More

    ಬೆಳ್ಳುಳ್ಳಿ ಬೆಲೆಯಲ್ಲಿ ತೀವ್ರ ಕುಸಿತ

    ರಾಣೆಬೆನ್ನೂರ: ತಾಲೂಕಿನಲ್ಲಿ ರೈತರು ಬೆಳೆದಿರುವ ಬೆಳ್ಳುಳ್ಳಿ ಇನ್ನೊಂದು ತಿಂಗಳಲ್ಲಿ ಎಪಿಎಂಸಿ ಮಾರುಕಟ್ಟೆಗೆ ಬರಲಿದೆ. ಆದರೆ, ಬೆಳ್ಳುಳ್ಳಿ ಬೆಲೆಯಲ್ಲಿ ಭಾರಿ ಕುಸಿತ ಕಂಡಿರುವುದು ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದೆ.

    ಕಳೆದ ತಿಂಗಳು ಒಂದು ಕ್ವಿಂಟಾಲ್ ಬೆಳ್ಳುಳ್ಳಿ 8 ಸಾವಿರ ರೂಪಾಯಿಯಿಂದ 10 ಸಾವಿರ ರೂಪಾಯಿವರೆಗೂ ಮಾರಾಟವಾಗಿತ್ತು. ಗುರುವಾರ ಮಾರುಕಟ್ಟೆಯಲ್ಲಿ ಒಂದು ಕ್ವಿಂಟಾಲ್ ಬೆಳ್ಳುಳ್ಳಿ 4 ಸಾವಿರ ರೂಪಾಯಿಯಿಂದ 5 ಸಾವಿರ ರೂಪಾಯಿಗೆ ಬಂದು ನಿಂತಿದೆ.

    ಇನ್ನೊಂದು ತಿಂಗಳಲ್ಲಿ ತಾಲೂಕಿನಲ್ಲಿ ರೈತರು ಬೆಳೆದಿರುವ ಬೆಳ್ಳುಳ್ಳಿ ಮಾರಾಟಕ್ಕೆ ಬರಲಿದೆ. ಬೆಳೆ ಸಂಪೂರ್ಣ ಮಾರುಕಟ್ಟೆಗೆ ಬಂದರೆ, ಬೆಲೆ ಇನ್ನಷ್ಟು ಕುಸಿಯುವ ಭೀತಿ ಎದುರಾಗಿದೆ.

    ಕಳೆದ ವರ್ಷ ನೆರೆ ಹಾವಳಿಯಿಂದಾಗಿ ಇಳುವರಿ ಕುಂಠಿತವಾಗಿ 1 ಕ್ವಿಂಟಾಲ್ ಬೆಳ್ಳುಳ್ಳಿ ಬೆಲೆ 24 ಸಾವಿರ ರೂಪಾಯಿವರೆಗೂ ತಲುಪುವ ಮೂಲಕ ದಾಖಲೆ ನಿರ್ವಿುಸಿತ್ತು. ಈ ಬಾರಿಯೂ ಬೆಳೆಯಲ್ಲಿ ಕುಂಠಿತವಾಗಿದ್ದು, ಉತ್ತಮ ಬೆಲೆ ಬಂದರೆ ಮಾತ್ರ ರೈತರಿಗೆ ವರದಾನವಾಗಲಿದೆ.

    ತಾಲೂಕಿನ ಯರೇಕುಪ್ಪಿ, ಹಲಗೇರಿ, ಉಕ್ಕುಂದ, ಸರ್ವಂದ, ಗುಡ್ಡದ ಆನ್ವೇರಿ, ಕುಪ್ಪೇಲೂರ ಸೇರಿ 4 ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಬೆಳ್ಳುಳ್ಳಿ ಬೆಳೆಯಲಾಗಿದೆ. ಕಳೆದ ತಿಂಗಳಲ್ಲಿ ನಿರಂತರವಾಗಿ ಮಳೆ ಬಂದಿದ್ದರಿಂದ ಅತಿವೃಷ್ಟಿ ಉಂಟಾಗಿ ಬೆಳ್ಳುಳ್ಳಿ ಸಸಿಗಳು ಬೆಳೆಯುವ ಮುನ್ನವೇ ನೀರಿನಲ್ಲಿ ಕೊಚ್ಚಿ ಹೋಗಿದ್ದವು. ಇನ್ನು ಕೆಲವೆಡೆ ತೇವಾಂಶ ಹೆಚ್ಚಳದಿಂದ ಸೂಕ್ತ ರೀತಿಯಲ್ಲಿ ಬೆಳೆ ಬೆಳೆದಿಲ್ಲ. ಹೀಗಾಗಿ ಬೆಳೆ ಕುಂಠಿತವಾಗಲಿದೆ ಎಂಬುದು ರೈತರ ಅಭಿಪ್ರಾಯ.

    ಸದ್ಯ ಸ್ಥಳೀಯ ಎಪಿಎಂಸಿ ಮಾರುಕಟ್ಟೆಯಲ್ಲಿ ರಾಣೆಬೆನ್ನೂರ ಹಾಗೂ ಸುತ್ತಮುತ್ತಲಿನ ತಾಲೂಕು ಹೊರತುಪಡಿಸಿ ಬೇರೆ ಬೇರೆ ಜಿಲ್ಲೆಯಿಂದ ಬೆಳ್ಳುಳ್ಳಿ ಆವಕವಾಗುತ್ತಿದೆ. ಒಂದು ಕ್ವಿಂಟಾಲ್ ಬೆಳ್ಳುಳ್ಳಿಗೆ 4-5 ಸಾವಿರ ರೂಪಾಯಿವರೆಗೆ ಬೆಲೆಯಿದೆ. ಒಂದು ಎಕರೆ ಬೆಳ್ಳುಳ್ಳಿ ಬೆಳೆಯಲು ಬೀಜ, ಗೊಬ್ಬರ, ಔಷಧ ಹಾಗೂ ಕೂಲಿ ಕಾರ್ವಿುಕರ ಖರ್ಚು ಸೇರಿ 50 ಸಾವಿರ ರೂಪಾಯಿವರೆಗೂ ಖರ್ಚು ತಗುಲಲಿದೆ.

    ಉತ್ತಮ ಬೆಳೆ ಬಂದರೆ ಎಕರೆಗೆ 10ರಿಂದ 15 ಕ್ವಿಂಟಾಲ್ ಬೆಳ್ಳುಳ್ಳಿ ದೊರೆಯುತ್ತದೆ. ಆದರೆ, ಈ ಬಾರಿ ಮಳೆಯಿಂದಾಗಿ ಇಳುವರಿ ಕುಂಠಿತವಾಗಿ 5ರಿಂದ 10 ಕ್ವಿಂಟಾಲ್ ಬೆಳೆ ಕೈಗೆ ಬಂದರೆ ಹೆಚ್ಚು ಎನ್ನುವ ಸ್ಥಿತಿ ಇದೆ. ಆದ್ದರಿಂದ ಕಳೆದ ವರ್ಷದಂತೆ ಈ ಬಾರಿಯೂ ಬೆಲೆ 20 ಸಾವಿರ ರೂಪಾಯಿ ದಾಟಿದರೆ ಅನುಕೂಲವಾಗಲಿದೆ ಎಂದು ಬೆಳ್ಳುಳ್ಳಿ ಬೆಳೆಗಾರ ಮಲ್ಲೇಶ ಕರಿಗಾರ ಎಂಬುವರು ‘ವಿಜಯವಾಣಿ’ ಎದುರು ಅಭಿಪ್ರಾಯ ಹಂಚಿಕೊಂಡರು.

    ಕಳೆದ ವರ್ಷ ಆರಂಭದಲ್ಲಿ ಬೆಳ್ಳುಳ್ಳಿ ಮಾರಾಟ ಮಾಡಿದ ರೈತರಿಗೆ ಉತ್ತಮ ಬೆಲೆ ಸಿಕ್ಕಿತ್ತು. ಆದರೆ, ಕೊನೆ ಗಳಿಗೆಯಲ್ಲಿ ದಲ್ಲಾಳಿಗಳು ಬೇರೆ ಬೇರೆ ಕಡೆಯಿಂದ ಬೆಳ್ಳುಳ್ಳಿ ತರಿಸಿದ್ದರಿಂದ ಸ್ಥಳೀಯ ಬೆಳ್ಳುಳ್ಳಿ ಬೆಲೆ ಸಂಪೂರ್ಣ ಕುಸಿತ ಕಂಡಿತ್ತು. ಈ ಬಾರಿ ಆರಂಭದಲ್ಲಿಯೇ ಬೆಲೆ ಕುಸಿತವಾಗಿದೆ. ಮಾರುಕಟ್ಟೆಗೆ ಸಂಪೂರ್ಣ ಬೆಳೆ ಬಂದರೆ ಬೆಲೆಯಲ್ಲಿ ಇನ್ನೂ ಹೆಚ್ಚಿನ ಕಡಿತವಾಗಲಿದೆ. ಆದ್ದರಿಂದ ಸರ್ಕಾರ ಈ ಬಗ್ಗೆ ಗಮನ ಹರಿಸಿ, ಬೆಳ್ಳುಳ್ಳಿಗೆ ಉತ್ತಮ ಮಾರುಕಟ್ಟೆ ಒದಗಿಸಿಕೊಡಬೇಕು.

    | ಸಿದ್ದಪ್ಪ ಕಂಬಳಿ, ಬೆಳ್ಳುಳ್ಳಿ ಬೆಳೆಗಾರ

    ಆ. 19ರಂದು ಎಪಿಎಂಸಿಗೆ 150 ಕ್ವಿಂಟಾಲ್​ನಷ್ಟು ಬೆಳ್ಳುಳ್ಳಿ ಆವಕವಾಗಿದೆ. 1 ಕ್ವಿಂಟಾಲ್​ಗೆ 4 ಸಾವಿರ ರೂಪಾಯಿಯಿಂದ 5 ಸಾವಿರ ರೂಪಾಯಿವರೆಗೆ ಮಾರಾಟವಾಗಿದೆ. ಹೆಚ್ಚಿನ ಬೆಳೆ ಮಾರುಕಟ್ಟೆಗೆ ಬಂದರೆ, ಬೆಲೆ ಇನ್ನೂ ಕಡಿಮೆಯಾಗುವ ಸಾಧ್ಯತೆಯಿದೆ.

    | ಪರಮೇಶ ನಾಯ್ಕ, ಎಪಿಎಂಸಿ ಸಹಾಯಕ ಕಾರ್ಯದರ್ಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts