More

    ಗ್ಯಾಸ್ ಪೈಪ್‌ಲೈನ್ ಸುರಕ್ಷತೆಯಲ್ಲಿ ರಾಜಿ?

    ವಿಜಯವಾಣಿ ಸುದ್ದಿಜಾಲ ಮಂಗಳೂರು
    ಮಂಗಳೂರಿನ ಎಚ್‌ಪಿಸಿಎಲ್ ಸ್ಥಾವರದಿಂದ ಹಾಸನ ಮಾರ್ಗವಾಗಿ ಬೆಂಗಳೂರು ಬಳಿಯ ಯಡಿಯೂರಿಗೆ ಅನಿಲ ಸಾಗಾಟ ಮಾಡುವ ಪೈಪ್‌ಲೈನ್ ಭದ್ರತಾ ಲೋಪ ಎದುರಿಸುವ ಆತಂಕದಲ್ಲಿದೆ.
    ಹಣ ಉಳಿಸುವುದಕ್ಕಾಗಿ ಅಧಿಕಾರಿಗಳು ಈ ಪೈಪ್‌ಲೈನ್‌ನ ಗಸ್ತು ತಂಡವನ್ನು ಚಿಕ್ಕದಾಗಿಸಲು ಮುಂದಾಗಿದ್ದಾರೆ. ಜೂನ್ 1ರಿಂದ ಪ್ಯಾಟ್ರೊಲ್ ವಾಹನಗಳ ಸಂಖ್ಯೆಯನ್ನು 8ರಿಂದ 4ಕ್ಕೆ ಇಳಿಸಲಿದ್ದು, ಇದು ಪೈಪ್‌ಲೈನ್ ಹತ್ತಿರ ವಾಸಿಸುವವರಿಗೆ ಅಪಾಯ ಎನ್ನುತ್ತವೆ ಮೂಲಗಳು.
    ಪೈಪ್‌ಲೈನ್ ಚಾಲನೆ ಪಡೆದ ಪ್ರಾರಂಭದಲ್ಲಿ ಸ್ಥಳೀಯರನ್ನು ಒಳಗೊಂಡ ಲೈನ್‌ವಾಕರ್ಸ್‌ಗಳ ತಂಡವನ್ನು ಎಚ್‌ಪಿಸಿಎಲ್ ನೇಮಿಸಿತ್ತು. ಆ ಬಳಿಕ ಒಎಫ್‌ಸಿ ಆಧಾರಿತ ಸೆನ್ಸರ್‌ಗಳನ್ನು ಪೈಪ್‌ಲೈನ್‌ನಲ್ಲಿ ಅಳವಡಿಸಲಾಗಿದೆ ಎಂಬ ಕಾರಣ ನೀಡಿ ರಾತ್ರಿ ಪಾಳಿಯವರನ್ನು ಕೆಲಸದಿಂದ ತೆಗೆದಿತ್ತು. ಈಗ ಕಡಿಮೆ ಸಂಖ್ಯೆಯಲ್ಲಿ ಸುರಕ್ಷತಾ ಕರ್ಮಿಗಳು ಹಗಲಿನ ಪಾಳಿಯಲ್ಲಿ ಮಾತ್ರ ಪೈಪ್‌ಲೈನ್ ವೀಕ್ಷಣಾ ಕೆಲಸದಲ್ಲಿದ್ದಾರೆ.

    ಸೆನ್ಸರ್‌ನಿಂದ ಎಚ್ಚರಿಕೆ: ಕೋಟಿಗಟ್ಟಲೆ ವೆಚ್ಚದಲ್ಲಿ ಪೈಪ್‌ಲೈನ್ ಉದ್ದಕ್ಕೂ ಸೆನ್ಸರ್ ಅಳವಡಿಸಿರುವುದರಿಂದ ಯಾರಾದರೂ ಪೈಪ್‌ಲೈನ್ ಅಗೆದು ಕದಿಯುವುದಕ್ಕೆ ಮುಂದಾದರೆ ಅಥವಾ ಯಾವುದೇ ಲೀಕೇಜ್ ಸಂಭವಿಸಿದರೆ ಮಾಹಿತಿ ನೀಡಲು ಈ ಸೆನ್ಸರ್‌ಗಳು ನೆರವಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಕಂಟ್ರೋಲ್ ರೂಂನಲ್ಲಿ ಅಲಾರ್ಮ್ ಆಗುತ್ತದೆ.
    ಪೈಪ್‌ಲೈನ್‌ನ ಯಾವ ಭಾಗದಲ್ಲಿ ಸೆನ್ಸರ್ ಎಚ್ಚರಿಕೆ ನೀಡಿದೆ ಎನ್ನುವುದನ್ನು ಕಂಟ್ರೋಲ್ ರೂಂನಿಂದ ಮೊಬೈಲ್ ಪ್ಯಾಟ್ರೊಲ್ ವಾಹನದಲ್ಲಿರುವ ತಂಡಕ್ಕೆ ರವಾನಿಸಲಾಗುತ್ತದೆ. ತಕ್ಷಣ ಅವರು ಅದೇ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಬಹುದು. ಒಂದು ತಂಡದಲ್ಲಿ ಒಬ್ಬ ಸೆಕ್ಯುರಿಟಿ ಗನ್‌ಮನ್, ಒಬ್ಬ ಆಫೀಸರ್, ಇನ್ನೋರ್ವ ಚಾಲಕ ಇರುತ್ತಾರೆ.
    ಸದ್ಯ ಪೈಪ್‌ಲೈನ್ ಉದ್ದಕ್ಕೆ ಪರಿಶೀಲನೆಗೆ ಒಟ್ಟು 8 ಇಂತಹ ಪ್ಯಾಟ್ರೊಲ್ ವಾಹನಗಳಿವೆ. ಜೂನ್ 1ರಿಂದ ಅದರಲ್ಲಿ ನಾಲ್ಕನ್ನು ಮಾತ್ರವೇ ಉಳಿಸಿಕೊಳ್ಳಲು ಕಂಪನಿ ನಿರ್ಧರಿಸಿದೆ. ದಕ್ಷಿಣ ಕನ್ನಡ ಭಾಗದಲ್ಲಿ ಕಾನ-ಬಾಳದಿಂದ ವಗ್ಗದ ವರೆಗೆ ಒಂದು ತಂಡ ಹಾಗೂ ಅಲ್ಲಿಂದ ನೆರಿಯ ವರೆಗೆ ಇನ್ನೊಂದು ತಂಡ ಕೆಲಸ ಮಾಡುತ್ತಿತ್ತು. ಇದರಲ್ಲಿ ಒಂದನ್ನಷ್ಟೇ ಉಳಿಸಲಾಗುತ್ತದೆ.
    ಇತರ ಮೂರು ತಂಡಗಳು ಮುಂದುವರಿದ ಪೈಪ್‌ನಲ್ಲಿ (ಜಿಲ್ಲೆಯಿಂದ ಹೊರಗೆ) ಕಾರ್ಯನಿರ್ವಹಿಸಲಿವೆ.

    ಯಾಕೆ ಅಪಾಯಕಾರಿ?:
    ವೆಚ್ಚ ಉಳಿಸುವುದಕ್ಕೆಂದು ಗಸ್ತು ತಂಡ ಕಡಿತ ಕಸರತ್ತಿಗೆ ಇಳಿದರೆ ಅನಾಹುತ ಸಂಭವಿಸಬಹುದು ಎಂಬುದು ಆತಂಕ. ದ.ಕ. ಜಿಲ್ಲೆಯಲ್ಲಿ ಗ್ಯಾಸ್ ಪೈಪ್‌ಲೈನ್ ಜತೆಜತೆಗೇ ಪೆಟ್ರೋನೆಟ್‌ನ ತೈಲ ಸಾಗಾಟದ (ಪೆಟ್ರೋಲ್/ಡೀಸೆಲ್) ಪೈಪ್‌ಲೈನ್ ಕೂಡ ಇದೆ. ಕಳ್ಳರು ತೈಲ ಕದಿಯಲೆಂದು ಹೋಗಿ ತಪ್ಪಿ ಪಕ್ಕದ ಗ್ಯಾಸ್ ಪೈಪ್‌ಲೈನ್‌ಗೆ ಕನ್ನ ಹಾಕಿದರೆ ಅನಿಲ ಸೋರಿಕೆಯಾಗಿ ದೊಡ್ಡ ದುರಂತವೇ ಸಂಭವಿಸಬಹುದು. ಅಥವಾ ತೈಲ ಕಳ್ಳತನ ಸಂದರ್ಭ ಅಗ್ನಿ ಅನಾಹುತವೇನಾದರೂ ಸಂಭವಿಸಿದರೂ ಪಕ್ಕದಲ್ಲೇ ಇರುವ ಗ್ಯಾಸ್ ಪೈಪ್‌ಲೈನ್‌ಗೆ ತೊಂದರೆಯಾಗಬಹುದು. ಅತ್ಯಾಧುನಿಕ ಸೆನ್ಸರ್‌ಗಳಿದ್ದರೂ ಅದನ್ನು ಪೂರ್ತಿ ನಂಬಲಾಗದು, ಅದಕ್ಕೆ ಹಾಕಿರುವ ಒಎಫ್‌ಸಿ ಕೇಬಲ್ ಡ್ಯಾಮೇಜ್ ಆದರೆ ಸೆನ್ಸರ್ ಕೈಕೊಡುವ ಸಾಧ್ಯತೆಯೂ ಇಲ್ಲದಿಲ್ಲ ಎನ್ನುತ್ತವೆ ಮೂಲಗಳು.

    ಏನಿದು ಪೈಪ್‌ಲೈನ್?: ಸುರತ್ಕಲ್ ಬಳಿಯ ಕಾನದಲ್ಲಿರುವ ಎಚ್‌ಪಿಸಿಎಲ್ ಸ್ಥಾವರದಿಂದ ಹೊರಡುವ ಪೈಪ್‌ಲೈನ್ ಮಡಂತ್ಯಾರು- ಧರ್ಮಸ್ಥಳ -ನೆರಿಯ – ಹಾಸನಕ್ಕೆ ಹೋಗುತ್ತದೆ. ಅಲ್ಲಿಂದ ಕವಲೊಡೆದು ಒಂದು ಮೈಸೂರು ಹಾಗೂ ಇನ್ನೊಂದು ಯಡಿಯೂರು ಗ್ಯಾಸ್ ಬಾಟ್ಲಿಂಗ್ ಸ್ಥಾವರ ತಲುಪುತ್ತದೆ. ಮೊದಲು ಬುಲೆಟ್ ಟ್ಯಾಂಕರ್ ಮೂಲಕವೇ ತೆರಳುತ್ತಿದ್ದ ಅನಿಲ 2017ರಿಂದ ಬಹುತೇಕ ಪೈಪ್‌ಲೈನ್ ಮೂಲಕವೇ ಸಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts