More

    ಕೆಲವೇ ಕ್ಷಣಗಳಲ್ಲಿ ಸಿಲ್ಕ್​ಯಾರಾ ಸುರಂಗದಿಂದ ಕಾರ್ಮಿಕರು ಹೊರಕ್ಕೆ: ಹೂವಿನ ಹಾರದ ಸ್ವಾಗತಕ್ಕೆ ಸಜ್ಜು

    ಡೆಹ್ರಾಡೂನ್​: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಸಿಲ್ಕ್​ಯಾರ್​ ಸುರಂಗದೊಳಗೆ ಸಿಲುಕಿ, ಕಳೆದ 17 ದಿನಗಳಿಂದ ಜೀವ ಕೈಯಲ್ಲಿ ಹಿಡಿದುಕೊಂಡು ರಕ್ಷಣೆಗಾಗಿ ಎದುರು ನೋಡುತ್ತಿರುವ ಕಾರ್ಮಿಕರು ಕೊನೆಗೂ ಸುರಂಗದ ಹೊರಗೆ ಬರುವ ಆ ಐತಿಹಾಸಿಕ ಕ್ಷಣ ಸಮೀಪಿಸಿದೆ. ಕಾರ್ಮಿಕರನ್ನು ಹೊರಗೆ ಕರೆತರಲು ಕೆಲವೇ ದೂರ ಅವಶೇಷಗಳನ್ನು ತೆರವುಗೊಳಿಸಬೇಕಿದ್ದು, ಶೀಘ್ರದಲ್ಲೇ ಕಾರ್ಮಿಕರನ್ನು ಪೈಪ್​ ಮೂಲಕ ಒಬ್ಬೊಬ್ಬರಾಗಿ ಹೊರಕರೆತರಲಾಗುತ್ತದೆ.

    ಬರೋಬ್ಬರಿ 17 ದಿನ ಕಗ್ಗತ್ತಲೆಯ ಸುರಂಗದಲ್ಲಿ ಯಾವುದೇ ಸೌಕರ್ಯವಿಲ್ಲದೆ, ಪ್ರಾಣ ಉಳಿಸಿಕೊಳ್ಳಲು ಪರದಾಡಿದ ಕಾರ್ಮಿಕರು ತಮ್ಮ ಉಸಿರನ್ನು ಬಿಗಿಯಾಗಿ ಹಿಡಿದುಕೊಂಡು ಎದುರು ನೋಡುತ್ತಿದ್ದ ಆ ಕ್ಷಣ ಇದೀಗ ಬಂದಿದ್ದು, 41 ಕಾರ್ಮಿಕರಿಗೆ ಹಾರವನ್ನು ಹಾಕಿ ಆತ್ಮೀಯವಾಗಿ ಹೊರ ಜಗತ್ತಿಗೆ ಬರಮಾಡಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಲ್ಲದೆ, ಹೊರಗೆ ಬರುವ ಕಾರ್ಮಿಕರಿಗೆ ತಕ್ಷಣ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲು ಸ್ಥಳದಲ್ಲಿ ಸಾಕಷ್ಟು ಆಂಬ್ಯುಲೆನ್ಸ್​ ಬೀಡುಬಿಟ್ಟಿವೆ. 41 ಕಾರ್ಮಿಕರಿಗೆ ಅಕ್ಷರಶಃ ಇದು ಜೀವನದ ಎರಡವೇ ಅವಕಾಶವಾಗಿದೆ.

    ಕಾರ್ಮಿಕರ ರಕ್ಷಣೆ ಬಗ್ಗೆ ಮಾತನಾಡಿರುವ ಉತ್ತರಾಖಂಡದ ಸಿಎಂ ಪುಷ್ಕರ್​ ಸಿಂಗ್​ ಧಾಮಿ, ಬಾಬಾ ಬೌಖ್ ನಾಗ್ಜಿ ದಯೆಯಿಂದ ಮತ್ತು ಕೋಟ್ಯಂತರ ದೇಶವಾಸಿಗಳ ಪ್ರಾರ್ಥನೆ ಹಾಗೂ ರಕ್ಷಣಾ ತಂಡಗಳ ಅವಿರತ ಶ್ರಮದ ಫಲವಾಗಿ ಕಾರ್ಮಿಕರನ್ನು ಹೊರತೆಗೆಯಲು ಸುರಂಗದಲ್ಲಿ ಪೈಪ್‌ಗಳನ್ನು ಹಾಕುವ ಕೆಲಸ ಪೂರ್ಣಗೊಂಡಿದೆ. ಶೀಘ್ರದಲ್ಲೇ ಎಲ್ಲ ಕಾರ್ಮಿಕ ಸಹೋದರರನ್ನು ಹೊರತೆಗೆಯಲಾಗುವುದು ಎಂದು ಎಕ್ಸ್​ ಖಾತೆಯ ಮೂಲಕ ತಿಳಿಸಿದ್ದಾರೆ.

    ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ತುರ್ತು ವೈದ್ಯಕೀಯ ಸಿಬ್ಬಂದಿ ಸ್ಟ್ರೆಚರ್‌ಗಳ ಸಹಾಯದೊಂದಿಗೆ ಇದೀಗ ರಕ್ಷಣಾ ಕಾರ್ಯಾಚರಣೆಯನ್ನು ಕೈಗೆತ್ತಿಕೊಂಡಿದ್ದು, ಕುಸಿದ ಸುರಂಗದೊಳಗೆ ರಕ್ಷಣಾ ಕೆಲಸ ಪ್ರಾರಂಭಿಸಿದ್ದಾರೆ ಎಂದು ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ನುರಿತ ಕಾರ್ಮಿಕರ ತಂಡವು ಇಲಿ-ಕುಳಿ ಗಣಿಗಾರಿಕೆ ತಂತ್ರವನ್ನು ಬಳಸಿಕೊಂಡು ಕೈಯಿಂದ ರಂಧ್ರ ಕೊರೆಯಲಾಗುತ್ತಿದೆ. 800-ಎಂಎಂ ವ್ಯಾಸದ ಪೈಪ್ ಅನ್ನು ಆಗರ್ ಯಂತ್ರದಿಂದ ಅವಶೇಷಗಳ ಮೂಲಕ ಸೇರಿಸಲಾಗುತ್ತಿದೆ. ಈ ಮೊದಲು ಬೃಹತ್ ಆಗರ್ ಯಂತ್ರದ ಮೂಲಕ ಈ ಕೊರೆತವನ್ನು ನಡೆಸಲಾಗಿತ್ತು. ಆದರೆ, ಕಳೆದ ಶುಕ್ರವಾರ ಈ ಯಂತ್ರವು 47 ಮೀಟರ್‌ನಲ್ಲಿ ಅವಶೇಷಗಳಡಿ ಸಿಲುಕಿ ಛಿದ್ರವಾಗಿತ್ತು. ಸುರಂಗದ ಅವಶೇಷಗಳ ಮೂಲಕ 52 ಮೀಟರ್‌ಗಳವರೆಗೆ ಪೈಪ್‌ಗಳನ್ನು ಅಳವಡಿಸಲಾಗಿದೆ ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮಂಗಳವಾರ ಹೇಳಿದ್ದಾರೆ, 57 ಮೀಟರ್ ಪೈಪ್​ ಅಳವಡಿಸಿದರೆ ಯಶಸ್ಸು ಸಿಗಲಿದೆ ಎಂದು ಅವರು ತಿಳಿಸಿದ್ದಾರೆ.

    ಕುಸಿದ ಸುರಂಗದಲ್ಲಿ ಕಳೆದ 17 ದಿನಗಳಿಂದ ಸಿಲುಕಿರುವ 41 ಕಾರ್ಮಿಕರನ್ನು ದೊಡ್ಡ ಪೈಪ್​ ಮೂಲಕ ಹಗ್ಗ ಕಟ್ಟಿದ ಗಾಲಿ ಸ್ಟ್ರೆಚರ್ ನೆರವಿನಿಂದ ಕೆಲವೇ ಕ್ಷಣಗಳಲ್ಲಿ ಸುರಂಗದಿಂದ ಹೊರ ಕರೆತರಲಾಗುತ್ತದೆ. ಪೈಪ್​ಗಳನ್ನು ವೆಲ್ಡಿಂಗ್​ ಮಾಡಿರುವ ಕಾರಣ ಕಾರ್ಮಿಕರು ತೆವಳುವಾಗ ತರಚಿ ಗಾಯಗಳಾಗಬಹುದು ಎಂಬ ಕಾರಣಕ್ಕೆ ಗಾಲಿ ಸ್ಟ್ರೆಚರ್​ ಸಹಾಯದಿಂದ ಹೊರಗೆ ತರಲು ಎನ್​ಡಿಆರ್​ಎಫ್​ ಸಲಕ ಸಿದ್ಧತೆಯನ್ನು ಮಾಡಿಕೊಂಡಿದೆ. ಕಾರ್ಮಿಕರಿಗೆ ಒಬ್ಬೊಬ್ಬರಾಗಿ ತೆವಳುವ ಆಯ್ಕೆಯನ್ನು ಸಹ ಪರಿಗಣಿಸಿದ್ದರೂ ಅವರ ಆರೋಗ್ಯ ಸ್ಥಿತಿಯು ಸ್ಟ್ರೆಚರ್​ ಮೇಲೆ ಹೆಚ್ಚು ಅವಲಂಬನೆಯಾಗಿದೆ. ಏಕೆಂದರೆ, ಕಳೆದ 17 ದಿನಗಳಿಂದ ಯಾವುದೇ ನೈಸರ್ಗಿಕ ಬೆಳಕು ಮತ್ತು ಸಂಪೂರ್ಣ ಊಟವಿಲ್ಲದೆ ಸುರಂಗದ ಭಗ್ನಾವಶೇಷಗಳ ಅಡಿಯಲ್ಲಿ ಜೀವವನ್ನು ಕೈಯಲ್ಲಿ ಹಿಡಿದು ನಿತ್ರಾಣಗೊಂಡಿರುವ ಕಾರ್ಮಿಕರಿಗೆ ತೆವಳುವುದು ತುಂಬಾ ಕಷ್ಟವಾಗಬಹುದು. ಹೀಗಾಗಿ ಗಾಲಿ ಸ್ಟ್ರೆಚರ್​ ರಕ್ಷಣಾ ಕಾರ್ಯಕರ್ತರ ಪ್ರಧಾನ ಆಯ್ಕೆಯಾಗಿದೆ.

    ಸುರಂಗ ಮಾರ್ಗದ ಉದ್ದೇಶವೇನು?
    ಕೇಂದ್ರದ ಮಹತ್ವಾಕಾಂಕ್ಷೆಯ ಚಾರ್ ಧಾಮ್ ಯೋಜನೆಯ ಭಾಗವಾದ ಸುರಂಗವು ಉತ್ತರಾಖಂಡದ ಸಿಲ್ಕ್ಯಾರಾ ಮತ್ತು ದಂಡಲ್ಗಾಂವ್ ನಡುವೆ ಉತ್ತರಕಾಶಿ ಮತ್ತು ಯಮುನೋತ್ರಿಯನ್ನು ಸಂಪರ್ಕಿಸಲು ಉದ್ದೇಶಿಸಿರುವ ರಸ್ತೆಯಲ್ಲಿದೆ. ಇದರ ಕಾಮಗಾರಿ ಭರದಿಂದ ಸಾಗಿತ್ತು. ಆದರೆ, ಮಣ್ಣು ಕುಸಿತದಿಂದಾಗಿ ನ.12 ರಂದು 41 ಕಾರ್ಮಿಕರು ಸುರಂಗದಲ್ಲಿ ಸಿಲುಕಿಕೊಂಡಿದ್ದಾರೆ. (ಏಜೆನ್ಸೀಸ್​)

    ಸಂಜೆಯ ಹೊತ್ತಿಗೆ ಬರಬಹುದು ಸಿಹಿ ಸುದ್ದಿ; ಸುರಂಗ ಕೊರೆತ ಬಹುತೇಕ ಪೂರ್ಣ, ಆಗರ್ ಯಂತ್ರದೊಂದಿಗೆ ಪೈಪ್‌ ಅಳವಡಿಕೆ ಆರಂಭ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts