ್ನು ಆಯೋಜಿಸಿವೆ. ಎರಡು ದಿನಗಳ ಈ ಮೇಳದಲ್ಲಿ ವಿವಿಧ ಬಗೆಯ ಕಾಡು ಮತ್ತು ನಾಡಿನ ಗೆಢ್ಡೆ ಗೆಣಸುಗಳು, ಮೌಲ್ಯವರ್ಧಿತ ಪದಾರ್ಥಗಳು, ಗೆಣಸಿನ ಅಡುಗೆಗಳು ಪ್ರದರ್ಶನ ಮತ್ತು ಮಾರಾಟಕ್ಕೆ ಬರಲಿವೆ.

    ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮೇಳವನ್ನು ಉದ್ಘಾಟಿಸಲಿದ್ದಾರೆ. ರೋಟರಿ ಕ್ಲಬ್ ಮೈಸೂರು ಪಶ್ಚಿಮದ ಅಧ್ಯಕ್ಷ ರೊಟೇರಿಯನ್ ಎಸ್.ಕೆ. ಸುಧೀಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ. 300ಕ್ಕೂ ಹೆಚ್ಚಿನ ಗೆಡ್ಡೆ ಗೆಣಸು ತಳಿಗಳ ಸಂರಕ್ಷಿಸಿರುವ ಕೇರಳದ ಎನ್.ಎಂ. ಶಾಜಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ನಿರ್ಲಕ್ಷಿತ ಬೆಳೆಗಳ ಕ್ಯಾಲೆಂಡರ್ ಸಹ ಮೇಳದಲ್ಲಿ ಬಿಡುಗಡೆಯಾಗಲಿದೆ.

    ರಾಜ್ಯದ ವಿವಿಧ ಭಾಗಗಳಿಂದ ಬರುವ 25ಕ್ಕೂ ಹೆಚ್ಚಿನ ಮಳಿಗೆಗಳು ಗೆಡ್ಡೆ ಗೆಣಸಿನ ಮೌಲ್ಯವರ್ಧಿತ ಪದಾರ್ಥ ಮತ್ತು ಬಗೆ ಬಗೆಯ ಅಡುಗೆಗಳನ್ನು ಉಣಬಡಿಸಲಿದ್ದಾರೆ. ಪರ್ಪಲ್ ಯಾಮ್, ಮಾವಿನ ಶುಂಠಿ, ಕೂವೆ ಗೆಡ್ಡೆ, ಹುತ್ತರಿ ಗೆಡ್ಡೆ, ಹಳದಿ ಮತ್ತು ಕೆಂಪು ಸಿಹಿ ಗೆಣಸು, ಬಳ್ಳಿ ಬಟಾಟೆ, ಕಪ್ಪು, ಹಸಿರು ಮತ್ತು ಹಳದಿ ಅರಿಶಿಣ, ಸುವರ್ಣ ಗೆಡ್ಡೆ ಮತ್ತು ಬಗೆ ಬಗೆಯ ಕೆಸುವಿನ ಬೀಜದ ಗೆಡ್ಡೆಗಳು ಬಿತ್ತನೆಗೆ ಸಿಗುತ್ತವೆ.

    ಕಪ್ಪು ಕ್ಯಾರೆಟ್, ಬಣ್ಣದ ಬೀಟ್‌ರೂಟ್ ಮತ್ತು ದೇಸಿ ತರಕಾರಿ ಬೀಜಗಳು, ಬಗೆ ಬಗೆಯ ಹಣ್ಣಿನ ಗಿಡಗಳು, ಸಿರಿಧಾನ್ಯ, ಬೇಳೆಕಾಳು, ಕಪ್ಪು ಹುರಳಿ ಮಾರಾಟಕ್ಕೆ ಬರಲಿವೆ. ರಾಗಿ, ಜೋಳ ಮತ್ತು ಕೊರಲೆಯ ರೊಟ್ಟಿಯ ಜೊತೆ ಗೆಣಸಿನ ಪಲ್ಯ ಚಪ್ಪರಿಸಬಹುದು. ಪರ್ಪಲ್ ಯಾಮ್ ಐಸ್‌ಕ್ರೀಂ ರುಚಿ ನೋಡಬಹುದು.

    ಗೆಡ್ಡೆ ಗೆಣಸು ಅಡುಗೆ ಸ್ಪರ್ಧೆ: ಫಾಸ್ಟ್‌ಫುಡ್ ಹಾಗೂ ರೆಡಿ ಟು ಈಟ್ ಆಹಾರಗಳಿಗೆ ಅಧಿಕವಾಗಿ ಮೊರೆಹೋಗುತ್ತಿರುವ ಇಂದಿನ ಪೀಳಿಗೆಗೆ ಗೆಡ್ಡೆ ಗೆಣಸಿನ ಅಡುಗೆಗಳನ್ನು ಪರಿಚಯಿಸುವ ಉದ್ದೇಶದಿಂದ ಗೆಡ್ಡೆ ಗೆಣಸು ಅಡುಗೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

    ಕಾಡಿನ ಅಥವಾ ಕೃಷಿ ಮೂಲದ ಗೆಡ್ಡೆ ಗೆಣಸುಗಳನ್ನು ಬಳಸಿ ತಯಾರಿಸುವ ಅಡುಗೆಗಳು ಸಾಂಪ್ರದಾಯಿಕವಾಗಿರಬಹುದು ಅಥವಾ ಹೊಸ ರುಚಿಯಾಗಿರಬಹುದು. ವಿವಿಧ ಜಾತಿಯ ಗೆಡ್ಡೆ ಗೆಣಸುಗಳನ್ನು ಬಳಸಿ ಮಾಡಿದ ಅಡುಗೆಯನ್ನು, ಮನೆಯಲ್ಲೇ ತಯಾರಿಸಿ, ಗೆಡ್ಡೆ ಗೆಣಸು ಮೇಳಕ್ಕೆ ಫೆ.11ರ ಭಾನುವಾರ ಮಧ್ಯಾಹ್ನ 12 ಗಂಟೆಗೆ ತರಬೇಕು. ಅಪರೂಪದ ಅಡುಗೆ ತಯಾರಿಸಿದವರಿಗೆ ಬಹುಮಾನ ಮತ್ತು ಪ್ರಶಂಸನಾ ಪತ್ರ ನೀಡಲಾಗುವುದು. ಆಲೂಗೆಡ್ಡೆಯ ಹೊರತುಪಡಿಸಿ ಮಾಡಿದ ಕಾಡು ಗೆಡ್ಡೆಯ ಅಡುಗೆಗಳಿಗೆ ವಿಶೇಷ ಮನ್ನಣೆ ನೀಡಲಾಗುತ್ತದೆ. ಹೆಚ್ಚಿನ ವಿವರಗಳಿಗೆ ಮೊ: 7090009944/ 9164523840 ಸಂಪರ್ಕಿಸಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts