More

    ಗುಂಡ್ಲು ನದಿಗೆ ತ್ಯಾಜ್ಯವೆ ಹಾನಿಕಾರ


    ಚಾಮರಾಜನಗರ: ಗುಂಡ್ಲುಪೇಟೆ ಪಟ್ಟಣದ ವ್ಯಾಪ್ತಿಯಲ್ಲಿರುವ ಗುಂಡ್ಲು ನದಿಗೆ ಕಟ್ಟಡದ ತ್ಯಾಜ್ಯವನ್ನು ನಿರಂತರವಾಗಿ ಸುರಿಯುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮವಹಿಸದೆ ಕಂಡು ಕಾಣದಂತಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


    ಒಂದು ಕಾಲದಲ್ಲಿ ತಾಲೂಕಿನ ಜೀವನಾಡಿಯಾಗಿದ್ದ ಗುಂಡ್ಲು ನದಿ ಪಟ್ಟಣದ ಹೊರವಲಯದಲ್ಲಿ ಹಾದುಹೋಗಿದೆ. ಈಗಲೂ ಮಳೆಗಾಲದಲ್ಲಿ ಉತ್ತಮ ಮಳೆಯಾದಾಗ ಈ ಮಾರ್ಗದಲ್ಲಿ ನೀರು ಹರಿದು ನಲ್ಲೂರು ಅಮಾನಿ ಜಲಾಶಯವನ್ನು ಸೇರುತ್ತದೆ. ಎರಡು ವರ್ಷಗಳ ಹಿಂದೆ ವಿಜಯವಾಣಿ ದಿನಪತ್ರಿಕೆ ಗುಂಡ್ಲು ನದಿ ಪುನಶ್ಚೇತನ ಅಭಿಯಾನ ನಡೆಸಿ ಜಲಮಾರ್ಗದಲ್ಲಿ ಮುಚ್ಚಿಕೊಂಡಿದ್ದ ಹೂಳೆತ್ತಿಸಲಾಗಿತ್ತು. ಪರಿಣಾಮ ಅದೇ ವರ್ಷ ಬಿದ್ದ ಭಾರಿ ಮಳೆಯಿಂದಾಗಿ ನೀರು ಈ ಮಾರ್ಗದಲ್ಲಿ ಹರಿದಿತ್ತು. ತಾಲೂಕಿನ 110 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸರ್ಕಾರ ರೂಪಿಸಿದೆ. ಇದು ಜಾರಿಗೆ ಬಂದರೆ ಇದೇ ಮಾರ್ಗದಲ್ಲಿ ನೀರು ಹರಿಸಲಾಗುತ್ತದೆ.


    ಆದರೆ ಇತ್ತೀಚೆಗೆ ಪ್ರತಿ ದಿನವೂ ಪಟ್ಟಣದ ಶಿವಾನಂದ ವೃತ್ತದಿಂದ ಕಲ್ಯಾಣಿ ಕೊಳದವರೆಗೂ ನೀರು ಹರಿಯುವ ಮಾರ್ಗದಲ್ಲಿ ಕಟ್ಟಡದ ತ್ಯಾಜ್ಯವನ್ನು ಸುರಿಯಲಾಗುತ್ತಿದೆ. ಪ್ರತಿ ದಿನ ಹತ್ತಾರು ಟ್ರಾೃಕ್ಟರ್‌ಗಳಲ್ಲಿ ಹಳೆಯ ಕಟ್ಟಡ ಒಡೆದ ಇಟ್ಟಿಗೆಗಳು, ಸಿಮೆಂಟ್, ಗಾರೆ ಮುಂತಾದ ತ್ಯಾಜ್ಯಗಳನ್ನು ರಸ್ತೆ ಬದಿಗಳಲ್ಲಿರುವ ಜಲಮಾರ್ಗದಲ್ಲಿ ಸುರಿಯಲಾಗುತ್ತಿದೆ. ಚಾಮರಾಜನಗರ ರಸ್ತೆಯ ಕಲ್ಯಾಣಿಕೊಳ, ಪರವಾಸು ದೇವಾಲಯ ಹಾಗೂ ಗುಂಡ್ಲುವಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಯ ಎರಡೂ ಬದಿಗಳಲ್ಲಿ ರಾಶಿ ರಾಶಿ ತ್ಯಾಜ್ಯ ಸುರಿದಿದ್ದಾರೆ.


    ಈ ತ್ಯಾಜ್ಯ ತೆರವು ಮಾಡುವಂತೆ ಹಲವಾರು ಬಾರಿ ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಇದರಿಂದ ಪ್ರಸಕ್ತ ಸಾಲಿನ ಮುಂಗಾರು ಮಳೆ ಪ್ರಾರಂಭವಾದಾಗ ಮಳೆನೀರು ಹರಿದುಹೋಗುವುದಿಲ್ಲ. ನೀರು ವ್ಯರ್ಥವಾಗಿ ರಸ್ತೆ ಬೀಳಲಿದೆ ಎಂದು ಪರಿಸರ ಪ್ರೇಮಿ ಶ್ರೀಕಂಠಸ್ವಾಮಿ ಬೇಸರ ವ್ಯಕ್ತಪಡಿಸಿದರು.

    ನೀರು ಹರಿಯುವ ಮಾರ್ಗಗಳಲ್ಲಿ ಕಸ ಹಾಗೂ ತ್ಯಾಜ್ಯ ಹಾಕುವವರನ್ನು ಪತ್ತೆಹಚ್ಚಿ ದಂಡ ವಿಧಿಸಲು ಕ್ರಮಕೈಗೊಳ್ಳಲಾಗುವುದು. ಈ ಹಿಂದೆ ಜಲಮಾರ್ಗದಲ್ಲಿ ತ್ಯಾಜ್ಯ ಸುರಿದಿದ್ದ ಕಲ್ಯಾಣ ಮಂಟಪಗಳ ಮಾಲೀಕರಿಗೆ ದಂಡ ವಿಧಿಸಲಾಗಿತ್ತು.
    ವಸಂತಕುಮಾರಿ, ಪುರಸಭೆ ಮುಖ್ಯಾಧಿಕಾರಿ.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts